ಹುಬ್ಬಳ್ಳಿಯ ಕಿಮ್ಸ್ ಹಿಂಭಾಗ ಚರಂಡಿ ಸ್ವಚ್ಚಗೊಳಿಸುವ ವೇಳೆ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಮಹಿಳಾ ಹಾಸ್ಟೆಲ್ ಹಿಂಭಾಗದಲ್ಲಿನ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕಳೆದ ಐದಾರು ತಿಂಗಳ ಹಿಂದೆ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇತ್ತ ಬೆಂಗಳೂರಿನಲ್ಲಿ ಸ್ನೇಹಿತ ಪಡೆದಿದ್ದ ಸಾಲದ ಹಣ ವಾಪಸ್ ನೀಡದ ಹಿನ್ನಲೆ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಹುಬ್ಬಳ್ಳಿ, ಫೆ.13: ನಗರದ ಕಿಮ್ಸ್(Hubballi Kims) ಹಿಂಭಾಗದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚರಂಡಿ ಸ್ವಚ್ಚಗೊಳಿಸುವ ವೇಳೆ ಅಸ್ಥಿಪಂಜರ ಬೆಳಕಿಗೆ ಬಂದಿದೆ. ವ್ಯಕ್ತಿಯ ಮೂಳೆ, ತಲೆ ಬುರುಡೆ ಪತ್ತೆ ಹಿನ್ನೆಲೆ ಹಲವು ಅನುಮಾನ ಮೂಡಿದ್ದು, ಕಳೆದ ಐದಾರು ತಿಂಗಳ ಹಿಂದೆ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಎಸಿಪಿ ಹಾಗೂ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಬಳಿಕ ಸತ್ಯಾಂಶ ಬೆಳಕಿಗೆ ಬರಲಿದೆ.
ಸ್ನೇಹಿತ ಪಡೆದಿದ್ದ ಸಾಲದ ಹಣ ವಾಪಸ್ ನೀಡದಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ
ಬೆಂಗಳೂರು: ಸ್ನೇಹಿತ ಪಡೆದಿದ್ದ ಸಾಲದ ಹಣ ವಾಪಸ್ ನೀಡದಿದ್ದಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಪೈಪ್ ಲೈನ್ ಬಳಿ ನಡೆದಿದೆ. ಡೆತ್‌ನೋಟ್ ಬರೆದಿಟ್ಟು ನಂಜುಂಡಸ್ವಾಮಿ(40) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. ಮೃತ ನಂಜುಂಡಸ್ವಾಮಿ ಬಳಿ ಸ್ನೇಹಿತ ನಂಜುಂಡಗೌಡ ಎಂಬಾತ ಸಾಲವಾಗಿ ಹಣ ಪಡೆದಿದ್ದ. ಆದರೆ, ಸಾಲದ ಹಣ ಹಿಂತಿರುಗಿಸದೇ ಸತಾಯಿಸಿದ್ದಾನೆ. ಇದರಿಂದ ನೊಂದ ನಂಜುಂಡಸ್ವಾಮಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಾಣೆಯಾಗಿದ್ದ ಮೇಲುಕೋಟೆಯ ಖಾಸಗಿ ಶಾಲಾ ಶಿಕ್ಷಕಿ ದೀಪಿಕಾಳ ಶವ ಪತ್ತೆ, ಕೊಲೆ ಶಂಕೆ ವ್ಯಕ್ತಪಡಿಸಿದ ಪೊಲೀಸ್
ಮನೆಯ ನೀರಿನ ಸಂಪ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಬೆಂಗಳೂರು: ಮನೆಯ ನೀರಿನ ಸಂಪ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ. ಸುಮಾರು 40 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಇದಾಗಿದ್ದು, ಭಾಗ್ಯಮ್ಮ ಎಂಬುವವರಿಗೆ ಸೇರಿದ ಮನೆಯಲ್ಲಿ ಪತ್ತೆಯಾಗಿದೆ. 3 ದಿನಗಳ ಹಿಂದೆಯೇ ಕೊಲೆಗೈದು ಬಳಿಕ ಸಂಪ್‌ಗೆ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 pm, Tue, 13 February 24