Dharwad Dairy Farming – ಕಾಡಿನಲ್ಲೂ ಮೇವಿಲ್ಲ, ಹೈನುಗಾರಿಕೆಯನ್ನೇ ಅವಲಂಬಿಸಿರುವ 18 ಗೌಳಿ ಗ್ರಾಮಗಳ ನೂರಾರು ಕುಟುಂಬಗಳು ಸಂಕಷ್ಟದಲ್ಲಿ

ಹೆಚ್ಚಿನ ಸಂಖ್ಯೆಯಲ್ಲಿ ಗೌಳಿ ಜನಾಂಗದವರು ರಸ್ತೆ ಬದಿಯ ಮೇವು, ಅರಣ್ಯದಂಚಿನಲ್ಲಿನ ಮೇವನ್ನು ಅವಲಂಬಿಸಿರುತ್ತಾರೆ. ಆದರೆ ಅರಣ್ಯದಲ್ಲೂ ಮಳೆ ಇಲ್ಲದೆ ಮೇವು ಬೆಳೆಯದೇ ಇರುವುದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಕ್ಕಿವೆ. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಕ್ರಮ ತೆಗೆದುಕೊಳ್ಳಬೇಕಾಗಿದೆ. ಆ ಮೂಲಕ ಈ ಜನಾಂಗದವರ ಹಿತ ಕಾಪಾಡಬೇಕಿದೆ.

Dharwad Dairy Farming - ಕಾಡಿನಲ್ಲೂ ಮೇವಿಲ್ಲ, ಹೈನುಗಾರಿಕೆಯನ್ನೇ ಅವಲಂಬಿಸಿರುವ 18 ಗೌಳಿ ಗ್ರಾಮಗಳ ನೂರಾರು ಕುಟುಂಬಗಳು ಸಂಕಷ್ಟದಲ್ಲಿ
ಹೈನುಗಾರಿಕೆಯನ್ನೇ ಅವಲಂಬಿಸಿರುವ 18 ಗೌಳಿ ಗ್ರಾಮಗಳ ನೂರಾರು ಕುಟುಂಬಗಳು ಸಂಕಷ್ಟದಲ್ಲಿ
Edited By: ಸಾಧು ಶ್ರೀನಾಥ್​

Updated on: Feb 19, 2024 | 12:14 PM

ರಾಜ್ಯದಲ್ಲಿ ಈ ಬಾರಿ ಮಳೆ ಆಗದೇ ಜನರು ಕಂಗಾಲಾಗಿ ಹೋಗಿದ್ದಾರೆ. ಅದರಲ್ಲೂ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇದೇ ವೇಳೆ ಧಾರವಾಡ ಜಿಲ್ಲೆಯಲ್ಲಿ ಒಂದು ಸಮುದಾಯವಂತೂ ಈ ಬಾರಿ ಬೇಸಿಗೆಯನ್ನು ಹೇಗೆ ಎದುರಿಸೋದು ಅನ್ನೋದು ಗೊತ್ತಾಗದೇ ಸಮಸ್ಯೆಗೆ ಸಿಲುಕಿದೆ. ಹೈನುಗಾರಿಕೆ (Dairy Farming) ಮೇಲೆಯೇ ಅವಲಂಬಿತವಾಗಿರೋ ಆ ಕುಟುಂಬಗಳು ತಮ್ಮ ಜಾನುವಾರುಗಳಿಗೆ ಮೇವು (Fodder) ಸಿಗದೆ ಇದೀಗ ಸಂಕಷ್ಟಕ್ಕೆ ಸಿಲುಕಿವೆ. ಧಾರವಾಡ ಅರೆಮಲೆನಾಡು ಜಿಲ್ಲೆ (Dharwad forests). ಪಶ್ಚಿಮಘಟ್ಟವು ಇಲ್ಲಿಂದಲೇ ಶುರುವಾಗುತ್ತೆ. ಅರ್ಧ ಜಿಲ್ಲೆಯಲ್ಲಿ ಒಣಬೇಸಾಯ ಇದ್ದರೆ ಮತ್ತೆ ಅರ್ಧ ಜಿಲ್ಲೆ ಮಲೆನಾಡಿನ ಸೆರಗಿನಲ್ಲಿದೆ. ಹೀಗೆ ಕಾಡಿನ ಮಧ್ಯೆ ಇರೋ ಅನೇಕ ಗ್ರಾಮಗಳಲ್ಲಿ ಜಾನುವಾರು ಸಾಕಣೆ ಹಾಗೂ ಹೈನುಗಾರಿಕೆ ಪ್ರಮುಖ ಆದಾಯದ ಮೂಲವಾಗಿದೆ. ಇನ್ನು ಜಿಲ್ಲೆಯಲ್ಲಿ ಹೈನುಗಾರಿಕೆ ಮೇಲೆಯೇ ಅವಲಂಬಿತವಾಗಿರೋ ಗೌಳಿ ಸಮುದಾಯಗಳಿವೆ. ಜಿಲ್ಲೆಯಲ್ಲಿ ಒಟ್ಟು 18 ಗೌಳಿ ಗ್ರಾಮಗಳಿವೆ (Gauli villages). ಈ ಗೌಳಿ ಸಮುದಾಯದವರು ಹೈನುಗಾರಿಕೆ ಬಿಟ್ಟರೆ ಬೇರೆ ಯಾವುದೇ ಕೆಲಸಗಳನ್ನು ಮಾಡೋದೇ ಇಲ್ಲ. ಆದರೆ ಇದೀಗ ಮಳೆಯ ಕೊರತೆಯಿಂದಾಗಿ ಈ ಸಮುದಾಯದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮುದಾಯದವರು ಹಗಲು ಹೊತ್ತಿನಲ್ಲಿ ತಮ್ಮ ಜಾನುವಾರುಗಳನ್ನು ಕಾಡಿನಂಚಿನಲ್ಲಿ ಮೇಯಲು ಬಿಡುತ್ತಾರೆ. ಹೀಗಾಗಿ ಹೆಚ್ಚಿನ ಖರ್ಚು ಇಲ್ಲದೇ ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಅವರಿಗೆ ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದಾಗಿ ಕಾಡಿನಲ್ಲಿಯೂ ಮೇವಿಲ್ಲದೇ ಪರದಾಡುವಂತಾಗಿದೆ.

