ಧಾರವಾಡ, ಫೆ.16: ಜಾನುವಾರುಗಳು ರೈತರ ಜೀವನಾಡಿ. ಕೃಷಿ ಕೆಲಸಕ್ಕೆ ಈ ಜಾನುವಾರುಗಳು ಬಳಕೆಯಾಗುವುದು ಒಂದು ಕಡೆಯಾದರೆ ಹಸು, ಎಮ್ಮೆಗಳು ಹೈನುಗಾರಿಕೆಗೆ ಸಹಾಯಕ್ಕೆ ಬರುತ್ತವೆ. ಇದರಿಂದಾಗಿ ರೈತರು ಆರ್ಥಿಕವಾಗಿ ಸದೃಢವಾಗುತ್ತಾರೆ. ಆದರೆ, ಈ ಬಾರಿ ತಮ್ಮ ಜೀವನಾಡಿಯಾಗಿರುವ ಜಾನುವಾರುಗಳನ್ನು ರೈತರು ತೀರಾನೇ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಧಾರವಾಡ (Dharwad) ಜಿಲ್ಲೆಯಲ್ಲಿ ಈ ಬಾರಿ ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ಹೀಗಾಗಿ ತಮ್ಮ ನೆಚ್ಚಿನ ಜಾನುವಾರುಗಳನ್ನು ಸಾಕುವುದಕ್ಕೆ ಆಗುತ್ತಿಲ್ಲ. ಈ ಹಿನ್ನಲೆ ನಗರದ ಮಾಳಾಪುರ ಬಡಾವಣೆಯಲ್ಲಿ ನಡೆಯೋ ಸಂತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾನುವಾರುಗಳು ಕಂಡು ಬರುತ್ತಿವೆ.
ಮೇವಿನ ಜೊತೆಗೆ ಈ ಬಾರಿ ನೀರಿನ ಅಭಾವವೂ ಉಂಟಾಗಿದ್ದರಿಂದ ರೈತರು ಜಾನುವಾರುಗಳನ್ನು ಸಾಕುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳ ಮಾರಾಟ ನಡೆದಿದ್ದು, ಖರೀದಿ ಮಾಡುತ್ತಿರುವವರು ಅತೀ ಕಡಿಮೆ ದರ ಕೇಳುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ತೆರೆದು, ರೈತರನ್ನು ರಕ್ಷಿಸಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಂತೂ ಜಾನುವಾರು ಸಾಕಿದವರ ಸಮಸ್ಯೆ ಹೇಳತೀರದು. ಮೇವು ಖರೀದಿ ಮಾಡಿಯಾದರೂ ಜಾನುವಾರುಗಳನ್ನು ರಕ್ಷಿಸಿಕೊಳ್ಳೋಣ ಎಂದರೆ ಎಲ್ಲಿಯೂ ಮೇವು ಸಿಗುತ್ತಲೇ ಇಲ್ಲ. ಇದೇ ವೇಳೆ ಈ ಬಾರಿ ಬರದಿಂದಾಗಿ ರೈತರಲ್ಲಿನ ಆರ್ಥಿಕ ಶಕ್ತಿಯೂ ತೀರಾನೇ ಕುಗ್ಗಿ ಹೋಗಿದೆ. ಇದೇ ಕಾರಣಕ್ಕೆ ರೈತರು ಅನಿವಾರ್ಯವಾಗಿ ಜಾನುವಾರುಗಳನ್ನು ಮಾರೋ ಪರಿಸ್ಥಿತಿ ನಿರ್ಮಾಣವಾಗಿದೆ.
ಎತ್ತು, ಎಮ್ಮೆ, ಆಕಳು ಸೇರಿದಂತೆ ಎಲ್ಲ ಬಗೆಯ ಜಾನುವಾರುಗಳನ್ನು ರೈತರು ಮಾರಲು ಸಂತೆಗೆ ತರುತ್ತಿದ್ದಾರೆ. ಆದರೆ, ಸಂತೆಯಲ್ಲಿ ಅತೀ ಕಡಿಮೆ ದರಕ್ಕೆ ಕೇಳುತ್ತಿರೋದ್ರಿಂದಾಗಿ ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ. ಇನ್ನು ಗೋಶಾಲೆಯನ್ನಾದರೂ ತೆರೆದರೆ ಅಲ್ಲಿಗಾದರೂ ಹೋಗಿ ತಮ್ಮ ಜಾನುವಾರುಗಳನ್ನು ಬಿಟ್ಟುಬರಬಹುದು ಎಂದು ರೈತರ ಲೆಕ್ಕಾಚಾರ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರನ್ನು ಕೇಳಿದರೆ, ‘ಸಧ್ಯಕ್ಕೆ ಜಿಲ್ಲೆಯಲ್ಲಿ 25 ವಾರಗಳಿಗಾಗುವಷ್ಟು ಮೇವು ಸಂಗ್ರಹ ಇದೆ. ಇನ್ನು ಇಷ್ಟರಲ್ಲಿಯೇ ಮೇವು ಬ್ಯಾಂಕ್ ಸ್ಥಾಪಿಸಲು ನಿರ್ಧರಿಸಿದ್ದೇವೆ. ಇಷ್ಟರಲ್ಲಿಯೇ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುತ್ತಾರೆ.
ಇದನ್ನೂ ಓದಿ:ಸಾಲಗಾರರ ಕಾಟಕ್ಕೆ ಹಾವೇರಿ ಸಂತೆಯಲ್ಲಿ ಜಾನುವಾರುಗಳನ್ನು ಮಾರುತ್ತಿರುವ ರೈತರು
ಜಾನುವಾರುಗಳನ್ನು ಸಾಕಲು ದಿನಕ್ಕೆ ಎಷ್ಟು ಖರ್ಚಾಗುತ್ತದೆ ಎನ್ನುವುದನ್ನು ಕೇಳಿದರೆ ರೈತರ ಸಮಸ್ಯೆ ಅರ್ಥವಾಗುತ್ತದೆ. ಹಾಲು ಕರೆಯುವ ಒಂದು ರಾಸುವಿಗೆ ಮೇವು, ಹಿಂಡಿ, ಬೂಸಾ ಸೇರಿದಂತೆ ಇತರ ಖರ್ಚಿಗೆ 300 ರೂಪಾಯಿ ಖರ್ಚಾಗುತ್ತದೆ. ಆದರೆ, ಪ್ರತಿ ದಿನ 6 ರಿಂದ 8 ಲೀಟರ್ ಹಾಲು ಉತ್ಪಾದಿಸಿ ಡೇರಿಗೆ ಮಾರಿದರೆ ಗರಿಷ್ಠ 250 ರೂ. ಆದಾಯ ದೊರಕುತ್ತಿದೆ. ಇದರಿಂದ ಹೈನುಗಾರರು ತಮ್ಮ ಹಾಲು ಕರೆಯುವ ಹಸುಗಳನ್ನು ಕೂಡ ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಸಂತೆಗಳಲ್ಲಿ ಜಾನುವಾರುಗಳನ್ನು ಕೊಂಡವರಿಗೂ ಮೇವಿನ ಸಮಸ್ಯೆ ಎದುರಾಗುವುದರಿಂದ ಜಾನುವಾರುಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಇದರಿಂದ ಕೇಳಿದಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮಳೆಯ ಕೊರತೆ ಇದೀಗ ಎಲ್ಲರಿಗೂ ಸಮಸ್ಯೆ ಉಂಟು ಮಾಡುತ್ತಿರೋದಂತೂ ಸತ್ಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