ಹುಬ್ಬಳ್ಳಿ ಪೌಷ್ಟಿಕ ಆಹಾರ ಅಕ್ರಮ ಸಾಗಾಟ ಪ್ರಕರಣ: ಕಿಂಗ್ಪಿನ್ ಕಾಂಗ್ರೆಸ್ ನಾಯಕಿ ದರ್ಗಾದಲ್ಲಿ ತಲೆಮರೆಸಿಕೊಂಡಿರುವ ಶಂಕೆ
ಹುಬ್ಬಳ್ಳಿಯಲ್ಲಿ ಬಡ ಮಕ್ಕಳ ಅನ್ನಕ್ಕೆ (ಅಂಗನವಾಡಿ ಪೌಷ್ಟಿಕ ಆಹಾರ) ಕನ್ನ ಹಾಕಿರುವ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಒಂದೇ ಪ್ರಕರಣಕ್ಕೆ ಸಂಬಂಧಿಸಿ ಮೂರು ಎಫ್‌ಐಆರ್ ದಾಖಲಾಗಿದ್ದರೆ, ನಾಪತ್ತೆಯಾಗಿರುವ ಕಿಂಗ್‌ಪಿನ್‌ಗಳು ಬೇರೆ ಬೇರೆ ರಾಜ್ಯಗಳಿಗೆ ಪರಾರಿಯಾಗಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಪ್ರಮುಖ ಆರೋಪಿ ಅಜ್ಮೀರ್ ದರ್ಗಾದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹುಬ್ಬಳ್ಳಿ, ಫೆಬ್ರವರಿ 26: ಹುಬ್ಬಳ್ಳಿಯ ಗಬ್ಬೂರಿನಲ್ಲಿರುವ ಗೋದಾಮಿನೊಂದರ ಮೇಲೆ ಫೆ. 15ರಂದು ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ, ಬಡ ಮಕ್ಕಳಿಗೆ, ಬಾಣಂತಿಯರಿಗೆ ಮತ್ತು ಗರ್ಭಿಣಿಯರಿಗೆ ವಿತರಣೆ ಮಾಡಬೇಕಾದ ಲಕ್ಷಾಂತರ ರೂ. ಮೌಲ್ಯದ ಪೌಷ್ಟಿಕ ಆಹಾರದ ಪಾಕೇಟ್‌ಗಳು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿತ್ತು. ಇದೇ ಪ್ರಕರಣದಲ್ಲಿ ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸರು 18 ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 26 ಜನರನ್ನು ಬಂಧಿಸಿದ್ದರು. ಆದರೆ, ಪ್ರಕರಣದ ಮುಖ್ಯ ಕಿಂಗ್‌ಪಿನ್‌ಗಳು ದಾಳಿ ನಡೆದು 13 ದಿನವಾದರೂ ಇನ್ನೂ ಪತ್ತೆಯಾಗಿಲ್ಲ.
ಕಾಂಗ್ರೆಸ್ ಪ್ರಭಾವಿ ನಾಯಕರ ಬೆಂಬಲದ ಅನುಮಾನ
ಪ್ರಕರಣದ ಪ್ರಮುಖ ರೂವಾರಿಗಳಿಗೆ ಕಾಂಗ್ರೆಸ್ನ ಪ್ರಭಾವಿ ನಾಯಕರ ಬೆಂಬಲ ಇದೆ ಎಂಬ ಅನುಮಾನ ಹುಟ್ಟಿದೆ. ಪ್ರಮುಖ ಆರೋಪಿಗಳಾದ ಬೈತೂಲ್ಲಾ ಕಿಲ್ಲೇದಾರ ಹಾಗೂ ಪತಿ ಫಾರೂಕ್ ಮಕ್ಕಳ ಅನ್ನಕ್ಕೆ ಕನ್ನ ಹಾಕಿ ರಾಜ್ಯ ರಾಜ್ಯ ಸುತ್ತುತ್ತಿದ್ದಾರೆ. ಇವರ ಪತ್ತೆಗೆ ಪೊಲೀಸರು ನಾಲ್ಕು ತಂಡ ಮಾಡಿ ಗೋವಾ ಮಹಾರಾಷ್ಟ್ರ ಸುತ್ತಿದ್ದಾರೆ.
