Hubballi News: ಬೇರೆ ರಕ್ತದ ಗುಂಪಿನ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿ ಸೈ ಎನಿಸಿಕೊಂಡ ಹುಬ್ಬಳ್ಳಿ ಕಿಮ್ಸ್

| Updated By: Digi Tech Desk

Updated on: Mar 20, 2023 | 11:31 AM

ಒಟ್ಟಿನಲ್ಲಿ ಕಿಮ್ಸ್ ಆಸ್ಪತ್ರೆಯು ಸಾಕಷ್ಟು ಸಾಧನೆಯ ಮೂಲಕ ಜನಮನ್ನಣೆ ಪಡೆದ ಆಸ್ಪತ್ರೆಯಾಗಿದೆ. ಅಲ್ಲದೇ ಅದೆಷ್ಟೋ ಅವ್ಯವಸ್ಥೆಗಳಿಂದಾಗಿಯೂ ಕೂಡ ಸುದ್ಧಿಯಾಗಿದೆ. ಅದು ಏನೇ ಇರಲಿ ಇಲ್ಲಿನ ವೈದ್ಯಕೀಯ ಸೇವೆ ಮಾತ್ರ ಶ್ಲಾಘನೀಯವಾಗಿದೆ.

Hubballi News: ಬೇರೆ ರಕ್ತದ ಗುಂಪಿನ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿ ಸೈ ಎನಿಸಿಕೊಂಡ ಹುಬ್ಬಳ್ಳಿ ಕಿಮ್ಸ್
ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿ ಸೈ ಎನಿಸಿಕೊಂಡ ಹುಬ್ಬಳ್ಳಿ ಕಿಮ್ಸ್
Follow us on

ಅದು ಉತ್ತರ ಕರ್ನಾಟಕದ ಸಂಜೀವಿನಿ. ಕೆಲ ದಿನಗಳ ಹಿಂದೆ ಆ ಸಂಜೀವಿನಿಯಲ್ಲಿ ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳನ್ನ ಮಲಗಿಸಿ ಸುದ್ದಿಯಾಗಿತ್ತು. ಪರವೋ, ವಿರೋಧವೋ ಅದೆಷ್ಟೋ ಸುದ್ಧಿಯಲ್ಲಿರುವ ಸಂಜೀವಿನಿ ಈಗ ಸಮಾಧಾನಕರ ಸುದ್ಧಿಯೊಂದನ್ನು ನೀಡಿ, ಸ್ಥಳೀಯರನ್ನ ಸಂತೈಸಿದೆ. ಅಲ್ಲಿನ ವೈದ್ಯರು ಕುಟುಂಬವೊಂದಕ್ಕೆ ಮರುಜನ್ಮ ನೀಡಿದ್ದಾರೆ. ಅಷ್ಟಕ್ಕೂ ಏನಿದು ಮರುಜನ್ಮದ ಸ್ಟೋರಿ ಅಂತೀರಾ ಇಲ್ಲಿದೆ ನೋಡಿ.. ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿಜಕ್ಕೂ ಉತ್ತರ ಕರ್ನಾಟಕದ ಸಂಜೀವಿನಿಯೇ ಸರಿ. ಈ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ವೈದ್ಯಕೀಯ ಸೇವೆಯ (Hospital) ಮೂಲಕ ಹೆಸರು ಮಾಡಿರುವ ಕಿಮ್ಸ್ (Hubballi KIMS) ಈಗ ಮಹತ್ವದ ಕಾರ್ಯದ ಮೂಲಕ ಹೆಸರು ಮಾಡಿದೆ. ಹೌದು.. ಮೂತ್ರಪಿಂಡ ಕಸಿ ಮಾಡುವ ಮೂಲಕ ಸಾಕಷ್ಟು ಜನಮನ್ನಣೆ ಪಡೆಯುತ್ತಿರುವ ಕಿಮ್ಸ್ ಈಗ ಹೊಂದಾಣಿಕೆಯಾಗದ ರಕ್ತದ ಗುಂಪಿನ ಮೂತ್ರಪಿಂಡ ಕಸಿ ಮಾಡುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ (Kidney surgery) ಮಾಡಿದ್ದು, ಈ ಕಾರ್ಯದಿಂದ ಕುಟುಂಬವೊಂದಕ್ಕೆ ಪುನರ್ ಜನ್ಮ ನೀಡಿದಂತಾಗಿದೆ.

