AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಕ್ತಿ ಮುಂದೆ ಸೋತ ಬಡತನ: ಹುಬ್ಬಳ್ಳಿ ವೃದ್ಧೆಯ ಗಣೇಶ ಮೇಲಿನ ಭಕ್ತಿಯ ವಿಡಿಯೋ ವೈರಲ್

ಹುಬ್ಬಳ್ಳಿಯ 70 ವರ್ಷದ ಗಿರಿಜಮ್ಮ ತೀವ್ರ ಬಡತನದಲ್ಲಿದ್ದರೂ, ಎಂಟುನೂರು ರೂಪಾಯಿ ಸಾಲ ಮಾಡಿ ಗಣೇಶ ಮೂರ್ತಿಯನ್ನು ಖರೀದಿಸಿ ಸರಳವಾಗಿ ಪೂಜಿಸಿದ್ದಾರೆ. ಅವರ ಭಕ್ತಿಯ ವಿಡಿಯೋ ವೈರಲ್ ಆಗಿದ್ದು, ಅನೇಕರು ಸಹಾಯ ಮಾಡಿದ್ದಾರೆ. ಗಿರಿಜಮ್ಮ ಅವರ ಸರಳತೆ ಮತ್ತು ಭಕ್ತಿ ಎಲ್ಲರ ಮನಸ್ಸನ್ನು ಗೆದ್ದಿದೆ. ವೈರಲ್ ವಿಡಿಯೋ ಸಹಿತ ವರದಿ ಇಲ್ಲಿದೆ.

ಭಕ್ತಿ ಮುಂದೆ ಸೋತ ಬಡತನ: ಹುಬ್ಬಳ್ಳಿ ವೃದ್ಧೆಯ ಗಣೇಶ ಮೇಲಿನ ಭಕ್ತಿಯ ವಿಡಿಯೋ ವೈರಲ್
ಗಿರಿಜಮ್ಮ ಪ್ರತಿಷ್ಠಾಪಿಸಿದ ಗಣಪತಿ, ಶ್ರೀಗಂದ್ ಸೇಟ್ ಹಾಗೂ ಗಿರಿಜಮ್ಮ
ಸಂಜಯ್ಯಾ ಚಿಕ್ಕಮಠ
| Updated By: Ganapathi Sharma|

Updated on: Aug 29, 2025 | 2:32 PM

Share

ಹುಬ್ಬಳ್ಳಿ, ಆಗಸ್ಟ್ 29: ಇತ್ತೀಚೆಗೆ ಹಬ್ಬಗಳಲ್ಲಿ ಭಕ್ತಿಗಿಂತ ಅದ್ದೂರಿತನವೇ ಹೆಚ್ಚಾಗಿದೆ. ಆದರೆ ಆ ವೃದ್ಧೆಗೆ ಒಂದು ಹೊತ್ತಿನ ಊಟಕ್ಕೂ ಸರಿಯಾದ ವ್ಯವಸ್ಥೆಯಿಲ್ಲ. ಆದರೂ ಪರಿಚಯಸ್ಥರ ಬಳಿ ಎಂಟು ನೂರು ರೂಪಾಯಿ ಸಾಲ ಪಡೆದು, ಗಣೇಶ ಮೂರ್ತಿಯನ್ನು ಖರೀದಿಸಿ ತಗೆದುಕೊಂಡು ಹೋಗಿದ್ದ ವೃದ್ದೆ, ಯಾವುದೇ ಅಲಂಕಾರವಿಲ್ಲದೇ, ಮನೆಯಲ್ಲಿದ್ದ ಪ್ಲಾಸ್ಟಿಕ್ ಕುರ್ಚಿ ಮೇಲೆ ಕಂಬಳಿ ಹಾಕಿ, ಅದರ ಮೇಲೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದ್ದಾಳೆ. ಗಣೇಶೋತ್ಸವ (Ganesh Chaturthi) ಸಂದರ್ಭದಲ್ಲಿ ವೃದ್ದೆಯ ವಿಡಿಯೋ ಇದೀಗ ವೈರಲ್ ಆಗಿದೆ.

