ಪ್ರಯಾಣಿಕರ ಗಮನಕ್ಕೆ: ರಾಜ್ಯದ ಅನೇಕ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ
ಧರ್ಮಾವರಂ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಎರಡನೇ ಹಂತದ ಆಧುನೀಕರಣ ಕಾಮಗಾರಿಗಳಿಂದಾಗಿ ಮೇ ತಿಂಗಳಲ್ಲಿ ರಾಜ್ಯದ ಅನೇಕ ರೈಲುಗಳ ಸಂಚಾರದಲ್ಲಿ ಬದಲಾವಣೆಗಳಾಗಿವೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ, ಕೆಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ ಮತ್ತು ಕೆಲವು ರೈಲುಗಳು ವಿಳಂಬವಾಗಲಿವೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.

ರೈಲು
ಹುಬ್ಬಳ್ಳಿ, ಮೇ 02: ಗುಂತಕಲ್ ವಿಭಾಗದ ಪ್ರಮುಖ ರೈಲು ನಿಲ್ದಾಣವಾದ ಧರ್ಮಾವರಂ ಜಂಕ್ಷನ್‌ನಲ್ಲಿ ಎರಡನೇ ಹಂತದ ಯಾರ್ಡ್ ಮಾರ್ಪಾಡು ಮತ್ತು ಆಧುನೀಕರಣ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ (Train Cancelled), ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಹಾಗೂ ಕೆಲವು ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುವುದು ಎಂದು ದಕ್ಷಿಣ ಮಧ್ಯ ರೈಲ್ವೆ (South Central Railway) ತಿಳಿಸಿದೆ.
ರೈಲು ರದ್ದು
- ಕೆಎಸ್ಆರ್ ಬೆಂಗಳೂರು-ಧರ್ಮಾವರಂ ನಡುವಿನ ಮೆಮು ವಿಶೇಷ ರೈಲುಗಳು (ಸಂಖ್ಯೆ 06595/06596) ಮೇ 5 ರಿಂದ 17 ರವರೆಗೆ, ಗುಂತಕಲ್-ಹಿಂದೂಪುರ (77213) ಮೇ 4 ರಿಂದ 17 ರವರೆಗೆ ಹಾಗೂ ಹಿಂದೂಪುರ-ಗುಂತಕಲ್ (77214) ನಡುವಿನ ಡೆಮು ರೈಲುಗಳು ಮೇ 5 ರಿಂದ 18 ರವರೆಗೆ ರದ್ದಾಗಿರಲಿವೆ.
- ಯಶವಂತಪುರ-ಬೀದರ್ (16571) ಎಕ್ಸ್‌ಪ್ರೆಸ್ ರೈಲು ಮೇ 11, 12, 13 ಮತ್ತು 15 ರಂದು, ಬೀದರ್-ಯಶವಂತಪುರ (16572) ಎಕ್ಸ್‌ಪ್ರೆಸ್ ರೈಲು ಮೇ 12, 13, 14 ಮತ್ತು 16 ರಂದು, ಯಶವಂತಪುರ-ಲಾತೂರ್ (16583) ಎಕ್ಸ್‌ಪ್ರೆಸ್ ರೈಲು ಮೇ 10, 14, 16 ಮತ್ತು 17 ರಂದು, ಲಾತೂರ್-ಯಶವಂತಪುರ (16584) ಎಕ್ಸ್‌ಪ್ರೆಸ್ ರೈಲು ಮೇ 11, 15, 17 ಮತ್ತು 18 ರಂದು, ಸೋಲಾಪುರ-ಹಾಸನ (11311) ಎಕ್ಸ್‌ಪ್ರೆಸ್ ರೈಲು ಮೇ 11 ರಿಂದ 16 ರವರೆಗೆ ಮತ್ತು ಹಾಸನ-ಸೋಲಾಪುರ (11312) ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಮೇ 12 ರಿಂದ 17 ರವರೆಗೆ ರದ್ದುಪಡಿಸಲಾಗಿದೆ.
