ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 70 ಅಪರಾಧ ಪ್ರಕರಣ ಭೇದಿಸಿ 94 ಖದೀಮರ ಬಂಧನ!
ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ 70 ಅಪರಾಧ ಪ್ರಕರಣಗಳನ್ನು ಭೇದಿಸಿದ್ದಾರೆ. ಒಟ್ಟು 94 ಕಳ್ಳರು, ದರೋಡೆಕೋರರನ್ನು ಬಂಧಿಸಿ, ಅವರಿಂದ ಬರೋಬ್ಬರಿ 4.91 ಕೋಟಿ ರೂ. ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಹಾಗೂ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ವಿವಿಧ ಠಾಣಾ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾದ ಈ ವಸ್ತುಗಳನ್ನು ನಗರ ಪೊಲೀಸ್ ಆಯುಕ್ತರು ಇಂದು ಮೂಲ ವಾರಸುದಾರರಿಗೆ ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ.

ಮುಖ್ಯಾಂಶಗಳು
- ಬೆಂಗಳೂರು ಉತ್ತರ ವಿಭಾಗದ ಪೊಲೀಸರಿಂದ 70 ಅಪರಾಧ ಪ್ರಕರಣ ಭೇದಿಸಿ 94 ಖದೀಮರ ಬಂಧನ.
- ಬಂಧಿತರಿಂದ 4.91 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು, ವಾಹನ ಹಾಗೂ ವಸ್ತುಗಳ ಜಪ್ತಿ.
- ಜಪ್ತಿ ಮಾಡಲಾದ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ಇಂದು ಮೂಲ ಮಾಲೀಕರಿಗೆ ಹಸ್ತಾಂತರಿಸಲಿರುವ ಪೊಲೀಸ್ ಆಯುಕ್ತರು.
ಬೆಂಗಳೂರು, ಜುಲೈ 17: ನಗರದ ಉತ್ತರ ವಿಭಾಗದ ಪೊಲೀಸರು ಕಳ್ಳರು, ದರೋಡೆಕೋರರು ಹಾಗೂ ಸುಲಿಗೆಕೋರರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಕಳೆದ ಆರು ತಿಂಗಳ ಅವಧಿಯಲ್ಲಿ ನಡೆದಿದ್ದ ಮನೆಗಳ್ಳತನ, ದರೋಡೆ, ಸರಗಳ್ಳತನ, ವಾಹನ ಕಳವು ಸೇರಿದಂತೆ ಒಟ್ಟು 70 ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು, ಬರೋಬ್ಬರಿ 94 ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಒಟ್ಟು 4,91,94,517 ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಾಹನಗಳನ್ನು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಅವರು ಇಂದು ಅಧಿಕೃತವಾಗಿ ಮೂಲ ಮಾಲೀಕರಿಗೆ (ವಾರಸುದಾರರಿಗೆ) ಹಸ್ತಾಂತರಿಸಲಿದ್ದಾರೆ.
ವಶಪಡಿಸಿಕೊಂಡ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳ ವಿವರ
ಉತ್ತರ ವಿಭಾಗದ ಆರ್.ಟಿ.ನಗರ, ಮಲ್ಲೇಶ್ವರಂ, ಸಂಜಯ್ ನಗರ, ಹೆಬ್ಬಾಳ, ಯಶವಂತಪುರ, ಸುಬ್ರಮಣ್ಯ ನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ನಂದಿನಿ ಲೇಔಟ್ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ದಾಳಿಯ ವೇಳೆ ಜಪ್ತಿ ಮಾಡಲಾದ ಬೃಹತ್ ಕಳವು ಮಾಲಿನ ಪಟ್ಟಿ ಇಲ್ಲಿದೆ:
- ಚಿನ್ನ ಮತ್ತು ಬೆಳ್ಳಿ: 2 ಕೆ.ಜಿ. 462 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ. 381 ಗ್ರಾಂ ಬೆಳ್ಳಿ ವಸ್ತುಗಳು.
- ನಗದು ಹಣ:ವಿವಿಧ ಪ್ರಕರಣಗಳಲ್ಲಿ ಕಳವಾಗಿದ್ದ 34.34 ಲಕ್ಷ ರೂ.
- ವಾಹನಗಳು: ನೂರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಪೈಕಿ ಸದ್ಯ 64 ಬೈಕ್‌ಗಳು ಹಾಗೂ 4 ಆಟೋರಿಕ್ಷಾಗಳು.
- ಗ್ಯಾಜೆಟ್ಸ್: 71 ದುಬಾರಿ ಮೊಬೈಲ್ ಫೋನ್‌ಗಳು, 1 ಲ್ಯಾಪ್‌ಟಾಪ್ ಹಾಗೂ 1 ಟ್ಯಾಬ್.
