ಧಾರವಾಡ: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 1600ಕ್ಕೂ ಅಧಿಕ ಬಾಲ ಗರ್ಭಿಣಿಯರ ಕೇಸ್ ಪತ್ತೆ!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದೇ ವಾರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ತಾಯಿಯಾಗಿರುವ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಧಾರವಾಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 1,691 ಬಾಲ ಗರ್ಭಿಣಿ ಪ್ರಕರಣಗಳು ಅಧಿಕೃತವಾಗಿ ವರದಿಯಾಗಿರುವ ಆಘಾತಕಾರಿ ಅಂಕಿ-ಅಂಶ ಹೊರಬಿದ್ದಿದೆ. ಪ್ರಕರಣ ಮುಚ್ಚಿಟ್ಟ ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಪೋಷಕರ ವಿರುದ್ಧ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ತೀವ್ರಗೊಂಡಿದೆ.

ಧಾರವಾಡ: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 1600ಕ್ಕೂ ಅಧಿಕ ಬಾಲ ಗರ್ಭಿಣಿಯರ ಕೇಸ್ ಪತ್ತೆ!
ಸಾಂದರ್ಭಿಕ ಚಿತ್ರ
Image Credit source: AY Magazine
Edited By:

Updated on: Jul 18, 2026 | 7:36 AM

ಮುಖ್ಯಾಂಶಗಳು

  • ಹುಬ್ಬಳ್ಳಿಯಲ್ಲಿ ಒಂದೇ ವಾರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ತಾಯಿಯಾದ ಆಘಾತಕಾರಿ ಘಟನೆ.
  • ಧಾರವಾಡ ಜಿಲ್ಲೆಯಲ್ಲಿ ಒಟ್ಟು 1,691 ಬಾಲ ಗರ್ಭಿಣಿ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ.
  • ಸತ್ಯ ಮುಚ್ಚಿಟ್ಟ ಪೋಷಕರು ಮತ್ತು ಇಬ್ಬರು ಖಾಸಗಿ ವೈದ್ಯರ ವಿರುದ್ಧ ಕೇಸ್.

ಧಾರವಾಡ, ಜುಲೈ 18: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಒಂದೇ ವಾರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ತಾಯಿಯಾಗಿರುವ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಬೆನ್ನಲ್ಲೇ ಧಾರವಾಡ ಜಿಲ್ಲೆಯಲ್ಲಿ ವರದಿಯಾಗಿರುವ ಬಾಲ ಗರ್ಭಿಣಿಯರ ಅಧಿಕೃತ ಅಂಕಿ-ಅಂಶಗಳು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಜಿಲ್ಲೆಯಾದ್ಯಂತ ಬರೋಬ್ಬರಿ 1,691 ಬಾಲ ಗರ್ಭಿಣಿ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಹೆತ್ತವರು ಮತ್ತು ಖಾಸಗಿ ಆಸ್ಪತ್ರೆಗಳು ಪ್ರಕರಣಗಳನ್ನು ಮುಚ್ಚಿಡುತ್ತಿದ್ದರೂ, ಮಕ್ಕಳ ರಕ್ಷಣಾ ಘಟಕದ ಕಾರ್ಯಾಚರಣೆಯಿಂದಾಗಿ ಈ ಆಘಾತಕಾರಿ ಸತ್ಯಗಳು ಈಗ ಹೊರಬರುತ್ತಿವೆ.

ಮುಚ್ಚಿಡಲಾಗುತ್ತಿರುವ ಸಾವಿರಾರು ಪ್ರಕರಣಗಳು!