ರೈಲು ನಿಯಂತ್ರಣ
- ಮೇ 4 ರಿಂದ 16 ರವರೆಗೆ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಕೊಯಮತ್ತೂರಿಗೆ ಹೊರಡುವ ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಮತ್ತೂರು ಎಕ್ಸ್‌ಪ್ರೆಸ್ (11013) ರೈಲು ಮಾರ್ಗ ಮಧ್ಯದಲ್ಲಿ ಸುಮಾರು 60 ನಿಮಿಷಗಳ ಕಾಲ, ಮೇ 4 ಮತ್ತು 11 ರಂದು ತುತಿಕೋರಿನ್‌ನಿಂದ ಓಖಾಗೆ ಪ್ರಯಾಣಿಸುವ ತುತಿಕೋರಿನ್-ಓಖಾ ವಿವೇಕ್ ಎಕ್ಸ್‌ಪ್ರೆಸ್ (19567) ರೈಲು ಸುಮಾರು 150 ನಿಮಿಷಗಳ ಕಾಲ ನಿಯಂತ್ರಣವಾಗುವ/ತಡವಾಗುವ ಸಾಧ್ಯತೆ ಇದೆ.
- ಮೈಸೂರಿನಿಂದ ಜೈಪುರಕ್ಕೆ ಸಂಚರಿಸುವ ಮೈಸೂರು-ಜೈಪುರ ಎಕ್ಸ್‌ಪ್ರೆಸ್ (12975) ರೈಲು ಮೇ 8, 10, 15 ಮತ್ತು 17 ರಂದು ಮಾರ್ಗ ಮಧ್ಯದಲ್ಲಿ 90 ನಿಮಿಷಗಳ ಕಾಲ ಮತ್ತು ಮೇ 9 ಮತ್ತು 16 ರಂದು ಪುರಿಯಿಂದ ಹೊರಡುವ ರೈಲು ಸಂಖ್ಯೆ 22883 ಪುರಿ-ಯಶವಂತಪುರ ಗರೀಬ್ ರಥ ಎಕ್ಸ್‌ಪ್ರೆಸ್ ರೈಲುಗಳು ಮಾರ್ಗ ಮಧ್ಯದಲ್ಲಿ 90 ನಿಮಿಷಗಳ ಕಾಲ ನಿಯಂತ್ರಣವಾಗುವ/ತಡವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರು-ಬೆಳಗಾವಿ ನಡುವೆ ನೂತನ ವಂದೇ ಭಾರತ್ ರೈಲು ಸಂಚಾರಕ್ಕೆ ಕೇಂದ್ರ ಒಪ್ಪಿಗೆ
ಇದನ್ನೂ ಓದಿ
ಮಾರ್ಗ ಬದಲಾವಣೆ
- ಮೇ 11 ರಿಂದ 17 ರವರೆಗೆ ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್ (16591) ರೈಲು ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ, ಗುಂತಕಲ್ ಮತ್ತು ಯಲಹಂಕ ನಡುವಿನ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ, ಅದೇ ರೀತಿ ಮೇ 11 ರಿಂದ 17 ರವರೆಗೆ ಮೈಸೂರಿನಿಂದ ಹೊರಡುವ ಮೈಸೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಹಂಪಿ (16592) ಎಕ್ಸ್‌ಪ್ರೆಸ್ ರೈಲು ಯಶವಂತಪುರ, ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದ್ದು, ಯಲಹಂಕ ಮತ್ತು ಗುಂತಕಲ್ ನಡುವಿನ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ಮೇ 16 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರಿನಿಂದ ಹೊರಡುವ ಬೆಂಗಳೂರು-ಅಜ್ಮೀರ್ ಗರೀಬ್ ನವಾಜ್ ಎಕ್ಸ್‌ಪ್ರೆಸ್ (16532) ರೈಲು ಯಶವಂತಪುರ, ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ, ಹಿಂದೂಪುರ ಮತ್ತು ಗುಂತಕಲ್ ನಡುವಿನ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಮೇ 12 ರಂದು ಅಜ್ಮೀರಿನಿಂದ ಹೊರಡುವ ರೈಲು ಸಂಖ್ಯೆ 16531 ಅಜ್ಮೀರ್-ಕೆಎಸ್ಆರ್ ಬೆಂಗಳೂರು ಗರೀಬ್ ನವಾಜ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದ್ದು, ಗುಂತಕಲ್ ಮತ್ತು ಹಿಂದೂಪುರ ನಡುವಿನ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ಮೇ 14 ರಂದು ಭಗತ್ ಕಿ ಕೋಠಿ ನಿಲ್ದಾಣದಿಂದ ಪ್ರಯಾಣಿಸುವ ರೈಲು ಸಂಖ್ಯೆ 16533 ಭಗತ್ ಕಿ ಕೋಠಿ-ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಗುಂತಕಲ್ ಮತ್ತು ಹಿಂದೂಪುರ ನಡುವಿನ ನಿಯಮಿತ ನಿಲುಗಡೆಗಳನ್ನು ಬಿಟ್ಟು ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರದ ಮೂಲಕ ಸಂಚರಿಸಲಿದೆ.
