Numerology Yearly Horoscope 2025: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 4ಕ್ಕೆ 2025ರ ವರ್ಷಭವಿಷ್ಯ
ಜನ್ಮಸಂಖ್ಯೆ 4ರ ವರ್ಷ ಭವಿಷ್ಯ 2025: ಜನ್ಮಸಂಖ್ಯೆ 4 ಯಾರದು ಅಂದರೆ, ವರ್ಷದ ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 4 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಜನ್ಮಸಂಖ್ಯೆ 4 ಯಾರದು ಅಂದರೆ, ವರ್ಷದ ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 4 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಗುಣ- ಸ್ವಭಾವ: ಸಂಖ್ಯೆ 4ರ ಅಧಿಪತಿ ರಾಹು. ಇವರಿಗೆ ಕಲಿಕೆಯ ಬಗ್ಗೆ ವಿಪರೀತ ಆಸಕ್ತಿ, ಕುತೂಹಲ ಮತ್ತು ಪ್ರೀತಿ ಇರುತ್ತದೆ. ಅದು ಶೈಕ್ಷಣಿಕವಾದ ಕಲಿಕೆ ಅಂತ ಮಾತ್ರ ಅಂದುಕೊಳ್ಳುವ ಅಗತ್ಯ ಇಲ್ಲ. ಏಕೆಂದರೆ, ಯಾವುದೇ ಹೊಸ ವಿದ್ಯೆಯು ಅಂಥದ್ದೊಂದು ಭಾವನೆಯನ್ನು ಇವರಲ್ಲಿ ಮೂಡಿಸುತ್ತದೆ. ಹಲವು ಸಲ ಇವರು ಬಹಳ ಪ್ರಾಕ್ಟಿಕಲ್. ಭಾವನಾತ್ಮಕವಾಗಿ ಆಲೋಚಿಸುವುದು ಇವರಿಗೆ ಕಷ್ಟದ ಸಂಗತಿ. ಮುನ್ನೆಚ್ಚರಿಕೆ ವಹಿಸುವುದರಲ್ಲಿ ನಿಸ್ಸೀಮರು. ಎಂಥ ಕೆಟ್ಟ ಕ್ಷಣದಲ್ಲಿಯೂ ಪ್ಲಾನ್ ಬಿ ಜೊತೆಗೆ ಬರುವಂಥವರು. ರಿಸ್ಕ್ ತೆಗೆದುಕೊಳ್ಳುವುದು ಸಹ ಲೆಕ್ಕಾಚಾರದಿಂದಲೇ ಕೂಡಿರುವಂತೆ ನೋಡಿಕೊಳ್ಳುತ್ತಾರೆ. ಇವರ ಬಳಿ ತುಂಬ ಸರ್ ಪ್ರೈಸ್ ಗಳು ಇರುತ್ತವೆ. ಇಂಥ ಸನ್ನಿವೇಶಕ್ಕೆ- ಇಂಥ ಸವಾಲಿಗೆ ಹೀಗೆಯೇ ಆಲೋಚಿಸುತ್ತಾರೆ ಎಂದು ಇವರ ವಿಚಾರದಲ್ಲಿ ಹೇಳುವುದು ಕಷ್ಟ. ಈ ಪೈಕಿ ಬಹಳ ಮಂದಿ ಯಾವುದೇ ಸಬ್ಜೆಕ್ಟ್ ನಲ್ಲಿ ತುಂಬ ಆಳಕ್ಕೆ ಇಳಿದುಬಿಡುತ್ತಾರೆ. ಆ ಕಾರಣದಿಂದ ತಾವೇ ಆಸಕ್ತಿ ವಹಿಸಿ ಕಲಿತ ವಿಷಯವನ್ನು ಇನ್ನು ಸಾಕು ಅಂತೂ ಬಿಟ್ಟೂ ಬಿಡುತ್ತಾರೆ. ಆಪ್ತ ಸ್ನೇಹಿತರು, ಸಂಬಂಧಿಗಳು, ತಂದೆ- ತಾಯಿ ಇಂಥ ಯಾವ ಭಾವನೆಗಳನ್ನು ಸಹ ನೋಡದೆ ಎದುರಿಗಿರುವ ವ್ಯಕ್ತಿಗಳ ಸರಿ-ತಪ್ಪುಗಳನ್ನು ಕಡ್ಡಿ ತುಂಡು ಮಾಡಿದಂತೆ ಹೇಳಿಬಿಡುತ್ತಾರೆ. ಬೆಟ್ಟಿಂಗ್ ಪ್ರಿಯರಾದ ಇವರು ಇದನ್ನೇ ಅತಿ ಮಾಡಿಕೊಳ್ಳಬಾರದು.
