AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಳಿ ಕಟ್ಟುವ ಮುನ್ನವೇ ತಾಯಿಯಾಗಿದ್ದ ಯುವತಿ ದುರಂತ ಅಂತ್ಯ

ಅವರಿಬ್ಬರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗದೇ ಲಿವಿಂಗ್ ಲಿವಿಂಗ್ ಟುಗೆದರ್ ನಲ್ಲಿದ್ದರು. ಪರಿಣಾಮ ಯುವತಿ ಗರ್ಭಿಣಿಯಾಗಿದ್ದು, ಬಳಿಕ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಆದ್ರೆ, ದುರದೃಷ್ಟವಶಾತ್ ಗರ್ಭಿಣಿಯಾಗಿದ್ದ ಯುವತಿ ಹಾಗೂ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದ್ದಾರೆ. ಪ್ರೀತಿಸಿ ವಿವಾಹವಾಗಿದ್ದ ಏಳು ತಿಂಗಳಲ್ಲೇ ಈ ದುರಂತ ಸಂಭವಿಸಿದೆ. ಅಷ್ಟಕ್ಕೂ ಆಗಿದ್ದೇನು?

ತಾಳಿ ಕಟ್ಟುವ ಮುನ್ನವೇ ತಾಯಿಯಾಗಿದ್ದ ಯುವತಿ ದುರಂತ ಅಂತ್ಯ
Divya And Charan
ಸಂಜಯ್ಯಾ ಚಿಕ್ಕಮಠ
| Updated By: ರಮೇಶ್ ಬಿ. ಜವಳಗೇರಾ|

Updated on: Jul 31, 2025 | 3:15 PM

Share

ಹುಬ್ಬಳ್ಳಿ, (ಜುಲೈ 31): ಪ್ರೀತಿಸಿ ಮದುವೆಯಾಗಿದ್ದ (love marriage) ಯುವತಿ ಏಳೇ ತಿಂಗಳಲ್ಲೇ ಮೃತಪಟ್ಟಿದ್ದಾಳೆ. ಆದ್ರೆ ಯುವತಿ ಪ್ರಿಯಕರ ತಾಳಿ ಕಟ್ಟುವ ಮುನ್ನವೇ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾಗಿದ್ದ ಸುದ್ದಿ ಎಲ್ಲರಿಗೂ ಗೊತ್ತಾಗುತ್ತಿದ್ದಂತೆ, ವಾರದ ಹಿಂದಷ್ಟೇ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಆದ್ರೆ ಮದುವೆಯಾದ ಒಂದೇ ವಾರಕ್ಕೆ ಹೆರಿಗೆಯಾಗಿದ್ದು, ನವಜಾತ ಶಿಶು ಮತ್ತು ತಾಯಿ ಇಬ್ಬರು ಬಾರದ ಲೋಕಕ್ಕೆ ಹೋಗಿದ್ದಾರೆ. ಪತಿಯೇ ಆಕೆ ಮತ್ತು ಮಗುವಿನ ಸಾವಿಗೆ ಕಾರಣ ಅಂತ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ (Hubballi) ನಗರದ ಮಂಟೂರು ರಸ್ತೆಯಲ್ಲಿರುವ ಶೀಲಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಹೌದು.. ಹುಬ್ಬಳ್ಳಿ ನಗರದ ಶೀಲಾ ಕಾಲೋನಿಯ ನಿವಾಸಿಯಾಗಿದ್ದ ಇಪ್ಪತ್ತೆರಡು ವರ್ಷದ ದಿವ್ಯಾ ಸಲವಾದಿ ಎನ್ನುವ ಯುವತಿ ಕಳೆದ ರಾತ್ರಿ ಹುಬ್ಬಳ್ಳಿ ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾಳೆ. ಅಷ್ಟೇ ಅಲ್ಲ ಆಕೆಯ ಹೊಟ್ಟೆಯಲ್ಲಿದ್ದ ಏಳು ತಿಂಗಳ ಕೂಸು ಕೂಡಾ ಮೃತಪಟ್ಟಿದೆ.

ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ, ತನ್ನ ಬಡಾವಣೆಯ ಪಕ್ಕದಲ್ಲಿಯೇ ಇದ್ದ ಕೃಪಾ ನಗರದ ನಿವಾಸಿಯಾಗಿದ್ದ ಚರಣ್ ಅನಂತಪುರ ಎನ್ನುವ ಯುವಕನನ್ನು ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದಳಂತೆ. ಈ ವೇಳೆ ಇಬ್ಬರು ದೈಹಿಕ ಸಂಪರ್ಕ ಬೆಳಸಿದ್ದರಂತೆ. ಹೀಗಾಗಿ ದಿವ್ಯಾ ಗರ್ಬಿಣಿಯಾಗಿದ್ದಳು. ತಾನು ಗರ್ಬಿಣಿಯಾಗಿರುವ ಮಾಹಿತಿಯನ್ನು ಚರಣ್ ಗೆ ತಿಳಿಸಿದ್ದಳಂತೆ. ಆದ್ರೆ ಕೂಡಾ ಚರಣ್, ದಿವ್ಯಾಳನ್ನು ವಿವಾಹವಾಗಲು ನಿರಾಕರಿಸಿದ್ದ. ಹೀಗಾಗಿ ದಿವ್ಯಾ ಬೆಂಡಗೇರಿ ಪೊಲೀಸ್ ರಿಗೆ ದೂರು ನೀಡಿದ್ದಳು. ಬಳಿಕ ಪೊಲೀಸರು ಬುದ್ದಿಮಾತು ಹೇಳಿದ ಮೇಲೆ ವಾರದ ಹಿಂದಷ್ಟೇ ದಿವ್ಯಾ ಮತ್ತು ಚರಣ್, ಸ್ಥಳೀಯ ದೇವಸ್ಥಾನವೊಂದರಲ್ಲಿ ಮದುವೆಯಾಗಿತ್ತು.

ಇದನ್ನೂ ಓದಿ: ಪತಿಯನ್ನು ಕೊಲೆ ಮಾಡಿ ಪ್ರಿಯಕರನ ಜತೆ ಕೇರಳದಲ್ಲಿ ಸಂಸಾರ: ಒಂದುವರೆ ವರ್ಷದ ಬಳಿಕ ಸಿಕ್ಕಿಬಿದ್ದಳು

ಮದುವೆಯಾದಾಗ ದಿವ್ಯಾ ಏಳು ತಿಂಗಳ ಗರ್ಭಿಣಿಯಾಗಿದ್ದಳು. ನಿನ್ (ಜುಲೈ 30) ಮುಂಜಾನೆ ದಿವ್ಯಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ನಗರದ ಚಿಟಗುಪ್ಪಿ ಆಸ್ಪತ್ರೆಗೆ ಚರಣ್ ಕರೆದುಕೊಂಡು ಹೋಗಿದ್ದಾನೆ. ಆದ್ರೆ ತಾಯಿ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದೆ. ಇನ್ನು ಹೆರಿಗೆ ಸಂದರ್ಭದಲ್ಲಿ ತೀರ್ವ ರಕ್ತಸ್ರಾವವಾಗಿದ್ದು, ರಕ್ತ ಹೊಂದಿಸುವಷ್ಟರಲ್ಲಿಯೇ ದಿವ್ಯಾ ಬಾರದ ಲೋಕಕ್ಕೆ ಹೋಗಿದ್ದಾಳೆ. ಆದ್ರೆ ದಿವ್ಯಾ ಮತ್ತು ನವಜಾತ ಶಿಶುವಿನ ಸಾವಿಗೆ ದಿವ್ಯಾಳ ಪತಿ ಚರಣ್ ಕಾರಣ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.