- ಅದೇ ರೀತಿ ಮೇ 12 ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 12592 ಯಶವಂತಪುರ-ಗೋರಖ್‌ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಹಿಂದೂಪುರ ಮತ್ತು ಗುಂತಕಲ್ ನಡುವಿನ ನಿಲುಗಡೆಗಳನ್ನು ಬಿಟ್ಟು ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ, ಗುಂತಕಲ್ ಬೈಪಾಸ್ ಮತ್ತು ರಾಯಚೂರು ಮೂಲಕ ಸಂಚರಿಸಲಿದೆ.
- ಮೇ 14 ರಂದು ಹೌರಾದಿಂದ ಹೊರಡುವ ರೈಲು ಸಂಖ್ಯೆ 22831 ಹೌರಾ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನಂತಪುರದಿಂದ ಯಲಹಂಕದವರೆಗಿನ ತನ್ನ ನಿಯಮಿತ ನಿಲುಗಡೆಗಳನ್ನು ಬಿಟ್ಟು ಧೋಣ, ಗುಂತಕಲ್, ಬಳ್ಳಾರಿ, ರಾಯದುರ್ಗ ಮತ್ತು ಚಿಕ್ಕಜಾಜೂರು ಮೂಲಕ ಸಂಚರಿಸಲಿದೆ.
- ಮೇ 16 ರಂದು ಸಾಯಿನಗರ ಶಿರಡಿ ನಿಲ್ದಾಣದಿಂದ ಆರಂಭವಾಗುವ ರೈಲು ಸಂಖ್ಯೆ 22602 ಸಾಯಿನಗರ ಶಿರಡಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ಅನಂತಪುರದಿಂದ ಕಾಟ್ಪಾಡಿಯವರೆಗಿನ ತನ್ನ ನಿಯಮಿತ ನಿಲುಗಡೆಗಳನ್ನು ಬಿಟ್ಟು ಗೂತ್ತಿ ಮತ್ತು ರೇಣಿಗುಂಟಾ ಮೂಲಕ ಸಂಚರಿಸಲಿದೆ.
- ಮೇ 10 ರಂದು ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16332 ತಿರುವನಂತಪುರಂ ಸೆಂಟ್ರಲ್-ಸಿಎಸ್‌ಎಂಟಿ ಮುಂಬೈ ಎಕ್ಸ್‌ಪ್ರೆಸ್ ರೈಲು ಹಿಂದೂಪುರ, ಧರ್ಮಾವರಂ ಮತ್ತು ಅನಂತಪುರದ ನಿಲುಗಡೆಗಳನ್ನು ಬಿಟ್ಟು ಎಸ್‌ಎಂವಿಟಿ ಬೆಂಗಳೂರು, ಬಾಣಸವಾಡಿ, ತುಮಕೂರು, ಅರಸಿಕೆರೆ, ರಾಯದುರ್ಗ, ಬಳ್ಳಾರಿ ಮತ್ತು ಗುಂತಕಲ್ ಮೂಲಕ ಸಂಚರಿಸಲಿದೆ.
