ಮುಂದಿನ ಪ್ರಧಾನಿ ಯಾರಾಗ್ತಾರೆ? ಹನುಮನಕೊಪ್ಪದಲ್ಲಿ ಈ ವರ್ಷದ ಯುಗಾದಿ ಭವಿಷ್ಯ ನುಡಿದ ಬೊಂಬೆ

| Updated By: ರಮೇಶ್ ಬಿ. ಜವಳಗೇರಾ

Updated on: Apr 09, 2024 | 5:22 PM

ಧಾರವಾಡ ತಾಲೂಕಿನ ಹನುಮನಕೊಪ್ಪದಲ್ಲಿ ಯುಗಾದಿ ಹಬ್ಬದಂದು ನುಡಿಯುವ ಭವಿಷ್ಯ ಹೊರಬಿದ್ದಿದೆ. ಪ್ರತಿ ವರ್ಷದ ಯುಗಾದಿ ಹಬ್ಬದಂದು ಮಳೆ-ಬೆಳೆ ಜೊತೆ ರಾಜಕೀಯ ಭವಿಷ್ಯವನ್ನು ಸಹ ನುಡಿಯಲಾಗುತ್ತೆ. ಹೀಗಾಗಿ ಪ್ರತಿ ವರ್ಷ ಜನರು ಈ ಭವಿಷ್ಯಕ್ಕಾಗಿ ಕಾತರದಿಂದ ಕಾಯುತ್ತಾರೆ. ಅದರಲ್ಲೂ ಈ ಬಾರಿ ಲೋಕಸಭಾ ಚುನಾವಣೆ ಇರುವುದರಿಂದ ರಾಜಕೀಯ ಭವಿಷ್ಯ ಏನಾಗಲಿದೆ ಎನ್ನುವ ಕುತೂಹಲ ಮೂಡಿಸಿತ್ತು. ಇದೀಗ ಬೊಂಬೆ ಭವಿಷ್ಯ ನುಡಿದಿದ್ದು, ರಾಜಕೀಯವಾಗಿ ಏನೆಲ್ಲಾ ಹೇಳಿದೆ ಎನ್ನುವ ವಿವರ ಇಲ್ಲಿದೆ.

ಮುಂದಿನ ಪ್ರಧಾನಿ ಯಾರಾಗ್ತಾರೆ? ಹನುಮನಕೊಪ್ಪದಲ್ಲಿ ಈ ವರ್ಷದ ಯುಗಾದಿ ಭವಿಷ್ಯ ನುಡಿದ ಬೊಂಬೆ
Follow us on

ಧಾರವಾಡ, (ಏಪ್ರಿಲ್ 09): ಎಲ್ಲೆಡೆ ಯುಗಾದಿ ಹಬ್ಬ (Ugadi 2024) ಸಂಭ್ರಮ ಮನೆ ಮಾಡಿದೆ. ಈ ಹಬ್ಬದಂದು ರಾಜ್ಯದ ವಿವಿಧೆಡೆ ನಾನಾ ಆಚರಣೆಗಳು ನಡೆಯುತ್ತವೆ. ಜಾತ್ರೆ, ಸಾಮೂಹಿಕ ವಿವಾಹ, ಕಾರ್ಣಿಕಗಳು ಇರುತ್ತವೆ. ಧಾರವಾಡ (Dharvada) ತಾಲೂಕಿನ ಹನುಮನಕೊಪ್ಪದ ಬೊಂಬೆ ಯುಗಾದಿ ಭವಿಷ್ಯ ಹೊರಬಿದ್ದಿದ್ದು, ಮುಂಗಾರು ಅಲ್ಪ ಪ್ರಮಾಣದಲ್ಲಿ ಮಳೆಯಾಗಲಿದೆ. ಇನ್ನು ಹಿಂಗಾರಿಗೆ ಮಳೆ ಕೈಕೊಡಲಿದೆ ಎಂದು ಭವಿಷ್ಯ ನುಡಿದಿದೆ. ಇನ್ನು ರಾಜಕೀಯ ಭವಿಷ್ಯವನ್ನು ನೋಡುವುದಾದರೆ, ಕೇಂದ್ರ ಮತ್ತು ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಧಾರವಾಡದ ಗೊಂಬೆ ಭವಿಷ್ಯ ನುಡಿದಿದೆ. ಈ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿ (Narendhra modi) ಅವರೇ ಈ ಬಾರಿಯೂ ಪ್ರಧಾನಮಂತ್ರಿ ಆಗಲಿದ್ದಾರೆ ಎನ್ನುವುದು ಬೊಂಬೆಯ ಭವಿಷ್ಯದ ಸಾರಾಂಶವಾಗಿದೆ.

ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿ ವರ್ಷವೂ ಯುಗಾದಿ ದಿನ ಭವಿಷ್ಯ ನುಡಿಯಲಾಗುತ್ತದೆ. ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇಲ್ಲಿನ ಭವಿಷ್ಯ ನಿಜವಾಗುತ್ತದೆ ಎಂದೇ ಹೇಳಲಾಗಿದೆ. ಹೀಗಾಗಿ ಈ ವರ್ಷದ ಭವಿಷ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಲೋಕಸಭಾ ಚುನಾವಣೆ ಇರುವುದರಿಂದ ಈ ಬಾರಿ ಯಾರು ಅಧಿಕಾರದ ಪಟ್ಟವನ್ನು ಹಿಡಿಯುತ್ತಾರೆ ಎಂಬ ಕುತೂಹಲ ಮೂಡಿಸಿತ್ತು. ಇದರಿಂದ ನಿನ್ನೆ(ಏಪ್ರಿಲ್ 08) ಯುಗಾದಿ ಅಮವಾಸ್ಯೆಯಂದು ಹಳ್ಳದಲ್ಲಿ ಕಟ್ಟಲಾಗುವ ಫಲದಿಂದ ಮಾರನೆ ದಿನ ಬೆಳಗ್ಗೆ ಅಂದರೆ ಯುಗಾದಿ ಹಬ್ಬದಂದು ಬಂದು ನೋಡಿದಾಗ ರಾಜಕೀಯ, ಮಳೆ, ಬೆಳೆ ಹಾಗೂ ರೈತರ ಭವಿಷ್ಯ ನಿರ್ಧಾರವಾಗಲಿದೆ. ಪ್ರಸಕ್ತ ವರ್ಷ ಕೇಂದ್ರ ಹಾಗೂ ರಾಜ್ಯ ನಾಯಕರ ಬೊಂಬೆಗೆ ಯಾವುದೇ ಪೆಟ್ಟಾಗಿಲ್ಲ. ಇದರಿಂದ ಯಾವುದೇ ಬದಲಾವಣೆ ಇಲ್ಲ ಎಂಬ ಮುನ್ಸೂಚನೆ ನೀಡಿದೆ. ಈಶಾನ್ಯ ದಿಕ್ಕಿಗೆ ಇಡಲಾಗಿದ್ದ ರಾಜಕೀಯ ಮೂರ್ತಿಗೆ ಯಾವುದೇ ಪೆಟ್ಟಾಗಿಲ್ಲ. ಇದರಿಂದ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾಗದು ಎಂದು ನಂಬಲಾಗಿದೆ.

ಇದನ್ನೂ ಓದಿ: ಬೀಳಗಿ ರೈತರ ಜಕನೇರನ ಕಟ್ಟೆ ಭವಿಷ್ಯದ ಪ್ರಕಾರ ಈ ವರ್ಷ ಸಕಾಲಕ್ಕೆ ಮಳೆ ಮತ್ತು ಸಮೃದ್ಧಿ, ಯಾವುದಕ್ಕೂ ಕೊರತೆ ಇಲ್ಲ!

