ಸರ್ ಎಂ ವಿಶ್ವೇಶ್ವರಯ್ಯ ನಿರ್ಮಿಸಿದ್ದ ಧಾರವಾಡದ ಕೆಲಗೇರಿ ಕೆರೆಗೆ ಹೈಟೆಕ್ ಟಚ್; ಕೆರೆ ದಂಡೆಯಲ್ಲೇ ಓಪನ್ ಜಿಮ್!

ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ ನೀಡುವ ಕೆಲಸ ನಡೆದಿದೆ. ಕೆಲ ದಿನಗಳಲ್ಲೇ ಜನರ ಬಳಕೆಗೆ ಇದು ತೆರೆದುಕೊಳ್ಳಲಿದೆ.

ಸರ್ ಎಂ ವಿಶ್ವೇಶ್ವರಯ್ಯ ನಿರ್ಮಿಸಿದ್ದ ಧಾರವಾಡದ ಕೆಲಗೇರಿ ಕೆರೆಗೆ ಹೈಟೆಕ್ ಟಚ್; ಕೆರೆ ದಂಡೆಯಲ್ಲೇ ಓಪನ್ ಜಿಮ್!
ಅಭಿವೃದ್ಧಿಯ ನೆರಳು


ಧಾರವಾಡ ಒಂದು ಕಾಲಕ್ಕೆ ಕೆರೆಗಳ ಬೀಡಾಗಿತ್ತು. ಆದರೆ ಆಧುನಿಕತೆಯ ಭರಾಟೆಯಲ್ಲಿ ನಗರದ ಬಹುತೇಕ ಕೆರೆಗಳು ಲೇಔಟ್​ಗಳಾಗಿ ಬದಲಾಗಿ, ಇದೀಗ ಅಲ್ಲೊಂದು ಇಲ್ಲೊಂದು ಕೆರೆ ಉಳಿದುಕೊಂಡಿವೆ. ಅಂಥವುಗಳ ಪೈಕಿ ತುಂಬಾನೇ ಹಳೆಯ ಕೆರೆ ಅಂದರೆ ಅದು ಕೆಲಗೇರಿ ಕೆರೆ. ನಗರದ ಐತಿಹಾಸಿಕ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಕೆರೆ ನಶಿಸುತ್ತಿದೆ ಎಂಬ ಮಾತು ಕೇಳುತ್ತಲೇ ಇತ್ತು. ಇದೀಗ ಅಭಿವೃದ್ಧಿ ಕಾರ್ಯ ನಡೆಸಿ ಹೊಸ ಕಾಯಕಲ್ಪ ನೀಡಲು ಸರ್ಕಾರ ಮುಂದಾಗಿದ್ದು, ಕೆಲ ದಿನಗಳಲ್ಲೇ ಕೆರೆಯ ಸಂಪೂರ್ಣ ಚಿತ್ರಣ ಬದಲಾಗಲಿದೆ.