ಸಾಮಾನ್ಯ ಸಂಗತಿಗಳು: ನಿಮ್ಮ ವ್ಯಾಪ್ತಿಯಲ್ಲಿ ಏನು ಮಾಡುವುದಕ್ಕೆ ಸಾಧ್ಯವೋ ಅವುಗಳನ್ನು ಆದ್ಯತೆ ಮೇಲೆ ಮಾಡುತ್ತಾ ಸಾಗಿ. ಏಕೆಂದರೆ ಒಂದೇ ಸಲಕ್ಕೆ ಹತ್ತಾರು ಕೆಲಸಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ಇನ್ನು ಬಹಳ ವರ್ಷಗಳಿಂದ ಅಂದುಕೊಳ್ಳುತ್ತಾ ಬಂದಿದ್ದ ಹಲವು ಪ್ರಾಜೆಕ್ಟ್ ಗಳನ್ನು ಪೂರ್ತಿ ಮಾಡುವುದಕ್ಕೆ ಅನುಕೂಲಗಳು ಒದಗಿ ಬರಲಿವೆ. ಮದುವೆ ವಿಚಾರ ಇರಬಹುದು ಅಥವಾ ಮನೆ ಕಟ್ಟುವುದು, ಸ್ವಂತ ವ್ಯಾಪಾರ- ಉದ್ಯಮ ಆರಂಭ ಮಾಡುವುದಾಗಿರಬಹುದು, ಈ ವರ್ಷ ಬೆಳವಣಿಗೆ- ಪ್ರಗತಿ ಕಾಣುತ್ತದೆ, ಕೆಲವು ಗುರಿ ಮುಟ್ಟುತ್ತದೆ. ನಿಮಗೆ ಗೊತ್ತಿರುವ ವಿಚಾರವೇ ಇರಬಹುದು, ಆ ಬಗ್ಗೆ ನಿಮಗೆ ತುಂಬ ವಿಶ್ವಾಸವೇ ಇರಬಹುದು. ಆದರೆ ನಾನು ಅಂದುಕೊಂಡಿದ್ದೇ ಆಗಬೇಕು ಹಾಗೂ ಅದೇ ಸರಿ ಎಂಬ ಹಠ ಯಾವ ಕಾರಣಕ್ಕೂ ಬೇಡ. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ಸರಿಯಾದ ಪಾರ್ಟನರ್ ದೊರೆಯಲಿದ್ದಾರೆ. ಹಣಕಾಸು ಅಡಚಣೆಗಳು ಇದ್ದಲ್ಲಿ ನಿವಾರಣೆ ಆಗಲಿದೆ.
