ಗುತ್ತಿಗೆ ಅವಧಿ ಮುಗಿದರೂ ಮತ್ತೆ ಟೋಲ್ ವಸೂಲಿಗೆ ಗ್ರೀನ್ ಸಿಗ್ನಲ್; ಅನುಮಾನ ಮೂಡಿಸಿದ ಕೇಂದ್ರ ಸರಕಾರದ ನಿರ್ಧಾರ
ಇತ್ತೀಚಿನ ದಿನಗಳಲ್ಲಿ ರಸ್ತೆಗಳನ್ನು ದುರಸ್ತಿಗೊಳಿಸಿ, ಆ ರಸ್ತೆಗಳ ಮೂಲಕ ಹೋಗುವ ಎಲ್ಲ ವಾಹನಗಳಿಗೆ ಟೋಲ್ ವಸೂಲಿ ಮಾಡೋದು ಹೆಚ್ಚಾಗುತ್ತಿದೆ. ಮೂರು ದಶಕಗಳ ಹಿಂದೆಯೇ ಈ ವ್ಯವಸ್ಥೆ ಶುರುವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚುತ್ತಲೇ ಹೋಗುತ್ತಿದೆ. ಇಂಥದ್ದೇ ಒಂದು ವ್ಯವಸ್ಥೆ 25 ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಇತ್ತು. ಆದರೆ, ಇದೀಗ ಅದರ ಗುತ್ತಿಗೆ ಅವಧಿ ಮುಗಿದರೂ ಮತ್ತೆ ಟೋಲ್ ವಸೂಲಿ ಮುಂದುವರೆಸಲು ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಧಾರವಾಡ, ಆ.28: ಸಾವಿನ ರಸ್ತೆ ಎಂದು ಕುಖ್ಯಾತಿ ಗಳಿಸಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಹೊರಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿ 4. ಈ ರಸ್ತೆಯನ್ನು 2000 ಇಸವಿಯಲ್ಲಿಯೇ ಸುಮಾರು 30 ಕಿ.ಮೀ. ಉದ್ದದ ಈ ರಸ್ತೆ ನಿರ್ಮಿಸಿ, 25 ವರ್ಷಗಳ ಕಾಲ ನಂದಿ ಹೈವೇ ಡೆವೆಲಪರ್ಸ್ ಲಿಮಿಟೆಡ್ ಈ ರಸ್ತೆ ನಿರ್ಮಿಸಿ, ಕೇವಲ 30 ಕಿ.ಮೀ. ರಸ್ತೆಯಲ್ಲಿಯೇ ಎರಡು ಕಡೆಗಳಲ್ಲಿ ಟೋಲ್(Toll) ವಸೂಲಿ ಮಾಡಲಾಗುತ್ತಿತ್ತು. ಆದರೆ, ಈ ರಸ್ತೆ ವೈಜ್ಞಾನಿಕವಾಗಿ ನಿರ್ಮಾಣವಾಗದೇ ಇದ್ದಿದ್ದರಿಂದ 25 ವರ್ಷಗಳಲ್ಲಿ ಸಾವಿರಾರು ಅಪಘಾತಗಳಾಗಿ, ನೂರಾರು ಜನರು ಮೃತಪಟ್ಟಿದ್ದರು. ಈ ಬಗ್ಗೆ ಯಾವತ್ತೂ ತಲೆ ಕಡೆಸಿಕೊಳ್ಳದ ನಂದಿ ಹೈವೇ ಡೆವೆಲಪರ್ಸ್ ಲಿಮಿಟೆಡ್ ತನಗೂ ಈ ಅಪಘಾತಗಳಿಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಲೇ ಬಂದಿತ್ತು. ಈ ಕಂಪನಿಯ ಗುತ್ತಿಗೆ ಇದೇ ವರ್ಷದ ಮೇ 4 ಕ್ಕೆ ಮುಕ್ತಾಯವಾಗುತ್ತಿತ್ತು. ಆದರೆ, ಕಂಪನಿಯ ಮನವಿ ಮೇರೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಟೋಲ್ ವಸೂಲಿಗೆ ಸೆಪ್ಟೆಂಬರ್ವರೆಗೆ ಅವಕಾಶ ಕೊಟ್ಟಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಈ ಸಾವಿನ ರಸ್ತೆಯ ವಿಚಾರ ಪ್ರಧಾನಿ ವರೆಗೂ ಹೋಗಿ, ಅವರೇ ಸ್ವತಃ ಈ ಬಗ್ಗೆ ವಿಚಾರಿಸಿ ರಸ್ತೆಯನ್ನು ಷಟ್ಪಥ ಮಾಡಲು ಸೂಚಿಸಿದರು. ಇದೀಗ 580 ಕೋಟಿ ರೂಪಾಯಿ ಅನುದಾನದಲ್ಲಿ ಷಟ್ಪಥ ರಸ್ತೆ ನಿರ್ಮಾಣವಾಗುತ್ತಿದ್ದು, ಅದು 2026 ರ ಹೊತ್ತಿಗೆ ಮುಕ್ತಾಯವಾಗಿ, ಈ ಹೊಸ ರಸ್ತೆ ಸಾರ್ವಜನಿಕರ ಸೇವೆಗೆ ಸಿಗಲಿದೆ. ಆದರೆ, ಇದೀಗ ಏನೊಂದೂ ಮಾಡದ ನಂದಿ ಹೈವೇ ಡೆವೆಲಪರ್ಸ್ ಲಿಮಿಟೆಡ್ಗೆ ವಸೂಲಿ ಮಾಡಲು ಮುಂದುವರೆಸಿರೋದು ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ದಾವಣಗೆರೆ: ಹೆಬ್ಬಾಳು ಟೋಲ್ ಗೇಟ್ನಲ್ಲಿ ದುಪ್ಪಟ್ಟು ಹಣ ಕಟ್, ಅಕ್ರಮದ ವಿರುದ್ಧ ವಾಹನ ಸವಾರರ ಆಕ್ರೋಶ
ಇದೇ ವೇಳೆ ಮತ್ತೊಂದು ಆದೇಶದಲ್ಲಿ ಮತ್ತೆ 75 ದಿನಗಳ ಕಾಲ ಟೋಲ್ ವಸೂಲಿ ಮಾಡಲು ಅವಕಾಶ ಕೊಟ್ಟಿದ್ದು, ಅಂದರೆ ಸೆಪ್ಟೆಂಬರ್ ತಿಂಗಳವರೆಗೆ ಈ ವಸೂಲಿ ನಡೆಯಲಿದೆ. ಕೊರೊನಾ ಕಾಲದಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನಗಳು ಓಡಾಡದ ಹಿನ್ನೆಲೆಯಲ್ಲಿ ಆದಾಯ ಕುಸಿದಿದ್ದು, ಟೋಲ್ ವಸೂಲಿ ಮುಂದುವರೆಸಲು ಕಾರಣ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳುತ್ತಿದೆ. ಇನ್ನು ಈ ಬಗ್ಗೆ ಕೇಂದ್ರ ಸಚಿವ ಹಾಗೂ ಧಾರವಾಡದ ಸಂಸದ ಪ್ರಲ್ಹಾದ ಜೋಶಿ ಅವರು ಮಾತನಾಡಿ, ‘ ಇದೇ ಕಾರಣ ಹೇಳುತ್ತಿದ್ದಾರೆ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ, ಅದರ ಬಗ್ಗೆ ವಿಚಾರಿಸಿ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ.
ಹುಬ್ಬಳ್ಳಿ ಬಳಿಯ ಗಬ್ಬೂರು ಕ್ರಾಸ್ ಹಾಗೂ ಧಾರವಾಡದ ಹೊರಭಾಗದಲ್ಲಿನ ನರೇಂದ್ರ ಕ್ರಾಸ್ ಬಳಿ ಎರಡು ಟೋಲ್ಗಳಿವೆ. ಇಷ್ಟೊಂದು ಕಡಿಮೆ ಅಂತರದಲ್ಲಿ ಎರಡು ಟೋಲ್ ಸೆಂಟರ್ ಮಾಡಿದ್ದಕ್ಕೆ ಸಾಕಷ್ಟು ಬಾರಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರೂ ಗುತ್ತಿಗೆ ಕರಾರಿನಲ್ಲಿಯೇ ಇದೆಲ್ಲ ಇದ್ದಿದ್ದರಿಂದ ಸಚಿವಾಲಯವೂ ಏನೂ ಮಾಡುವಂತಿರಲಿಲ್ಲ. ಆದರೆ, ಇದೀಗ ಗುತ್ತಿಗೆ ಅವಧಿ ಮುಗಿದಿದ್ದರೂ ಯಾವುದೇ ಕೆಲಸ ಮಾಡದ ಕಂಪನಿಗೆ ಟೋಲ್ ವಸೂಲಿ ಅವಕಾಶವನ್ನು ಮುಂದುವರೆಸಿದ್ದು, ಇದರಲ್ಲೇನೋ ಗೋಲ್ ಮಾಲ್ ಆಗಿದೆ ಎನ್ನುವುದನ್ನು ಪುಷ್ಟೀಕರಿಸುತ್ತಿದೆ. ಒಟ್ಟಿನಲ್ಲಿ ಸಚಿವಾಲಯದ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೂಡಲೇ ಈ ಆದೇಶವನ್ನು ಹಿಂಪಡೆಯುವಂತೆ ಜನರು ಆಗ್ರಹಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