ಹರಿದ ಬಟ್ಟೆ, ಮಾಸಿದ ಮುಖ, ಆದರೆ ತಲೆ ಮೇಲೆ ಮಾತ್ರ ಗಣೇಶ ಮೂರ್ತಿಯನ್ನು ಇಟ್ಟುಕೊಂಡು ಹೋಗುತ್ತಿರುವ ವೃದ್ದೆಯ ವಿಡಿಯೋ ವೈರಲ್ ಆಗುತ್ತಿದೆ. ಎರಡು ದಿನದ ಹಿಂದೆ ಹುಬ್ಬಳ್ಳಿ ನಗರದ ಅಕ್ಕಿಹೊಂಡದಲ್ಲಿ ಗಣೇಶ ಮೂರ್ತಿಯನ್ನು ಖರೀದಿಸಿ ವೃದ್ದೆ ತಗೆದುಕೊಂಡು ಹೋಗಿರುವು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಭಕ್ತಿ ಇದ್ದರೆ ಇರಬೇಕು ಹೀಗೆ ಎಂದು ಸಾವಿರಾರು ಜನರು ಕಮೆಂಟ್, ಲೈಕ್ ಮಾಡಿದ್ದಾರೆ. ಗಣೇಶ ಮೂರ್ತಿಯನ್ನು ತಗೆದುಕೊಂಡು ಹೋಗಿರುವ ವೃದ್ಧೆ ಗಿರಿಜಮ್ಮ ಕಂಬಳಿ, ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ನಿವಾಸಿ. ಎಪ್ಪತ್ತು ವರ್ಷದ ಗಿರಿಜಮ್ಮ, ಮಂಟೂರು ಗ್ರಾಮದಲ್ಲಿರುವ ತನ್ನ ಮುರುಕು ಮನೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.

ವೈರಲ್ ವಿಡಿಯೋ

ಗಿರಿಜಮ್ಮಳ ಭಕ್ತಿಗೆ ಅಡ್ಡಿಯಾಗಿಲ್ಲ ಕಿತ್ತು ತಿನ್ನುವ ಬಡತನ

ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು, ಸದ್ಯ ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಗಿರಿಜಮ್ಮಳ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ಮನೆಗೆ ಬಾಗಿಲು ಇ, ಮನೆಯಲ್ಲಿ ಯಾವುದೇ ವಸ್ತುಗಳು ಇಲ್ಲ. ಆದರೆ ಗಣೇಶ ಹಬ್ಬವನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ನಿರ್ಧಾರ ಮಾಡಿದ್ದ ಗಿರಿಜಮ್ಮ, ಪರಿಚಿತರ ಬಳಿ ಎಂಟು ನೂರು ರೂಪಾಯಿ ಹಣವನ್ನು ಸಾಲವನ್ನಾಗಿ ಪಡೆದು, ಎರಡು ದಿನದ ಹಿಂದೆ ಹುಬ್ಬಳ್ಳಿಗೆ ಆಗಮಿಸಿ, ಗಣೇಶ ಮೂರ್ತಿಯನ್ನು ಖರೀದಿಸಿ ತಗೆದುಕೊಂಡು ಹೋಗಿ, ಮನೆಯಲ್ಲಿಟ್ಟು ಪೂಜೆ ಮಾಡಿದ್ದಾರೆ. ಮನೆಯಲ್ಲಿರುವ ಹಳೆಯ ಒಂದು ಪ್ಲಾಸ್ಟಿಕ್ ಕುರ್ಚಿ ಮೇಲೆ ಕಂಬಳಿ ಹಾಸಿ, ಅದರ ಮೇಲೆ ಗಣೇಶ ಮೂರ್ತಿಯನ್ನು ಇಟ್ಟು ಪೂಜೆ ಮಾಡಿದ್ದಾರೆ. ಯಾವುದೇ ಅಲಂಕಾರ, ನೈವದ್ಯ, ಅದ್ದೂರಿತನವಿಲ್ಲದೇ, ತನ್ನ ಭಕ್ತಿಯನ್ನು ಸಮರ್ಪಿಸಿದ್ದಾರೆ. ಮನೆಯಲ್ಲಿಯೇ ದೀಪ ಹಚ್ಚಿ, ಊದು ಬತ್ತಿ ಹಚ್ಚಿ, ವಿಘ್ನ ನಿವಾರಕ, ತನ್ನ ಶಕ್ತಿ ಇಷ್ಟೇ ಅಂತ ಹೇಳಿ, ಪೂಜೆ ಸಲ್ಲಿಸಿದ್ದಾರೆ.

