Padma awards 2022: ಧಾರವಾಡ ಜಿಲ್ಲೆಯ ಕೂರಿಗೆ ತಜ್ಞನಿಗೆ ಒಲಿದು ಬಂತು ಪದ್ಮಶ್ರೀ ಪುರಸ್ಕಾರ
ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ನಿವಾಸಿ ಅಬ್ದುಲ್ ಖಾದರ್ ನಡಕಟ್ಟಿನ್ಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಬಿತ್ತನೆ ಕೂರಿಗೆ ಸಂಶೋಧನೆ ಮಾಡಿದ್ದ ಅಬ್ದುಲ್ ಖಾದರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ನಡಕಟ್ಟಿನ್ ಕೂರಿಗೆ ಎಂದೇ ಖ್ಯಾತಿ ಪಡೆದಿರುವ ಇವರು, ಕೂರಿಗೆಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ರೈತ.
ಧಾರವಾಡ: ಗಣರಾಜ್ಯೋತ್ಸವದ ಮುನ್ನಾದಿನದಂದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಈ ಬಾರಿ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಧಾರವಾಡ ಜಿಲ್ಲೆಯ ಕೂರಿಗೆ ತಜ್ಞನಿಗೆ ಪದ್ಮಶ್ರೀ(Padma Shri) ಪುರಸ್ಕಾರ ಸಂದಿದೆ. ಧಾರವಾಡ(Dharwad) ಜಿಲ್ಲೆಯ ಅಣ್ಣಿಗೇರಿಯ ನಿವಾಸಿ ಅಬ್ದುಲ್ ಖಾದರ್ ನಡಕಟ್ಟಿನ್ಗೆ(Abdul Khader) ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಬಿತ್ತನೆ ಕೂರಿಗೆ ಸಂಶೋಧನೆ ಮಾಡಿದ್ದ ಅಬ್ದುಲ್ ಖಾದರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ನಡಕಟ್ಟಿನ್ ಕೂರಿಗೆ ಎಂದೇ ಖ್ಯಾತಿ ಪಡೆದಿರುವ ಇವರು, ಕೂರಿಗೆಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ರೈತ. ಬಿತ್ತನೆ ಸಮಸ್ಯೆ ಕಂಡುಕೊಂಡು ಅನುಕೂಲಕರ ಕೂರಿಗೆ ಸಂಶೋಧನೆ ಮಾಡಿದ್ದಾರೆ. ಅಲ್ಲದೇ ವಿವಿಧ ಕೃಷಿ ಸಲಕರಣೆಗಳ ಆವಿಷ್ಕಾರ ಮಾಡಿದ್ದಾರೆ.
ಧಾರವಾಡದ ಯಂತ್ರ ಸಂತನಿಗೆ ಒಲಿದು ಬಂದ ಪದ್ಮಶ್ರೀ
ಅವರು ಎಲ್ಲರಂತೆಯೇ ಬದುಕಿಬಿಟ್ಟಿದ್ದರೆ ಇವತ್ತು ಇಷ್ಟೊಂದು ಹೆಸರು ಮಾಡಲು ಸಾಧ್ಯವೇ ಇರಲಿಲ್ಲ. ಅಪ್ಪನಿಂದ ಬಂದಿದ್ದ ಸಾಕಷ್ಟು ಆಸ್ತಿ ಜೊತೆಗಿತ್ತು. ಕೈಯಲ್ಲಿ ಸಾಕಷ್ಟು ಹಣವೂ ಇತ್ತು. ಕಣ್ಣು ಹಾಯಿಸಿದಷ್ಟು ಭೂಮಿಯೂ ಇತ್ತು. ಆದರೆ ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ಮಾತ್ರ ಏನಾದರೂ ಹೊಸದನ್ನು ಸಾಧಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕೆನ್ನುವ ಆಸೆ ಚಿಮ್ಮುತ್ತಲೇ ಇತ್ತು. ಅಂದು ಆರಂಭವಾದ ಆ ಹುಚ್ಚು ಇಂದಿಗೂ ಮುಂದುವರೆದಿದೆ. ಅದರೊಂದಿಗೆ ಅವರು ರೈತರಿಗಾಗಿ ಮಾಡಿರೋ ಹಲವಾರು ಬಗೆಯ ಉಪಕರಣಗಳು ಇದೀಗ ರೈತರ ಜೀವನಮಟ್ಟವನ್ನು ಸುಧಾರಿಸಿವೆ. ಅಂಥ ರೈತ ಎಂಜಿನೀಯರ್ಗರ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದೆ.
