ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ 19 ಮೈದಾನಗಳ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕ್ರೀಡಾ ಸಂಕೀರ್ಣ

ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ರಾಜ್ಯ ಮತ್ತು ಭಾರತೀಯ ಕ್ರೀಡಾಪಟುಗಳ ಸಾಧನೆ ನಿರೀಕ್ಷಿತವಾಗಿಲ್ಲ. ಕ್ರಿಕೆಟ್ ಬಿಟ್ಟರೆ ನಮ್ಮಲ್ಲಿ ಹೆಚ್ಚಿನ ಪಾಲಕರು ಬೇರೆ ಕ್ರೀಡೆಗಳಿಗೆ ಮಕ್ಕಳನ್ನು ಕಳುಹಿಸುವುದು ಕೂಡಾ ಅಷ್ಟಕಷ್ಟೇ. ಇದಕ್ಕೆ, ಸೂಕ್ತ ಮೈದಾನದ ಕೊರತೆ ಹಾಗೂ ಮೂಲಸೌಕರ್ಯಗಳ ಕೊರತೆ ಕೂಡಾ ಕಾರಣವಾಗಿದೆ. ಈ ಸಮಸ್ಯೆಯ ನಿವಾರಣೆಗಾಗಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಹೊಂದಿರುವ ವಿಶೇಷ ಕ್ರೀಡಾ ಸಂಕೀರ್ಣ ಹುಬ್ಬಳ್ಳಿಯಲ್ಲಿ ತಲೆ ಎತ್ತುತ್ತಿದೆ.

ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ 19 ಮೈದಾನಗಳ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕ್ರೀಡಾ ಸಂಕೀರ್ಣ
ಹುಬ್ಬಳ್ಳಿಯಲ್ಲಿ 19 ಮೈದಾನದ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕ್ರೀಡಾ ಸಂಕೀರ್ಣ
Updated By: Ganapathi Sharma

Updated on: May 06, 2025 | 8:52 AM

ಹುಬ್ಬಳ್ಳಿ, ಮೇ 6: ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ, ಬೇರೆಡೆ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವುದು ಮತ್ತು ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ಬೇಕಾದ ಮೈದಾನಗಳ ಸಂಖ್ಯೆ ತೀರಾ ಕಡಿಮೆ. ಇದೇ ಕಾರಣಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವವರ ಸಂಖ್ಯೆ ಕೂಡಾ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದರೆ, ಈ ಸಮಸ್ಯೆಗೆ ಪರಿಹಾರ ಸಿಗುವ ದಿನಗಳು ಸಮೀಪ ಬಂದಿವೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಇನ್ನು ನಾಲ್ಕೈದು ತಿಂಗಳುಗಳಲ್ಲಿ ಹುಬ್ಬಳ್ಳಿಯಲ್ಲಿ (Hubballi) ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ (International level Sports complex)  ಲೋಕಾರ್ಪಣೆಗೊಳ್ಳಲಿದೆ. ಹುಬ್ಬಳ್ಳಿ ನಗರದ ಲೋಹಿಯಾ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ, ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಾಣವಾಗುತ್ತಿದೆ.

ಪ್ರಧಾನಿ ಮೋದಿ ಕನಸಾಗಿರುವ ಪಿಟ್ ಇಂಡಿಯಾ ಅಭಿಯಾನವನ್ನು ಸಾಕಾರಗೊಳಿಸುವುದು ಮತ್ತು ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸಲು ನೆರವಾಗುವ ಉದ್ದೇಶದಿಂದ ಈ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ.

