ಡಬಲ್ ಪೇಮೆಂಟ್ ಹಗರಣ; ಧಾರವಾಡ ಕೆಐಎಡಿಬಿ ನಿವೃತ್ತ ಭೂಸ್ವಾಧೀನಾಧಿಕಾರಿ ಸೇರಿ ಇಬ್ಬರು ಇಡಿ ವಶಕ್ಕೆ

ಕೆಐಎಡಿಬಿ(KIADB)ಯಲ್ಲಿ ನಕಲಿ ರೈತರ ಖಾತೆಗಳನ್ನು ಸೃಷ್ಟಿಸಿ, ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವ್ಹಿ. ಡಿ. ಸಜ್ಜನ್ ಸೇರಿ ಹಲವರು ಜೈಲು ಸೇರಿದ್ದರು. ಇದೀಗ ಈ ಇಬ್ಬರನ್ನು ಇಡಿ(ED) ವಶಕ್ಕೆ ಪಡೆದಿದ್ದು, ಇಬ್ಬರನ್ನು ವಾಹನದಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಡಬಲ್ ಪೇಮೆಂಟ್ ಹಗರಣ; ಧಾರವಾಡ ಕೆಐಎಡಿಬಿ ನಿವೃತ್ತ ಭೂಸ್ವಾಧೀನಾಧಿಕಾರಿ ಸೇರಿ ಇಬ್ಬರು ಇಡಿ ವಶಕ್ಕೆ
ಧಾರವಾಡ ಕೆಐಎಡಿಬಿ ನಿವೃತ್ತ ಭೂಸ್ವಾಧೀನಾಧಿಕಾರಿ ಸೇರಿ ಇಬ್ಬರು ಇಡಿ ವಶಕ್ಕೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 05, 2024 | 9:29 PM

ಧಾರವಾಡ, ಸೆ.05: ಕೆಐಎಡಿಬಿ(KIADB) ಡಬಲ್ ಪೇಮೆಂಟ್ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ್ ಹಾಗೂ ಕೆಐಎಡಿಬಿಯಲ್ಲಿ ಏಜೆಂಟ್​ ಆಗಿ ಕೆಲಸ ಮಾಡ್ತಿದ್ದ ಅಶ್ಫಾಕ್​ ​ದುಂಡಸಿ ಇಬ್ಬರನ್ನು ಇಡಿ(ED) ವಶಕ್ಕೆ ಪಡೆದಿದ್ದು, ಇಬ್ಬರನ್ನು ವಾಹನದಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಜಾಮೀನು ಸಿಗದ ಹಿನ್ನೆಲೆ ಈ ಇಬ್ಬರು ಧಾರವಾಡ ಜಿಲ್ಲಾ ಕಾರಾಗೃಹದಲ್ಲಿದ್ದರು. ಇತ್ತೀಚೆಗೆ ಕೆಐಎಡಿಬಿ ಕಚೇರಿ ಮೇಲೆ ದಾಳಿ ಮಾಡಿದ್ದ ಇಡಿ ತಂಡ, ಅನೇಕ ದಾಖಲೆ ಪತ್ರ ವಶಕ್ಕೆ ಪಡೆದು ಪರಿಶೀಲನೆ ನಡೆಸಿತ್ತು. ಅದರಂತೆ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ಕರೆದೊಯ್ಯಲಾಗಿದೆ.

ಏನಿದು ಘಟನೆ?

ಕೆಐಎಡಿಬಿ(KIADB)ಯಲ್ಲಿ ನಕಲಿ ರೈತರ ಖಾತೆಗಳನ್ನು ಸೃಷ್ಟಿಸಿ, ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವ್ಹಿ. ಡಿ. ಸಜ್ಜನ್ ತಮ್ಮ ನಿವೃತ್ತಿಯ ಕೊನೆಯ ದಿನವೇ 30 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ‌ಬಂದಿತ್ತು. ಅದರಲ್ಲಿ ಸಜ್ಜನ್ ಮೊದಲನೇ ಆರೋಪಿ ಆಗಿ, ಜೈಲು ಸೇರಿದ್ದರು. ಡಬಲ್ ಪೇಮೆಂಟ್ ಕುರಿತು ಸಿಐಡಿ ತನಿಖೆಯ ಚಾರ್ಜ್ ಶೀಟ್​ನಲ್ಲಿ ಒಂದೇ ದಿನದಲ್ಲಿ 30 ಕೋಟಿ ರೂಪಾಯಿ ಹಣ ವರ್ಗಾವಣೆ ಬಗ್ಗೆ ಆರೋಪಿಸಲಾಗಿತ್ತು. ಇದೇ ವೇಳೆ ಸಿಐಡಿ ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ಈ ಹಿನ್ನಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟು ಕೆಐಎಡಿಬಿ ಕಚೇರಿಗೆ ದಾಳಿ ಮಾಡಿತ್ತು.

ಇದನ್ನೂ ಓದಿ:ಧಾರವಾಡ ಕೆಐಎಡಿಬಿ ಅಕ್ರಮ ಪ್ರಕರಣ; ಸಿಐಡಿ ತನಿಖೆ ಬೆನ್ನಲ್ಲೇ ಎಂಟ್ರಿ ಕೊಟ್ಟ ಇಡಿ

ಸರ್ಕಾರ ಹಾಗೂ ರೈತರ ನಡುವೆ ಕೆಲಸ ಮಾಡುವ ಇಲಾಖೆ ಇದಾಗಿದ್ದು, ರೈತರಿಂದ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಕೈಗಾರಿಕೆಗಳಿಗೆ ನೀಡಲಾಗುತ್ತದೆ. ಆದರೆ, ಇದನ್ನೇ ದಂಧೆ ಮಾಡಿಕೊಂಡ ಅಧಿಕಾರಿಗಳು ಹಾಗೂ ಏಜೆಂಟರು ನಿರಂತರವಾಗಿ ಹಣವನ್ನು ಲೂಟಿ ಮಾಡುತ್ತಲೇ ಬಂದಿದ್ದಾರೆ. ಇದೀಗ ಜಾರಿ ನಿರ್ದೇಶನಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಶುರು ಮಾಡಿದೆ. ಈ ತನಿಖೆಯಲ್ಲಿ ಮತ್ತೆ ಯಾವೆಲ್ಲ ಹೊಸ ಅಕ್ರಮಗಳು ಹೊರಗೆ ಬರುತ್ತವೆಯೋ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us