Pralhad Joshi: ನಾಲ್ಕು ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಗೆದ್ದು ಬೀಗಿರುವ ಪ್ರಲ್ಹಾದ್ ಜೋಶಿ ರಾಜಕೀಯ ಹಾದಿ ಇಲ್ಲಿದೆ
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪ್ರಲ್ಹಾದ ಜೋಶಿ ಅವರು ನೀಡಿರೋ ಕೊಡುಗೆ ಅಪಾರ. ಧಾರವಾಡಕ್ಕೆ ಐಐಟಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೋಶಿ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಗೆ ಆಸ್ಪತ್ರೆ ನಿರ್ಮಾಣ ಮಾಡುವಲ್ಲಿ ಶ್ರಮವಹಿಸಿದ್ದಾರೆ.
ಧಾರವಾಡ: ಸತತ ನಾಲ್ಕು ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿರುವ ಸಂಸದೀಯ ವ್ಯವಹಾರ ಹಾಗೂ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸಚಿವ ಸ್ಥಾನ ಹುಡುಕಿಕೊಂಡು ಬಂದಿದ್ದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಇದಕ್ಕೆ ಕಾರಣ ಅವರ ಅರ್ಹತೆ ಮತ್ತು ದಕ್ಷತೆ. ಕೇಂದ್ರ ಸಚಿವರಾದ ಬಳಿಕ ಅವರ ಸಾಧನೆಯನ್ನು ನೋಡಿ ಸ್ವತಃ ಪ್ರಧಾನಿಯೇ ಕೊಂಡಾಡಿದ್ದು ಅವರ ಕ್ರಿಯಾಶೀಲತನಕ್ಕೆ ಸಂದ ಗೌರವ. ಇಂದು ಜೋಶಿ ಅವರಿಗೆ ಹುಟ್ಟ ಹಬ್ಬದ ಸಂಭ್ರಮ.
ಅದು 2004 ರ ಲೋಕಸಭಾ ಚುನಾವಣೆ. ಬಿಜೆಪಿ ಉತ್ತಮ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದ ದಿನಗಳವು. ಕರ್ನಾಟಕದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳೋ ಯತ್ನದಲ್ಲಿದ್ದ ಬಿಜೆಪಿ ನಾಯಕರ ಕಣ್ಣಿಗೆ ಬಿದ್ದಿದ್ದು ಓರ್ವ ಪಕ್ಷ ನಿಷ್ಠೆ ಹೊಂದಿರುವ ಹಾಗೂ ಸತತವಾಗಿ ಕೆಲಸ ಮಾಡುವ ವ್ಯಕ್ತಿಯೊಬ್ಬ. ಅವರೇ ಪ್ರಲ್ಹಾದ್ ಜೋಶಿ. ಕೇಂದ್ರ ಸರಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನಂತರ ಕೇಳಿ ಬರೋ ಹೆಸರೇ ಪ್ರಲ್ಹಾದ್ ಜೋಶಿ ಅವರದ್ದು. ಸಂಸದೀಯ ವ್ಯವಹಾರಗಳ ಸಚಿವರಾಗಿ ಹಾಗೂ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾಗಿ ಪ್ರಲ್ಹಾದ ಜೋಶಿ ಅವರು ಮಾಡಿರೋ ಕೆಲಸಗಳನ್ನು ಇಡೀ ದೇಶವೇ ಮೆಚ್ಚಿಕೊಂಡಿದೆ. ಇಂಥ ಪ್ರಲ್ಹಾದ ಜೋಶಿ 2004 ರ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಎದುರಾಳಿಗಳಿಗೆ ಅಚ್ಚರಿ ಮೂಡಿಸಿದ್ದರು.