ಕಿಡ್ನಿ ಕೊಡುವ ಮತ್ತು ಸ್ವೀಕರಿಸುವವರ ಮೇಲೆ ವಿಶೇಷ ಕಾಳಜಿ ವಹಿಸಿ ಕರ್ನಾಟಕ ಸರ್ಕಾರದ ಮೊದಲ ABO incompatible ಶಸ್ತ್ರಚಿಕಿತ್ಸೆ ಮೂಲಕ ಬೆಳಗಾವಿ ಮೂಲದ ಕುಟುಂಬದಲ್ಲಿ ಹೊಸ ಖುಷಿಯನ್ನು ತಂದಿದ್ದಾರೆ. ಬೆಳಗಾವಿ ಮೂಲದ ಅಭಿಷೇಕ್ ಹೂಗಾರ ಗೆ ಅವರ ತಾಯಿಯ ಕಿಡ್ನಿ ಕಸಿ ಮಾಡಲಾಗಿತ್ತು. ಅಭಿಷೇಕ ಅವರ ರಕ್ತದ ಮಾದರಿ A ಆಗಿತ್ತು. ಅವರ ತಾಯಿಯ ರಕ್ತದ ಮಾದರಿ B ಆಗಿತ್ತು. ಆದ್ರೂ ವೈದ್ಯರು ಸತತ ಮೂರು ಗಂಟೆಗಳ ಕಾಲ ಚಿಕಿತ್ಸೆ ಮಾಡಿ, ಹೊಂದಾಣಿಕೆಯಾಗದ ರಕ್ತದ ಮಾದರಿ ಕಿಡ್ನಿ ಕಸಿಯನ್ನು ಯಶಸ್ವಿ ಚಿಕಿತ್ಸೆ ಮೂಲಕ ಮಾಡಿ, ರೋಗಿಗೆ ಮರುಜನ್ಮ ನೀಡಿದ್ದಾರೆ.

ಇನ್ನು ಕಿಡ್ನಿ ಸ್ವೀಕರಿಸುವವರಲ್ಲಿ ಕಸಿ ಪೂರ್ವ ಪ್ರಿಟ್ರಾನ್ಸ್​​​ಪ್ಲಾಂಟ್ ಆ್ಯಂಟಿ-ಬಿ ಟೈಟರ್ ಮಾಡಿ ನಂತರ ಗ್ಲೈಕೋಸಾರ್ಬ್ ನೊಂದಿಗೆ ಆ್ಯಂಟಿ ಬಿ-ಕಾಲಂ ಥೆರಪಿ ಮಾಡಿ ಪೂರ್ವ ಕಸಿ ಮಾಡುವ ಮೂಲಕ ಮೊದಲ ಹಂತವನ್ನು ಪೂರ್ಣಗೊಳಿಸಿ ಸುಮಾರು 15 ದಿನಗಳ ಕಾಲ ವಿಶೇಷ ಕಾಳಜಿ ವಹಿಸಿ ಶಸ್ತ್ರಚಿಕಿತ್ಸೆ ಮಾಡಿ ಬೆಳಗಾವಿ ಮೂಲದ ಯುವಕ ಅಭಿಷೇಕ್ ನಿಗೆ ಪುನರ್ ಜನ್ಮ ನೀಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ

ಅದು ವಿರಳ ಕಾಯಿಲೆ: ಹೃದಯದ ಮೇಲೆ ಬೃಹದಾಕಾರದ ಗಡ್ಡೆ, ಹುಬ್ಬಳ್ಳಿ ಕಿಮ್ಸ್ ವೈದ್ಯರಿಂದಾಗಿ ಪ್ರಾಣಾಪಾಯದಿಂದ ಪಾರಾದ ಬಡ ಮಹಿಳೆ

ಅಲ್ಲದೆ ಮೂತ್ರಪಿಂಡ ವಿಭಾಗ, ಮೂತ್ರಶಾಸ್ತ್ರ, ಅರಿವಳಿಕೆ, ರೋಗ ಶಾಸ್ತ್ರ ವಿಭಾಗದ ವೈದ್ಯರ ತಂಡ ವಿಶೇಷ ಶ್ರಮವಹಿಸಿ ಇಂತಹದೊಂದು ಸಾಧನೆ ಮಾಡಿದೆ‌. ಇನ್ನು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಕಿಮ್ಸ್ ವೈದ್ಯರು ಚಿಕಿತ್ಸೆ ನೀಡಿದ್ದು, ಅಭಿಷೇಕ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ‌. ಚಿಕಿತ್ಸೆ ನಡೆದ 42 ಗಂಟೆಗಳಲ್ಲಿ ಅಭಿಷೇಕ ಎಂದಿನಂತೆ ಜೀವನ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಕಿಮ್ಸ್ ಆಸ್ಪತ್ರೆಯು ಸಾಕಷ್ಟು ಸಾಧನೆಯ ಮೂಲಕ ಜನಮನ್ನಣೆ ಪಡೆದ ಆಸ್ಪತ್ರೆಯಾಗಿದೆ. ಅಲ್ಲದೇ ಅದೆಷ್ಟೋ ಅವ್ಯವಸ್ಥೆಗಳಿಂದಾಗಿಯೂ ಕೂಡ ಸುದ್ಧಿಯಾಗಿದೆ. ಅದು ಏನೇ ಇರಲಿ ಇಲ್ಲಿನ ವೈದ್ಯಕೀಯ ಸೇವೆ ಮಾತ್ರ ಶ್ಲಾಘನೀಯವಾಗಿದೆ.

ವರದಿ: ಶಿವಕುಮಾರ್​ ಪತ್ತಾರ್, ಟಿವಿ9, ಹುಬ್ಬಳ್ಳಿ 

Published On - 5:59 am, Sun, 19 March 23