ಧಾರವಾಡ ಜಿಲ್ಲೆಯಲ್ಲಿ ಕೇವಲ ಮೂರು ವರ್ಷಗಳಲ್ಲಿ ಅಧಿಕೃತವಾಗಿಯೇ 1,691 ಬಾಲ ಗರ್ಭಿಣಿ ಪ್ರಕರಣಗಳು ವರದಿಯಾಗಿರುವುದು ಇಡೀ ಜಿಲ್ಲೆಯನ್ನು ಆತಂಕಕ್ಕೆ ತಳ್ಳಿದೆ. ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಕಳೆದ 2024 ರಲ್ಲಿ 801 ಪ್ರಕರಣಗಳು ವರದಿಯಾಗಿದ್ದರೆ, 2025 ರಲ್ಲಿ 624 ಪ್ರಕರಣಗಳು ಮತ್ತು ಈ ವರ್ಷ 2026ರ ಕೇವಲ ಕಳೆದ ಆರು ತಿಂಗಳಲ್ಲೇ ಬರೋಬ್ಬರಿ 216 ಪ್ರಕರಣಗಳು ವರದಿಯಾಗಿವೆ. ಇವು ಕೇವಲ ಅಧಿಕೃತವಾಗಿ ಇಲಾಖೆಯ ಗಮನಕ್ಕೆ ಬಂದಿರುವ ಅಂಕಿ-ಅಂಶಗಳಾಗಿದ್ದು, ಇನ್ನು ಬೆಳಕಿಗೆ ಬಾರದೇ ಇರುವ ಅನೇಕ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಬಾಲಕಿಯರ ಹೆತ್ತವರು ಹಾಗೂ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಯೇ ಸಮಾಜಕ್ಕೆ ಹೆದರಿ ಇಂತಹ ಸೂಕ್ಷ್ಮ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಒಂದೇ ವಾರದಲ್ಲಿಎರಡನೇ ಕೇಸ್: ಮಗು ಮಾರಾಟದ ಶಂಕೆ!

ಕಳೆದ ವಾರವಷ್ಟೇ ಹುಬ್ಬಳ್ಳಿ ಕಿಮ್ಸ್‌ನಲ್ಲಿ 15 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣ ಮಾಸುವ ಮುನ್ನವೇ, ಮತ್ತೊಂದು ಭೀಕರ ಪ್ರಕರಣ ಬೆಳಕಿಗೆ ಬಂದಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ 15 ವರ್ಷ 6 ತಿಂಗಳ ಅಪ್ರಾಪ್ತ ಬಾಲಕಿಗೆ ಪರಿಚಿತ ಯುವಕನೊಬ್ಬ ಪುಸಲಾಯಿಸಿ ನಿರಂತರ ಅತ್ಯಾಚಾರ ಎಸಗಿದ್ದರಿಂದ, ಆಕೆ ಮೂರು ತಿಂಗಳ ಹಿಂದೆಯೇ ಜೆ.ಸಿ ನಗರದ ಅನ್ನಪೂರ್ಣ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಷ್ಟೇ ಅಲ್ಲದೆ, ಪ್ರಸ್ತುತ ಆ ಬಾಲಕಿ ಮತ್ತೆ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದಾಳೆ. ಇನ್ನು ಹೆರಿಗೆಯಾದ ಮಗುವನ್ನು ಸಾಕದೆ ಸಂಬಂಧಿಕರಿಗೆ ನೀಡಲಾಗಿದೆ ಎಂದು ಪಾಲಕರು ಹೇಳುತ್ತಿದ್ದರೂ, ಮಗುವನ್ನು ಮಾರಾಟ ಮಾಡಿರುವ ಗಂಭೀರ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 70 ಅಪರಾಧ ಪ್ರಕರಣ ಭೇದಿಸಿ 94 ಖದೀಮರ ಬಂಧನ!

ಪೊಲೀಸರಿಗೆ ಮಾಹಿತಿ ನೀಡದ ವೈದ್ಯರು

ಈ ಪ್ರಕರಣದ ಮಾಹಿತಿ ಇದ್ದರೂ ಹೆರಿಗೆ ಮಾಡಿಸಿದ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರು ಪೊಲೀಸರಿಗಾಗಲಿ ಅಥವಾ ಮಕ್ಕಳ ರಕ್ಷಣಾ ಘಟಕಕ್ಕಾಗಲಿ ಯಾವುದೇ ಮಾಹಿತಿ ನೀಡದೆ ಪ್ರಕರಣ ಮುಚ್ಚಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಾಶ್ ಕೊಡ್ಲಿವಾಡ ಅವರು ನೀಡಿದ ದೂರಿನ ಮೇರೆಗೆ ಅತ್ಯಾಚಾರ ಎಸಗಿದ ಯುವಕ, ಸತ್ಯ ಮುಚ್ಚಿಟ್ಟ ಪೋಷಕರು ಹಾಗೂ ಇಬ್ಬರು ವೈದ್ಯರ ವಿರುದ್ಧ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 am, Sat, 18 July 26

Follow Us