15 ಎಕರೆ ಪ್ರದೇಶದಲ್ಲಿ ಬೃಹತ್ ಕ್ರೀಡಾ ಸಂಕೀರ್ಣ

ಒಟ್ಟು ಹದಿನೈದು ಎಕರೆ ಪ್ರದೇಶದಲ್ಲಿರುವ ಈ ಕ್ರೀಡಾ ಸಂಕೀರ್ಣದ ಕಾಮಗಾರಿ ಬರೋಬ್ಬರಿ 180 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದೆ. 2019 ರಲ್ಲಿಯೇ ಆರಂಭವಾಗಿರುವ ಕಾಮಗಾರಿ ಈಗ ಮುಗಿಯುವ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಲೋಹಿಯಾ ನಗರದಲ್ಲಿರುವ ಕ್ರೀಡಾ ಸಂಕೀರ್ಣಕ್ಕೆ ಸೋಮವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಪ್ರಯಾಣಿಕರ ಗಮನಕ್ಕೆ: ರಾಜ್ಯದ ಅನೇಕ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ
ಹುಬ್ಬಳ್ಳಿ​: ನುಡಿದಂತೆ ನಡೆಯದ ಸರ್ಕಾರ, ಕುಟುಂಬಕ್ಕೆ ಬಾರದ ಪರಿಹಾರ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ NWKRTC ಚಾಲಕನ ವಿರುದ್ಧ ತನಿಖೆಗೆ ಆದೇಶ

ಕ್ರಿಕೆಟ್ ಹೊರತುಪಡಿಸಿ 19 ಕ್ರೀಡೆಗಳಿಗೆ ಮೈದಾನ

ಈ ಕ್ರೀಡಾ ಸಂಕೀರ್ಣದಲ್ಲಿ ಕ್ರಿಕೆಟ್ ಹೊರತು ಪಡಿಸಿ ಒಟ್ಟು 19 ಕ್ರೀಡೆಗಳ ಮೈದಾನಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಳಾಂಗಣ ಮತ್ತು ಹೊರಗಾಂಣ ಕ್ರೀಡೆಗಳ ಮೈದಾನಗಳು ಪ್ರತ್ಯೇಕವಾಗಿವೆ. ಕೋಕೋ, ಹಾಕಿ, ಪುಟ್ಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಈಜು ಸೇರಿದಂತೆ ಪ್ರಮುಖ ಕ್ರೀಡೆಗಳಿಗೆ ಪ್ರತ್ಯೇಕವಾದ ಕೋಟ್, ಮೈದಾನಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದನ್ನು ಕೂಡಾ ಅಂತಾರಾಷ್ಟ್ರೀಯ ದರ್ಜೆಯಲ್ಲಿ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.

ಹಗಲು, ರಾತ್ರಿ ಕ್ರೀಡಾ ಸ್ಪರ್ಧೆ ಹಾಗೂ ತರಬೇತಿಗೆ ಅವಕಾಶ

ಹಗಲು ಹಾಗೂ ರಾತ್ರಿ ಸಮಯದಲ್ಲಿ ಕೂಡಾ ಕ್ರೀಡಾ ಸ್ಪರ್ಧೆಗಳನ್ನು ನಡೆಸಲು ಮತ್ತು ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ವೃತ್ತಿಪರ ಕ್ರೀಡಾಪಟುಗಳು ಕೂಡಾ ತರಬೇತಿ ಪಡೆಯುವುದರ ಜೊತೆಗೆ ಹವ್ಯಾಸಿ ಆಟಗಾರರಿಗೆ ಕೂಡಾ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಇನ್ನು ಐದು ತಿಂಗಳೊಳಗಾಗಿ ಕ್ರೀಡಾ ಸಂಕೀರ್ಣ ಉದ್ಘಾಟನೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಖಾಸಗಿ ಸಹಬಾಗಿತ್ವದಲ್ಲಿ ಇದರ ನಿರ್ವಹಣೆ ಮಾಡುವ ಚಿಂತನೆಯಿದ್ದು, ಕ್ರೀಡಾಪಟುಗಳಿಗೆ ಕಡಿಮೆ ಹಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ರಾಜ್ಯದ ಅನೇಕ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ

ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಂಕೀರ್ಣ ಹುಬ್ಬಳ್ಳಿಯಲ್ಲಿ ಆರಂಭವಾಗುತ್ತಿರುವುದರಿಂದ ಉತ್ತರ ಕರ್ನಾಟಕ ಮಾತ್ರವಲ್ಲ, ಇಡೀ ಕರ್ನಾಟಕದ ಕ್ರೀಡಾಪಟುಗಳಿಗೆ ಅನಕೂಲವಾಗಲಿದೆ. ನಮ್ಮ ರಾಜ್ಯದ ಪ್ರತಿಭೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸುಗಳಿಸಲು ಈ ಕ್ರೀಡಾ ಸಂಕೀರ್ಣ ನೆರವಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