Kannada News Photo gallery Shiradi Ghat: landslides at multiple spots including Doddatapale, Bengaluru to Mangaluru travel affected
ಶಿರಾಡಿ ಘಾಟ್ ಅಧ್ವಾನ, ಹಲವೆಡೆ ಭೂಕುಸಿತ: ಬೆಂಗಳೂರು ಮಂಗಳೂರು ಪ್ರಯಾಣಕ್ಕೆ ಸಂಚಕಾರ
ಹಾಸನ, ಜೂನ್ 17: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಅಧ್ವಾನ ಸೃಷ್ಟಿಯಾಗಿದೆ. ಹತ್ತಾರುಕಡೆ ಮರಗಳು ಉರುಳಿ ಬಿದ್ದು ಆತಂಕ ಸೃಷ್ಟಿಯಾಗಿದ್ದರೆ, ನಿರಂತರ ಮಳೆಗೆ ಎಲ್ಲೆಂದರಲ್ಲಿ ಕುಸಿಯುತ್ತಿರುವ ಗುಡ್ಡದ ಸಾಲುಗಳು ವಾಹನ ಸವಾರನ್ನು ಆತಂಕ್ಕೆ ದೂಡುತ್ತಿವೆ. ರಾಶಿ ರಾಶಿಯಾಗಿ ಕೊಚ್ಚಿ ಬರುತ್ತಿರುವ ಮಣ್ಣು ಪ್ರಯಾಣಕ್ಕೆ ಸಂಚಕಾರ ತರುತ್ತಿದೆ. ಮತ್ತೆ ಮಳೆ ಹೆಚ್ಚಾದರೆ ಮಂಗಳೂರು ಹಾಗೂ ಬೆಂಗಳೂರು ನಡುವಣ ಪ್ರಯಾಣ ದುಸ್ತರವಾಗಲಿದೆ.
ಶಿರಾಡಿ ಘಾಟ್ ಮಾರನಹಳ್ಳಿ ಸಮೀದ ಹೆಗ್ಗದ್ದೆ ಗ್ರಾಮದಲ್ಲಿ ಸರಿಯಾಗಿ 20 ದಿನಗಳ ಹಿಂದೆ ಸಣ್ಣ ಪ್ರಮಾಣದ ಭೂ ಕುಸಿತ ಸಂಭವಿಸಿತ್ತು. ಅದೇ ಸ್ಥಳ ಈಗ ಮತ್ತೆ ದೊಡ್ಡ ಅವಾಂತರದ ಮುನ್ಸೂಚನೆ ನೀಡುತ್ತಿದೆ. ನೂರಾರು ಅಡಿ ಎತ್ತರದ ಗುಡ್ಡದಿಂದ ಹಂತ ಹಂತವಾಗಿ ಮಣ್ಣು ಹಾಗೂ ಮರಗಳು ಕುಸಿಯುತ್ತಿವೆ. ಮಳೆಯ ನಡುವೆ ಜನರು ನೋಡುತ್ತ ನಿಂತಿರುವಾಗಲೇ ಭಾರೀ ಪ್ರಮಾಣದ ಮಣ್ಣು ಕುಸಿದು ಬಿದ್ದಿದೆ, ಅದೃಷ್ಟವಶಾತ್ ವಾಹನಗಳು ಮತ್ತೊಂದು ಪಥದಲ್ಲಿ ಚಲಿಸುತ್ತಿದ್ದರಿಂದ ಭಾರೀ ಅನಾಹುತ ತಪ್ಪಿದೆ.
1 / 6
ಸುಮಾರು ನೂರು ಮೀಟರ್ಗೂ ಉದ್ದಕ್ಕೆ ಕಡಿದಾಗಿ ಗುಡ್ಡ ಕಡಿದ ಪರಿಣಾಮವಾಗಿ ಪದೇ ಪದೆ ಗುಡ್ಡದ ಮಣ್ಣು ಕುಸಿಯುತ್ತಿದೆ. ಪಕ್ಕದಲ್ಲೇ ಯಶಸ್ವಿ ಎನ್ನುವವರ ಮನೆಯಿದ್ದು ಮನೆಯ ದಾರಿಯೇ ಮುಚ್ಚಿಹೋಗಿ ಅವರು ಕುಟುಂಬಸ ಮೇತವಾಗಿ ಮನೆ ಖಾಲಿಮಾಡಿಕೊಂಡು ಊರು ತೊರೆದಿದ್ದಾರೆ. ಮೇಲ್ಭಾಗದ ಮೊಬೈಲ್ ಟವರ್ ಯವಾಗ ಉರುಳಿ ಬೀಳುತ್ತದೆಯೋ ಎಂಬ ಭೀತಿ ಕಾಡುತ್ತಿದ್ದು ಮಳೆ ಹೆಚ್ಚಾದಂತೆಲ್ಲಾ ಜನರ ಆತಂಕವೂ ಹೆಚ್ಚುತ್ತಿದೆ.
