ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮರು ಜೀವ ನೀಡಿದ ಕಿಮ್ಸ್ ವೈದ್ಯರು
ಕಳೆದ ಒಂದು ವರ್ಷದಿಂದ ಪೆರಿಕಾರ್ಡಿಯಲ್ ಸಿಸ್ಟ್ ( ಹೃದಯದ ಮೇಲೆ ಗಡ್ಡೆ) ಎಂಬ ಖಾಯಿಲೆಯಿಂದ ಬಳಲುತ್ತಿದ್ದರು. ಹೃದಯದ ಮೇಲೆ ಗಡ್ಡೆ ಬೆಳೆದಿದ್ದ ಪರಿಣಾಮ ನೀಲವ್ವನಿಗೆ ಉಸಿರಾಟದ ತೊಂದರೆ ಆಗುತ್ತಿತ್ತು.
ಹುಬ್ಬಳ್ಳಿ: ಅದು ಸಾಮಾನ್ಯ ಕಾಯಿಲೆ ಅಲ್ಲ. ಆ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವಿನ ಕದ ತಟ್ಟಿದ್ದರು. ಕೆಲ ಕ್ಷಣ ಉಸಿರಾಟವೇ ನಿಂತು ಹೋಗ್ತಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಖಾಯಿಲೆ ವಾಸಿ ಮಾಡಲು ಲಕ್ಷ ಲಕ್ಷ ಕೇಳಿದ್ರು. ಹಣ ಇಲ್ದೆ ಆ ಮಹಿಳೆ ಕಿಮ್ಸ್ ಗೆ ದಾಖಲಾಗಿದ್ರು. ಇದೀಗ 10 ಲಕ್ಷ ಜನರಲ್ಲಿ ಕಾಣಸಿಗುವ ಆ ಖಾಯಿಲೆಯನ್ನ ಕಿಮ್ಸ್ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಪ್ರಾಣ ಉಳಿಸಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ 54 ವರ್ಷ ವಯಸ್ಸಿನ ನೀಲವ್ವ ನಾಗರಳ್ಳಿ ಎಂಬ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ನಿವಾಸಿ ನೀಲವ್ವ, ಕಳೆದ ಒಂದು ವರ್ಷದಿಂದ ಪೆರಿಕಾರ್ಡಿಯಲ್ ಸಿಸ್ಟ್ ( ಹೃದಯದ ಮೇಲೆ ಗಡ್ಡೆ) ಎಂಬ ಖಾಯಿಲೆಯಿಂದ ಬಳಲುತ್ತಿದ್ದರು. ಹೃದಯದ ಮೇಲೆ ಗಡ್ಡೆ ಬೆಳೆದಿದ್ದ ಪರಿಣಾಮ ನೀಲವ್ವನಿಗೆ ಉಸಿರಾಟದ ತೊಂದರೆ ಆಗುತ್ತಿತ್ತು. ಕೆಲ ಕ್ಷಣ ಉಸಿರಾಟವೇ ನಿಂತು ಹೋದಂತೆ ಆಗುತ್ತಿತ್ತು. ಈ ಕಾಯಿಲೆ ಸಾಮಾನ್ಯವಾಗಿ 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಸಿಗತ್ತೆ ಅನ್ನೋದು ವೈದ್ಯರ ಮಾತು. ಇಂತಹ ಕಾಯಿಲೆಯಿಂದ ಒಂದು ವರ್ಷದಿಂದ ಬಳಲುತ್ತಿದ್ದ ನೀಲವ್ವರನ್ನ ಕುಟುಂಬಸ್ಥರು ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದ್ದರು. ಆದ್ರೆ ಅದರ ಚಿಕಿತ್ಸೆಗೆ ಸರಿಸುಮಾರು ಐದು ಲಕ್ಷ ಖರ್ಚಾಗುತ್ತೆ ಎಂದಿದ್ದರಂತೆ. ಅಷ್ಟೊಂದು ಹಣವಿಲ್ಲದ ಕಾರಣ, ಕುಟುಂಬಸ್ಥರು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿದ್ದಾರೆ. ಮಹಿಳೆಯನ್ನು ತಪಾಸಣೆ ಮಾಡಿದ ವೈದ್ಯರು, ಇದೀಗ ಪೆರಿಕಾರ್ಡಿಯಲ್ ಸಿಸ್ಟ್ ಖಾಯಿಲೆಯನ್ನು ವಾಸಿ ಮಾಡಿದ್ದಾರೆ. ಹೃದಯದ ಮೇಲೆ ಬೆಳೆದಿದ್ದ ಗಡ್ಡೆಯನ್ನು ಸಂಪೂರ್ಣವಾಗಿ ರಿಮೂವ್ ಮಾಡಿದ್ದು, ಇದೀಗ ನೀಲವ್ವ ಮೊದಲಿನ ತರ ಆರಾಮಾಗಿದ್ದಾರೆ.
