Kundagol Politics: ತಾರಕಕ್ಕೇರಿದ ಕಾಂಗ್ರೆಸ್ ಭಿನ್ನಮತ: ಬಿಜೆಪಿ ಹೊಸ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ; ಇಲ್ಲಿದೆ ರಾಜಕೀಯ ಲೆಕ್ಕಾಚಾರ
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಲ್ಲಿ ಬಿನ್ನಾಭಿಪ್ರಾಯ ಶರುವಾಗಿದೆ. ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಬಾರದೆಂದು ಕೆಲ ಕೈ ಮುಖಂಡರ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಮನವೊಲಿಸಲು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹರಸಾಹಸ ಪಡುತ್ತಿದ್ದಾರೆ.
ಧಾರವಾಡ (Dharwad) ಜಿಲ್ಲೆಯ ಕುಂದಗೋಳ (Kundagol) ವಿಧಾನಸಭಾ ಕ್ಷೇತ್ರ ಸಾಕಷ್ಟು ಕುತೂಹಲ ಕೆರಳಿಸಿದ. ವಿಶೇಷವಾಗಿ ಬಿಜೆಪಿ (BJP) ಈ ಕ್ಷೇತ್ರದತ್ತ ಗಮನ ಹರಿಸಿದೆ. ಧಾರವಾಡ ಜಿಲ್ಲೆಯಲ್ಲಿ ಕುಂದಗೋಳ ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲೂ ಕಮಲ ಅರಳಿದರೇ ಇಡಿ ಜಿಲ್ಲೆಯೇ ಕೇಸರಿಮಯವಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ಶತಾಯಗತಾಯ ಎರಡು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ತಂತ್ರ ರೂಪಿಸಿದೆ. ಇದೊಂದಡೆಯಾದರೆ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಲ್ಲಿ (Congress) ಬಿನ್ನಾಭಿಪ್ರಾಯ ಶರುವಾಗಿದೆ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ದಿವಂಗತ ಮಾಜಿ ಸಚಿವ ಸಿ ಎಸ್ ಶಿವಳ್ಳಿ (CS Shivalli), ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಎಸ್. ಐ ಚಿಕ್ಕನಗೌಡರ (S I Chikkanagoudar) ವಿರುದ್ಧ 634 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ದುರಾದೃಷ್ಟವಶಾತ್ ಶಿವಳ್ಳಿ ಅವರು 2019ನ ಮಾರ್ಚ್ 22 ಹೃದಯಾಘಾತದಿಂದ ಸಾವನ್ನಪ್ಪಿದರು. ಶಿವಳ್ಳಿಯವರ ನಿಧನದ ನಂತರ ತೆರವಾಗಿದ್ದ ಸ್ಥಾನಕ್ಕೆ, 2019 ಮೇ ನಲ್ಲಿ ಉಪಚುನಾವಣೆ ನಡೆಯಿತು. ಈ ಉಪ ಚುನಾವಣೆಯಲ್ಲಿ ಶಿವಳ್ಳಿ ಅವರ ಪತ್ನಿ ಶಾಸಕಿ ಕುಸುಮಾ ಶಿವಳ್ಳಿ (Kusuma Shivalli) ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಲೋಕಸಭಾ ಚುನಾವಣೆ ನಂತರ ಸೋಲಿನ ಸಪ್ಪೆಯಲ್ಲಿದ್ದ ಕಾಂಗ್ರೆಸ್ಗೆ ಈ ಉಪ ಚುನಾವಣೆ ಸ್ವಲ್ಪ ಮಟ್ಟಿಗೆ ಬೂಸ್ಟ್ ನೀಡಿತು.
ಹೌದು ಸಮಿಶ್ರ ಸರ್ಕಾರದ ಈ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಈ ಹಿನ್ನೆಲೆ ಕ್ಷೇತ್ರಕ್ಕೆ ಕಾಂಗ್ರೆಸ್ನ ಘಟಾನುಘಟಿ ನಾಯಕರು ದಂಡಯಾತ್ರೆ ಮಾಡಿದ್ದರು. ಇನ್ನು ಬಿಜೆಪಿಯಿಂದ ಮತ್ತೆ ಎಸ್. ಐ ಚಿಕ್ಕನಗೌಡರ ಸ್ಪರ್ಧಿಸಿದರು. ಶಾಸಕಿ ಕುಸುಮಾ ಶಿವಳ್ಳಿ ಈ ಚುನಾವಣೆಯಲ್ಲಿ, ಚಿಕ್ಕನಗೌಡರ ವಿರುದ್ಧ 1611 ಮತಗಳ ಅಂತರದಿಂದ ಗೆದ್ದು ಬೀಗಿದರು. ಅನುಕಂಪದ ಅಲೆಯಲ್ಲಿ ಕುಸಮಾ ತೇಲಿ ಬಂದರು.