ಅಣ್ಣಿಗೇರಿಯ ಹುಚ್ಚು ಇಂಜಿನೀಯರ್ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಸಾಧಕ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಪಟ್ಟಣದಲ್ಲಿ ನೀವು ಯಾವುದೇ ಭಾಗಕ್ಕೆ ಹೋಗಿ, ಇಲ್ಲಿ ಹುಚ್ಚು ಇಂಜಿನೀಯರ್ ಮನೆ ಎಲ್ಲಿ ಎಂದು ಕೇಳಿದರೆ ಸಾಕು, ಅದರ ವಿಳಾಸ ಹೇಳುತ್ತಾರೆ. ದೂರದೂರಿನಿಂದ ನಿತ್ಯವೂ ನೂರಾರು ಜನರು ಅಣ್ಣಿಗೇರಿಗೆ ಬಂದರೂ ಅದರಲ್ಲಿ ಬಹುತೇಕರು ಬರೋದು ಈ ಹುಚ್ಚ ಇಂಜಿನೀಯರ್ನನ್ನು ನೋಡಲು ಹಾಗೂ ಅವರೊಂದಿಗೆ ಕೆಲ ಕಾಲ ಕಳೆಯಲು. ಅಂಥ ಇಂಜಿನೀಯರ್ ನವಲಗುಂದ ರಸ್ತೆಯ ಬನಶಂಕರಿ ಬಡಾವಣೆಯಲ್ಲಿದೆ. ಅಲ್ಲಿಗೆ ಹೋಗುತ್ತಲೇ ದೊಡ್ಡ ಶೆರ್ವೊಂದು ಕಾಣುತ್ತದೆ. ಅದರೊಳಗೆ ಹೋಗುತ್ತಿದ್ದಂತೆಯೇ ಹಲವಾರು ಯಂತ್ರಗಳು ಕಣ್ಣಿಗೆ ಬೀಳುತ್ತವೆ. ಹಾಗೆಯೇ ಮತ್ತಷ್ಟು ಮುಂದೆ ಹೋದರೆ ಬಿಳಿ ಬಟ್ಟೆ ಧರಿಸಿ, ಕೈಯಲ್ಲಿ ಎಲೆಯಡಿಕೆ ಇಟ್ಟುಕೊಂಡು ಕುಳಿತಿರೋ ಆಸಾಮಿ ಕಣ್ಣಿಗೆ ಬೀಳುತ್ತಾರೆ. ಅವರೇ ಎಲ್ಲರೂ ಹುಡುಕುತ್ತಾ ಹೋದ ಹುಚ್ಚ ಇಂಜಿನೀಯರ್. ಹೌದು ಇವರ ಹೆಸರು ಅಬ್ದುಲ್ ಖಾದರ್ ನಡಕಟ್ಟಿನ್. ವಯಸ್ಸು 69 ವರ್ಷ. ಅಷ್ಟಕ್ಕೂ ಇವರಿಗೆ ಹುಚ್ಚು ಇಂಜಿನೀಯರ್ ಅಂತಾ ಕರೆಯುವುದಕ್ಕೆ ಕಾರಣವೂ ಇದೆ. ಅದರ ವಿವರ ಇಲ್ಲಿದೆ.
