ಹುಬ್ಬಳ್ಳಿ ಸಿಲಿಂಡರ್ ಸ್ಫೋಟ: ಘಟನೆಯಿಂದ ಮನನೊಂದು ದೇಗುಲ ನೆಲಸಮಕ್ಕೆ ನಿರ್ಧಾರ
ಹುಬ್ಬಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಆರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. 22 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಅಯ್ಯಪ್ಪ ಸನ್ನಿಧಿಯನ್ನು ಈ ದುರಂತದಿಂದಾಗಿ ನೆಲಸಮ ಮಾಡಲು ನಿರ್ಧರಿಸಲಾಗಿದೆ. ದುರಂತದಲ್ಲಿ ಮೃತಪಟ್ಟ ಲಿಂಗರಾಜ ಬೆರನೂರಿನ ತಿಥಿ ಕಾರ್ಯ ಮಾಡಲಾಗಿದ್ದು, ತಾಯಿ ಕಣ್ಣೀರಿಟ್ಟಿದ್ದಾರೆ. ಸರ್ಕಾರಿ ಉದ್ಯೋಗವನ್ನು ಕೋರಿದ್ದಾರೆ.
ಹುಬ್ಬಳ್ಳಿ, ಡಿಸೆಂಬರ್ 29: ನಗರದ ಅಯ್ಯಪ್ಪ (Ayyappa) ಮಾಲಾಧಾರಿಗಳ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಒಂಬತ್ತು ಜನರ ಪೈಕಿ ಒಬ್ಬೊಬ್ಬರೆ ಪ್ರಾಣ ಬಿಡುತ್ತಿದ್ದಾರೆ. ಹೀಗಾಗಿ ಸದ್ಯ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಈ ಮಧ್ಯೆ 22 ವರ್ಷದ ಹಿಂದೆ ನಿರ್ಮಿಸಿದ್ದ ಅಯ್ಯಪ್ಪ ಸನ್ನಿಧಿ ನೆಲಸಮಕ್ಕೆ ನಿರ್ಧಾರ ಮಾಡಲಾಗಿದೆ.
ನಗರದ ಅಚ್ಚವ್ವನ ಕಾಲೋನಿಯಲ್ಲಿ 22 ವರ್ಷದ ಹಿಂದೆ ಅಯ್ಯಪ್ಪ ಸನ್ನಿಧಿ ನಿರ್ಮಿಸಲಾಗಿತ್ತು. ಗಜಾನನ ಜಿತೂರಿ ಸ್ವಾಮೀಜಿ ಅವರು ಈ ಸನ್ನಿಧಿ ನಿರ್ಮಿಸಿದ್ದರು. ಇದೀಗ ಘಟನೆಯಿಂದ ಮನನೊಂದಿರುವ ಗಜಾನನ ಜಿತೂರಿ ಸ್ವಾಮೀಜಿ, ಅಯ್ಯಪ್ಪ ಸ್ವಾಮಿ ಸನ್ನಿಧಿ ನೆಲಸಮ ಮಾಡಲು ನಿರ್ಧರಿಸಿದ್ದಾರೆ. ಆ ಸನ್ನಿಧಿ ನೋಡುವುದಕ್ಕೆ ಆಗಲ್ಲ ಎಂದು ಕಣ್ಣೀರು ಹಾಕಿದ್ದು, ಏರಿಯಾದ ಜನರಿಗೆ ಹೇಳಿ ಸನ್ನಿಧಿ ತೆರವು ಮಾಡುತ್ತೇನೆ ಎನ್ನುತ್ತಿದ್ದಾರೆ.
ಲಿಂಗರಾಜ ಬೆರನೂರು ಮನೆಯಲ್ಲಿ ತಿಥಿ ಕಾರ್ಯ: ಕಣ್ಣೀರು ಹಾಕಿದ ತಾಯಿ
ಇನ್ನು ದುರಂತದಲ್ಲಿ ಮೃತಪಟ್ಟ ಲಿಂಗರಾಜ ಬೆರನೂರು ಮನೆಯಲ್ಲಿ ಇಂದು ತಿಥಿ ಕಾರ್ಯ ಮಾಡಲಾಗಿದೆ. ಮಗ ಲಿಂಗರಾಜನನ್ನು ನೆನೆದು ತಾಯಿ ಕವಿತಾ ಕಣ್ಣೀರು ಹಾಕಿದ್ದಾರೆ. ಲಿಂಗರಾಜಗೆ ಐಟಿಐ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು, ಆದರೆ ತಾಯಿಗೆ ನೆರವಾಗಲು ಓದು ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದ.
ಇದನ್ನೂ ಓದಿ: ಹುಬ್ಬಳ್ಳಿ ಸಿಲಿಂಡರ್ ಸ್ಫೋಟ: 6 ಮಂದಿ ಅಯ್ಯಪ್ಪ ಮಾಲಾಧಾರಿಗಳ ಸಾವು
ಸ್ವಂತ ಮನೆಯಿಲ್ಲದೆ ಜೀವನ ನಡೆಸುತ್ತಿದ್ದ ಲಿಂಗರಾಜ ಕುಟುಂಬ, ತಾಯಿ ಕವಿತಾಗೆ ಇದ್ದ ಒಬ್ಬ ಗಂಡು ಮಗ ಲಿಂಗರಾಜ ಮಾತ್ರ. ಕೆಎಲ್ಇನಲ್ಲಿ ಗುತ್ತಿಗೆ ಆಧಾರದ ಮೇಲೆ ಅಟೆಂಡರ್ ಆಗಿರುವ ತಾಯಿ, ನಮಗೆ ಪರಿಹಾರ ಹಣ ಬೇಡ ಸರ್ಕಾರಿ ಕೆಲಸ ನೀಡಿದರೆ ನೆರವಾಗುತ್ತೆ. ಮನೆಗೆ ಆಧಾರವಾಗಿದ್ದ ಮಗ ಮೃತಪಟ್ಟಿದ್ದಾನೆ. ಸರ್ಕಾರಿ ನೌಕರಿ ಕೊಟ್ರೆ ಮನೆ ನಡೆಯೋಕೆ ಅನುಕೂಲ ಆಗುತ್ತೆ ಎಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಮನಕಲಕುವಂತಿದೆ ಅಯ್ಯಪ್ಪ ಮಾಲಾಧಾರಿಗಳ ಸಾವು: ಇದ್ದ ಬೊಬ್ಬರನ್ನೇ ಕಳೆದುಕೊಂಡ 4 ಕುಟುಂಬಗಳು
ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಸಾಯಿ ನಗರದಲ್ಲಿ ಮೃತ ಮಾಲಾಧಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ಥಳೀಯರಿಂದ ಸಂಜಯ್, ಪವನ್ ಮತ್ತು ಮಂಜುನಾಥ ಅವರ ಬ್ಯಾನರ್ ಹಾಕಲಾಗಿದೆ. ಮುಗಿಯದ ಮೌನವಾದೆಯಾ, ಮರೆಯದೆ ನೆನಪಾದೆಯಾ, ಕಾಣದೆ ಮರೆಯಾದೆಯಾ, ಹೇಳದೆ ಹೊರಟು ಹೋದೆಯಾ ಎಂದು ಸ್ನೇಹಿತರು ಬ್ಯಾನರ್ ಮೇಲೆ ಬರೆಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.