ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಮರು ನಾಮಕರಣ: ರಾಣಿ ಚೆನ್ನಮ್ಮ ಮೈದಾನವೆಂದು ಹೆಸರಿಡಲು ಮುಂದಾದ ಪಾಲಿಕೆ

ಹುಬ್ಬಳ್ಳಿಯ ಈದ್ಗಾ ಮೈದಾನದ ಹೆಸರನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಬದಲಾಯಿಸುವ ಬಿಜೆಪಿ ನೇತೃತ್ವದ ಪಾಲಿಕೆಯ ನಿರ್ಧಾರಕ್ಕೆ ಕಾಂಗ್ರೆಸ್ ಮತ್ತು ಮುಸ್ಲಿಂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಮೈದಾನದ ಇತಿಹಾಸ ಮತ್ತು ಹಿಂದಿನ ವಿವಾದಗಳನ್ನು ಗಮನಿಸಿದರೆ, ಈ ನಿರ್ಧಾರ ಕೋಮು ಸೌಹಾರ್ದತೆಯನ್ನು ಹಾಳುಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಮರು ನಾಮಕರಣ: ರಾಣಿ ಚೆನ್ನಮ್ಮ ಮೈದಾನವೆಂದು ಹೆಸರಿಡಲು ಮುಂದಾದ ಪಾಲಿಕೆ
ಹುಬ್ಬಳ್ಳಿ ಈದ್ಗಾ ಮೈದಾನ
Updated By: Ganapathi Sharma

Updated on: Sep 02, 2025 | 11:38 AM

ಹುಬ್ಬಳ್ಳಿ, ಸೆಪ್ಟೆಂಬರ್ 2: ಹುಬ್ಬಳ್ಳಿ (Hubballi) ಈದ್ಗಾ ಮೈದಾನ (Eidgah Maidan) ವಿವಾದ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಗೋಲಿಬಾರ್​ನಲ್ಲಿ ಅನೇಕರ ಜೀವ ಹೋಗಿತ್ತು. ಇದೀಗ ಮತ್ತೆ ಇದೇ ಮೈದಾನದ ವಿಚಾರದಲ್ಲಿ ಮತ್ತೊಂದು ವಿವಾದ ಆರಂಭವಾಗಿದೆ. ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಮರು ನಾಮಕರಣ ಮಾಡಲು ಬಿಜೆಪಿ ನೇತೃತ್ವದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. ಆದರೆ, ಇದಕ್ಕೆ ಮುಸ್ಲಿಂ ಸಮುದಾಯದವರು ಸೇರಿದಂತೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೆಸರು ಬದಲಾವಣೆ ವಿವಾದ ಹುಬ್ಬಳ್ಳಿಯಲ್ಲಿ ಮತ್ತೊಂದು ಸುತ್ತಿನ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಈದ್ಗಾ ಮೈದಾನಕ್ಕಿದೆ ದೊಡ್ಡ ಇತಿಹಾಸ

ಕರ್ನಾಟಕದ ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ ನಗರದಲ್ಲಿರುವ ಈದ್ಗಾ ಮೈದಾನಕ್ಕೆ ದೊಡ್ಡ ಇತಿಹಾಸವಿದೆ. ನಗರದ ಹೃದಯಬಾಗದಲ್ಲಿರುವ 1.5 ಎಕರೆ ವಿಸ್ತೀರ್ಣದ ಈ ಜಾಗ ವಿವಾದಿತ ಸ್ಥಳವಾಗಿದ್ದು, ಈ ಮೈದಾನದ ಸುತ್ತಲೇ ಹತ್ತಾರು ಹೋರಾಟಗಳು ದಶಕಗಳ ಹಿಂದೆಯೇ ನಡೆದಿವೆ. ಮೈದಾನದ ಪರ ವಿರೋಧ ಹೋರಾಟಗಳು ರಾಷ್ಟ್ರ ಮಟ್ಟದಲ್ಲಿಯೇ ಸದ್ದಾಗಿದ್ದವು.

