ಹುಬ್ಬಳ್ಳಿಯಲ್ಲಿ ಸಿಲಿಂಡರ್​ ಸ್ಫೋಟ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 30, 2024 | 9:20 PM

ಹುಬ್ಬಳ್ಳಿಯ ಅಚ್ಚವ್ವ ಕಾಲೋನಿಯಲ್ಲಿ ನಡೆದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಇನ್ನೋರ್ವ ಅಯ್ಯಪ್ಪ ಮಾಲಾಧಾರಿ ತೇಜಸ್ ಸತಾರೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ತೇಜಸ್ ಏಕೈಕ ಮಗನಾಗಿದ್ದು ಹೋಟೆಲ್ ವ್ಯವಹಾರ ನಡೆಸುವ ಕನಸು ಕಂಡಿದ್ದರು. ಮಗನನ್ನು ಕಳೆದುಕೊಂಡ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಸಿಲಿಂಡರ್​ ಸ್ಫೋಟ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು
ಹುಬ್ಬಳ್ಳಿಯಲ್ಲಿ ಸಿಲಿಂಡರ್​ ಸ್ಫೋಟ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು
Follow us on

ಹುಬ್ಬಳ್ಳಿ, ಡಿಸೆಂಬರ್​ 30: ಡಿ.22ರಂದು ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಲ್ಲಿ ನಡೆದಿದ್ದ ಸಿಲಿಂಡರ್​ ಸ್ಫೋಟಗೊಂಡು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವನ್ನಪ್ಪಿದ್ದಾರೆ (death). ಆ ಮೂಲಕ ಮೃತಪಟ್ಟವರ ಸಂಖ್ಯೆ 7ಕ್ಕೇರಿಕೆ ಆಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತೇಜಸ್ ಸತಾರೆ(26) ಕೊನೆಯುಸಿರೆಳೆದಿದ್ದಾರೆ. ಒಬ್ಬನೇ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಕನಸು ನನಸಾಗಿಯೇ ಉಳಿಯಿತು: ತಂದೆ ಕಣ್ಣೀರು

ಒಬ್ಬನೇ ಮಗನಾಗಿದ್ದ ತೇಜಸ್​ನನ್ನು ಕಳೆದುಕೊಂಡು ತಂದೆ-ತಾಯಿ ಕಣ್ಣೀರು ಹಾಕಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಎಕ್ಸ್ ರೇ ಟೆಕ್ನಿಶಿಯನ್ ಆಗಿ ತೇಜಸ್ ತಂದೆ ಮುರಳಿಯವರು ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ತೇಜಸ್​ ಮಾಲೆ ಧರಿಸುತ್ತಿದ್ದರು. ಪುಣೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿ ಬಂದಿದ್ದರು. ತೇಜಸ್​ ಹೋಟೆಲ್ ಮಾಡುವ ಕನಸು ಕಂಡಿದ್ದ. ಆ ಕನಸು ನನಸಾಗಿಯೇ ಉಳಿಯಿತು ಎಂದು ತಂದೆ ಟಿವಿ9 ಮುಂದೆ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಸಿಲಿಂಡರ್​ ಸ್ಫೋಟ: 6 ಮಂದಿ ಅಯ್ಯಪ್ಪ ಮಾಲಾಧಾರಿಗಳ ಸಾವು

ಡಿಸೆಂಬರ್ 22 ರಂದು ಸಿಲಿಂಡರ್ ಸ್ಪೋಟದಿಂದ 9 ಜನ ಮಾಲಾಧಾರಿಗಳು ಗಂಭೀರ ಗಾಯಗೊಂಡಿದ್ದರು. ಹುಬ್ಬಳ್ಳಿಯ ಉಣಕಲ್ ಸಮೀಪ‌ ಇರುವ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಘೋರ ದುರಂತದಲ್ಲಿ ತೇಜಸ್ ಸತಾರೆ ಸೇರಿದಂತೆ ಏಳು ಜನ‌ ಮಾಲಾಧಾರಿಗಳು ಉಸಿರು ಚೆಲ್ಲಿದ್ದಾರೆ. ಮೃತ 7 ಜನರ ಪೈಕಿ ಐದು ಜನ ತಂದೆ ತಾಯಿಗೆ ಒಬ್ಬರೇ ಮಕ್ಕಳು.

ಈವರೆಗೂ ನಿಜಲಿಂಗಪ್ಪ ಬೇಪುರಿ (58) ಸಂಜಯ್ ಸವದತ್ತಿ (19)ಲಿಂಗರಾಜ್ ಬೀರನೂರ (20) ರಾಜು ಮೋಗೇರಿ ( 16) ಶಂಕರ್ ಊರ್ಬಿ ( 30) ಹಾಗೂ ಮುಂಜುನಾಥ್ ವಾಗ್ಮೋಡೆ (18) ಮೃತರು. ಈ ಆರು ಜನರ ಪೈಕಿ ಐವರು ಒಬ್ಬರೇ ಮಕ್ಕಳು. ಮೃತ ಮಾಲಾಧಾರಿ ಶಂಕರ್​​ಗೆ ತಂದೆ ತಾಯಿ ಇಬ್ಬರೂ‌ ಇಲ್ಲ. ಇನ್ನು ಮೃತ ಮಾಲಾಧಾರಿಗಳಾದ ಲಿಂಗರಾಜ ಬೀರನೂರ, ಹಾಗೂ ರಾಜು ಮೂಗೇರಿ ಇಬ್ಬರು ತಂದೆಯನ್ನು ಕಳೆದುಕೊಂಡು‌ ಮನೆಗೆ ಆಸರೆಯಾಗಿದ್ದರು. ಈ ಎರಡು ಕುಟುಂಬಗಳು ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ‌.

ಇದನ್ನೂ ಓದಿ: ಹುಬ್ಬಳ್ಳಿ ಸಿಲಿಂಡರ್​ ಸ್ಫೋಟ: ಘಟನೆಯಿಂದ ಮನನೊಂದು ದೇಗುಲ ನೆಲಸಮಕ್ಕೆ ನಿರ್ಧಾರ

ಇಬ್ಬರು ಮೃತಾರಗಿ ಇಂದಿಗೆ ನಾಲ್ಕು ದಿನ ಕಳೆದಿದೆ. ಆದರೆ ಮನೆಯಲ್ಲಿ ಕಣ್ಣೀರು ಮಾತ್ರ ನಿಂತಿಲ್ಲ. ಮೃತ ಲಿಂಗರಾಜ ತಾಯಿ ಕವಿತಾ ಹುಬ್ಬಳ್ಳಿಯ ಖಾಸಗಿ ಕಾಲೇಜ್​ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಗ‌ ಕೂಡ ಶಾಲೆ ಬಿಟ್ಟು ಅದೇ ಕಾಲೇಜ್​ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಇಬ್ಬರು ದುಡಿದು‌ ಮನೆ ನೋಡಿಕೊಳ್ಳುತ್ತಿದ್ದರು. ಆದರೆ ಮನೆಗೆ ಆಧಾರವಾಗಿದ್ದ ಲಿಂಗರಾಜ್ ಸಿಲಿಂಡರ್ ಸ್ಪೋಟದಲ್ಲಿ ಪ್ರಾಣ ಬಿಟ್ಟಿದ್ದಾನೆ. ಹೀಗಾಗಿ ತಾಯಿ ಕವಿತಾ ಮಗನ‌ ನೆನಪಲ್ಲಿ ಕಣ್ಣೀರು ಹಾಕುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.