
ಹುಬ್ಬಳ್ಳಿ, ನವೆಂಬರ್ 25: 2024ರ ಮೇ ತಿಂಗಳಲ್ಲಿ ನಡೆದಿದ್ದ ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಗಿರೀಶ್ ಅಲಿಯಾಸ್ ವಿಶ್ವನಾಥ್ ಎಸ್.ಸಾವಂತ್‌ನನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. ಇದೀಗ ಇಂದು (ನವೆಂಬರ್ 25) ಹಂತಕ ಗಿರೀಶ್ ಅಲಿಯಾಸ್ ವಿಶ್ವನಾಥ್ ಗೆ ಜೀವಾವಾಧಿ ಶಿಕ್ಷೆ ಜೊತೆಗೆ 45 ಸಾವಿರ ರೂಪಾಯಿ ದಂಡ ವಿಧಿಸಿ ಹುಬ್ಬಳ್ಳಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪಲ್ಲವಿ ಬಿ ಆರ್ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿಯ ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ನವೆಂಬರ್ 21 ದೋಷಿ ಎಂದು ತೀರ್ಪು ನೀಡಿತ್ತು. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 451, 302 ಹಾಗೂ 201ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಲ್ಲಿ ಆರೋಪಿಯನ್ನು ದೋಷಿ ಎಂದು ಆದೇಶಿಸಿದ್ದು, ಶಿಕ್ಷೆ ಪ್ರಮಾಣದ ತೀರ್ಪನ್ನು ನ.25ಕ್ಕೆ ಕಾಯ್ದಿರಿಸಿತ್ತು.
2024ರ ಮೇ 15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ತನ್ನ ನಿವಾಸದಲ್ಲಿ 20 ವರ್ಷದ ಅಂಜಲಿ ಅಂಬಿಗೇರ ಬರ್ಬರವಾಗಿ ಹತ್ಯೆಯಾಗಿದ್ದಳು. ಮನೆಯಲ್ಲಿದ್ದ ಅಂಜಲಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಅಂಜಲಿ ಮತ್ತು ಗಿರೀಶ್ ನಡುವಿನ ಪ್ರೀತಿ ವಿಚಾರದಲ್ಲಿ ಬಿರುಕು ಮೂಡಿದ್ದೇ ಕೊಲೆಗೆ ಕಾರಣ ಎಂಬ ಅಂಶ ತನಿಖೆಯಲ್ಲಿ ತಿಳಿದುಬಂದಿತ್ತು. ಅಂಜಲಿ ಸಂಪರ್ಕ ಕಡಿದುಕೊಂಡಿದ್ದ ಹಿನ್ನೆಲೆಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.
ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಾವಣಗೆರೆ ಸಮೀಪ ರೈಲ್ವೆ ಪೊಲೀಸರ ನೆರವಿನಿಂದ ವಶಕ್ಕೆ ಪಡೆಯಲಾಗಿತ್ತು. ಚಲಿಸುವ ರೈಲಿನಿಂದ ಬಿದ್ದು ಗಾಯಗೊಂಡಿದ್ದ ಆತನಿಗೆ ಚಿಕಿತ್ಸೆ ಕೊಡಿಸಿದ ಬಳಿಕ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಅಂಜಲಿ ಕೊಲೆಗೂ ಮುನ್ನ ಆರೋಪಿಯಿಂದ ಬಂದಿದ್ದ ಬೆದರಿಕೆಗಳ ಕುರಿತು ನೀಡಿದ್ದ ದೂರನ್ನು ನಿರ್ಲಕ್ಷಿಸಿದ ಆರೋಪದ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ (CID) ವಹಿಸಿತ್ತು. ತನಿಖೆ ಪೂರ್ಣಗೊಳಿಸಿದ ಸಿಐಡಿ ಅಧಿಕಾರಿಗಳು, 2024ರ ಆಗಸ್ಟ್‌ನಲ್ಲಿ ನ್ಯಾಯಾಲಯಕ್ಕೆ 494 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ವಾದ-ಪ್ರತಿವಾದ, ಸಾಕ್ಷಿಗಳ ಹೇಳಿಕೆ ಹಾಗೂ ಲಭ್ಯವಿದ್ದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಇದೀಗ ಹಂತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.