ಅದಾದ ಬಳಿಕ ಜೋಶಿ ಅವರು ಹಿಂದಿರುಗಿ ನೋಡಿಯೇ ಇಲ್ಲ. ಇನ್ನು 2009, 2014, 2019 ರ ಲೋಕಸಭಾ ಚುನಾವಣೆಯಲ್ಲಿಯೂ ಭರ್ಜರಿ ಜಯಗಳಿಸಿ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇವರ ಮುಂದೆ ಯಾರೇ ಸ್ಪರ್ಧಿಸಿದರೂ ಸೋಲು ಖಚಿತ ಅನ್ನೋ ಮಟ್ಟಿಗೆ ಬೆಳೆದು ಬಿಟ್ಟರು. 2013 ರಿಂದ ಮೂರು ವರ್ಷಗಳ ಕಾಲ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಈ ವೇಳೆ ಪಕ್ಷವನ್ನು ಗಟ್ಟಿಗೊಳಿಸಿದ್ದಲ್ಲದೇ ಪಕ್ಷದಲ್ಲಿನ ಪ್ರತಿಯೊಬ್ಬ ಕಾರ್ಯಕರ್ತನನ್ನೂ ನಾಯಕರು ಗಂಭೀರವಾಗಿ ಪರಿಗಣಿಸಬೇಕು ಅನ್ನೋದು ಹೇಳಿಕೊಟ್ಟರು. ಇಂಥ ಜೋಶಿವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರಕಾರದಲ್ಲಿ ಸಹಜವಾಗಿ ಸಂಸದೀಯ ವ್ಯವಹಾರಗಳ ಸಚಿವ ಸ್ಥಾನ ಒಲಿದು ಬಂತು. ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡೋದು ಅಷ್ಟು ಸುಲಭದ ಮಾತಲ್ಲ ಅನ್ನೋದು ಅವರನ್ನು ಹತ್ತಿರದಿಂದ ನೋಡಿದ ಎಲ್ಲರಿಗೂ ಗೊತ್ತು. ಆದರೆ ಅದನ್ನು ಸರಳವಾಗಿ ನಿಭಾಯಿಸಿದ ಕೀರ್ತಿ ಪ್ರಲ್ಹಾದ ಜೋಶಿ ಅವರಿಗೆ ಸಲ್ಲುತ್ತದೆ. ಅಲ್ಲದೇ ಕಲ್ಲಿದ್ದಲು ಹಾಗೂ ಗಣಿ ಖಾತೆಯನ್ನು ವಹಿಸಿಕೊಂಡ ಬಳಿಕ ಅವರು ಮಾಡಿರೋ ಮಹತ್ತರ ಕೆಲಸಗಳಂತೂ ಹೇಳತೀರದು. ಇವರು ಕಲ್ಲಿದ್ದಲು ಹಾಗೂ ಗಣಿ ಖಾತೆಯನ್ನು ವಹಿಸಿಕೊಂಡ ಬಳಿಕ ಈ ವಿಭಾಗದಲ್ಲಿ ಕ್ರಾಂತಿಯೇ ಆಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಬರೀ ಸರಕಾರದ ವ್ಯಾಪ್ತಿಯಲ್ಲಿದ್ದ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗಿ ವಲಯಕ್ಕೂ ವಿಸ್ತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಪ್ರಕ್ರಿಯೆಯಿಂದಾಗಿ ಸರಕಾರಕ್ಕೆ ಆದಾಯವೂ ಹೆಚ್ಚಾಗಿದ್ದು, ಕಲ್ಲಿದ್ದಲು ಗಣಿಗಳಿಗೆ ಬೇಡಿಕೆಯೂ ಹೆಚ್ಚಿದೆ.
ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಸಾಹಸಕ್ಕೆ ಇಳಿದ ಸಚಿವರು
ಇನ್ನು ಇತ್ತೀಚಿಗೆ ಕೇಂದ್ರ ಸರಕಾರದ ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ ಪಶ್ಚಿಮ ಬಂಗಾಳದ ಝಂಜ್ರಾ ಭೂತಳ ಗಣಿಗೆ ಪ್ರಲ್ಹಾದ ಜೋಶಿಯವರು ಭೇಟಿ ನೀಡಿದ್ದರು. ಈ ಗಣಿಯು ಭೂಮಿಯ ಮೇಲ್ಮೈನಿಂದ 225 ಮೀಟರ್ ಆಳವನ್ನು ಹೊಂದಿದ್ದು ವಾರ್ಷಿಕ 3.5 ಮಿಲಿಯನ್ ಟನ್ ಸಾಮರ್ಥ್ಯದಲ್ಲಿ ಭಾರತದ ಅತೀ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಯಾಂತ್ರೀಕೃತ ಭೂಗತ ಗಣಿಯಾಗಿದೆ. ಗಣಿ ಇಲಾಖೆ ಅಧಿಕಾರಿಗಳೊಂದಿಗೆ ರಕ್ಷಣಾ ಕವಚ ಧರಿಸಿ 225 ಮೀಟರ್ ಆಳದ ಭೂಗತ ಗಣಿ ವೀಕ್ಷಣೆ ಮಾಡಿದ ಮೊದಲ ಸಚಿವರೆನಿಸಿಕೊಂಡಿದ್ದಾರೆ. ಇದುವರೆಗೆ ಯಾವುದೇ ಗಣಿ ಸಚಿವರು ಇಂಥ ಸಾಹಸಕ್ಕೆ ಒಡ್ಡಿಕೊಂಡಿರಲಿಲ್ಲ. ಹೀಗಾಗಿ ಈ ಕಾರ್ಯ ಮಾಡಿದ ಜೋಶಿಯವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕರ್ನಾಟಕದ ವಿಚಾರಕ್ಕೆ ಬಂದರೆ ಈ ಮುಂಚೆ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಕಲ್ಲಿದ್ದಿಲಿನ ಕೊರತೆಯಿಂದ ಬಳಲುತ್ತಿದ್ದವು. ಆಗಾಗ ಕಲ್ಲಿದ್ದಿಲಿನ ಕೊರತೆಯಿಂದಾಗಿ ಹಲವು ಘಟಕಗಳು ಕಾರ್ಯಾಚರಣೆ ನಿಲ್ಲಿಸೋ ಸಮಸ್ಯೆ ಉದ್ಭವವಾಗೋದು ಸಾಮಾನ್ಯವಾಗಿತ್ತು. ಆದರೆ ಈ ಎಲ್ಲ ಘಟಕಗಳಿಗೆ ಇದೀಗ ಕಲ್ಲಿದ್ದಿಲಿನ ಸಮರ್ಪಕ ಪೂರೈಕೆಯಿಂದಾಗಿ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗಿದೆ. ಆ ಮೂಲಕ ವಿದ್ಯುತ್ ಉತ್ಪಾದನೆಯೂ ನಿರಂತರವಾಗಿ ಸಾಗಿದೆ. ಇನ್ನು ಇಡೀ ದೇಶವೇ ಕೊವಿಡ್ ಸಮಸ್ಯೆಯಿಂದ ಬಳಲುತ್ತಿರುವಾಗ ಇವರು ಅತ್ಯಂತ ಶ್ರದ್ಥೆ ಹಾಗೂ ಕಾಳಜಿಯಿಂದ ಕಾರ್ಯನಿರ್ವಹಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಪ್ರಶಂಸೆಗೆ ಒಳಗಾದರು.
ಇದನ್ನೂ ಓದಿ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ ಕಲ್ಲಿದ್ದಲು ಉತ್ಪಾದನೆ: ಸಚಿವ ಪ್ರಲ್ಹಾದ್ ಜೋಶಿ ಮುಕುಟಕ್ಕೆ ಮತ್ತೊಂದು ಗರಿ
ಧಾರವಾಡಕ್ಕೆ ಪ್ರಲ್ಹಾದ್ ಜೋಶಿ ಕೊಡುಗೆ ಅಪಾರ
ಇನ್ನು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪ್ರಲ್ಹಾದ ಜೋಶಿ ಅವರು ನೀಡಿರೋ ಕೊಡುಗೆ ಅಪಾರ. ಧಾರವಾಡಕ್ಕೆ ಐಐಟಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೋಶಿ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಗೆ ಆಸ್ಪತ್ರೆ ನಿರ್ಮಾಣ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಕಾರ್ಮಿಕರಿಗಾರಿ ಇ.ಎಸ್.ಐ. ಆಸ್ಪತ್ರೆ ನಿರ್ಮಾಣ, ಅಂತರಾಷ್ಟ್ರೀಯ ಗುಣಮಟ್ಟದ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಿದ್ದಲ್ಲದೇ ಮತ್ತಷ್ಟು ವಿಮಾನ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದೀಗ ಮತ್ತೊಂದು ಯೋಜನೆ ಎಲ್ಲರ ಗಮನ ಸೆಳೆದಿದೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್ ಕಾಮಗಾರಿಗೆ(ಎಲಿವೇಟೆಡ್ ರೋಟರಿ ಜಂಕ್ಷನ್ ಫ್ಲೈ ಓವರ್) ಕೇಂದ್ರ ಸರಕಾರದಿಂದ ಹಣಕಾಸು ನೆರವು ಒದಗಿಸಿದ್ದಾರೆ. ಈ ಕಾಮಗಾರಿ ಮುಕ್ತಾಯವಾದರೆ ಹುಬ್ಬಳ್ಳಿ ನಗರದ ಸಂಚಾರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಈ ಮಧ್ಯೆ ದೇಶದ ಅತ್ಯುನ್ನತ ವೈದ್ಯಕೀಯ ಶಿಕ್ಷಣ ಸಂಸ್ಥೆಯಾಗಿರೋ ಅಖಿಲ ಭಾರತ ವೈದ್ಯಕೀಯ ವಿಜಾನ ಸಂಸ್ಥೆಯನ್ನು ರಾಜ್ಯಕ್ಕೆ ತರಲು ಯತ್ನ ನಡೆಸಿದ್ದಾರೆ.