ಅಜ್ಮೀರ್ ದರ್ಗಾದತ್ತ ಪೊಲೀಸರ ದೌಡು
ಕಳೆದ 13 ದಿನಗಳಿಂದ ನಾಪತ್ತೆಯಾಗಿರುವ ಕೈ ನಾಯಕಿ ಬೈತೂಲ್ಲಾ ಕಿಲ್ಲೇದಾರ ಹಾಗೂ ಫಾರುಕ್ ದರ್ಗಾಗೆ ಹೋಗಿದ್ದಾರೆಂಬ ಮಾಹಿತಿ ಮೇಲೆ ಅಜ್ಮೀರ್ ದರ್ಗಾದತ್ತ ಪೊಲೀಸರು ಹೊರಟಿದ್ದಾರೆ. ಪ್ರಮುಖ ಆರೋಪಿಗಳು ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ತಾಫ್ ಕಲಾದಗಿ, ಸಲೀಂ ಬೇಪಾರಿ, ಸಲೀಂ ಶೇಖ್, ಸಲೀಂ ಅತ್ತಾರ, ದಾಪೀರ್ ಚೌಧರಿ ಮತ್ತು ಬಸವರಾಜ ವಾಲ್ಮೀಕಿ ಎನ್ನುವ ಯುವಕರನ್ನು ಪೊಲೀಸರು ಕಂಬಿ ಹಿಂದೆ ಕಳಿಸಿದ್ದಾರೆ. ಇದಲ್ಲದೆ ಮತ್ತೆ ಎರಡು ಪ್ರಕರಣ ದಾಖಲಾಗಿವೆ. ಪ್ರಮುಖ ಆರೋಪಿ ಬೈತೂಲ್ಲಾ ಕಿಲ್ಲೇದಾರ ಮೇಲೆ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
32 ಜನರ ಬಂಧನ: ಕಿಂಗ್ಪಿನ್ಗಳೇ ಬಾಕಿ
ಅಂಗನವಾಡಿ ಮಕ್ಕಳ ಅಹಾರ ಅಕ್ರಮವಾಗಿ ಸಂಗ್ರಹ ಕೇಸ್‌ನಲ್ಲಿ ಈ ವರೆಗೆ 32 ಜನರ ಬಂಧನವಾಗಿದೆ. ಅಕ್ರಮ ಸಂಗ್ರಹ ಕೇಸ್ ವಿಚಾರವಾಗಿ ಮತ್ತೆ ಎರಡು ಪ್ರಕರಣ ದಾಖಲಾಗಿವೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಪ್ರಕರಣದಿಂದ ಸ್ಥಳೀಯರಲ್ಲಿ ಆತಂಕ, ಜೊತೆಗೆ ಆಕ್ರೋಶವೂ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪಂಚರ ಸಮಕ್ಷಮ ಬೈತೂಲ್ಲಾ ಮನೆಯಲ್ಲಿ ಪರಿಶೀಲನೆ ವೇಳೆ ಕೆಲ ಆಹಾರದ ಪಾಕೆಟ್ಗಳು ಪತ್ತೆಯಾಗಿದ್ದವು. ಹೀಗಾಗಿ ಮತ್ತೊಂದು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಅಲ್ಲದೇ ಒಂದು ಸಮುದಾಯಕ್ಕೆ ಅವಹೇಳನ ಮಾಡಿರುವ ವಿಚಾರವಾಗಿಯೂ ಬೈತೂಲ್ಲಾ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಒಟ್ಟು ಮೂರು ಪ್ರಕರಣ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಇದನ್ನೂ ಓದಿ: ಹುಬ್ಬಳ್ಳಿ: ಮಕ್ಕಳ ಅನ್ನಕ್ಕೂ ಕನ್ನ ಹಾಕಿದ ‘ಕೈ’ ನಾಯಕಿ, ಗೋಡೌನ್ನಲ್ಲಿ ಸಂಗ್ರಹಿಸಿದ್ದ ಪೌಷ್ಟಿಕ ಆಹಾರ ಜಪ್ತಿ
13 ದಿನಗಳಿಂದ ಕೈ ನಾಯಕಿ ಕಿಲ್ಲೇದಾರ ಹಾಗೂ ಪತಿ ಫಾರೂಕ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಯಾರ ಕೈಗೂ ಸಿಗದ ದಂಪತಿಯನ್ನು ಬಂಧಿಸಲು ಪೊಲೀಸರ ನಾಲ್ಕು ತಂಡಗಳು ಇಡೀ ದೇಶ ಸಂಚಾರ ಮಾಡುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