ಹುಬ್ಬಳ್ಳಿ, ಆಗಸ್ಟ್ 09: ಡ್ರಗ್ಸ್ (Drugs) ಮುಕ್ತ ನಗರವಾಗಿಸಲು ಹುಬ್ಬಳ್ಳಿ-ಧಾರವಾಡ (Hubballi-Dharwad) ಪೊಲೀಸರು (Police) ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಡ್ರಗ್ಸ ಮತ್ತು ಗಾಂಜಾ ಸರಬರಾಜು ಮಾಡುತ್ತಿದ್ದವರನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಇದೀಗ ಹುಬ್ಬಳ್ಳಿಯಲ್ಲಿ ಗಾಂಜಾ ಪೂರೈಸುತ್ತಿದ್ದ 12 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ಈ ಹಿಂದೆ ಡ್ರಗ್ಸ್ ಕೇಸ್ನಲ್ಲಿ 70ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿತ್ತು. ಮಾದಕ ವಸ್ತು ಎಲ್ಲಿಂದ ಬರುತ್ತೆ ಅನ್ನೋದರ ಬಗ್ಗೆ ತನಿಖೆಯಾಗುತ್ತಿದೆ ಎಂದು ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ, ರಾಜಸ್ಥಾನದಿಂದ ಹುಬ್ಬಳ್ಳಿಗೆ ಹೆಚ್ಚು ಡ್ರಗ್ಸ್ ಬಂದಿದೆ. ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಗುರುವಾರ ಒಡಿಶಾ ಮೂಲದ ಇಬ್ಬರು ಆರೋಪಿಗಳು ಸೇರಿದಂತೆ 12 ಜನರನ್ನ ಬಂಧಿಸಿದ್ದಾರೆ. 2 ಕೆಜಿ 500 ಗ್ರಾಂ ಗಾಂಜಾ, ಡ್ಯಾಗರ್, ತಲ್ವಾರ್ ವಶಕ್ಕೆ ಪಡೆದಿದ್ದೇವೆ ಎಂದು ತಿಳಸಿದರು.
ಹುಬ್ಬಳ್ಳಿಯ ಗಬ್ಬೂರು ಹೊರವಲಯದಲ್ಲಿ ಇದ್ದ ಡ್ರಗ್ಸ್ ಪೆಡ್ಲರ್ಗಳಾದ ಒಡಿಶಾದ ಕೇಶವಚಂದ್ರ, ನಿಲಾಂಬರ್ ರಾವುತ್ ಎಂಬುವರನ್ನು ಪೊಲೀಸರ ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳು ನಮ್ಮ ಪೊಲೀಸ್ ಸಿಬ್ಬಂದಿ ಉಮೇಶ್, ನಿಂಗನಗೌಡ ಮೇಲೆ ಹಲ್ಲೆ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ, ನಮ್ಮ ಪೊಲೀಸ್ ಸಿಬ್ಬಂದಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಧಾರವಾಡದಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಕೇಶವಚಂದ್ರ, ನಿಲಾಂಬರ್, ತೌಸಿಫ್, ಸಿದ್ದಾರ್ಥ, ಪವನ್, ಮಂಜುನಾಥ, ಶಹನವಾಜ್, ನದೀಂ, ಕಾರ್ತಿಕ್, ಮೊಹಮ್ಮದೀನ್, ವಿಠ್ಠಲ, ಗಣಪತಿ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಮಾದಕ ವಸ್ತುಗಳ ಮುಕ್ತ ಹುಬ್ಬಳ್ಳಿ-ಧಾರವಾಡ ಅಭಿಯಾನ ಆರಂಭ ಮಾಡಿದ್ದೇವೆ. ಈ ಹಿಂದೆ 70 ಕ್ಕೂ ಹೆಚ್ಚು ಜನರನ್ನ ಬಂಧಿಸಿದ್ದೇವೆ. 800 ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ. ಮಾದಕ ವಸ್ತು ಎಲ್ಲಿಂದ ಬರತ್ತೆ ಅನ್ನೋದು ತನಿಖೆಯಾಗುತ್ತಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Fri, 9 August 24