ಆರೋಗ್ಯ: ಈ ವರ್ಷ ನಿಮ್ಮಲ್ಲಿ ಹಲವರು ಸೈಕ್ಲಿಂಗ್, ಟ್ರೆಕ್ಕಿಂಗ್ ಇಂಥ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳಲಿದ್ದೀರಿ. ಧ್ಯಾನ, ಯೋಗ ಇಂಥದ್ದಕ್ಕಿಂತ ಹೆಚ್ಚಾಗಿ ದೈಹಿಕವಾಗಿ ಶ್ರಮವಾಗುವಂಥ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಕ್ಕೆ ಅಂತಲೇ ಮನಸ್ಸು ಉತ್ತೇಜನವನ್ನು ನೀಡಲಿದೆ. ನೀರು ಸೇವನೆ ವಿಚಾರವಾಗಿ ವೈದ್ಯರಿಂದ ನಿರ್ದಿಷ್ಟ ಸಲಹೆ- ಸೂಚನೆಗಳು ಇದ್ದಲ್ಲಿ ಅದನ್ನು ಕಡ್ಡಾಯವಾಗಿ ಪಾಲಿಸುವುದು ಮುಖ್ಯವಾಗಲಿದೆ. ಇನ್ನು ಆಹಾರ ಪಥ್ಯದ ಬಗ್ಗೆ ಗಂಭೀರವಾಗಿ ಆಲೋಚಿಸುವುದು ಮುಖ್ಯ. ನಿಮಗೆ ಯಾವ ಆಹಾರ ಅಲರ್ಜಿಗೆ ಕಾರಣ ಆಗಬಹುದು ಎಂಬ ಅಂದಾಜು ಇರುತ್ತದೆಯೋ ಅಂಥವುಗಳಿಗೆ ಕಡ್ಡಾಯವಾಗಿ ದೂರ ಇದ್ದುಬಿಡುವುದು ಉತ್ತಮ. ಪದೇಪದೇ ಅಲರ್ಜಿ ಆಗುತ್ತಿದೆ ಎಂದಾದಲ್ಲಿ ಅದು ಯಾವ ಕಾರಣಕ್ಕೆ ಎಂಬ ಬಗ್ಗೆ ಸರಿಯಾದ ವೈದ್ಯರ ಮಾರ್ಗದರ್ಶನ ಪಡೆದು, ಸಮಸ್ಯೆ ನಿವಾರಣೆ ಮಾಡಿಕೊಳ್ಳಿ.
ಆಸ್ತಿ-ಹಣ- ಹೂಡಿಕೆ: ನಿಮ್ಮಲ್ಲಿ ಹಲವರು ಕೃಷಿ ಭೂಮಿಯ ಮೇಲೆ ಹೂಡಿಕೆ ಮಾಡುವುದಕ್ಕೆ ಮುಂದಾಗಲಿದ್ದೀರಿ. ಇದರ ಜೊತೆಗೆ ನಿಯಮಿತವಾಗಿ ಆದಾಯ ತರುವಂಥ ಎಫ್.ಡಿ., ಬಾಡಿಗೆ ಮೂಲಕ ಹಣ ಬರುವಂತೆ ಮಾಡುವುದಕ್ಕೆ ಆದ್ಯತೆಯನ್ನು ನೀಡಲಿದ್ದೀರಿ. ಈ ಮಧ್ಯೆ ನಿಮ್ಮ ಹೂಡಿಕೆ ಪೋರ್ಟ್ ಫೋಲಿಯೋದಲ್ಲಿಯೇ ಪ್ರಮುಖವಾದ ಬದಲಾವಣೆಗಳು ಆಗಲಿವೆ. ಪಿತ್ರಾರ್ಜಿತ ಆಸ್ತಿಗಳನ್ನು ನೀವಾಗಿಯೇ ಮುಂದಾಗಿ ಪಾಲು ಮಾಡುವಂತೆ ಕೇಳಲಿದ್ದೀರಿ. ಅದೇ ಸಮಯದಲ್ಲಿ ಆ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದಾದಲ್ಲಿ ಆ ಕೆಲಸವನ್ನು ಮಾಡುವುದಕ್ಕೆ ಆದ್ಯತೆ ಕೊಡಲಿದ್ದೀರಿ. ನಿಮ್ಮದೇ ಕುಟುಂಬ ಸದಸ್ಯರು ಆಡುವಂಥ ಕಟು ಮಾತಿನಿಂದ ಇಂಥದ್ದೊಂದು ತೀರ್ಮಾನ ಮಾಡಬೇಕಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿರುವವರಿಗೆ ಏರಿಳಿತ ಹೆಚ್ಚಿಗೆ ಇರುತ್ತದೆ.
