‘ವಿಕಸಿತ ಭಾರತ’ ನಿರ್ಮಾಣಕ್ಕೆ ಯುವಶಕ್ತಿ ಅಗತ್ಯ: ದೆಹಲಿ ಐಐಟಿ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಮೋದಿ ಕರೆ
ನವದೆಹಲಿಯ ಐಐಟಿ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರ ಸಾಮರ್ಥ್ಯದ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು. 'ವಿಕಸಿತ ಭಾರತ' ನಿರ್ಮಾಣದಲ್ಲಿ ಯುವ ಪೀಳಿಗೆಯ ಪಾತ್ರ ಮಹತ್ವದ್ದಾಗಿದೆ ಎಂದು ಕರೆ ನೀಡಿದರು. ತಂತ್ರಜ್ಞಾನ, ಬಾಹ್ಯಾಕಾಶ ಹಾಗೂ ಡ್ರೋನ್ ಕ್ಷೇತ್ರಗಳಲ್ಲಿ ಸರ್ಕಾರ ಯುವಕರಿಗೆ ಹೊಸ ಅವಕಾಶಗಳನ್ನು ತೆರೆದಿದ್ದು, ರಾಷ್ಟ್ರದ ಪ್ರಗತಿಗೆ ಅವರ ಕೊಡುಗೆ ಅನಿವಾರ್ಯ ಎಂದರು.

ದೆಹಲಿ, ಆ.8: ನವದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಯ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ ಯುವಜನತೆಯ ಸಾಮರ್ಥ್ಯದ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನಮಗೆ ನಿಮ್ಮ ಮೇಲೆ ನಂಬಿಕೆಯಿದೆ. ‘ವಿಕಸಿತ ಭಾರತ’ ನಿರ್ಮಾಣದ ಪಯಣದಲ್ಲಿ ದೇಶಕ್ಕೆ ನಿಮ್ಮ ಅಗತ್ಯವಿದೆ” ಎಂದು ಯುವ ಪೀಳಿಗೆಗೆ ಕರೆ ನೀಡಿದ್ದಾರೆ.
ಖ್ಯಾತ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ನವದೆಹಲಿಯ ವಾರ್ಷಿಕ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿಯವರು ಶನಿವಾರ ಮಾತನಾಡಿದರು. ಪ್ರತಿಯೊಂದು ಪೀಳಿಗೆಗೂ ಅದರದ್ದೇ ಆದ ರಾಷ್ಟ್ರೀಯ ಜವಾಬ್ದಾರಿ ಇರುತ್ತದೆ. ಮುಂದಿನ 30 ರಿಂದ 35 ವರ್ಷಗಳಲ್ಲಿ ನೀವು ಕೈಗೊಳ್ಳುವ ಪ್ರತಿ ನಿರ್ಧಾರವೂ ದೇಶದ ಹಿತಾಸಕ್ತಿ ಹಾಗೂ ರಾಷ್ಟ್ರದ ಅಗತ್ಯಗಳನ್ನು ಪೂರೈಸುವಂತಿರಬೇಕು ಎಂದು ಮೋದಿ ಹೇಳಿದರು.
ಇಲ್ಲಿದೆ ನೋಡಿ ವಿಡಿಯೋ:
ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಜಾಗತಿಕ ಕಾರ್ಯತಂತ್ರ ಮತ್ತು ಜಾಗತಿಕ ಶಕ್ತಿಯ ಸಮತೋಲನ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಹೊಸ ಬದಲಾವಣೆಗಳಿಗೆ ತಕ್ಕಂತೆ ಕಲಿಯುತ್ತಾ ಸಾಗುವವರು ಮಾತ್ರ ಅಂತಿಮವಾಗಿ ಯಶಸ್ಸು ಸಾಧಿಸುತ್ತಾರೆ ಎಂದು ಪ್ರತಿಪಾದಿಸಿದರು. ‘ಸ್ಕೈರೂಟ್’ ಸಂಸ್ಥೆಯ ‘ವಿಕ್ರಮ್-1’ ರಾಕೆಟ್‌ನ ಯಶಸ್ಸುನ್ನು ಉಲ್ಲೇಖಿಸಿದ ಅವರು, ಸರ್ಕಾರವು ಯುವಕರ ಕೊಡುಗೆಗಾಗಿ ಹಲವು ಹೊಸ ಕ್ಷೇತ್ರಗಳನ್ನು ಮುಕ್ತಗೊಳಿಸಿದೆ. ಬಾಹ್ಯಾಕಾಶ ಕ್ಷೇತ್ರವು ಇಂದು ಯುವಕರಿಗೆ ಅಗಾಧ ಅವಕಾಶಗಳನ್ನು ತೆರೆದಿಟ್ಟಿದೆ.