ಸರ್.ಎಂ. ವಿಶ್ವೇಶ್ವರಯ್ಯ ನಿರ್ಮಿಸಿರುವ ಕೆಲಗೇರಿ ಕೆರೆ ಸುಮಾರು 170 ಎಕರೆ ವಿಸ್ತೀರ್ಣ ಹೊಂದಿದೆ. ಕೆಲ ವರ್ಷಗಳ ಹಿಂದೆ ಕೆರೆ ಅಭಿವೃದ್ಧಿ ನಡೆಸಿ ವಾಯುವಿಹಾರಿಗಳಿಗೆ ವಾಕಿಂಗ್ ಪಾಥ್ ನಿರ್ಮಿಸಲಾಗಿತ್ತು. ಅಲ್ಲಲ್ಲಿ ಜನರು ಕೂರಲು ಸಿಮೆಂಟ್ ಕುರ್ಚಿಗಳನ್ನು ಹಾಗೂ ಕೆರೆಯ ದಂಡೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ದಿನಗಳು ಉರುಳಿದಂತೆ ಇವೆಲ್ಲಾ ಕಿತ್ತುಕೊಂಡು ಹೋಗಿದ್ದವು. ಇದೇ ಕಾರಣಕ್ಕೆ ಮತ್ತೆ ಈ ಕೆರೆಗೆ ಕಾಯಕಲ್ಪ ನೀಡುವ ದೃಷ್ಟಿಯಿಂದ, ದಂಡೆಯ ಮೇಲಿನ ಮಾರ್ಗವನ್ನು ಅಗಲೀಕರಣ ಮಾಡಿ ಓಪನ್ ಜಿಮ್ ಸ್ಥಾಪಿಸಲಾಗುತ್ತಿದೆ. ಈ ಮೊದಲಿದ್ದ 10 ಅಡಿ ಅಗಲದ ವಾಕಿಂಗ್ ಪಾಥ್ ಅನ್ನು 30 ಅಡಿಗೆ ವಿಸ್ತರಿಸಲಾಗುತ್ತಿದ್ದು, ಸುಮಾರು 5 ಅಡಿ ಜಾಗದಲ್ಲಿ ಜಿಮ್ ಪರಿಕರ ಸ್ಥಾಪನೆ, 4 ಅಡಿಯಲ್ಲಿ ಕಟ್ಟೆ ನಿರ್ಮಾಣ, ಉಳಿದ ಜಾಗೆಯನ್ನು ವಾಯುವಿಹಾರಕ್ಕೆ ಮೀಸಲಿಡಲಾಗಿದೆ.

2.05 ಕೋಟಿ ಅನುದಾನದಲ್ಲಿ ಯೋಜನೆ
ಅಮೃತ ಯೋಜನೆಯ ಹಸಿರು ವಲಯ ಪ್ರದೇಶ ಅಭಿವೃದ್ಧಿ ಅಡಿ 2.05 ಕೋಟಿ ರೂ. ಅನುದಾನದಲ್ಲಿ ಕಾರ್ಯ ನಡೆದಿದೆ. 2019ರಲ್ಲೇ ಈ ಯೋಜನೆಯ ನೀಲನಕ್ಷೆ ಸಿದ್ಧಪಡಿಸಿ ಕೆಲಸ ಆರಂಭಿಸಲಾಗಿತ್ತು. ಆಗ ಕೊರೊನಾ ಮೊದಲ ಅಲೆ ಜೋರಾಗಿದ್ದ ಕಾರಣ ಕಾಮಗಾರಿ ಸ್ಥಗಿತವಾಗಿತ್ತು. ಈ ಸಮಯದಲ್ಲಿ ಶಾಸಕ ಅರವಿಂದ ಬೆಲ್ಲದ ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಿ ಹೈಟೆಕ್ ಸ್ಪರ್ಶ ನೀಡಿದ್ದರು. ಬಳಿಕ ಆರಂಭವಾದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ ನೀಡುವ ಕೆಲಸ ನಡೆದಿದೆ. ಕೆಲ ದಿನಗಳಲ್ಲೇ ಜನರ ಬಳಕೆಗೆ ಇದು ತೆರೆದುಕೊಳ್ಳಲಿದೆ.