ಧಾರವಾಡ ತಾಲೂಕಿನ ಹನುಮನಕೊಪ್ಪದಲ್ಲಿ ಯುಗಾದಿ ಹಬ್ಬದಂದು ಗ್ರಾಮದ ಹೊರವಲಯದ ಹಳ್ಳದ ದಂಡೆಯ ಮೇಲೆ ಭವಿಷ್ಯ ನೋಡಲಾಗುತ್ತೆ. ಈ ಬೊಂಬೆ ಭವಿಷ್ಯ 1936ರಿಂದ ನಡೆದುಕೊಂಡು ಬಂದಿದೆ. ಹೀಗಾಗಿ ಈ ಬೊಂಬೆ ಭವಿಷ್ಯದ ಆಚರಣೆ ಮನೆ ಮಾತಾಗಿದೆ. ವರ್ಷವಿಡೀ ಭವಿಷ್ಯದ ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಬೊಂಬೆ ಭವಿಷ್ಯ ಏನಾಗಲಿದೆ ಎಂದು ಇಲ್ಲಿ ಜನರಲ್ಲಿ ಕುತೂಹಲ ಇರುತ್ತೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡ ಹನುಮನಕೊಪ್ಪದಲ್ಲಿ ಈ ಬೊಂಬೆ ಭವಿಷ್ಯ ನಡೆದುಕೊಂಡು ಬಂದಿದೆ. ಕಳೆದ ವರ್ಷ ಗೊಂಬೆ ಭವಿಷ್ಯದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿತ್ತು. ಅದರಂತೆ ರಾಜ್ಯದ ಜನರು ಬಿಜೆಪಿ ಬದಲು ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಸಿಂಹಾಸನ ಏರಿದರು.

ಏನಿದು ಬೊಂಬೆ ಭವಿಷ್ಯ?

ಯುಗಾದಿಯ ಹಿಂದಿನ ದಿನವಾದ ಅಮವಾಸ್ಯೆಯಂದು ರಾತ್ರಿ ಗೊಂಬೆಗಳ ಪ್ರತಿಷ್ಠಾಪನೆ ನಡೆಯುತ್ತದೆ. ನಾಲ್ಕು ದಿಕ್ಕುಗಳಿಗೂ ನಾಲ್ಕು ಗೊಂಬೆಗಳನ್ನು ಗ್ರಾಮಸ್ಥರು ಪ್ರತಿಷ್ಠಾಪನೆ ಮಾಡುತ್ತಾರೆ. ಗ್ರಾಮದ ಹಳ್ಳದ ದಂಡೆಯಲ್ಲಿ ಈ ಪ್ರತಿಷ್ಠಾಪನೆ ನಡೆಯುತ್ತಿತ್ತು. ಪಾಡ್ಯದ ದಿನ ನಸುಕಿನ ಜಾವ ಈ ಸ್ಥಳಕ್ಕೆ ಬಂದು ಹಿರಿಯರು ಗೊಂಬೆಗಳನ್ನು ಅವಲೋಕಿಸುತ್ತಾರೆ. ಆಯಾ ದಿಕ್ಕಿನ ಗೊಂಬೆಯ ಪರಿಸ್ಥಿತಿ ಆಧರಿಸಿ ರಾಜಕೀಯ ಭವಿಷ್ಯವನ್ನು ನುಡಿಯಲಾಗುತ್ತದೆ. ಬೊಂಬೆಯ ಅಂಗಾಂಗಗಳಿಗೆ ಧಕ್ಕೆಯಾದರೆ ನಾಯಕತ್ವ ಹೋಗುತ್ತದೆ ಎಂಬುದು ಸಾಮಾನ್ಯ ಭವಿಷ್ಯ. ಈ ಬಾರಿ ರಾಜಕೀಯದಲ್ಲಿ ಗೊಂಬೆಗೆ ಯಾವುದೇ ಧಕ್ಕೆಯಾಗಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂಬ ಭವಿಷ್ಯ ನುಡಿಯಲಾಗಿದೆ. 1936ರಿಂದ ಬೊಂಬೆ ಭವಿಷ್ಯ ನಡೆದುಕೊಂಡ ಬಂದಿದ್ದು, ಅನೇಕ ಭವಿಷ್ಯಗಳು ನಿಜವಾದ ಉದಾಹರಣೆಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