ಹುಬ್ಬಳ್ಳಿ, ಮಾರ್ಚ್ 12: ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ (Hubballi) ನಕಲಿ ಮದ್ಯ ತಯಾರಿಕೆ ಗ್ಯಾಂಗ್ ಅಬಕಾರಿ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಇದಕ್ಕೂ ಮುನ್ನ ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರವನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ನಕಲಿ ಅಧಿಕಾರಿಗಳು ತಲೆ ಎತ್ತಿದ್ದಾರೆ.ಹಣ ಮಾಡೋ ಉದ್ದೇಶಕ್ಕೆ ಕೆಲವರು ಅಧಿಕಾರಿಗಳ ಸೋಗಿನಲ್ಲಿ ರೋಲ್ ಕಾಲ್ಗೆ ಇಳದಿದ್ದಾರೆ. ಆಹಾರ ಇಲಾಖೆ ಹೆಸರಿನಲ್ಲಿ ದುರ್ಗದ ಬೈಲ್ನಲ್ಲಿನ ಕಿರಾಣಿ ಅಂಗಡಿಗಳ ಮೇಲೆ ಏಕಾಏಕಿ ದಾಳಿ ಮಾಡಿದ್ದ ನಕಲಿ ಅಧಿಕಾರಿಗಳನ್ನು (Fake Food Officers) ಪೊಲೀಸರು ಬಂಧಿಸಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿದ ಮಂಜುನಾಥ ಹಾಗೂ ಲಕ್ಷ್ಮಣ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹಣ ಕೇಳುತ್ತಲೇ ಕಿರಾಣಿ ಅಂಗಡಿ ಮಾಲೀಕರು ನಕಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಕೊನೆಗೆ ಇವರಿಬ್ಬರು ನಕಲಿ ಅಧಿಕಾರಿಗಳು ಎಂದು ಅಂಗಡಿ ಮಾಲೀಕರಿಗೆ ತಿಳಿಯುತ್ತಿದ್ದಂತೆ ಲಕ್ಷ್ಮಣ ಅಲ್ಲಿಂದ ಕಾಲ್ಕಿತ್ತಿದ್ದಾನೆ. ನಕಲಿ ಅಧಿಕಾರಿ ಮಂಜುನಾಥನನ್ನು ಕಿರಾಣಿ ಅಂಗಡಿ ಮಾಲೀಕರು ಹುಬ್ಬಳ್ಳಿಯ ಘಂಟಿಕೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ನಕಲಿ ಅಧಿಕಾರಿಗಳ ಗ್ಯಾಂಗ್ಗೆ ಕಿರಾಣಿ ಅಂಗಡಿ ಮಾಲೀಕರು ರೋಸಿ ಹೋಗಿದ್ದರು. ಕಳೆದ ಕೆಲ ದಿನಗಳಿಂದ ಒಂದಲ್ಲಾ ಒಂದು ಅಂಗಡಿ ಇವರ ಟಾರ್ಗೆಟ್ ಆಗಿತ್ತು. ಅಂಗಡಿಗೆ ಹೋಗಿ, ಆಹಾರ ಇಲಾಖೆ ಅಧಿಕಾರಿಗಳು ಅಂತ ಸುಳ್ಳು ಹೇಳಿ, ಬಿಲ್ ಕೇಳುವುದು, ಲೇಬಲ್ ಬಗ್ಗೆ ವಿಚಾರಣೆ ಮಾಡುವುದು, ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ಹೇಳಿ, ಹಣ ಕೇಳುತ್ತಿದ್ದರು. ಆರೋಪಿಗಳು ಕೇವಲ ಕಿರಾಣಿ ಅಂಗಡಿಗಳ ಮೇಲೆ ದಾಳಿ ಮಾಡಿ, ಮಾಲೀಕರಿಂದ ಹಣ ವಸೂಲಿ ಮಾಡತಿದ್ದರಂತೆ. ನಕಲಿ ಅಧಿಕಾರಿಗಳ ಬಂಡವಾಳ ಬಯಲಾಗುತ್ತಲೇ ಕಿರಾಣಿ ಅಂಗಡಿ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಮಕ್ಕಳ ಅನ್ನಕ್ಕೂ ಕನ್ನ ಹಾಕಿದ ‘ಕೈ’ ನಾಯಕಿ, ಗೋಡೌನ್ನಲ್ಲಿ ಸಂಗ್ರಹಿಸಿದ್ದ ಪೌಷ್ಟಿಕ ಆಹಾರ ಜಪ್ತಿ
ಕಿರಾಣಿ ಅಂಗಡಿ ಮಾಲೀಕರು ಬಳಿ ತಗಲಾಕೊಂಡಿದ್ದೇ, ತಡ ನಕಲಿ ಅಧಿಕಾರಿಗಳು ಮಾದ್ಯಮದ ಹೆಸರು ಬಳಕೆ ಮಾಡಿಕೊಂಡಿದ್ದಾರೆ. ಕಿರಾಣಿ ಅಂಗಡಿ ಮಾಲೀಕರು ಘಂಟಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
Published On - 8:27 am, Wed, 12 March 25