ವಿವಾದದಿಂದಲೇ ಸುದ್ದಿಯಲ್ಲಿರುವ ಈದ್ಗಾ ಮೈದಾನ

ಬ್ರಿಟಿಷರ ಕಾಲದಲ್ಲಿಯೇ ಹುಬ್ಬಳ್ಳಿ ಅಂಜುಮನ್ ಸಂಸ್ಥೆಗೆ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ನೀಡಲು 999 ವರ್ಷಕ್ಕೆ ಲೀಸ್ ನೀಡಲಾಗಿತ್ತು. ಸ್ವಾತಂತ್ರ್ಯ ಬಂದ ನಂತರ ಕೂಡಾ ಈ ಪದ್ಧತಿ ಮುಂದುವರಿದುಕೊಂಡು ಬಂದಿತ್ತು. ಆದರೆ 1980 ರಲ್ಲಿ ಅಂಜುಮನ್ ಸಂಸ್ಥೆ, ಈ ಜಾಗದಲ್ಲಿ ವಾಣಿಜ್ಯ ಮಳಿಗೆಯನ್ನು ನಿರ್ಮಾಣ ಮಾಡಲು ಮುಂದಾಗಿತ್ತು. ಆಗ ಮಹಾನಗರ ಪಾಲಿಕೆ ಇದನ್ನು ತಡೆದಿತ್ತು. ಈ ಜಾಗ ಪಾಲಿಕೆಗೆ ಸೇರಿದ್ದು ಎಂದಿತ್ತು. ನಂತರ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆ ಬಳಿಕ ಈ ಜಾಗ ಪಾಲಿಕೆಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರಿಂದ, ಪ್ರಕರಣ ಸುಖಾಂತ್ಯ ಕಂಡಿತ್ತು.

1992 ರಲ್ಲಿ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ತಿರಂಗಾ ಯಾತ್ರೆ ಆರಂಭಿಸಿದ್ದರು. ಇದಕ್ಕೆ ಬೆಂಬಲ ನೀಡಲೆಂದೇ ಸ್ಥಳೀಯ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಈದ್ಗಾ ಮೈದಾನದಲ್ಲಿ ತಿರಂಗಾ ಹಾರಿಸಲು ಮುಂದಾಗಿದ್ದರು. ಆಗ ಕೂಡಾ ಇದು ಅಂಜುಮನ ಸಂಸ್ಥೆಗೆ ಸೇರಿದ ಜಾಗವೆಂದು ಅಂಜುಮನ್ ಸಂಸ್ಥೆ ವಿರೋಧ ವ್ಯಕ್ತಪಡಿಸಿತ್ತು. ಆಗ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಗೋಲಿಬಾರ್​​ನಲ್ಲಿ ಅನೇಕರು ಮೃತಪಟ್ಟಿದ್ದರು. ನಂತರ ನಿಷೇದಾಜ್ಞೆಯನ್ನು ಉಲ್ಲಂಘಿಸಿ, ಅನೇಕರು ಮೈದಾನಕ್ಕೆ ನುಗ್ಗಿ ತಿರಂಗಾ ಹಾರಿಸಿದ್ದರು. 1994 ಆಗಸ್ಟ್ 15 ರಂದು ರಾಷ್ಟ್ರ ಧ್ವಜಾರೋಹಣಕ್ಕೆ ಮುಂದಾಗಲಾಗಿತ್ತು. ಉಮಾ ಭಾರತಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಅವರಿಗೆ ಅವಕಾಶ ನೀಡಿರಲಿಲ್ಲ. ನಂತರ ನಡೆದ ಗಲಾಟೆಯಲ್ಲಿ ಗೋಲಿಬಾರ್ ನಡೆದಿತ್ತು.

ಹೀಗೆ ಹತ್ತು ಹಲವು ವಿವಾದಗಳಿಂದ ಹೆಸರಾಗಿರುವ ಈದ್ಗಾ ಮೈದಾನಲ್ಲಿ ಇದೀಗ ವರ್ಷಕ್ಕೆ ಮುಸ್ಲಿಂ ಸಮುದಾಯದವರು ಎರಡು ಬಾರಿ ಪ್ರಾರ್ಥನೆ ಮಾಡಿದರೆ, ಗಣೇಶ ಹಬ್ಬದಲ್ಲಿ ಹಿಂದೂಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಇಂತಹ ಜಾಗದ ವಿಚಾರದಲ್ಲಿ ಇದೀಗ ಮತ್ತೊಂದು ವಿವಾದ ಆರಂಭವಾಗಿದೆ.

