ಧಾರವಾಡ, ಆ.25: ಆಸ್ಟ್ರೇಲಿಯಾದಿಂದ (Australia) ಬಂದು ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ಬಳಿಯ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಧಾರವಾಡದ (Dharwad) ಮಹಿಳೆ ಬರೆದಿಟ್ಟಿದ್ದ ಡೆತ್ ನೋಟ್ ಟಿವಿ9 ಡಿಜಿಟಲ್ಗೆ ಲಭ್ಯವಾಗಿದೆ. ಇದರಲ್ಲಿ ತಾನು ಅನುಭವಿಸಿದ್ದ ನೋವನ್ನು ವಿವರವಾಗಿ ಬರೆದಿದ್ದಾರೆ. ಆಗಸ್ಟ್ 19 ರಂದು ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬಂದಿದ್ದ ಪ್ರಿಯದರ್ಶಿನಿ, ಅಂದು ರಾತ್ರಿ ಬಸ್ ಮೂಲಕ ಹುಬ್ಬಳ್ಳಿಗೆ ಬಂದಿದ್ದರು. ಬಳಿಕ ಅಲ್ಲಿನ ಕೋರಿಯರ್ ಕಚೇರಿಯೊಂದಕ್ಕೆ ತೆರಳಿ ಎಲ್ಲ ಬ್ಯಾಗ್, ಚಿನ್ನಾಭರಣ, ಮೊಬೈಲ್ ಗಳನ್ನು ನೀಡಿ, ತನ್ನ ತಂದೆಗೆ ಕೋರಿಯರ್ ಮಾಡುವಂತೆ ಹೇಳಿದ್ದರು. ಬಳಿಕ ಸಂಜೆ 5 ಗಂಟೆಯವರೆಗೆ ತಮ್ಮನ್ನು ಸಂಪರ್ಕಿಸದಿರಲು ಹೇಳಿ, ಅಲ್ಲಿಂದ ಗೋಕಾಕ್ ಕಡೆ ಹೊರಟಿದ್ದೇನೆಂದು ಬಸ್ ಹತ್ತಿದ್ದರು.
ನಂತರ ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ನದಿಯನ್ನು ನೋಡಿ, ಅಲ್ಲಿಯೇ ಇಳಿದಿದ್ದರಾದರೂ ಅಲ್ಲಿ ಜನರಿದ್ದ ಕಾರಣ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಳಿಕ ಹಾಗೆಯೇ ನದಿಗುಂಟ ನಡೆದು ಬಂದು ಗೊರವನಕೊಳ್ಳ ಗ್ರಾಮದ ಬಳಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಸಿಕ್ಕಿತ್ತು. ಇದೇ ವೇಳೆ ಅವರು ಇಂಗ್ಲೀಷ್ ನಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣವನ್ನು ತಿಳಿಸಿದ್ದಾರೆ.
ಇದನ್ನೂ ಓದಿ:ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ, ದಂಪತಿ ಮಧ್ಯೆ ಜಗಳ: ಸಾವು
ಪ್ರೀತಿಯ ಅಪ್ಪಾಜಿ, ‘ನಾವು ಇದೀಗ ಜೀವ ಬೆದರಿಕೆಯ ಪರಿಸ್ಥಿತಿಯಲ್ಲಿದ್ದೇವೆ. ನನ್ನ ಮಕ್ಕಳ ಮತ್ತು ಪತಿ ಲಿಂಗರಾಜ್ ಉಳಿವಿಗಾಗಿ ನಾನು ಸಾಯಬೇಕಾಗಿದೆ. ನನ್ನ ಬಗ್ಗೆ ನೀವು ಹೆಚ್ಚು ಚಿಂತಿಸಬೇಡಿ. ನನ್ನ ಕುಟುಂಬ ಮತ್ತು ಮಕ್ಕಳ ಒಳ್ಳೆಯದಕ್ಕಾಗಿ ಈ ಸಾವನ್ನು ನಾನು ಸ್ವೀಕರಿಸುತ್ತೇನೆ. ನಾನು ಮಾಡುತ್ತಿರೋದು ಒಳ್ಳೆಯ ಕಾರ್ಯವೆಂದು ಸ್ವೀಕರಿಸಿದ್ದೇನೆ. 