ಇನ್ನು ಕಳೆದ ಬಾರಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಮಾಡುವ ವಿಚಾರವಾಗಿ ನಡೆದ ಬೆಳವಣಿಗೆಗಳು ಎಲ್ಲರಿಗೂ ಗೊತ್ತು ಈ ಪ್ರಕರಣವನ್ನು ಜೋಶಿ ಅವರು ನಿಭಾಯಿಸಿದ ರೀತಿ ಅವರ ನಾಯಕತ್ವದ ಗುಣವನ್ನು ಎತ್ತಿ ತೋರಿಸಿತು. ಬೆಂಗಳೂರು ಹೈಕೋರ್ಟ್ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಮಾಡಲು ಅನುಮತಿ ನೀಡುವುದು ಪಾಲಿಕೆ ಆಯುಕ್ತರಿಗೆ ನಿರ್ಧಾರಕ್ಕೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಅವರದ್ದೇ ಅಂತಿಮ ನಿರ್ಧಾರ ಅಂತಾ ತೀರ್ಪು ನೀಡಿತ್ತು. ಎಲ್ಲ ಬೆಳವಣಿಗೆಗಳ ಮೇಲೆ ಸಂಪೂರ್ಣ ನಿಗಾ ಇಟ್ಟಿದ್ದ ಪ್ರಲ್ಹಾದ ಜೋಶಿ, ಹೈಕೋರ್ಟ್ ಆದೇಶ ಬರುತ್ತಿದ್ದಂತೆಯೇ ಫುಲ್ ಅಲರ್ಟ್ ಆಗಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿದರು. ಅವತ್ತು ರಾತ್ರಿ ಎರಡು ಗಂಟೆಯವರೆಗೆ ಸಭೆ ನಡೆಸಿ, ಕೊನೆಗೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ಮಾಡುವಲ್ಲಿ ಯಶಸ್ವಿಯಾದರು.
ಇದು ರಾಜ್ಯದ ಇತಿಹಾಸದಲ್ಲಿ ಯಾವತ್ತೂ ನೆನಪಿಡುವ ವಿಷಯವಾಗಿ ದಾಖಲಾಯಿತು. ಒಟ್ಟಿನಲ್ಲಿ ಸತತ ಪ್ರಯತ್ನ, ನಿರಂತರ ಸೇವೆ, ಜನಸಾಮಾನ್ಯರೊಂದಿಗೆ ಬೆರೆಯೋ ಗುಣ, ಕರ್ತವ್ಯ ಪ್ರಜ್ಞೆ, ಜನಪರ ಕಾಳಜಿಯಿಂದಾಗಿ ಇವತ್ತು ಪ್ರಲ್ಹಾದ ಜೋಶಿ ಅವರು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಮೇಲೆ ಉತ್ತಮ ಹಿಡಿತ ಹೊಂದಿರೋ ಪ್ರಲ್ಹಾದ ಜೋಶಿ ಅವರು ತಮ್ಮ ಕ್ಷೇತ್ರ, ರಾಜ್ಯ ಹಾಗೂ ದೇಶಕ್ಕೆ ನಿರಂತರವಾಗಿ ಕೊಡುಗೆ ನೀಡುತ್ತಲೇ ಇದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ
Published On - 12:59 pm, Sun, 27 November 22