ಆದರೆ ಈಗ ಕ್ಷೇತ್ರದಲ್ಲಿ ಕಾಂಗ್ರೆಸ್ ನಡುವೆ ಭಿನ್ನಮತ ಬುಗಿಲೆದ್ದಿದೆ. ಹೌದು ಈ ಬಾರಿ ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಬಾರದೆಂದು ಕೆಲ ಕೈ ಮುಖಂಡರ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಮನವೊಲಿಸಲು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹರಸಾಹಸ ಪಡುತ್ತಿದ್ದಾರೆ. ಬಸವರಾಜ ರಾಯರೆಡ್ಡಿ ನಿನ್ನೆ (ಫೆ.12) ಟಿಕೆಟ್ ಆಕಾಂಕ್ಷಿಗಳ ಜೊತೆಗೆ 4 ಗಂಟೆಗಳ ಕಾಲ ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್‌ನಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲೂ ಶಿವಳ್ಳಿ ಕುಟುಂಬಕ್ಕೆ ಟಿಕೆಟ್ ನೀಡದಂತೆ ಕೆಲ ಮುಖಂಡರು ಪಟ್ಟು ಹಿಡಿದಿದ್ದಾರೆ. ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದೆ ಪ್ರಜಾಧ್ವನಿ ಯಾತ್ರೆ ಮಾಡದಂತೆ ಆಗ್ರಹಿಸಿದ್ದಾರೆ.
ಈ ಹಿನ್ನೆಲೆ ಇದೇ ತಿಂಗಳು ಫೆ. 16 ರಂದು ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದಾಗಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಗಳ ಮನವೊಲಿಸಲು ರಾಯರಡ್ಡಿ ಹರಸಾಹಸ ಪಡುತ್ತಿದ್ದಾರೆ. ಈಗ ಪ್ರಜಾಧ್ವನಿ ಯಾತ್ರೆ ಮಾಡಿದರೆ, ಟಿಕೆಟ್ ಆಕಾಂಕ್ಷಿಗಳು ಪ್ರಜಾಧ್ವನಿ ಯಾತ್ರೆಯಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಬರುತ್ತದೆ. ಶಾಸಕಿ ಕುಸುಮಾವತಿ ಶಿವಳ್ಳಿಯವನ್ನ ಮುಂದಿಟ್ಟುಕೊಂಡು ಪ್ರಜಾಧ್ವನಿ ಯಾತ್ರೆ ಮಾಡಲು ಹೋದ್ರೆ, ಕಾರ್ಯಕ್ರಮಕ್ಕೆ ಜನರನ್ನ ಸೇರಿಸುವುದು ಕಷ್ಟದ ಕೆಲಸ.
ಇನ್ನೂ ಬಿಜೆಪಿ ಇದನ್ನೇ ಲಾಭವಾಗಿ ಪಡೆಯುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರೋಡ್ ಶೋ ಮಾಡಿ ಬಿಜೆಪಿಗೆ ಇನ್ನಷ್ಟು ಬಲ ತುಂಬಿದರು. ಇನ್ನು ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ್ 2008 ರ ವಿಧಾನ ಸಭೆ ಚುನಾವಣೆ ನಂತರ 2018ರ ವಿಧಾನಸಭೆ ಮತ್ತು 2019ರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡರು. ಈ ಹಿನ್ನಲೆ ಬಿಜೆಪಿಯಿಂದ ಹೊಸ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಈಗಾಗಲೆ ರಾಜ್ಯ ಬಿ.ಜೆ.ಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಅವರ ಹೆಸರು ಮುನ್ನಲಗೆ ಬರುತ್ತಿದ್ದು, ಮಲ್ಲಿಕಾರ್ಜುನ ಬಾಳಿಕಾಯಿ ಕ್ಷೇತ್ರದಲ್ಲಿ ಸಂಚಾರ ಶರು ಮಾಡಿದ್ದು, ಪಕ್ಷ ಸಂಘಟನೆಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿ ಟಿಕೆಟ್ ಮಲ್ಲಿಕಾರ್ಜುನ ಬಾಳಿಕಾಯಿ ಅವರಿಗೆ ಸಿಗುವ ಸಾಧ್ಯತೆ ಇದೆ. ಇನ್ನು ಕುಂದಗೋಳದಲ್ಲಿ ಲಿಂಗಾಯತ್ ಮತ್ತು ಕುರುಬರ ಮತಗಳೇ ನಿರ್ಣಾಯಕವಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 am, Mon, 13 February 23