2021 ರಿಂದ ಇಲ್ಲಿಯವರೆಗೂ DCJ ನಮ್ಮ ಕುಟುಂಬವನ್ನು ಹಾಳು ಮಾಡಿದ್ದಾರೆ. ವೆರ್ಲಿ ಸ್ಟ್ರೀಟ್ ಸಿಡ್ನಿ ನಿವಾಸಿಗಳು ನಮಗೆ ತೊಂದರೆ ಕೊಟ್ಟಿದ್ದಾರೆ. ಶ್ರೀ ಆನಂದ್ ಗೋರು, ಅಜಿತ ಗೋರು, ಶ್ರೀನಿಧಿ ಗೋರು, ಶ್ರೀ ಜಬ್ಬೂರ್ ಮತ್ತು ಕುಟುಂಬ, ಡೇನಿಯಲ್ ಮತ್ತು ಕುಟುಂಬ, ರೇಮಂಡ್ ಮತ್ತು ಅವನ ಮಕ್ಕಳು, ತಾನ್ಯಾ ಮತ್ತು ಇಡೀ ಕುಟುಂಬ, ಪೊಲೀಸ್ ಅಧಿಕಾರಿ ಮತ್ತು ಕುಟುಂಬದವರು ನಮಗೆ ತೊಂದರೆ ಕೊಟ್ಟಿದ್ದಾರೆ. ಎ, ಬಿ + #17+ #19+ #22 ಕುಟುಂಬದವರೆಲ್ಲರೂ ನನ್ನ ಸಾವಿಗೆ ಕಾರಣರಾಗಿದ್ದಾರೆ. ನಮ್ಮ ಮನೆಗೆ ಪೂರೈಕೆಯಾಗೋ ನೀರಿನಲ್ಲಿ ವಿಷ ಬೆರೆಸಲಾಗಿತ್ತು. ಇದರಿಂದಾಗಿ ನಮ್ಮ ಆರೋಗ್ಯದಲ್ಲಿ ಸಮಸ್ಯೆಯುಂಟಾಯಿತು ಎಂದು ಪ್ರಿಯದರ್ಶಿನಿ ಪಾಟೀಲ್ ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಈ ಕುಟುಂಬ ಅಲ್ಲಿ ತಮ್ಮ ಮಕ್ಕಳ ಸಲುವಾಗಿ ಕಾನೂನು ಹೋರಾಟ ಮಾಡುತ್ತಲೇ ಇತ್ತು. ಎಂಟು ವರ್ಷಗಳ ಹಿಂದೆ ಮಗ ಅಮರ್ತ್ಯನಿಗೆ ಆರೋಗ್ಯದಲ್ಲಿ ಸಮಸ್ಯೆಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ತೋರಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದರಾದರೂ ಅವರು ನೀಡಿದ್ದ ಔಷಧಗಳಿಂದಾಗಿ ಆತನಿಗೆ ಅಡ್ಡ ಪರಿಣಾಮವುಂಟಾಗಿತ್ತು. ಇದರಿಂದಾಗಿ ಪ್ರಿಯದರ್ಶಿನಿಗೆ ನೋವಾಗಿತ್ತು. ಇದನ್ನು ಅವರು ನ್ಯಾಯಯುತವಾಗಿಯೇ ಪ್ರಶ್ನಿಸಿದ್ದರು. ಆದರೆ, ಆಸ್ಪತ್ರೆಯವರು ಅದಕ್ಕೆ ಸರಿಯಾಗಿ ಸ್ಪಂದಿಸದೇ ಇರೋದಕ್ಕೆ ಆ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಸರಕಾರಕ್ಕೆ ದೂರು ಸಲ್ಲಿಸಿದ್ದರು. ಇದರಿಂದಾಗಿ ಆಸ್ಪತ್ರೆಯರು ಸಮಸ್ಯೆಗೆ ಸಿಲುಕಿಕೊಂಡಿದ್ದರು. ಆ ಸಮಸ್ಯೆಯಿಂದ ಹೊರಗೆ ಬರಲು ಹೊಸ ತಂತ್ರವನ್ನು ಹೂಡಿ, ನಿಮಗೆ ಮಕ್ಕಳನ್ನು ನೋಡಿಕೊಳ್ಳಲು ಬರೋದೇ ಇಲ್ಲ. ನಿಮ್ಮಲ್ಲಿಯೇ ಸಮಸ್ಯೆ ಇದೆಯೆಂದು ದೂಷಿಸಿ, ಅಲ್ಲಿನ ಸರಕಾರ ಇವರ ಎರಡೂ ಮಕ್ಕಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಬಿಟ್ಟಿತ್ತು. ಮಕ್ಕಳನ್ನು ಮರಳಿ ಕೊಡುವಂತೆ ಎಷ್ಟೇ ಹೋರಾಟ ಮಾಡಿದರೂ ಸರಕಾರ ಒಪ್ಪಲಿಲ್ಲ.
