AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹು-ಧಾ ಪಾಲಿಕೆಯಲ್ಲಿ ಕಳಚಿದ ಗೌನ್ ಗಲಾಟೆ: ಗೌನ್ ಹಾಕಿಕೊಳ್ಳುವುದು ಮೇಯರ್ ವಿವೇಚನೆಗೆ ಬಿಟ್ಟಿದ್ದು ಎಂದ ಸರ್ಕಾರ

ವಿಶೇಷ ಸಂದರ್ಭಗಳಲ್ಲಿ ಗೌನ್ ಧರಿಸುವುದು ಆಯಾ ಮಹಾನಗರ ಪಾಲಿಕೆಗಳ ಮಹಾಪೌರರ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.

ಹು-ಧಾ ಪಾಲಿಕೆಯಲ್ಲಿ ಕಳಚಿದ ಗೌನ್ ಗಲಾಟೆ: ಗೌನ್ ಹಾಕಿಕೊಳ್ಳುವುದು ಮೇಯರ್ ವಿವೇಚನೆಗೆ ಬಿಟ್ಟಿದ್ದು ಎಂದ ಸರ್ಕಾರ
ಹು-ಧಾ ಮಹಾನಗರ ಪಾಲಿಕೆ
TV9 Web
| Updated By: ಆಯೇಷಾ ಬಾನು|

Updated on:Oct 28, 2022 | 3:30 PM

Share

ಹುಬ್ಬಳ್ಳಿ: ರಾಜ್ಯದ ಮಹಾನಗರ ಪಾಲಿಕೆಗಳ ಮಹಾಪೌರರು ಪಾಲಿಕೆಯ ಸಭೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಗೌನ್ ಧರಿಸುವುದು ಆಯಾ ಮಹಾನಗರ ಪಾಲಿಕೆಗಳ ಮಹಾಪೌರರ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದ್ದು, ಹು-ಧಾ ಮಹಾನಗರ ಪಾಲಿಕೆಯ ಕೈ ಸದಸ್ಯರಿಗೆ ಮರ್ಮಾಘಾತವಾಗಿದೆ.

ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಈ ಕುರಿತು ಸ್ಪಷ್ಟನೆ ನೀಡಿದ್ದು, ಗೌನ್ ಧರಿಸುವ ವಿಷಯದಲ್ಲಿ ಸ್ಪಷ್ಟನೆ ಕೋರಿ ಹು-ಧಾ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಪಾಲಿಕೆಯ ಸಾಮಾನ್ಯ ಸಭೆ ಅ. 28ರಂದು ಧಾರವಾಡದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ. ಪಾಲಿಕೆಯ ಸೆಪ್ಟೆಂಬರ್ ಮಾಸಿಕ ಸಭೆಯಲ್ಲಿ ಮೇಯ‌ ಈರೇಶ ಅಂಚಟಗೇರಿ ಅವರು ಗೌನ್ ಧರಿಸದೆ ಪಾಲ್ಗೊಂಡಿದ್ದನ್ನು ಕಾಂಗ್ರೆಸ್‌ ಸದಸ್ಯರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಸಭೆ ನಡೆಸಲು ಅವಕಾಶ ನೀಡಿರಲಿಲ್ಲ. ಬಳಿಕ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿತ್ತು.

ಇದಕ್ಕೂ ಪೂರ್ವ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ರಾಷ್ಟ್ರಪತಿ ದೌಪದಿ ಮುರ್ಮು ಅವರ ಪೌರ ಸನ್ಮಾನ ಕಾರ್ಯಕ್ರಮದಲ್ಲೂ ಮೇಯ‌ರ್ ಅವರು ಗೌನ್ ಧರಿಸಿರಲಿಲ್ಲ. ಮುಖ್ಯಮಂತ್ರಿ ಅವರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಹೀಗೆ ಮಾಡಿದ್ದೆ ಎಂದು ಮೇಯರ್ ಆಗ ತಿಳಿಸಿದ್ದರು. ಇದೀಗ ಸರ್ಕಾರವೇ ಲಿಖಿತವಾಗಿ ಸ್ಪಷ್ಟನೆ ನೀಡಿದೆ. ಆದರೆ, ಮೇಯರ್ ಅವರು ಗೌನ್ ಧರಿಸುವುದಿಲ್ಲ ಎಂಬುದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಧಾರವಾಗಬೇಕು ಎಂಬುದು ಕಾಂಗ್ರೆಸ್ ವಾದವಾಗಿದೆ. ಇನ್ನು ಮುಂದೆ ಪಾಲಿಕೆ ಸಭೆಗಳಲ್ಲಿ, ಮಹತ್ವದ ಕಾರ್ಯಕ್ರಮಗಳಲ್ಲಿ ಗೌನ್ ಧರಿಸುವುದಿಲ್ಲ ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದ್ದರು.

ಮೊದಲೆ ಮೂರು ವರ್ಷಗಳ ಕಾಲ ಪಾಲಿಕೆಗೆ ಜನ ಪ್ರತಿನಿಧಿಗಳಿಲ್ಲದೇ ಸ್ಥಳೀಯ ಕೆಲಸಗಳು ನಡೆದೇ ಇರಲಿಲ್ಲ. ರಸ್ತೆ, ಚರಂಡಿ ಸೇರಿ ಮೂಲ ಸೌಲಭ್ಯ ಮರೀಚಿಕೆಯಾಗಿದ್ವು. ಇನ್ನೇನು ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳು ಬಂದು, ಕಾಮಗಾರಿ ವೇಗ ಪಡೀಬೇಕು ಅನ್ನುವಷ್ಟರಲ್ಲಿ ಗೌನ್ ಗಲಾಟೆಯಿಂದ ಎರಡು ಸಾಮಾನ್ಯ ಸಭೆ ನಡೆದೇ ಇರಲಿಲ್ಲ. ಸದ್ಯ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇನ್ನಾದ್ರೂ ಜನರ ಸಮಸ್ಯೆಗಳ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗ್ಲಿ ಅನ್ನೋದು ನಮ್ಮ ಆಷಯ.

ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಹುಬ್ಬಳ್ಳಿ-ಧಾರವಾಡ

Published On - 3:30 pm, Fri, 28 October 22