- ಮೇ 4 ಮತ್ತು 11 ರಂದು ಮುಂಬೈಯ ಸಿಎಸ್‌ಎಂಟಿಯಿಂದ ಹೊರಡುವ ರೈಲು ಸಂಖ್ಯೆ 16331 ಸಿಎಸ್‌ಎಂಟಿ ಮುಂಬೈ-ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ಅನಂತಪುರದಿಂದ ಬಂಗಾರಪೇಟೆಯವರೆಗಿನ ತನ್ನ ನಿಯಮಿತ ನಿಲುಗಡೆಗಳನ್ನು ಬಿಟ್ಟು ಗುಂತಕಲ್, ಗೂತ್ತಿ, ಕಡಪ, ರೇಣಿಗುಂಟಾ, ಮೇಲ್ಪಕ್ಕಂ, ಕಾಟ್ಪಾಡಿ ಮತ್ತು ಜೋಲಾರ್‌ಪೇಟೆ ಮೂಲಕ ಸಂಚರಿಸಲಿದೆ.
- ಮೇ 8 ಮತ್ತು 15 ರಂದು ಬೆಂಗಳೂರಿನ ಎಸ್‌ಎಂವಿಟಿಯಿಂದ ಹೊರಡುವ ರೈಲು ಸಂಖ್ಯೆ 00635 ಎಸ್‌ಎಂವಿಟಿ ಬೆಂಗಳೂರು-ಗುವಾಹಟಿ ಪಾರ್ಸೆಲ್ ಎಕ್ಸ್‌ಪ್ರೆಸ್ ಧರ್ಮಾವರಂನಿಂದ ಗುಂಟೂರಿನವರೆಗಿನ ನಿಲುಗಡೆಗಳನ್ನು ಬಿಟ್ಟು ಎಸ್‌ಎಂವಿಟಿ ಬೆಂಗಳೂರು, ಜೋಲಾರ್‌ಪೇಟೆ, ರೇಣಿಗುಂಟಾ, ಗೂಡೂರು ಮತ್ತು ವಿಜಯವಾಡದ ಮೂಲಕ ಸಂಚರಿಸಲಿದೆ.
- ಮೇ 5 ಮತ್ತು 12 ರಂದು ಗುವಾಹಟಿದಿಂದ ಹೊರಡುವ ರೈಲು ಸಂಖ್ಯೆ 00636 ಗುವಾಹಟಿ-ಎಸ್‌ಎಂವಿಟಿ ಬೆಂಗಳೂರು ಪಾರ್ಸೆಲ್ ಎಕ್ಸ್‌ಪ್ರೆಸ್ ಗುಂಟೂರಿನಿಂದ ಧರ್ಮಾವರಂವರೆಗಿನ ನಿಲುಗಡೆಗಳನ್ನು ಬಿಟ್ಟು ವಿಜಯವಾಡ, ಗೂಡೂರು, ರೇಣಿಗುಂಟಾ, ಜೋಲಾರ್‌ಪೇಟೆ ಮತ್ತು ಎಸ್‌ಎಂವಿಟಿ ಬೆಂಗಳೂರು ಮೂಲಕ ಸಂಚರಿಸಲಿದೆ.
- ಮೇ 13 ರಂದು ತುಘಲಕಾಬಾದ್’ದಿಂದ ಹೊರಡುವ ರೈಲು ಸಂಖ್ಯೆ 00640 ತುಘಲಕಾಬಾದ್-ಯಶವಂತಪುರ ಪಾರ್ಸೆಲ್ ಎಕ್ಸ್‌ಪ್ರೆಸ್ ಗುಂತಕಲ್ ಬೈಪಾಸ್, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರದ ಮೂಲಕ ಸಂಚರಿಸಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Fri, 2 May 25







