ಹು- ಧಾ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಿದ್ದ ರೌಡಿಗಳಿಗೆ ಶಾಕ್ ಕೊಟ್ಟ ಪೊಲೀಸ್ ಕಮೀಷನರ್ ಲಾಭುರಾಮ್

ರೌಡಿ ಶೀಟರ್‌ಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಹೀಗಿದ್ದಾಗಲೂ ಅಪರಾಧ ಪ್ರಕರಣದಲ್ಲಿ ಅವರು ಭಾಗಿಯಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕಮಿಷನರ್ ಲಾಬೂ ರಾಮ್ ತಿಳಿಸಿದ್ದಾರೆ.

ಹು- ಧಾ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಿದ್ದ ರೌಡಿಗಳಿಗೆ ಶಾಕ್ ಕೊಟ್ಟ ಪೊಲೀಸ್ ಕಮೀಷನರ್ ಲಾಭುರಾಮ್
ರೌಡಿಗಳ ಗಡಿಪಾರಿಗೆ ಚಿಂತನೆ
TV9kannada Web Team

| Edited By: preethi shettigar

Jul 21, 2021 | 1:44 PM

ಹುಬ್ಬಳ್ಳಿ: ಅಪರಾಧ ಪ್ರಕರಣ ಹೆಚ್ಚುತ್ತಿರುವ ಹಾಗೂ ಮಹಾನಗರ ಪಾಲಿಕೆ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು, ಅಪರಾಧ ಪ್ರಕರಣಗಳಲ್ಲಿ ಸಕ್ರಿಯರಾಗಿರುವ ರೌಡಿಗಳ ಗಡಿಪಾರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಕಮಿಷನರೇಟ್ ನಿರ್ಧರಿಸಿದೆ. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡುವ ಚಿಂತನೆ ನಡೆಸಲಾಗಿದೆ.

ಠಾಣಾ ವ್ಯಾಪ್ತಿಯ ಎಲ್ಲ ರೌಡಿಗಳ ಮಾಹಿತಿ ಹಾಗೂ ಅವರ ಮೇಲಿರುವ ಪ್ರಕರಣಗಳ ಸಂಪೂರ್ಣ ವಿವರಗಳನ್ನು ಕಚೇರಿಗೆ ತಲುಪಿಸಬೇಕು. ಅಲ್ಲದೆ, ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ರೌಡಿಗಳ ಮಾಹಿತಿ ಹಾಗೂ ಅವರ ಹಿನ್ನೆಲೆ ಪ್ರತ್ಯೇಕವಾಗಿ ತಿಳಿಸಬೇಕು ಎಂದು ಕಮಿಷನರ್ ಲಾಬೂ ರಾಮ್ ಜಿಲ್ಲೆಯ ಎಲ್ಲಾ ಇನ್ಸ್​ಪೆಕ್ಟರ್‌ಗಳಿಗೆ ಸೂಚಿಸಿದ್ದಾರೆ.

ಕಮಿಷನರೇಟ್‌ನಲ್ಲಿ 1,300ಕ್ಕೂ ಹೆಚ್ಚು ರೌಡಿಗಳಿದ್ದು, ಅವರಲ್ಲಿ 50ಕ್ಕೂ ಹೆಚ್ಚು ರೌಡಿಗಳು ಅಪರಾಧ ಪ್ರಕರಣಗಳಲ್ಲಿ ಮೇಲಿಂದ ಮೇಲೆ ತೊಡಗಿಕೊಳ್ಳುತ್ತಿದ್ದಾರೆ. ಇಂತಹ ಒಬ್ಬೊಬ್ಬ ರೌಡಿ ಮೇಲೆ ಕನಿಷ್ಠ 8-15 ಪ್ರಕರಣಗಳು ದಾಖಲಾಗಿವೆ. ಐದಾರು ರೌಡಿಗಳ ಮೇಲೆ 30ಕ್ಕೂ ಹೆಚ್ಚು ಪ್ರಕರಣಗಳಿವೆ. ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ, ಆಸ್ತಿ ಕಬಳಿಕೆ, ಮೀಟರ್ ಬಡ್ಡಿ ದಂಧೆ, ಮಾದಕ ವಸ್ತು ಸಂಗ್ರಹ ಮತ್ತು ಮಾರಾಟ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಗುಂಪು ಘರ್ಷಣೆಯಂಥ ಗಂಭೀರ ಪ್ರಕರಣಗಳು ಅವರ ಮೇಲಿವೆ. ಸದ್ಯ 5-6 ರೌಡಿಗಳನ್ನು ಮಾತ್ರ ಕಮಿಷನರೇಟ್‌ನಿಂದ ಗಡಿಪಾರು ಮಾಡಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿ ಉಪನಗರ, ಶಹರ ಠಾಣೆ, ಕೇಶ್ವಾಪುರ, ಹಳೇಹುಬ್ಬಳ್ಳಿ, ಧಾರವಾಡ ಶಹರ ಠಾಣೆಗಳಲ್ಲಿ ಅತಿ ಹೆಚ್ಚು ರೌಡಿಗಳಿದ್ದಾರೆ. ಹುಬ್ಬಳ್ಳಿಯ ಸೆಟ್ಲಮೆಂಟ್, ಆರ್‌ಜಿಎಸ್, ಬೆಂಗೇರಿ, ಉಣಕಲ್ ಭಾಗದಲ್ಲಿರುವ ಕೆಲವು ರೌಡಿಗಳು ತೀರಾ ಅಪಾಯಕಾರಿಯಾಗಿದ್ದು, ರಾಜಕೀಯ ನಂಟು ಹೊಂದಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಹಿಡಿತ ಸಾಧಿಸಿದ್ದಾರೆ. ಅಮಾಯಕ ರೈತರನ್ನು ಬೆದರಿಸಿ, ಅವರ ಆಸ್ತಿಯನ್ನು ತಮ್ಮ ಹಾಗೂ ಸಂಬಂಧಿಗಳ ಹೆಸರಿಗೆ ಮಾಡಿಕೊಂಡಿದ್ದಾರೆ. ಒಂದಿಬ್ಬರು, ಮುಂಬರುವ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ ಸ್ಪರ್ಧಿಸುವ ತಯಾರಿ ಸಹ ಮಾಡಿಕೊಂಡಿರುವುದಾಗಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ವಾರದ ಹಿಂದೆಯಷ್ಟೇ ಪೊಲೀಸರು 600ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಕೆಲವರ ಮೇಲೆ ಪ್ರಕರಣ ದಾಖಲಿಸಿದ್ದರು. ಒಂದಷ್ಟು ರೌಡಿಗಳನ್ನು ಠಾಣೆಗೆ ಕರೆಸಿ ಪರೇಡ್ ನಡೆಸಿದ್ದರು. ಇದರ ಮುಂದುವರಿದ ಭಾಗವೇ ಗಡಿಪಾರು ಮಾಡುವ ಯೋಜನೆ. ಕನಿಷ್ಠ 15 ರೌಡಿಗಳಾದರೂ ಚುನಾವಣೆ ಪೂರ್ವ ಕಮಿಷನರೇಟ್‌ನಿಂದ ಗಡಿಪಾರು ಆಗಲಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