ದಿವ್ಯಾಳನ್ನು ಅನೇಕ ವರ್ಷಗಳಿಂದ ಪ್ರೀತಿಸಿದ್ದ ಚರಣ್, ವಿವಾಹವಾಗದೇ ದೈಹಿಕ ಸಂಪರ್ಕ ಬೆಳಸಿದ್ದ. ಆದ್ರೆ ವಿವಾಹವಾದ ವಾರದಲ್ಲಿಯೇ ದಿವ್ಯಾ ಇದೀಗ ಬಾರದ ಲೋಕಕ್ಕೆ ಹೋಗಿದ್ದಾಳೆ. ಈ ಸಾವಿಗೆ ಚರಣ್ ಕಾರಣ ಎಂದು ದಿವ್ಯಾ ಕುಟುಂಬದವರ ಆರೋಪ. ಒತ್ತಾಯಪೂರ್ವಕವಾಗಿ ಮದುವೆಯಾಗಿದ್ದ ಚರಣ್, ದಿವ್ಯಾಳ ಹೊಟ್ಟೆಯಲ್ಲಿದ್ದ ಮಗುವನ್ನು ತಗೆಸಲು ಪ್ರಯತ್ನಿಸಿದ್ದಂತೆ. ಹದಿನೈದು ದಿನಗಳ ಹಿಂದಷ್ಟೇ ಅಬಾರ್ಷನ್ ಮಾತ್ರೆಗಳನ್ನು ದಿವ್ಯಾಗೆ ಒತ್ತಾಯಪೂರ್ವಕವಾಗಿ ನುಂಗಿಸಿದ್ದಾನೆ. ಏಳು ತಿಂಗಳ ಗರ್ಭಿಣಿಯಾಗಿದ್ದಾಗ, ಆಕೆಗೆ ಅಬಾರ್ಷನ್ ಮಾತ್ರೆ ಕೊಟ್ಟಿರುವ ಹಿನ್ನೆಯಲ್ಲಿ ಕೂಸು ಮತ್ತು ತಾಯಿ ಸಾವಿಗೆ ಕಾರಣವಾಗಿದೆ ಎನ್ನುವುದು ದಿವ್ಯಾ ಕುಟುಂಬದವರ ಆರೋಪವಾಗಿದೆ.

ಬೆಂಡಿಗೇರಿ ಠಾಣೆಗೆ ಬಂದಿದ್ದ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ರನ್ನು ಭೇಟಿ ಮಾಡಿದ್ದ ದಿವ್ಯಾ ಕುಟುಂಬ, ತಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಮನವಿ ಮಾಡಿದೆ. ಇನ್ನು ದಿವ್ಯಾ ಕುಟುಂಬದವರ ಆರೋಪನ್ನು ಚರಣ್ ಅಲ್ಲಗಳೆದಿದ್ದಾನೆ. ನಾನು ನನ್ನ ಪತ್ನಿಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇನೆ. ಆದ್ರೆ ಉಳಿಯಲಿಲ್ಲ. ದಿವ್ಯಾ ಕುಟುಂಬದವರು ಹೇಳುವಂತೆ ನಾನು ಯಾವುದೇ ಅಬಾರ್ಷನ್ ಮಾತ್ರೆ ನುಂಗಿಸಿಲ್ಲ. ಈ ಬಗ್ಗೆ ಎಲ್ಲಾ ರೀತಿಯ ತನಿಖೆಗೆ ನಾನು ಸಿದ್ದ ಎಂದಿದ್ದಾನೆ.

ಸದ್ಯ ಚರಣ್ ನನ್ನು ಬೆಂಡಿಗೇರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವೈದ್ಯಕೀಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ನಿಜವಾಗಿಯೂ ಪತಿ ಚರಣ್, ಅಬಾರ್ಷನ್ ಮಾತ್ರೆಗಳನ್ನು ಕೊಟ್ಟಿದ್ದನಾ ಅಥವಾ ಅವಧೀ ಪೂರ್ವ ಹೆರಿಗೆ ಆಗಿದ್ದರಿಂದ ತಾಯಿ ಮತ್ತು ಮಗು ಸತ್ತಿದೆಯಾ ಎನ್ನುವುದು ತಿಳಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