ಪ್ರೇಮ-ಮದುವೆ ಇತ್ಯಾದಿ: ಹಣಕಾಸಿಗೆ ಸಂಬಂಧಿಸಿದಂತೆ ನೀವು ನಡೆದುಕೊಳ್ಳುವ ರೀತಿ, ತೆಗೆದುಕೊಳ್ಳುವ ತೀರ್ಮಾನಗಳು ದಂಪತಿ ಮಧ್ಯೆ ವಿರಸಕ್ಕೆ ಕಾರಣ ಆಗಬಹುದು. ಕೂತು- ಮಾತನಾಡಿ ಬಗೆಹರಿಸಿಕೊಳ್ಳಬಹುದಾದ ಸಂಗತಿಗಳನ್ನು ಜಗಳದ ಮಟ್ಟಕ್ಕೆ ಒಯ್ಯಬೇಡಿ. ಪ್ರೀತಿಯಲ್ಲಿ ಇರುವಂಥವರು ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡಿ, ಮದುವೆ ನಿಶ್ಚಯ ಆಗುವಂಥ ಯೋಗ ಕಂಡುಬರುತ್ತದೆ. ಇನ್ನು ವಿವಾಹ ವಯಸ್ಕರಾಗಿದ್ದು, ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇದ್ದೀರಿ ಅಂತಾದರೆ ಉದ್ಯೋಗ ಸ್ಥಳದಲ್ಲಿ ನಿಮ್ಮ ಮನಸ್ಸಿಗೆ ಒಪ್ಪುವಂಥ ಸಂಬಂಧ ಕೂಡಿ ಬರುವ ಸಾಧ್ಯತೆ ಹೆಚ್ಚಿದೆ.
ಉದ್ಯೋಗ- ವೃತ್ತಿ: ಉದ್ಯೋಗ ಸ್ಥಳದಲ್ಲಿ ಮಹತ್ತರವಾದ ಜವಾಬ್ದಾರಿಗಳು ನಿಮ್ಮ ಹೆಗಲು ಏರಲಿವೆ. ನೆನಪಿನಲ್ಲಿಡಿ, ಅದು ಒತ್ತಡ ಎಂದೆನಿಸಿ, ನಿಮ್ಮಲ್ಲಿ ಕೆಲವರು ಕೆಲಸ ಬೇಡವೇ ಬೇಡ ಎಂದುಕೊಂಡು ಬಿಡುತ್ತೀರಿ. ಮತ್ತೆ ಕೆಲವರಿಗೆ ಇದರಿಂದ ಭವಿಷ್ಯದಲ್ಲಿ ಆಗುವಂಥ ಅನುಕೂಲಗಳ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗಲಿದೆ. ನಿಮ್ಮಲ್ಲಿ ಯಾರು ಸಾಂಸ್ಕೃತಿಕ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ, ಅಂಥವರಿಗೆ ವಿದೇಶಗಳಿಂದ ಆಹ್ವಾನ ಬಂದು, ಅಲ್ಲಿಗೆ ತೆರಳುವಂಥ ಯೋಗ ಇದೆ. ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಯಾವುದಾದರೂ ಸಂಘ- ಸಂಸ್ಥೆ ಅಥವಾ ವ್ಯಕ್ತಿಗಳ ಜೊತೆಗೆ ಏನಾದರೂ ಮಾತುಕತೆ ನಡೆಸಿದ್ದಿರಿ ಅಂತಾದಲ್ಲಿ, ಈ ವರ್ಷ ನಿಮಗೆ ಅವಕಾಶಗಳು ಬರಲಿವೆ. ವೃತ್ತಿನಿರತರಿಗೆ ಆರ್ಥಿಕವಾಗಿ ಸವಾಲುಗಳು ಇರುತ್ತವೆ.
-ಸ್ವಾತಿ ಎನ್.ಕೆ.