ಮೂರು ದಶಕಗಳಿಂದ ಗಣೇಶ ಹಬ್ಬ ಆಚರಿಸುತ್ತಿರುವ ಗಿರಿಜಮ್ಮ

ಗಿರಿಜಮ್ಮ ಕಳೆದ ಮೂರು ದಶಕಗಳಿಂದ ಮನೆಯಲ್ಲಿ ಗಣೇಶನ ಹಬ್ಬ ಮಾಡುತ್ತಿದ್ದಾರಂತೆ. ಈ ಹಿಂದೆ ಚೆನ್ನಾಗಿಯೇ ಹಬ್ಬವನ್ನು ಆಚರಿಸುತ್ತಿದ್ದರಂತೆ. ಆದರೆ, ಇದ್ದ ಎರಡು ಮಕ್ಕಳು ಮನೆ ಬಿಟ್ಟು ಹೋಗಿದ್ದಾದ್ದು, ಪತಿ ಅನೇಕ ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಈ ಬಾರಿ ಆರ್ಥಿಕ ಸಂಕಷ್ಟ ಮತ್ತು ವಯೋಸಹಜ ತೊಂದರೆಗಳಿದ್ದರು ಕೂಡಾ, ಅವುಗಳನ್ನು ಲೆಕ್ಕಿಸದೇ ಸಾಲ ಮಾಡಿ, ಗಣೇಶ ಮೂರ್ತಿಯನ್ನು ತಂದು ಪೂಜೆ ಮಾಡಿದ್ದಾರೆ.

ಗಿರಿಜಮ್ಮಳ ಭಕ್ತಿಗೆ ಎಲ್ಲಡೆಯಿಂದ ಪ್ರಶಂಸೆ

ಗಿರಿಜಮ್ಮಳ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಆಕೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ವಿಡಿಯೋ ನೋಡಿದ ಕೆಜೆಪಿ ಪೌಂಡೇಶನ್ ನ ಅಧ್ಯಕ್ಷ ಶ್ರೀಗಂದ್ ಸೇಟ್, ಹಗಲಿರಳು ತಮ್ಮ ತಂಡದವರ ಜೊತೆ ಸೇರಿ ವೃದ್ಧೆ ಯಾರು ಎಂಬುದನ್ನು ಪತ್ತೆ ಮಾಡಿದ್ದಾರೆ. ಮಾಹಿತಿ ಗೊತ್ತಾಗುತ್ತಿದಂತೆ ವೃದ್ದೆಯ ಮನೆಗೆ ಹೋಗಿ, ಆಕೆಗೆ ಇಪ್ಪತ್ತೈದು ಸಾವಿರ ನಗದು, ಆಹಾರ ಪದಾರ್ಥಗಳು, ಬಟ್ಟೆಯನ್ನು ನೀಡಿ, ಸತ್ಕಾರ ಮಾಡಿ ಬಂದಿದ್ದಾರೆ. ನಾನು ಜೀವನದಲ್ಲಿ ಅನೇಕ ಕಡೆ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡುವುದನ್ನು ನೋಡಿದ್ದೇನೆ. ಆದರೆ ಗಿರಿಜಮ್ಮಳ ಭಕ್ತಿಮುಂದೆ ಅವೆಲ್ಲವು ತೃಣಕ್ಕೆ ಸಮಾನದಂತೆ ಕಂಡವು. ಇಂತವರಿಗೆ ಸಹಾಯ ಮಾಡೋದು ತೃಪ್ತಿ ತಂದಿದೆ ಎಂದಿದ್ದಾರೆ ಶ್ರೀಗಂದ್ ಸೇಟ್.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