- ಇತರೆ ಜಪ್ತಿ: 44.780 ಕೆ.ಜಿ. ತೂಕದ ಶ್ರೀಗಂಧದ ಮರ, 5 ಗ್ಯಾಸ್ ಸಿಲಿಂಡರ್‌ಗಳು ಹಾಗೂ ₹23 ಲಕ್ಷ ಮೌಲ್ಯದ 11 ಗ್ರಾಂ ಮಾದಕ ದ್ರವ್ಯ (ಡ್ರಗ್ಸ್).
ಠಾಣಾವಾರು ಪ್ರಮುಖ ಯಶಸ್ಸಿನ ಹೈಲೈಟ್ಸ್
- ಮಲ್ಲೇಶ್ವರಂ ಪೊಲೀಸ್ ಠಾಣೆ: ಬರೋಬ್ಬರಿ 14 ಪ್ರಕರಣಗಳನ್ನು ಭೇದಿಸಿರುವ ಮಲ್ಲೇಶ್ವರಂ ಪೊಲೀಸರು 12 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಇವರಿಂದ 1.84 ಕೋಟಿ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ, 6 ಬೈಕ್ ಹಾಗೂ 17 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
- ಹೆಬ್ಬಾಳ ಪೊಲೀಸ್ ಠಾಣೆ: 6 ಪ್ರಕರಣಗಳಲ್ಲಿ 5 ಆರೋಪಿಗಳನ್ನು ಬಂಧಿಸಿ, 82.01 ಲಕ್ಷ ರೂ. ಮೌಲ್ಯದ 507 ಗ್ರಾಂ ಚಿನ್ನಾಭರಣ ಹಾಗೂ 80 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
- ನಂದಿನಿ ಲೇಔಟ್ ಠಾಣೆ: 7 ಪ್ರಕರಣಗಳಲ್ಲಿ 3 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಿಂದ ಬರೋಬ್ಬರಿ 44.780 ಕೆ.ಜಿ. ಶ್ರೀಗಂಧದ ಮರ, ಚಿನ್ನ ಹಾಗೂ ವಾಹನಗಳು ಸೇರಿ ಒಟ್ಟು 48.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
- ಯಶವಂತಪುರ ಪೊಲೀಸ್ ಠಾಣೆ: 9 ಪ್ರಕರಣಗಳಲ್ಲಿ 6 ಆರೋಪಿಗಳನ್ನು ಬಂಧಿಸಿ 36.37 ಲಕ್ಷ ರೂ. ಮೌಲ್ಯದ ಚಿನ್ನ, 17 ಮೊಬೈಲ್ ಹಾಗೂ ಅತ್ಯಾಧುನಿಕ ‘ಕೃತಕ ಬುದ್ಧಿಮತ್ತೆ (AI) ಡಿಜಿಟಲ್ ಉಪಕರಣ’ವನ್ನು ಜಪ್ತಿ ಮಾಡಲಾಗಿದೆ.
- ಆರ್.ಟಿ. ನಗರ ಮತ್ತು ಸಂಜಯನಗರ: ಆರ್.ಟಿ. ನಗರದಲ್ಲಿ 9 ಪ್ರಕರಣಗಳಲ್ಲಿ 14 ಆರೋಪಿಗಳನ್ನು ಬಂಧಿಸಿ 30.18 ಲಕ್ಷ ರೂ. ಮೌಲ್ಯದ ಮಾಲು ರಿಕವರಿ ಮಾಡಲಾಗಿದೆ. ಸಂಜಯನಗರದಲ್ಲಿ ಅತ್ಯಧಿಕ ಅಂದರೆ 19 ಪ್ರಕರಣಗಳನ್ನು ಭೇದಿಸಿ 7 ಆರೋಪಿಗಳನ್ನು ಬಂಧಿಸಿ 27.44 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಇದರೊಂದಿಗೆ ಶ್ರೀರಾಮಪುರ, ರಾಜಾಜಿನಗರ, ಸುಬ್ರಮಣ್ಯನಗರ, ಮಹಾಲಕ್ಷ್ಮಿ ಲೇಔಟ್, ಆರ್.ಎಂ.ಸಿ ಯಾರ್ಡ್ ಹಾಗೂ ಜಾಲಹಳ್ಳಿ ಮತ್ತು ಜೆ.ಪಿ ನಗರ ಠಾಣೆಯ ಪೊಲೀಸರು ಶ್ಲಾಘನೀಯ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣ, ಒಡವೆ ಕಳೆದುಕೊಂಡು ಕಂಗಾಲಾಗಿದ್ದ ಸಾರ್ವಜನಿಕರು ಇಂದು ತಮ್ಮ ವಸ್ತುಗಳನ್ನು ಮರಳಿ ಪಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




