ಧಾರವಾಡ ಕೆಐಎಡಿಬಿ ಅಕ್ರಮ ಪ್ರಕರಣ; ಸಿಐಡಿ ತನಿಖೆ ಬೆನ್ನಲ್ಲೇ ಎಂಟ್ರಿ ಕೊಟ್ಟ ಇಡಿ

ಧಾರವಾಡ ಕೆಐಎಡಿಬಿ ಕಚೇರಿಯಲ್ಲಿ ನಡೆದಿದ್ದ ಡಬಲ್ ಪೇಮೆಂಟ್ ಹಗರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯೊಬ್ಬ ನಿವೃತ್ತಿ ಆಗುವ ಕೊನೆ ದಿನವೇ ಕೋಟ್ಯಾಂತರ ಹಣ ವರ್ಗಾವಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿಐಡಿ ತನಿಖೆಯೂ ನಡೆದಿತ್ತು. ಆದರೆ, ಆ ತನಿಖೆಯೂ ಕೂಡ ಸರಿಯಾಗಿ ನಡೆದಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದ ಹಿಂದೆಯೇ ಜಾರಿ ನಿರ್ದೇಶನಾಲಯಕ್ಕೂ ದೂರು ಸಲ್ಲಿಕೆಯಾಗಿತ್ತು. ಆ ದೂರಿನ ಅನ್ವಯ ಇಂದು ಇಡಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ಈ ಪ್ರಕರಣ ಗಂಭೀರತೆ ಪಡೆದಿದೆ.

ಧಾರವಾಡ ಕೆಐಎಡಿಬಿ ಅಕ್ರಮ ಪ್ರಕರಣ; ಸಿಐಡಿ ತನಿಖೆ ಬೆನ್ನಲ್ಲೇ ಎಂಟ್ರಿ ಕೊಟ್ಟ ಇಡಿ
ಧಾರವಾಡ ಕೆಐಎಡಿಬಿ ಅಕ್ರಮ ಪ್ರಕರಣ; ಸಿಐಡಿ ತನಿಖೆ ಬೆನ್ನಲ್ಲೇ ಎಂಟ್ರಿ ಕೊಟ್ಟ ಇಡಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 09, 2024 | 9:18 PM

ಧಾರವಾಡ, ಆ.09: ಧಾರವಾಡ ಕೆಐಎಡಿಬಿ(KIADB) ಕಚೇರಿ ಅಂದರೆ ಅಲ್ಲಿ ಅಕ್ರಮಗಳದ್ದೇ ಪಾರುಪತ್ಯ. ಕಳೆದ ವರ್ಷ ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವ್ಹಿ. ಡಿ. ಸಜ್ಜನ್ ತಮ್ಮ ನಿವೃತ್ತಿಯ ಕೊನೆಯ ದಿನವೇ 30 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ‌ಬಂದಿತ್ತು. ಅದಕ್ಕೂ ಮುನ್ನ 20 ಕೋಟಿ ರೂ. ಡಬಲ್ ಪೇಮೆಂಟ್ ಹಗರಣವೂ ನಡೆದು, ಅದರಲ್ಲಿ ಸಜ್ಜನ್ ಮೊದಲನೇ ಆರೋಪಿ ಆಗಿ, ಜೈಲು ಕೂಡ ಕಂಡು ಬಂದಿದ್ದರು. ಡಬಲ್ ಪೇಮೆಂಟ್ ಕುರಿತು ಸಿಐಡಿ ತನಿಖೆಯ ಚಾರ್ಜ್ ಶೀಟ್​ನಲ್ಲಿ ಒಂದೇ ದಿನದಲ್ಲಿ 30 ಕೋಟಿ ರೂಪಾಯಿ ಹಣ ವರ್ಗಾವಣೆ ಬಗ್ಗೆ ಆರೋಪಿಸಲಾಗಿತ್ತು. ಇದೇ ವೇಳೆ ಸಿಐಡಿ ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) ಎಂಟ್ರಿ ಕೊಟ್ಟಿದೆ. ಇಂದು ಬೆಂಗಳೂರಿನಿಂದ ಆಗಮಿಸಿದ ಇಡಿ ಅಧಿಕಾರಿಗಳ ತಂಡ, ಕೆಐಎಡಿಬಿ ಕಚೇರಿಗೆ ದಾಳಿ ಮಾಡಿ ತನಿಖೆ ಆರಂಭಿಸಿದೆ.

ಸರ್ಕಾರ ಹಾಗೂ ರೈತರ ನಡುವೆ ಕೆಲಸ ಮಾಡುವ ಇಲಾಖೆ ಇದಾಗಿದೆ. ರೈತರಿಂದ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಕೈಗಾರಿಕೆಗಳಿಗೆ ನೀಡಲಾಗುತ್ತದೆ. ಆದರೆ, ಇದನ್ನೇ ದಂಧೆ ಮಾಡಿಕೊಂಡ ಅಧಿಕಾರಿಗಳು ಹಾಗೂ ಏಜೆಂಟರು ನಿರಂತರವಾಗಿ ಹಣವನ್ನು ಲೂಟಿ ಮಾಡುತ್ತಲೇ ಬಂದಿದ್ದಾರೆ. ಇನ್ನು ಇದೇ ವೇಳೆ ಬೆಂಗಳೂರಿನ ಖನಿಜ ಭವನದಲ್ಲಿರುವ ಕೆಐಎಡಿಬಿ ಕಚೇರಿಗೂ ದಾಳಿ ಮಾಡಿರುವ ಇಡಿ ತಂಡ, ಅಲ್ಲಿಯೂ ತನಿಖೆ ಶುರು ಮಾಡಿದೆ. ಈ ಇಲಾಖೆಯ ವಿಶೇಷ ಡಿಸಿ ದಯಾನಂದ ಅವರ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿ ಬಂದಿತ್ತು. ಆದರೆ, ಸಿಐಡಿ ಆರೋಪಪಟ್ಟಿಯಲ್ಲಿ ಅವರ ಹೆಸರನ್ನು ಸೇರ್ಪಡೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಬಸವರಾಜ ಕೊರವರ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ದಾಳಿ ಮಾಡಿರೋ ಇಡಿ ಅಧಿಕಾರಿಗಳು ತನಿಖೆಯನ್ನು ಶುರು ಮಾಡಿದ್ದಾರೆ.

ಇದನ್ನೂ ಓದಿ:ಧಾರವಾಡ ಕೆಐಎಡಿಬಿಯ ಮತ್ತೊಂದು ಹಗರಣ ಆರೋಪ; ರೈತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಕೊಟ್ಯಾಂತರ ರೂ. ಗುಳುಂ

ಸಿಐಡಿ ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎನ್ನುವ ಕೂಗು ಕೂಡ ಕೇಳಿ ಬಂದಿತ್ತು. ಆದರೆ, ಅದೇಕೋ ಸರಕಾರ ಮಾತ್ರ ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದೇ ಕಾರಣಕ್ಕೆ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿತ್ತು. ಕೊನೆಗೂ ಜಾರಿ ನಿರ್ದೇಶನಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇದೀಗ ತನಿಖೆ ಶುರು ಮಾಡಿದೆ. ಈ ತನಿಖೆಯಲ್ಲಿ ಮತ್ತೆ ಯಾವೆಲ್ಲ ಹೊಸ ಅಕ್ರಮಗಳು ಹೊರಗೆ ಬರುತ್ತವೆಯೋ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