ರಾಣಿ ಚೆನ್ನಮ್ಮ ಮೈದಾನ: ಮರುನಾಮಕರಣಕ್ಕೆ ಮುಂದಾದ ಪಾಲಿಕೆ

ಈದ್ಗಾ ಮೈದಾನದ ಹೆಸರನ್ನು ಬದಲಾವಣೆ ಮಾಡಿ ರಾಣಿ ಚೆನ್ನಮ್ಮ ಮೈದಾನ ಅಂತ ನಾಮಕರಣ ಮಾಡಲು ಬಿಜೆಪಿ ನೇತೃತ್ವದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. 2022 ರಲ್ಲಿ ನಡೆದಿದ್ದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಠರಾವು ಕೂಡಾ ಪಾಸ್ ಮಾಡಲಾಗಿದೆ. ಇದನ್ನು ಸರ್ಕಾರಕ್ಕೆ ಕಳುಹಿಸಿ, ಹೆಸರು ಬದಲಾವಣೆ ಖಂಡಿತಾ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಹೆಸರು ಬದಲಾಯಿಸಿಯೇ ಸಿದ್ಧ: ಬಿಜೆಪಿ ನಾಯಕರು

ಇದು ಪಾಲಿಕೆಗೆ ಸೇರಿದ ಜಾಗವಾಗಿದೆ. ಹೀಗಾಗಿಯೇ ಅದಕ್ಕೆ ಹೆಸರು ಇಡಲು ಪಾಲಿಕೆಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಠರಾವು ಪಾಸ್ ಮಾಡಲಾಗಿದೆ. ಅದನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ, ಹೆಸರು ಬದಲಾವಣೆ ಮಾಡಿಯೇ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಬಿಜೆಪಿಯಿಂದ ಕೋಮುದಳ್ಳುರಿ ಸೃಷ್ಟಿಗೆ ಯತ್ನ: ಕಾಂಗ್ರೆಸ್ ಆರೋಪ

ಇತ್ತ ಬಿಜೆಪಿ ಪಾಲಿಕೆ ಸದಸ್ಯರು ಮತ್ತು ನಾಯಕರು ಹೆಸರು ಬದಲಾವಣೆ ಪರವಾಗಿದ್ದರೆ, ಇದಕ್ಕೆ ಪಾಲಿಕೆಯ ಕಾಂಗ್ರೆಸ್ ಶಾಸಕರು ಮತ್ತು ಸ್ಥಳೀಯ ಮುಸ್ಲಿಂ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ಹುಬ್ಬಳ್ಳಿ ಶಾಂತವಾಗಿದೆ. ಕೋಮುಗಲಭೆಯಿಂದ ನಗರದ ಜನರು ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದೀಗ ಶಾಂತವಾಗಿರುವ ನಗರದಲ್ಲಿ ಮತ್ತೆ ಅಶಾಂತಿ ಮೂಡಿಸುವ ಉದ್ದೇಶದಿಂದಲೇ ಬಿಜೆಪಿಯವರು ಈ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸದ್ಯ ಇದೇ ಮೈದಾನದ ಸಮೀಪ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಇದೆ. ಬೇರೆ ಸ್ಥಳಕ್ಕೆ ಬೇಕಾದರೂ ಹೆಸರು ಇಡಲಿ, ವರ್ಷದಲ್ಲಿ ನಾವು ಕೂಡ ಎರಡು ಬಾರಿ ಪ್ರಾರ್ಥನೆ ಮಾಡುತ್ತೇವೆ. ಅದಕ್ಕೆ ಈದ್ಗಾ ಮೈದಾನ ಅಂತಲೇ ಹೆಸರು ಇದೆ. ಇದೀಗ ಅದರ ಬದಲಾವಣೆ ಅವಶ್ಯಕತೆ ಏನಿದೆ ಎಂದು ಕಾಂಗ್ರೆಸ್ ಹಾಗೂ ಮುಸ್ಲಿಂ ಮುಖಂಡರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಕ್ತಿ ಮುಂದೆ ಸೋತ ಬಡತನ: ಹುಬ್ಬಳ್ಳಿ ವೃದ್ಧೆಯ ಗಣೇಶ ಮೇಲಿನ ಭಕ್ತಿಯ ವಿಡಿಯೋ ವೈರಲ್

ಈದ್ಗಾ ಮೈದಾನದ ಪರ-ವಿರೋಧ ಹೋರಾಟಗಳಿಂದ ಹುಬ್ಬಳ್ಳಿಯ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಕೋಮುಸಂಘರ್ಷಕ್ಕೆ ಕಾರಣವಾಗದಂತೆ, ಪರಸ್ಪರ ಮಾತುಕತೆ ಮೂಲಕ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸವನ್ನು ಎರಡು ಸಮುದಾಯ ಮತ್ತು ಪಕ್ಷದವರು ಮಾಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