ಸಮಾಜ ಘಾತುಕ ಶಕ್ತಿಯಾಗಿರುವ ಕೆಲವು ರೌಡಿಗಳಿಗೆ ರಾಜಕೀಯ ಆಶ್ರಯವಿದೆ. ಅವರಲ್ಲಿ ಕೆಲವರು ರಾಜಕೀಯವಾಗಿಯೂ ಸಕ್ರಿಯರಾಗಿದ್ದಾರೆ. ಹತ್ತು ವರ್ಷಗಳ ಹಿಂದೆ ಅವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ? ಎನ್ನುವ ಮಾಹಿತಿ ಕಲೆ ಹಾಕಬೇಕು. ಐಷಾರಾಮಿ ಕಾರು ಹಾಗೂ 10-20 ಎಕರೆ ಜಮೀನು ಖರೀದಿಗೆ ಮತ್ತು ಬಂಗಲೆ ಕಟ್ಟಿಸಿಕೊಳ್ಳಲು ಅವರಿಗೆ ಹಣ ಎಲ್ಲಿಂದ ಬಂದಿದೆ? ಅವರ ದುಡಿಮೆಯೇನು? ಎನ್ನುವ ಮಾಹಿತಿ ಸಂಬಂಧ ಮಾಹಿತಿ ಇಲಾಖೆ ಸಂಗ್ರಹಿಸಬೇಕು. ಕೆಲವು ರೌಡಿಗಳು ನಕಲಿ ಕಾಗದ ಪತ್ರಗಳನ್ನು ತಯಾರಿಸಿ ಅಮಾಯಕರನ್ನು ವಂಚಿಸುತ್ತಿದ್ದಾರೆ. ಸಮಾಜದ ಶಾಂತಿ ಕದಡುವ ಇವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜಾಮೀನು ಸಿಗದ ಹಾಗೆ ಮಾಡಬೇಕು ಎನ್ನುವುದು ಈ ಭಾಗದ ಪ್ರಜ್ಞಾವಂತರ ಆಗ್ರಹ.

ರೌಡಿ ಶೀಟರ್‌ಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಹೀಗಿದ್ದಾಗಲೂ ಅಪರಾಧ ಪ್ರಕರಣದಲ್ಲಿ ಅವರು ಭಾಗಿಯಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕಮಿಷನರ್ ಲಾಬೂ ರಾಮ್ ತಿಳಿಸಿದ್ದಾರೆ.

ವರದಿ: ದತ್ತಾತ್ರೇಯ ಪಾಟೀಲ್

ಇದನ್ನೂ ಓದಿ: ಬೆಂಗಳೂರಿನಲ್ಲಿ 1,500 ರೌಡಿಗಳು ಪೊಲೀಸರ ವಶಕ್ಕೆ; 2 ಸಾವಿರ ರೌಡಿ ಶೀಟರ್ಸ್ ಮನೆ ಮೇಲೆ ದಾಳಿ

ಕೊರೊನಾ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿದ ಮಾಜಿ ರೌಡಿಶೀಟರ್; ಪೊಲೀಸ್ ಅಧಿಕಾರಿ, ರಾಜಕಾರಣಿ ಜತೆ ಇರುವ ಫೋಟೋ ವೈರಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada