ಹುಬ್ಬಳ್ಳಿ ವಿವಾದಿತ ಈದ್ಗಾ ಮೈದಾನದ ಕಂಪೌಂಡ್ ತೆರವು: ಫ್ಲೈಓವರ್ ಕಾಮಗಾರಿಗಾಗಿ ಕ್ರಮ

Hubballi Idgah Maidan: ಅದು ಅನೇಕ ಹೋರಾಟಗಳಿಗೆ ಕಾರಣವಾಗಿದ್ದ ವಿವಾದಿತ ಮೈದಾನ. ಆಮೈದಾನದ ಹೋರಾಟದಿಂದಲೇ ಅನೇಕರು ರಾಜಕೀಯವಾಗಿ ಮುನ್ನೆಲೆಗೆ ಬಂದಿದ್ದರು. ಹುಬ್ಬಳ್ಳಿಯ ಹೃದಯ ಭಾಗದಲ್ಲಿದ್ದ ಈದ್ಗಾ ಮೈದಾನದ ವಿಚಾರದಲ್ಲಿ ಪರ ವಿರೋಧದ ಹತ್ತಾರು ಹೋರಾಟಗಳು ನಡೆದಿವೆ. ಆದರೆ, ವಿಶೇಷವೆಂದರೆ ಇದೀಗ ಪ್ಲೈಓವರ್ ಕಾಮಗಾರಿಗಾಗಿ ಮೈದಾನದ ಕಂಪೌಂಡ್ ತೆರವುಗೊಳಿಸಲಾಗಿದೆ.

ಹುಬ್ಬಳ್ಳಿ ವಿವಾದಿತ ಈದ್ಗಾ ಮೈದಾನದ ಕಂಪೌಂಡ್ ತೆರವು: ಫ್ಲೈಓವರ್ ಕಾಮಗಾರಿಗಾಗಿ ಕ್ರಮ
ಹುಬ್ಬಳ್ಳಿ ವಿವಾದಿತ ಈದ್ಗಾ ಮೈದಾನದ ಕಂಪೌಂಡ್ ತೆರವು
Updated By: Ganapathi Sharma

Updated on: Jun 17, 2025 | 9:46 AM

ಹುಬ್ಬಳ್ಳಿ, ಜೂನ್ 17: ಹುಬ್ಬಳ್ಳಿ ನಗರದ ಚನ್ನಮ್ಮ ವೃತ್ತದ ಪಕ್ಕದಲ್ಲಿಯೇ ಇರುವ ಈದ್ಗಾ ಮೈದಾನದ (Idgah Maidan) ಕಂಪೌಂಡ್ ಅನ್ನು ತೆರವುಗೊಳಿಸಲಾಗಿದೆ. ಗದಗ ರಸ್ತೆ ಮತ್ತು ವಿಜಯಪುರ ರಸ್ತೆಗೆ ಅಂಟಿಕೊಂಡಿದ್ದ ಎರಡು ಕಡೆಯ ಕಂಪೌಂಡ್ ಅನ್ನು ತೆರವುಗೊಳಿಸಲಾಗಿದ್ದು, ಒಳಗೆ ಇದ್ದ ಅನೇಕ ಮರಗಳನ್ನು ಕಡಿಯಲಾಗಿದೆ. ಒಟ್ಟು 1.5 ಎಕರೆ ಪ್ರದೇಶದಲ್ಲಿರುವ ಮೈದಾನದ ಎರಡು ಕಡೆಯ ಕಂಪೌಂಡ್ ತರವುಗೊಳಿಸಲು, ಹುಬ್ಬಳ್ಳಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಪ್ಲೈಓವರ್ ಕಾಮಗಾರಿಯೇ ಕಾರಣವಾಗಿದೆ.

