ಸಾರಿಗೆ ಇಲಾಖೆಗೆ ನೀಡಬೇಕಿದ್ದ 414 ಕೋಟಿ ರೂ. ಬಾಕಿ ಉಳಿಸಿಕೊಂಡ ಸರ್ಕಾರ
ಸಾರಿಗೆ ಇಲಾಖೆಗೆ ನೀಡಬೇಕಿರುವ 414 ಕೋಟಿ ರೂ. ಅನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ವೆಚ್ಚವನ್ನು ಸರ್ಕಾರ ಪೂರ್ತಿಯಾಗಿ ಭರಿಸಬೇಕಿದೆ. ಹೀಗಾಗಿ, ಎನ್ಡಬ್ಲೂಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಎಮ್. ಪ್ರಿಯಾಂಗ ಅವರು ಸರ್ಕಾರಕ್ಕೆ ಪತ್ರ ಬರೆದು ಹಣ ಬಿಡುಗಡೆಗೆ ಮನವಿ ಮಾಡಿದ್ದಾರೆ. ಸರ್ಕಾರ ಈ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ನೀಡುವ ನಿರೀಕ್ಷೆಯಿದೆ ಎಂದು ವ್ಯವಸ್ಥಾಪಕ ನಿರ್ದೇಶಕಿ ಹೇಳಿದ್ದಾರೆ.
ಹುಬ್ಬಳ್ಳಿ, ಡಿಸೆಂಬರ್ 22: ಬಾಕಿ ಇರುವ 414 ಕೋಟಿ ರೂ. ಬಿಡುಗಡೆ ಮಾಡುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKSRTC)ದ ವ್ಯವಸ್ಥಾಪಕ ನಿರ್ದೇಶಕಿ ಎಮ್. ಪ್ರಿಯಾಂಗಾ ಅವರು ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಎಮ್. ಪ್ರಿಯಾಂಗಾ ಮಾತನಾಡಿ, ನಾಲ್ಕು ವಿಭಾಗದ ನಿರ್ದೇಶಕ ಮಂಡಳಿಯಲ್ಲೂ ಈ ವಿಚಾರ ಚರ್ಚೆಯಾಗಿದೆ. ಹಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದೇವೆ. ಹಣ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.
ಎನ್ಡಬ್ಲೂಕೆಎಸ್ಆರ್ಟಿಸಿಯಲ್ಲಿ ಒಂದು ದಿನಕ್ಕೆ ಸುಮಾರು 25 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಇದರಲ್ಲಿ ಸರಾಸರಿ 16 ಲಕ್ಷ ಜನ ಶಕ್ತಿ ಯೋಜನೆ ಫಲಾನುಭವಿಗಳು ಪ್ರಯಾಣ ಮಾಡುತ್ತಾರೆ. ಒಂದು ತಿಂಗಳಿಗೆ 120 ಕೋಟಿ ಶೂನ್ಯ ಟಿಕೆಟ್ ಪ್ರಯಾಣದ ದರವಾಗತ್ತೆ. ಈ ಪೈಕಿ ಸರ್ಕಾರದಿಂದ 102 ಕೋಟಿ ಹಣ ವಾಪಸ್ ಬರುತ್ತಿದೆ. ಬಾಕಿ 414 ಕೋಟಿ ಹಣ ಬರಬೇಕಾಗಿದೆ. ಈ ವಿಚಾರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗ ಹಣ ಬಿಡುಗಡೆ ಮಾಡುತ್ತೇವೆ ಅಂತ ಹೇಳಿದ್ದಾರೆ ಎಂದು ಹೇಳಿದರು.
ವಿಧಾನಸಭೆಯಲ್ಲೂ ಪ್ರಸ್ತಾಪವಾಗಿತ್ತು ಬಾಕಿ ಹಣದ ವಿಚಾರ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದಿಂದ ನಾಲ್ಕೂ ನಿಗಮಕ್ಕೆ ನೀಡಬೇಕಾಗಿರುವ ಬಾಕಿ ಅನುದಾನ ಬಗ್ಗೆ ಚರ್ಚೆಯಾಗಿತ್ತು. ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಶಕ್ತಿ ಯೋಜನೆಗೆ ಅನುದಾನ ನೀಡುವ ಕುರಿತು ವಿಪಕ್ಷ ಉಪನಾಯಕ ಬೆಲ್ಲದ್ ಸರ್ಕಾರಕ್ಕೆ ಪ್ರಶ್ನಿಸಿದ್ದರು.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ನಲ್ಲಿನ್ನು ಚಿಲ್ಲರೆ ಚಿಂತೆ ಬೇಡ: ಎಲ್ಲ ಬಸ್ಗಳಿಗೂ ವಿಸ್ತರಣೆಯಾಯ್ತು ಕ್ಯುಆರ್ ಕೋಡ್ ಟಿಕೆಟ್
ಇದಕ್ಕೆ ಉತ್ತರಿಸಿದ್ದ ಸರ್ಕಾರ, 2023ರ ಜೂನ್ನಿಂದ 2024ರ ಅಕ್ಟೋಬರ್ವರೆಗೆ ಬಾಕಿ ಇರುವ ಅನುದಾನದ ವಿವರ ನೀಡಿತ್ತು. ಕೆಎಸ್‌ಆರ್‌ಟಿಸಿಗೆ 683 ಕೋಟಿ ರೂ., ಬಿಎಂಟಿಸಿಗೆ 280 ಕೋಟಿ ರೂ., ವಾಯುವ್ಯ ಸಾರಿಗೆಗೆ 394 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆಗೆ 335 ಕೋಟಿ ರೂ. ನೀಡುವುದು ಬಾಕಿ ಇದೆ ಎಂದು ಹೇಳಿತ್ತು. ಒಟ್ಟು ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ 1694 ಕೋಟಿ ಅನುದಾನ ನೀಡುವುದು ಬಾಕಿ ಇದೆ.
ಬಿಡುಗಡೆಯಾಗಿರುವ ಒಟ್ಟು ಅನುದಾನ
ಕೆಎಸ್‌ಆರ್‌ಟಿಸಿಗೆ 2481 ಕೋಟಿ ರೂ., ಬಿಎಂಟಿಸಿಗೆ 1126 ಕೋಟಿ ರೂ., ವಾಯುವ್ಯ ಸಾರಿಗೆಗೆ 1613 ಕೋಟಿ ರೂ. ಕಲ್ಯಾಣ ಕರ್ನಾಟಕ ಸಾರಿಗೆಗೆ 1321 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟು ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ 6543 ಕೋಟಿ ರೂ. ಅನುದಾನವನ್ನು ಸರ್ಕಾರ 2023ರ ಜೂನ್ನಿಂದ 2024ರ ನವೆಂಬರ್ವರೆಗೆ ಬಿಡುಗಡೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