ಈಗಾಗಾಗಲೇ ಅನೇಕ ಕಡೆಗಳಲ್ಲಿ ಈ ಸಮುದಾಯದವರು ಜಾನುವಾರುಗಳನ್ನು ಮಾರುತ್ತಿದ್ದಾರೆ. ಮತ್ತೆ ಅನೇಕ ಕಡೆಗಳಲ್ಲಿ ಮಾರಾಟ ಮಾಡಲು ನಿರ್ಧಾರ ಮಾಡಿದ್ದಾರೆ. ಒಂದು ವೇಳೆ ಈ ಜನಾಂಗದವರು ಜಾನುವಾರುಗಳನ್ನು ಮಾರಾಟ ಮಾಡಿದರೆ ಮುಂದಿನ ದಿನಗಳಲ್ಲಿ ಅವರಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ಏಕೆಂದರೆ ಈ ಉದ್ಯೋಗ ಬಿಟ್ಟರೆ ಅವರಿಗೆ ಬೇರೆ ಯಾವುದೇ ಉದ್ಯೋಗ ಗೊತ್ತಿಲ್ಲ.

Also Read: ಒಂಟಿ ಕಾಡಾನೆ ದಾಂಧಲೆ – ಆಶಾ ಕಾರ್ಯಕರ್ತೆ ಸೇರಿದಂತೆ ಇಬ್ಬರು ಮಹಿಳೆಯರು, ಮೂರು ಹಸು ದಾರುಣ ಸಾವು

ಜಾನುವಾರುಗಳನ್ನೇ ಮಾರಾಟ ಮಾಡಿಬಿಟ್ಟರೆ ಮುಂದೆ ಏನು, ಹೇಗೆ ಅನ್ನೋದು ಅವರಿಗೆ ಗೊತ್ತಾಗೋದೇ ಇಲ್ಲ. ಇದೇ ಕಾರಣಕ್ಕೆ ತಮ್ಮ ಜಾನುವಾರುಗಳನ್ನು ಉಳಿಸಿಕೊಳ್ಳಬೇಕೆಂದರೆ ಅವರಿಗೆ ಮೇವಿನ ಅವಶ್ಯಕತೆ ಇದೆ. ಸರಕಾರ ಕೂಡಲೇ ಮೇವು ಬ್ಯಾಂಕ್ ಆರಂಭಿಸಬೇಕಿದೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರನ್ನು ಕೇಳಿದರೆ, ಇನ್ನೂ ಕೆಲ ವಾರಗಳ ಕಾಲ ಮೇವಿನ ಸಮಸ್ಯೆ ಇಲ್ಲ. ಆದರೂ ಈ ಬಗ್ಗೆ ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳೋದಾಗಿ ಹೇಳುತ್ತಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಈ ಜನಾಂಗದವರು ರಸ್ತೆ ಬದಿಯ ಮೇವು, ಅರಣ್ಯದಂಚಿನಲ್ಲಿನ ಮೇವಿನ ಮೇಲೆಯೇ ಅವಲಂಬಿತರಿದ್ದಾರೆ. ಹೀಗಾಗಿ ಅಲ್ಲಿಯೇ ಮಳೆ ಇಲ್ಲದೇ ಮೇವು ಬೆಳೆಯದೇ ಇದ್ದಿದ್ದರಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ. ಒಟ್ಟಿನಲ್ಲಿ ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಕ್ರಮ ತೆಗೆದುಕೊಳ್ಳಬೇಕಾಗಿದೆ. ಆ ಮೂಲಕ ಈ ಜನಾಂಗದವರ ಹಿತ ಕಾಪಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:11 pm, Mon, 19 February 24

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us