ಇದನ್ನೂ ಓದಿ: ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ನಲ್ಲೂ ಸಹ ಕಿವಿಗೆ ಹೂವು ಇಟ್ಟಕೊಂಡು ಬಂದ ಕಾಂಗ್ರೆಸ್ ಸದಸ್ಯರು
ಇನ್ನು ಪೆರಿಕಾರ್ಡಿಯಲ್ ಸಿಸ್ಟ್ ಖಾಯಿಲೆ ಸಾಮಾನ್ಯವಾಗಿ ಕಾಣ ಸಿಗೋ ಖಾಯಿಲೆ ಅಲ್ಲ. ಇದು 10 ಲಕ್ಷ ಜನರಲ್ಲಿ ಮಾತ್ರ ಕಾಣಸಿಗತ್ತೆ. ಅಪರೂಪದ ಖಾಯಿಲೆಯಲ್ಲಿ ಜೀವ ಹೋಗೋ ಲಕ್ಷಣಗಳೇ ಜಾಸ್ತಿ. ಅಲ್ಲದೆ ಇದು ವೈದ್ಯರಿಗೂ ಕಠಿಣವಾದ ಕೆಲಸ. ಯಾಕಂದ್ರೆ ಅಪ್ಪಿ ತಪ್ಪಿ ಏನಾದ್ರೂ ಮಾಡೋಕೆ ಹೋದ್ರೆ ಹೃದಯಕ್ಕೆ ಹಾನಿಯಾಗುತ್ತೆ. ಇಂತಹ ಖಾಯಿಲೆ ಇದ್ದವರಿಗೆ ರಕ್ತ ಹೃದಯಕ್ಕೆ ಪಂಪ್ ಆಗುವುದರಲ್ಲಿಯೂ ಸಮಸ್ಯೆ ಇರುತ್ತದೆ. ಹೀಗಾಗಿ ಅವರಿಗೆ ಉಸಿರಾಟದ ಸಮಸ್ಯೆ ಆಗುತ್ತಿತ್ತು. ನೀಲವ್ವ ಎಂಬ ಮಹಿಳೆ ಇಂತಹ ಅಪರೂಪದ ಖಾಯಿಲೆಗೆ ತುತ್ತಾಗಿ ಸಾವು ಬದುಕಿನ ಮದ್ಯೆ ಹೋರಾಟ ಮಾಡ್ತಿದ್ರು. ಹೃದಯದ ಕವಚದ ಮೇಲೆ ದೊಡ್ಡ ಗಂಟಾಗಿ, ಉಸಿರಾಟದ ಸಮಸ್ಯೆ ಉಂಟು ಮಾಡೋ ಖಾಯಿಲೆಗೆ ಪೆರಿಕಾರ್ಡಿಯಲ್ ಸಿಸ್ಟ್ ಎಂದು ಕರೆಯುತ್ತಾರೆ. ಇಂತಹ ಅಪರೂಪದ ಕಾಯಿಲೆ ನೀಲವ್ವನಿಗೆ ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಖಾಸಗಿ ಆಸ್ಪತ್ರೆಯಲ್ಲಿ ತೋರಿಸೋಕೆ ಹಣ ಇಲ್ದೆ ಪರದಾಡೋವಾಗ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಮಹಿಳೆಗೆ ಚಿಕಿತ್ಸೆಗೆ ನೆರವಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 4 ಲಕ್ಷ ರೂಪಾಯಿ ಖರ್ಚಾಗ್ತಿದ್ದ ಆಪರೇಶನ್ ಕಿಮ್ಸ್ ಆಸ್ಪತ್ರೆ ವೈದ್ಯರು ಉಚಿತವಾಗಿ ಮಾಡಿ ಮಹಿಳೆಯ ಪ್ರಾಣ ಉಳಸಿದ್ದಾರೆ. ಇದೀಗ ಮಹಿಳೆ ಹಾಗೂ ಕುಟುಂಬಸ್ಥರು ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ.
ಒಟ್ಟಾರೆ ಆಪರೇಶನ್ಗೆ ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಕಿಮ್ಸ್ ವೈದ್ಯರು ದೇವರಾಗಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ನೀಲವ್ವ ಇದೀಗ ಮತ್ತೆ ಎಂದಿನಂತೆ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ಕಿಮ್ಸ್ ಅಂದ್ರೆ ಹಾಗೇ ಹೀಗೆ ಮಾತಾಡೋದು ಕಾಮನ್,ಅದ್ರ ಮದ್ಯೆನೂ ವೈದೋ ನಾರಾಯಣ ಹರಿ ಅನ್ನೋದಕ್ಕೆ ಇಂತಹ ಪ್ರಕರಣಗಳು ಉದಾಹರಣೆ.
ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಹುಬ್ಬಳ್ಳಿ
Published On - 3:39 pm, Tue, 21 February 23