ಇದನ್ನೂ ಓದಿ: ಕೈಮಗ್ಗದ ಬಟ್ಟೆ ಖರೀದಿಸಿ ಒಡಿಶಾದ ಹ್ಯಾಂಡ್ಲೂಮ್ ಪರಂಪರೆ ಬೆಂಬಲಿಸಿದ ಸಚಿವ ಪ್ರಲ್ಹಾದ್ ಜೋಶಿ
ದೇಶದಲ್ಲಿ ಡ್ರೋನ್ ಕ್ಷೇತ್ರವೂ ವೇಗವಾಗಿ ವಿಸ್ತರಿಸುತ್ತಿದ್ದು, ರಾಷ್ಟ್ರೀಯ ಭದ್ರತೆ ಮತ್ತು ಔಷಧ ಸಾಗಣೆಯಲ್ಲಿ ಡ್ರೋನ್‌ಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ತಮ್ಮ ಭಾಷಣದಲ್ಲಿ ‘ಜೆನ್ ಝಿ’ ಸ್ಪರ್ಶವನ್ನು ನೀಡಿದ ಪ್ರಧಾನಿ ಮೋದಿ, ‘ನನ್ನ ರಕ್ತಸಂಬಂಧಿಗಳಲ್ಲಿ ರಾಕೆಟ್ ನಿರ್ಮಿಸಿದ ಮೊದಲ ವ್ಯಕ್ತಿ ನಾನು ಎಂದು ಇಂದು ನಮ್ಮ ಯುವಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಈ ಹಿಂದೆ ಸಾಮಾನ್ಯ ಕುಟುಂಬದ ಯುವಕರು ಸಾಧಾರಣ ಉದ್ಯೋಗ ಅಥವಾ ಸಾಂಪ್ರದಾಯಿಕ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದರು. ಆದರೆ ಇಂದಿನ ಭಾರತದ ಯುವಜನತೆ ತಮ್ಮ ವಂಶಾವಳಿಯಲ್ಲೇ ಅಥವಾ ಕುಟುಂಬದಲ್ಲೇ ಯಾರೂ ಮಾಡದ, ಅತ್ಯಂತ ಸಂಕೀರ್ಣವಾದ ಹಾಗೂ ಉನ್ನತ ಮಟ್ಟದ (ಬ್ಯಾಹ್ಯಾಕಾಶ / ರಾಕೆಟ್ ತಂತ್ರಜ್ಞಾನದಂತಹ) ಕೆಲಸಗಳನ್ನು ಸಾಧಿಸಿ ತೋರಿಸುತ್ತಿದ್ದಾರೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಯುವಕ-ಯುವತಿಯರೂ ಸಹ ಇಂದು ಸ್ವಂತ ಸಾಮರ್ಥ್ಯದಿಂದ ಬಾಹ್ಯಾಕಾಶ ತಂತ್ರಜ್ಞಾನ, ನವೋದ್ಯಮ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಮೈಲಿಗಲ್ಲು ಸಾಧಿಸುತ್ತಿದ್ದಾರೆ ಎಂಬರ್ಥದಲ್ಲಿ ಮಾತನಾಡಿ ಯುವಕರನ್ನು ಮೋದಿ ಶ್ಲಾಘಿಸಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Sat, 8 August 26