ಕೆರೆ ದಂಡೆಗೆ ಓಪನ್ ಜಿಮ್ ಪರಿಕಲ್ಪನೆ
ಕೆರೆ ದಂಡೆ ಮೇಲೆ ವಾಯು ವಿಹಾರ ನಡೆಸುವ ಜನರ ವ್ಯಾಯಾಮಕ್ಕೆ ಕೆಲ ಪರಿಕರಗಳನ್ನು ಅಳವಡಿಸಲಾಗುತ್ತಿದೆ. ಇದರ ಜತೆಗೆ ಮಕ್ಕಳಿಗೆ ಆಟಿಕೆಗಳನ್ನೂ ಅಳವಡಿಸಲಾಗುತ್ತಿದೆ. ಉತ್ತಮ ಆರೋಗ್ಯಕ್ಕೆ ವಾಯು ವಿಹಾರ ಮತ್ತು ವಿವಿಧ ವ್ಯಾಯಾಮ ಅಗತ್ಯ. ಆದರೆ ಸೌಲಭ್ಯವಿಲ್ಲದೆ ಅನೇಕರು ತಮಗೆ ತಿಳಿದ ವ್ಯಾಯಾಮ ಮಾಡಿ ತೆರಳುತ್ತಾರೆ. ಹೀಗಾಗಿ ಇದಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲು ಮತ್ತು ಸಾರ್ವಜನಿಕರ ದೈಹಿಕ ಶ್ರಮ ಪೂರ್ಣಗೊಳಿಸುವ ಉದ್ದೇಶದೊಂದಿಗೆ ‘ಓಪನ್ ಜಿಮ್’ ತೆರೆಯಲಾಗುತ್ತಿದೆ.
ಈ ಜಿಮ್‌ನಲ್ಲಿ ವಯಸ್ಕರ ವ್ಯಾಯಾಮಕ್ಕೆ ಕ್ರಾಸ್ ವಾಲ್ಕರ್, ಲೆಗ್ ಪ್ರೆಸ್, ಸೈಕಲ್, ಸಿಟೆಡ್ ಚೆಸ್ಟ್ ಪ್ರೆಸ್, ಥೈ ಚೈ ವೀಲ್, ಲೆಗ್ ಆ್ಯಂಡ್ ಥೈ ಎಕ್ಸರ್ ಸೈಜ್, ಪುಲ್‌ಅಪ್ ಚೇರ್ ಸೇರಿ ಇನ್ನೂ ಕೆಲ ಪರಿಕರಗಳನ್ನು 2 ಸೆಟ್‌ಗಳಂತೆ ಅಳವಡಿಸಲಾಗಿದೆ. ಮಕ್ಕಳ ಆಟಕ್ಕಾಗಿ ಸೀಸಾ ಡಬಲ್, ಆರ್ಚ್ ಸ್ವಿಂಗ್, ಟು ವೇ ಸ್ಲೈಡ್, ಡಕ್ ಮೆರಿಗೋ ರೌಂಡ್ ಆಟದ ಪರಿಕರ ಅಳವಡಿಸಲಾಗಿದೆ. ವಾಕಿಂಗ್ ಪಾಥ್‌ನಲ್ಲಿ ಸುಸಜ್ಜಿತ ವಿದ್ಯುತ್ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವ್ಯಾಯಾಮದ ಬಳಿಕ ಕಟ್ಟೆ ಮೇಲೆ ಕುಳಿತು ಕೆರೆಯ ಸೌಂದರ್ಯ ಸವಿದು ಮನಸ್ಸು ಆಹ್ಲಾದಕರಗೊಳಿಸಿಕೊಳ್ಳಬಹುದು.