ಚನ್ನಮ್ಮ ವೃತ್ತದಿಂದ ಗದಗ ರಸ್ತೆ ಮತ್ತು ವಿಜಯಪುರ ರಸ್ತೆ ಕಡೆಗೆ ಎರಡು ಭಾಗದಲ್ಲಿ ಪ್ಲೈಓವರ್ ಕಾಮಗಾರಿ ವೇಗದಿಂದ ನಡೆಯುತ್ತಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಈದ್ಗಾ ಮೈದಾನದ ಜಾಗ ಬೇಕಾಗಿದ್ದರಿಂದ, ಅನಿವಾರ್ಯವಾಗಿ ಇದೀಗ ಎರಡು ಕಡೆ ಕಂಪೌಂಡ್ ತೆರವುಗೊಳಿಸಲಾಗಿದೆ. ಈ ಹಿಂದೆಯೇ ಮಾರ್ಕ್ ಮಾಡಿದಂತೆ ಜಾಗವನ್ನು ಬಳಸಿಕೊಳ್ಳಲು ಗುತ್ತಿಗೆ ಪಡೆದ ಕಂಪನಿಗೆ ಪಾಲಿಕೆ ಅವಕಾಶ ನೀಡಿದ್ದರಿಂದ, ಎರಡು ದಿನದಿಂದ ಕಂಪೌಂಡ್ ತೆರವುಗೊಳಿಸುವ ಕಾಮಗಾರಿ ನಡೆಸಿದ್ದ ಕಂಪನಿ, ಮೇಲ್ಸೇತುವೆ ಕಾಮಗಾರಿ ಆರಂಭಿಸಲು ಮುಂದಾಗಿದೆ.

ಹತ್ತಾರು ಹೋರಾಟಗಳಿಗೆ ಸಾಕ್ಷಿಯಾಗಿದ್ದ ಈದ್ಗಾ ಮೈದಾನ

ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದಿತ ಜಾಗವಾಗಿದ್ದು, ಈ ಮೈದಾನದ ಸುತ್ತಲೇ ಹತ್ತಾರು ಹೋರಾಟಗಳು ದಶಕಗಳ ಹಿಂದೆಯೆ ನಡೆದಿವೆ. ಮೈದಾನದ ಪರ-ವಿರೋಧ ಹೋರಾಟಗಳು ರಾಷ್ಟ್ರ ಮಟ್ಟದಲ್ಲಿ ಸದ್ದಾಗಿದ್ದವು. ಈ ಮೈದವಾನವನ್ನು ಬ್ರಿಟಿಷರ ಕಾಲದಲ್ಲಿಯೇ ಹುಬ್ಬಳ್ಳಿ ಅಂಜುಮನ್ ಸಂಸ್ಥೆಗೆ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ನಡೆಸುವುದಕ್ಕಾಗಿ 999 ವರ್ಷಗಳಿಗೆ ಲೀಸ್​​ಗೆ ನೀಡಲಾಗಿತ್ತು ಎನ್ನಲಾಗಿದೆ. ಸ್ವತಂತ್ರ ಬಂದ ನಂತರ ಕೂಡಾ ಆ ಪದ್ಧತಿ ಮುಂದುವರಿದುಕೊಂಡು ಬಂದಿತ್ತು.

ಇದನ್ನೂ ಓದಿ
ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ: ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತ
ಮಂತ್ರಾಲಯ: ರಾಯರ ದರ್ಶನ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಶಿರಾಡಿ ಘಾಟ್, ಹಲವೆಡೆ ಭೂಕುಸಿತ: ಬೆಂಗಳೂರು ಮಂಗಳೂರು ಪ್ರಯಾಣಕ್ಕೆ ಸಂಚಕಾರ
ಕರ್ನಾಟಕಕ್ಕೂ ತಟ್ಟಲಿದೆಯಾ ಇರಾನ್, ಇಸ್ರೇಲ್ ಸಂಘರ್ಷದ ಪರಿಣಾಮ?

ಈದ್ಗಾ ಮೈದಾನ ವಿವಾದ ಶುರುವಾಗಿದ್ದು ಎಲ್ಲಿಂದ?

1980 ರಲ್ಲಿ ಅಂಜುಮನ್ ಸಂಸ್ಥೆ, ಮೈದಾನದ ಜಾಗದಲ್ಲಿ ವಾಣಿಜ್ಯ ಮಳಿಗೆಯನ್ನು ನಿರ್ಮಾಣ ಮಾಡಲು ಮುಂದಾಗಿತ್ತು. ಆಗ ಮಹಾನಗರ ಪಾಲಿಕೆ ಇದನ್ನು ತಡೆದಿತ್ತು. ನಂತರ ಅದು ಕೋರ್ಟ್ ಮೆಟ್ಟಿಲೇರಿತ್ತು. ಸದ್ಯ ಸುಪ್ರೀಂ ಕೋರ್ಟ್, ಈ ಜಾಗ ಪಾಲಿಕೆಗೆ ಸೇರಿದ್ದು ಎಂದು ಆದೇಶ ನೀಡಿದ್ದರಿಂದ, ಪ್ರಕರಣ ಸುಖಾಂತ್ಯ ಕಂಡಿದೆ.

