ಧಾರವಾಡ ಆಯ್ತು, ಈಗ ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲಿರುವ ಉದ್ಯೋಗಾಕಾಂಕ್ಷಿಗಳು!

ಧಾರವಾಡದಿಂದ ಆರಂಭವಾದ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಈಗ ರಾಜ್ಯಾದ್ಯಂತ ವಿಸ್ತರಿಸಲಿದೆ. FRBM ಕಾಯ್ದೆಯಿಂದ ಹುದ್ದೆ ಕಡಿತವಾಗುತ್ತಿದ್ದು, 56 ಸಾವಿರ ಹುದ್ದೆ ಭರ್ತಿ ಘೋಷಣೆಯೂ ವೇಳಾಪಟ್ಟಿ ಇಲ್ಲದೆ ವಿಳಂಬವಾಗಿದೆ. ಯುವಕರ ದುರ್ಬಳಕೆ ಕುರಿತು ರಾಜಕೀಯ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಾರ್ಚ್ 6ರಿಂದ ಯುವ ಅಧಿವೇಶನ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯಿಸಲು ವೇದಿಕೆ ಮುಂದಾಗಿದೆ.

ಧಾರವಾಡ ಆಯ್ತು, ಈಗ ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲಿರುವ ಉದ್ಯೋಗಾಕಾಂಕ್ಷಿಗಳು!
ಧಾರವಾಡ ಆಯ್ತು, ಈಗ ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲಿರುವ ಉದ್ಯೋಗಾಕಾಂಕ್ಷಿಗಳು!
Edited By:

Updated on: Mar 03, 2026 | 2:17 PM

ಧಾರವಾಡ, ಮಾರ್ಚ್​ 03: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ (Dharwad) ಬೃಹತ್ ಪ್ರತಿಭಟನೆ ಮಾಡಿದ ಬೆನ್ನಲ್ಲೇ ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಧಾರವಾಡದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಜನಸಾಮಾನ್ಯರ ವೇದಿಕೆ, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಹಾಗೂ ರೈತ ಸೇನಾ ಮುಖಂಡರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರು ತಿಂಗಳಿನಿಂದ ನೀವು ಏನು ಮಾಡುತ್ತಿದ್ದಿರಿ ಎಂದ ವೇದಿಕೆ ಸಂಚಾಲಕ

ಜನಸಾಮಾನ್ಯರ ವೇದಿಕೆ ಸಂಚಾಲಕ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಖಾಲಿ ಹುದ್ದೆಗಳ ಅಧಿಸೂಚನೆ ಹೊರಡಿಸಬೇಕು. ಕಳೆದ ಆರು ತಿಂಗಳಿನಿಂದ 21 ಜಿಲ್ಲೆಗಳಲ್ಲಿ ಹೋರಾಟ ರೂಪಿಸಿದ್ದೇವೆ. ಅದರ ಪರಿಣಾಮವಾಗಿ ಬೆಳಗಾವಿ ಅಧಿವೇಶನದಲ್ಲಿ 24 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಲಾಯಿತು. ಆದರೆ ಮೂರು ತಿಂಗಳು ಕಳೆದರೂ ಅಧಿಸೂಚನೆ ಹೊರಬಂದಿಲ್ಲ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಸರ್ಕಾರ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದರೂ, ಅದಕ್ಕೆ ಸ್ಪಷ್ಟ ವೇಳಾಪಟ್ಟಿಯಿಲ್ಲ. ಪ್ರತಿಪಕ್ಷ ನಾಯಕರು ತಮ್ಮ ಹೋರಾಟದ ಫಲವೇ ಇದು ಎಂದು ಹೇಳಿಕೊಳ್ಳುತ್ತಿರುವುದನ್ನು ಪ್ರಶ್ನಿಸಿದ ಅವರು, ಆರು ತಿಂಗಳಿನಿಂದ ನೀವು ಏನು ಮಾಡುತ್ತಿದ್ದಿರಿ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಯುವಕರನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ ಖಾಲಿ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರದ ಮುಂದಿರುವ ಸವಾಲುಗಳೇನು? ಇಲ್ಲಿದೆ ಮಾಹಿತಿ

2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯಡಿ (FRBM) ಸರ್ಕಾರಿ ಹುದ್ದೆಗಳ ಕಡಿತ ನಡೆಯುತ್ತಿದೆ ಎಂದು ಅವರು ಆಕ್ಷೇಪಿಸಿದರು. ಗುತ್ತಿಗೆ ಆಧಾರಿತ ನೇಮಕಾತಿ, ಅತಿಥಿ ಉಪನ್ಯಾಸಕರ ವ್ಯವಸ್ಥೆ ಇವೆಲ್ಲವೂ ಇದೇ ಕಾಯ್ದೆಯ ಪರಿಣಾಮ ಎಂದು ಹೇಳಿದರು. ಆಡಳಿತ ಸುಧಾರಣೆ ಹೆಸರಿನಲ್ಲಿ ಹುದ್ದೆಗಳ ಕಡಿತ ನಡೆಯುತ್ತಿದ್ದು, ಇದರಿಂದ ಉದ್ಯೋಗ ಭದ್ರತೆ ಹದಗೆಟ್ಟಿದೆ ಎಂದು ವಾದಿಸಿದರು.

ಹೀಗಾಗಿ FRBM ಕಾಯ್ದೆ ರದ್ದುಪಡಿಸಬೇಕು ಎಂದು ಆಗ್ರಹಿಸಿ, ಮಾರ್ಚ್ 6ರಿಂದ 22ರವರೆಗೆ ರಾಜ್ಯಾದ್ಯಂತ ಯುವ ಅಧಿವೇಶನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಪ್ರತಿದಿನ ಒಂದೊಂದು ಜಿಲ್ಲೆಯಲ್ಲಿ ಯುವ ಅಧಿವೇಶನ ನಡೆಸಲಾಗುತ್ತಿದ್ದು, ಈ ಹೋರಾಟ ಧಾರವಾಡದ ಡಿಸಿ ಕಚೇರಿ ಎದುರು ಆರಂಭವಾಗಲಿದೆ. ಧಾರವಾಡದಿಂದ ಆರಂಭವಾದ ಈ ಚಳವಳಿ ಈಗ ರಾಜ್ಯಾದ್ಯಂತ ವಿಸ್ತರಿಸಲು ಸಜ್ಜಾಗಿದ್ದು, ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಹೊಸ ವೇಗ ಸಿಕ್ಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us