ಇದನ್ನೂ ಓದಿ:ತುಮಕೂರು: ಮೇಲಾಧಿಕಾರಿಯಿಂದ ಕಿರುಕುಳ ಆರೋಪ; ಡೆತ್ನೋಟ್ ಬರೆದಿಟ್ಟು ಸಹಾಯಕ ಸರ್ವೆಯರ್ ಆತ್ಮಹತ್ಯೆಗೆ ಯತ್ನ
ಇನ್ನು ಮಕ್ಕಳು ಅಲ್ಲಿಯೇ ಹುಟ್ಟಿದ್ದಕ್ಕೆ ಅವರಿಗೆ ಆಸ್ಟ್ರೇಲಿಯಾದ ಪೌರತ್ವ ಸಿಕ್ಕಿತ್ತು. ನಮಗೆ ನಿಮ್ಮ ಪೌರತ್ವವೇ ಬೇಡ, ನಮ್ಮ ದೇಶಕ್ಕೆ ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಪರಿಪರಿಯಾಗಿ ಬೇಡಿಕೊಂಡರೂ ಅಲ್ಲಿನ ಸರಕಾರ ಸ್ಪಂದಿಸಲೇ ಇಲ್ಲ. ಒಂದು ಕಡೆ ನಿರಂತರವಾಗಿ ಸರಕಾರದಿಂದ ಕಿರುಕುಳ, ಮತ್ತೊಂದು ಕಡೆ ಆರೋಗ್ಯ ಸಮಸ್ಯೆ. ಇದೆಲ್ಲದರ ಜೊತೆಗೆ ತಮ್ಮ ಮಕ್ಕಳನ್ನು ಕಿತ್ತಿಕೊಂಡರು ಅನ್ನೋ ನೋವು. ಇದೆಲ್ಲದರಿಂದ ನೊಂದಿದ್ದ ಪ್ರಿಯದರ್ಶಿನಿ, ಈ ಸಮಸ್ಯೆಗಳಿಗೆ ತಮ್ಮ ಸಾವೊಂದೇ ಪರಿಹಾರ ಅಂದುಕೊಂಡಿದ್ದಾರೆ. ಸಮಸ್ಯೆಗಳನ್ನು ತಮ್ಮವರ ಬಳಿ ಹೇಳಿಕೊಂಡಿದ್ದರೆ ಇಂಥ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲವೇನೋ? ಆದರೆ, ಅವರು ದುಡುಕಿ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ.
ಅವರ ಕುಟುಂಬಸ್ಥರು ಹೇಳೋ ಪ್ರಕಾರ, ಪ್ರಿಯದರ್ಶಿನಿ ತುಂಬಾನೇ ಪ್ರತಿಭಾವಂತೆ ಮತ್ತು ಜನಾನುರಾಗಿ ಮಹಿಳೆಯಾಗಿದ್ದರು. ಬೇರೆಯವರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸೋ ಗುಣ ಹೊಂದಿದ್ದರು. ಇದರಿಂದಾಗಿ ಅವರ ಅನೇಕ ಗೆಳತಿಯರು ತಮ್ಮ ಸಮಸ್ಯೆಗಳನ್ನು ಅವರ ಮುಂದೆ ಹೇಳಿಕೊಂಡು ಹಗುರವಾಗುತ್ತಿದ್ದರು. ಅವರೆಲ್ಲರ ಸಮಸ್ಯೆಗಳಿಗೆ ಪರಿಹಾರವನ್ನು ಪ್ರಿಯದರ್ಶಿನಿ ಹೇಳುತ್ತಿದ್ದರು. ಒಮ್ಮೆ ಅವರ ಗೆಳತಿಯೊಬ್ಬರು ಮನೆಯ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ. ಕೊನೆಯದಾಗಿ ಪ್ರಿಯದರ್ಶಿನಿಗೆ ಫೋನ್ ಮಾಡಿ, ನೇಣು ಹಾಕಿಕೊಳ್ಳಲು ನಿರ್ಧರಿಸಿದ್ದರಂತೆ. ಈ ವೇಳೆ ಫೋನ್ ಮೂಲಕವೇ ಆ ಗೆಳತಿಗೆ ಕೌನ್ಸೆಲಿಂಗ್ ಮಾಡಿ, ಆತ್ಮಹತ್ಯೆಯ ನಿರ್ಧಾರವನ್ನು ಬದಲಿಸುವಂತೆ ಮಾಡಿದ್ದರಂತೆ. ಇನ್ನೇನು ಕೆಲವೇ ನಿಮಿಷಗಳಾಗಿದ್ದರೆ ಆಕೆ ನೇಣಿಗೆ ಶರಣಾಗುತ್ತಿದ್ದರು. ಆದರೆ, ನಿಧಾನವಾಗಿ ಕೆಲವೇ ನಿಮಿಷಗಳಲ್ಲಿ ಆಕೆಯ ಮನವೊಲಿಸಿ, ಆತ್ಮಹತ್ಯೆ ಮಾಡಿಕೊಳ್ಳೋದ್ರಿಂದ ಯಾರಿಗೂ ಲಾಭವಿಲ್ಲ ಅನ್ನೋದನ್ನು ನಂಬಿಸಿದ್ದರಂತೆ. ಇಂಥ ಅದ್ಭುತ ಸ್ವಭಾವದ ಪ್ರಿಯದರ್ಶಿನಿ ತನ್ನದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದು ನಮಗೆಲ್ಲ ಅಚ್ಚರಿ ತಂದಿದೆ ಎನ್ನುತ್ತಾರೆ ಅವರ ಸಂಬಂಧಿಗಳು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Fri, 25 August 23