ಹುಬ್ಬಳ್ಳಿ ಈದ್ಗಾ ಮೈದಾನ

1992 ರಲ್ಲಿ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿಯವರು, ಜಮ್ಮು ಕಾಶ್ಮೀರದಲ್ಲಿ ತಿರಂಗಾ ಯಾತ್ರೆ ಆರಂಭಿಸಿದ್ದರು. ಇದಕ್ಕೆ ಬೆಂಬಲ ನೀಡಲೆಂದೇ ಸ್ಥಳೀಯ ಬಿಜೆಪಿ, ಮತ್ತು ಹಿಂದೂಪರ ಕಾರ್ಯಕರ್ತರು, ಈದ್ಗಾ ಮೈದಾನದಲ್ಲಿ ತಿರಂಗಾ ಹಾರಿಸಲು ಮುಂದಾಗಿದ್ದರು. ಆಗ ಕೂಡಾ ಇದು ಅಂಜುಮನ್ ಸಂಸ್ಥೆಗೆ ಸೇರಿದ ಜಾಗವೆಂದು ಆ ಸಂಸ್ಥೆ ವಿರೋಧ ವ್ಯಕ್ತಪಡಿಸಿತ್ತು. ಆಗ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ನಿಷೇದಾಜ್ಞೆಯನ್ನು ಉಲ್ಲಂಘಿಸಿ, ಅನೇಕರು ಮೈದಾನಕ್ಕೆ ನುಗ್ಗಿ ತಿರಂಗಾ ಹಾರಿಸಿದ್ದರು.

ಗೋಲಿಬಾರ್​ಗೆ ಸಾಕ್ಷಿಯಾಗಿದ್ದ ಈದ್ಗಾ ಮೈದಾನ

1994 ಆಗಸ್ಟ್ 15 ರಂದು ರಾಷ್ಟ್ರ ಧ್ವಜಾರೋಹಣಕ್ಕೆ ಮುಂದಾಗಲಾಗಿತ್ತು. ಬಿಜೆಪಿ ನಾಯಕಿ ಉಮಾ ಭಾರತಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಅವರಿಗೆ ಅವಕಾಶ ನೀಡಿರಲಿಲ್ಲ. ನಂತರ ನಡೆದ ಗಲಾಟೆಯಲ್ಲಿ ಗೋಲಿಬಾರ್ ನಡೆದಿತ್ತು.

ಇದನ್ನೂ ಓದಿ: ಪ್ರೀತಿಗೆ ಪೋಷಕರೇ ವಿಲನ್: ಪತಿ ಮನೆಯಿಂದ ಮಗಳನ್ನು ಎತ್ತಿಕೊಂಡು ಹೋದ ಹೆತ್ತವರು, ಮುಂದೇನಾಯ್ತು?

ಹೀಗೆ ಹತ್ತು ಹಲವು ವಿವಾದಗಳಿಗೆ ಕಾರಣವಾಗಿದ್ದ ಈದ್ಗಾ ಮೈದಾನಲ್ಲಿ ಇದೀಗ ವರ್ಷಕ್ಕೆ ಮುಸ್ಲಿಂ ಸಮುದಾಯದವರು ಎರಡು ಬಾರಿ ಪ್ರಾರ್ಥನೆ ಮಾಡಿದರೆ, ಗಣೇಶ ಹಬ್ಬದ ವೇಳೆ ಹಿಂದೂ ಸಮಾಜದವರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ವಿವಾದಿತ ಈದ್ಗಾ ಮೈದಾನದ ಎರಡು ಕಡೆ ಜಾಗದಲ್ಲಿ ಇದೀಗ ಪ್ಲೈಓವರ್ ಕಾಮಗಾರಿ ಆರಂಭವಾಗಿದೆ. ಒಂದು ಸಮಯದಲ್ಲಿ ದೇಶಾದ್ಯಂತ ಸುದ್ದಿಯಾಗಿದ್ದ ಈದ್ಗಾ ಮೈದಾನದ ವರ್ಚಸ್ಸು ಇದೀಗ ಕಡಿಮೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