2 / 6
ಹಾಸನದಿಂದ ಸಕಲೇಶಪುರ ತಾಲೂಕಿನ ಮಾರನಹಳ್ಳಿವರೆಗೆ ರಾಷ್ಟೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಕಾಮಗಾರಿ ಆರಂಭವಾಗಿ ಎಂಟು ವರ್ಷ ಕಳೆದಿದೆ. ಇನ್ನೂ ಕಾಮಗಾರಿ ಮಾತ್ರ ಮುಗಿದಿಲ್ಲ. ಅದರಲ್ಲೂ ಸಕಲೇಶಪುರದಿಂದ ಮಾರನಹಳ್ಳಿ ವರೆಗಿನ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬ ಆಕ್ರೋಶ ಜನರದ್ದು.
3 / 6
ದೋಣಿಗಲ್ ಬಳಿ ಬೃಹದಾಕಾರದ ಮರ ರಸ್ತೆಗೆ ಉರುಳಿಬಿದ್ದು ಸಂಚಾರಕ್ಕೆ ಸಂಕಷ್ಟ ಎದುರಾಗಿದ್ದರೆ, ಕಪ್ಪಳ್ಳಿ ಬಳಿ ಭಾರೀ ಪ್ರಮಾಣದ ಮಣ್ಣಿನ ರಾಶಿ ರಸ್ತೆಯನ್ನು ಆವರಿಸಿಕೊಂಡು ಸಂಚಾರ ದುಸ್ತರವಾಗಿದೆ.
4 / 6
ದೊಡ್ಡತಪ್ಲು ಬಳಿ ಮತ್ತೊಂದು ಸ್ಥಳದಲ್ಲಿ ಭಾರೀ ಪ್ರಮಾಣದ ಮಣ್ಣು ಹಾಗೂ ಮರಗಳು ರಸ್ತೆಗೆ ಕುಸಿಯುತ್ತಿದ್ದು ಅಪಾರ ಪ್ರಮಾಣದ ಕಾಫಿ ತೋಟವನ್ನೇ ಆಪೋಶನ ತೆಗೆದುಕೊಂಡು ಕೆಳಗೆ ಬರುತ್ತಿರುವ ಮಣ್ಣಿನ ರಾಶಿ ದೊಡ್ಡ ಅನಾಹುತದ ಸೂಚನೆ ನೀಡುತ್ತಿದೆ. ಶಿರಾಢಿಘಾಟ್ ಭಾಗದಲ್ಲಿ ಮಳೆ ಹೆಚ್ಚಿದಂತೆಲ್ಲ ಆತಂಕ ಹೆಚ್ಚುತ್ತಲೇ ಇದೆ.
5 / 6
ಒಟ್ಟಿನಲ್ಲಿ, ಮೇ ಅಂತ್ಯದಲ್ಲಿ ಸುರಿದ ಮುಂಗಾರು ಪೂರ್ವ ಮಳೆಗೆ ಹೈರಾಣಾಗಿದ್ದ ಮಲೆನಾಡಿನ ಜನರು ಈಗ ಮತ್ತೆ ಆರಂಭವಾಗಿರುವ ಮಳೆಯಿಂದ ಅಂತಂಕ್ಕೀಡಾಗಿದ್ದಾರೆ. ಅದರಲ್ಲೂ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಯಾವಾಗ ಏನಾಗುತ್ತದೆಯೋ ಎಂಬ ಆತಂಕದಲ್ಲೇ ಜೀವ ಕೈಯಲ್ಲಿಹಿಡಿದು ಪ್ರಯಾಣಿಸುವಂತಾಗಿದೆ.