ದಾವಣಗೆರೆ: ಹೆಬ್ಬಾಳು ಟೋಲ್ ಗೇಟ್ನಲ್ಲಿ ದುಪ್ಪಟ್ಟು ಹಣ ಕಟ್, ಅಕ್ರಮದ ವಿರುದ್ಧ ವಾಹನ ಸವಾರರ ಆಕ್ರೋಶ
ಈ ಹಿಂದೆ ಮಹಾರಾಷ್ಟ್ರ ಸೇರಿದಂತೆ ದೇಶದ ಬಹುತೇಕ ಕಡೆ ಹೆದ್ದಾರಿಯ ಟೋಲ್ ಗೇಟ್ಗಳ ಮೇಲೆ ದಾಳಿಗಳು ನಡೆಯುತ್ತಿದ್ದವು. ಕಾರಣ ಇಲ್ಲಿ ಕಾನೂನು ಬಾಹಿರವಾಗಿ ಸುಲಿಗೆ ಆಗುತ್ತಿದೆ ಎಂದು. ಅದು ಸತ್ಯ ಕೂಡಾ. ಈ ಟೋಲ್ ಗೇಟ್ ಗಳನ್ನ ಹತ್ತಾರು ಕಂಪನಿಗಳು ಗುತ್ತಿಗೆ ಪಡೆಯುತ್ತವೆ. ಆಲ್ಲಿ ನಡೆಯುವ ವಂಚನೆ ಯಾರಿಗೂ ಗೊತ್ತೇ ಆಗಲ್ಲ. ಟೋಲ್ ನಲ್ಲಿ ದುಡ್ಡು ಕಟ್ಟಾದ ಬಗ್ಗೆ ಹತ್ತಾರು ಕಿಲೋ ಮೀಟರ್ ದೂರ ಹೋದ ಬಳಿಕ ಮೊಬೈಲ್ ಗೆ ಮಾಹಿತಿ ಬರುತ್ತದೆ.
ದಾವಣಗೆರೆ, ಜುಲೈ.04: ಕಳೆದ ಹಲವಾರು ದಿನಗಳಿಂದ ಹೆಬ್ಬಾಳು ಟೋಲ್ ಗೇಟ್ನಲ್ಲಿ (Hebbalu Toll Gate) ಸ್ಥಳೀಯ ವಾಹನಗಳಿಗೆ ಡಬಲ್ ಹಣ ವಸೂಲಿ ಆಗುತ್ತಿದೆ. ಇದಕ್ಕೆ ಜನ ಆಕ್ರೋಶಗೊಂಡಿದ್ದಾರೆ. ಟೋಲ್ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಾವಣಗೆರೆ (Davanagere) ತಾಲೂಕಿನ ಹೆಬ್ಬಾಳು ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 48ರ ಟೋಲ್ ಗೇಟ್ನಲ್ಲಿ ಸ್ಥಳೀಯ ವಾಹನಗಳಿಗೆ ಅಂದ್ರೆ ದಾವಣಗೆರೆ ಜಿಲ್ಲೆಯ ವಾಹನಗಳಿಗೆ 220 ರೂಪಾಯಿ ಶುಲ್ಕವಿದೆ. ಆದರೆ ಕೆಲ ದಿನಗಳಿಂದ ಇಲ್ಲಿ ಕೆಎ 17 ಇರುವಂತಹ ವಾಹನಗಳಿಗೂ ಬೇರೆ ರಾಜ್ಯದ ವಾಹನಗಳಂತೆ 440 ರೂಪಾಯಿ ಕಟ್ ಮಾಡುತ್ತಿದ್ದಾರೆ. ಬೇಗ ಟೋಲ್ ಬಿಟ್ಟು ಪಾರಾದ್ರೆ ಸಾಕು ಎನ್ನುವರೇ ಜಾಸ್ತಿ. ಹೀಗಾಗಿ ಹಣ ಇಷ್ಟು ಕಟ್ ಆಗುತ್ತಿರುವುದು ಜನರ ಗಮನಕ್ಕೆ ಬರುತ್ತಿರಲಿಲ್ಲಿ. ಫಾಸ್ಟ್ ಟ್ಯಾಗ್ ಚಾರ್ಜ್ ಮಾಡಿಕೊಂಡವರ ದುಡ್ಡು ಸರಾಗವಾಗಿ ಕಟ್ ಆಗುತ್ತಿವೆ. ದಿನಕ್ಕೆ 10 ರಿಂದ 15 ಲಕ್ಷರೂಪಾಯಿ ಇದೇ ರೀತಿ ಗೋಲ್ ಮಾಲ್ ಆಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇದಕ್ಕೆ ಕಾರಣ ಅಂದ್ರೆ ಇತ್ತೀಚಿಗೆ ಹೊಸ ಕಂಪನಿಯಿಂದ ಟೋಲ್ ಗುತ್ತಿಗೆ ಪಡೆದಿರುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳೀಯ ವಾಹನಗಳ ದಾಖಲೆ ತಂದು ಟೋಲ್ ಗೇಟ್ಗೆ ಒಪ್ಪಿಸಲು ಹೇಳಲಾಗುತ್ತಿದೆ. ಒಮ್ಮೆ ಸ್ಥಳೀಯರು ದಾಖಲೆ ಕೊಟ್ಟರೇ ಆಯಿತು. ಪದೇ ಪದೇ ತರಲು ಹೇಳುತ್ತಿರುವುದ ಹಣ ಸುಲಿಗೆ ಮಾಡುವ ಪ್ಲಾನ್ ಆಗಿದೆ. ಇದ್ದಕ್ಕಿದ್ದಂತೆ ಹಣ ಹೆಚ್ಚು ಕಟ್ಟಾಗುತ್ತಿದೆ. ಸ್ಥಳೀಯ ವಾಹನದಾರರು ದಾಖಲೆ ಸಲ್ಲಿಸಲು ಟೋಲ್ ಸಿಬ್ಬಂದಿ ಮತ್ತೆ ಮತ್ತೆ ಸೂಚನೆ ನೀಡುತ್ತಲೇ ಇದ್ದಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಸ್ಥಳೀಯರು ದೂರು ಸಲ್ಲಿಸಿದ್ದರೂ ಎಚ್ಚೆತ್ತುಕೊಳ್ಳದ ಟೋಲ್ ಸಿಬ್ಬಂದಿ, ಸ್ಥಳೀಯ ವಾಹನಗಳನ್ನ ತಂದು ಎಂಟ್ರಿ ಮಾಡುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ: ಮಹಿಳೆ ನಾಪತ್ತೆಯಾಗಿ 15 ವರ್ಷಗಳ ಬಳಿಕ ಮನೆಯಲ್ಲಿ ಅವಶೇಷಗಳು ಪತ್ತೆ
ದೇಶಾದ್ಯಂತ ಇರುವ ಈ ಹೆದ್ದಾರಿ ಟೋಲ್ ಗೇಟ್ಗಳು ಸುಲಿಗೆ ಕೇಂದ್ರಗಳಾಗಿವೆ. ವಾಹನ ಮಾಲೀಕರು ಸಾವಿರಾರು ರೂಪಾಯಿ ಟೋಲ್ ಗೇಟ್ ನವರಿಗೆ ಕಟ್ಟಬೇಕು. ಜೊತೆಗೆ ಬಹುತೇಕ ಟೋಲ್ ಗೇಟ್ ಗಳಲ್ಲಿ ಸೂಕ್ತ ರೀತಿಯ ಶೌಚಾಲಯವಾಗಲಿ, ವಿಶ್ರಾಂತಿ ಗೃಹ, ವೈದ್ಯಕೀಯ ಸೇವೆಯ ವ್ಯವಸ್ಥೆಯೇ ಇಲ್ಲ. ಟೋಲ್ನಲ್ಲಿ ವಾಹನ ಪಾಸ್ ಆಗುವಾಗ ಸ್ಕ್ಯಾನ್ ಆಗವುದು ಸ್ವಲ್ಪ ತಡವಾದ್ರೆ ಇಲ್ಲಿನ ಸಿಬ್ಬಂದಿ ಆಕಾಶ ಭೂಮಿ ಒಂದೇ ಮಾಡುತ್ತಾರೆ. ಇಂತಹ ಸುಲಿಗೆ ಬಗ್ಗೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:44 am, Thu, 4 July 24