Dharwad Lake Development

ಭರದಿಂದ ನಡೆಯುತ್ತಿರುವ ಕಾಮಗಾರಿ

ಇವುಗಳ ಜತೆಗೆ ಕೆರೆಗೆ ಹೊಲಸು ನೀರು ಸೇರದಂತೆ ಸಹ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೆರೆ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಒಟ್ಟಾರೆ ಜನರ ಆರೋಗ್ಯದ ಮೇಲ ಗಮನ ಇಟ್ಟುಕೊಂಡು ನಿರ್ಮಿಸುತ್ತಿರುವ ಓಪನ್ ಜಿಮ್‌ಗೆ ಸ್ಥಳೀಯರಿಂದ ಸಹಕಾರ ಸಿಕ್ಕಿದೆ. ಆದರೆ ಜನರು ಈ ಸೌಲಭ್ಯವನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಾರೆ ಮತ್ತು ಕಾಪಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಅನೇಕ ದಿನಗಳ ಕನಸು ಈಡೇರುತ್ತಿದೆ
ಈ ಬಗ್ಗೆ ಸ್ಥಳೀಯ ನಿವಾಸಿ ಮಂಜುನಾಥ ಹಿರೇಮಠ ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿ, ಕೆರೆ ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದು ಸಂತಸದ ಸಂಗತಿ. ಇದರಿಂದ ಈ ಭಾಗದ ಜನರ ಬಹುದಿನಳ ಬೇಡಿಕೆ ಈಡೇರಿದಂತಾಗಿದೆ. ವಯಸ್ಕರು ಹಾಗೂ ಮಕ್ಕಳಿಗೆ ವ್ಯಾಯಾಮ ಮಾಡಲು ಪರಿಕರಗಳನ್ನು ಅಳವಡಿಸಿದ್ದಲ್ಲದೆ, ಕೆರೆಗೆ ಹೊಲಸು ನೀರು ಸೇರದಂತೆ ಸಹ ವ್ಯವಸ್ಥೆ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅನೇಕರು ಕೆರೆಯ ಸ್ವಚ್ಛತೆ ಮಾಡಿದ್ದೆವು. ಇದೀಗ ಇದೇ ಕೆರೆಗೆ ಹೈಟೆಕ್ ಸ್ಪರ್ಶ ನೀಡುತ್ತಿರುವುದರಿಂದ ನಮಗೆಲ್ಲಾ ಖುಷಿಯಾಗಿದೆ. ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಅಲ್ಲದೇ ಇದು ನಮ್ಮ ಆಸ್ತಿ ಅಂದುಕೊಂಡು ಅದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು.

ಜನರ ಪ್ರಯೋಜನಕ್ಕೆ ಈ ಯೋಜನೆ: ಶಾಸಕ ಅರವಿಂದ ಬೆಲ್ಲದ್
ಇನ್ನು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ‘ಕೆಲಗೇರಿ ಕೆರೆ ನಮ್ಮ ಭಾಗದ ಐತಿಹಾಸಿಕ ಕೆರೆಯಾಗಿದೆ. ಧಾರವಾಡದ ಸಂಪತ್ತು ಉಳಿಸಿ ಬೆಳೆಸುವುದರ ಜತೆಗೆ ಜನರಿಗೆ ಪ್ರಯೋಜನವಾಗಲಿ ಎಂಬ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗಿದೆ. ವಾಯು ವಿಹಾರಕ್ಕೆ ಕಿರಿದಾದ ಜಾಗೆ ಇತ್ತು. ಆ ಜಾಗವನ್ನು ಅಗಲೀಕರಣ ಮಾಡುವುದರ ಜತೆಗೆ ವ್ಯಾಯಾಮದ ಪರಿಕರಗಳನ್ನು ಅಳವಡಿಸಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಜನರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಇವುಗಳ ರಕ್ಷಣೆ ಬಗ್ಗೆಯೂ ಜನರು ಗಮನ ಹರಿಸಬೇಕು’ ಎಂದು ತಿಳಿಸಿದರು.

ವಿಶೇಷ ವರದಿ:ನರಸಿಂಹಮೂರ್ತಿ ಪ್ಯಾಟಿ
ಟಿವಿ9, ಧಾರವಾಡ

ಇದನ್ನೂ ಓದಿ: 

ನಮ್ಮ ಎಮ್ಮೆ-ನಮ್ಮ ಹೆಮ್ಮೆ! ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ, ಧಾರವಾಡಿ ಎಮ್ಮೆಗೆ ಕಡೆಗೂ ಸಿಕ್ಕಿತು ರಾಷ್ಟ್ರೀಯ ಮಾನ್ಯತೆ

ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಂಡ ಜಯ; ಪಕ್ಷೇತರ ಅಭ್ಯರ್ಥಿ ಹೆಂಡತಿಗೆ ಸೋಲು

(Dharwad Kelageri Lake Development is undergoing open Gym concept introduced)

Click on your DTH Provider to Add TV9 Kannada