ಚಿಕ್ಕವರಿದ್ದಾಗಲೇ ಅಬ್ದುಲ್ ಖಾದರ್ ಅವರ ಮನಸ್ಸು ಹೊಸ ಹೊಸ ವಿಚಾರಗಳತ್ತಲೇ ಹರಿಯುತ್ತಿತ್ತು. ಎಸ್ಎಸ್ಎಲ್ಸಿ ಆದ ಬಳಿಕ ಮುಂದೆ ಓದಲು ಹೋಗದಂತೆ ತಂದೆ ತಕರಾರು ತೆಗೆದರು. ಹೆಚ್ಚಿಗೆ ಓದಿದರೆ ಪೂರ್ವಜರಿಂದ ಬಂದಿರೋ ಆಸ್ತಿಯನ್ನು ನೋಡಿಕೊಳ್ಳಲು ಯಾರೂ ಇರೋದೇ ಇಲ್ಲ. ತಂದೆಗೆ ಇವರೊಬ್ಬರೇ ಮಗ. ಹೀಗಾಗಿ ಎಲ್ಲಿಯೂ ಹೋಗದಂತೆ ತಡೆಯೋದು ಇದರ ಹಿಂದೆ ಇರೋ ಉದ್ದೇಶವಾಗಿತ್ತು. ಆದರೂ ಮನೆಯಲ್ಲಿ ಜಗಳವಾಡಿ ಪಿಯುಸಿಗೆ ಪ್ರವೇಶ ಪಡೆದರು. ಆದರೆ ಮನೆಯಲ್ಲಿ ತಂದೆಯ ಕಿರಿಕಿರಿ ಹೆಚ್ಚಾದ ಹಿನ್ನೆಲೆಯಲ್ಲಿ ಓದನ್ನು ಅಲ್ಲಿಗೇ ನಿಲ್ಲಿಸಿದರು. ಸೀದಾ ಊರಿಗೆ ಬಂದು ಕೃಷಿಯಲ್ಲಿ ತೊಡಗಿಕೊಂಡರು. ಎಲ್ಲರಂತೆ ಇವರೂ ಕೃಷಿ ಶುರು ಮಾಡಿದರಾದರೂ, ಅದರಲ್ಲಿ ಹೊಸತನವನ್ನು ಕಂಡುಕೊಂಡರು. ವಿದ್ಯಾರ್ಥಿಯಾಗಿದ್ದಾಗಲೇ ನಸುಕಿನಲ್ಲಿ ಏಳಲು ಕೂಗೋ ಅಲಾರಾಂನ ಶಬ್ದದೊಂದಿಗೆ ಮುಖದ ಮೇಲೆ ನೀರು ಬೀಳುವಂಥಾ ಯಂತ್ರವನ್ನು ಕಂಡು ಹಿಡಿದಿದ್ದರು. ಯಾವಾಗ ಅವರು ಕೃಷಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರೋ ಆಗ ಅವರಿಗೆ ತಮ್ಮಲ್ಲಿರೋ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಸಿಕ್ಕಿತು. ಮೊದಲ ಬಾರಿಗೆ ಅವರು ಕೈ ಹಾಕಿದ್ದು ಹುಣಸೇ ಗಿಡಗಳ ಪ್ರಯೋಗಕ್ಕೆ.
ಹುಣಸೆ ಹಣ್ಣಿನಲ್ಲಿನ ಬೀಜ ಪ್ರತ್ಯೇಕಿಸುವ ಯಂತ್ರದ ಆವಿಷ್ಕಾರ
ಸಾಮಾನ್ಯವಾಗಿ ಹುಣಸೆ ಗಿಡವನ್ನು ಹೊಲಗಳ ಬದುವಿನಲ್ಲಿ ಅಲ್ಲೊಂದು ಇಲ್ಲೊಂದು ಬೆಳೆಸುತ್ತಾರೆ. ಆದರೆ ಇವರು ತಮ್ಮ ಕೃಷಿ ಜಮೀನಿನ ಹಲವಾರು ಎಕರೆಗಳಲ್ಲಿ ನೂರಾರು ಹುಣಸೆ ಗಿಡ ಬೆಳೆಸಿದ್ದರು. ಮೂರ್ನಾಲ್ಕು ವರ್ಷಗಳಲ್ಲಿ ಹಣ್ಣು ಬಿಟ್ಟ ಗಿಡಗಳಿಂದ ನಡಕಟ್ಟಿನ್ ಕುಟುಂಬಕ್ಕೆ ಆದಾಯ ಬರುವ ಮುನ್ಸೂಚನೆ ಸಿಕ್ಕಿತು. ಆದರೆ ಸಮಸ್ಯೆ ಉದ್ಭವವಾಗಿದ್ದು ಅಷ್ಟೊಂದು ಗಿಡಗಳಲ್ಲಿ ಬಿಟ್ಟ ಹುಣಸೆ ಹಣ್ಣಿನಲ್ಲಿರುವ ಬೀಜವನ್ನು ಹೊರ ತೆಗೆಯೋದು. ನೂರಾರು ಕೂಲಿ ಕಾರ್ಮಿಕರು ಕುಳಿತು ತೆಗೆದರೂ ಅದು ಅಷ್ಟೊಂದು ಸುಲಭವಾಗಿರಲಿಲ್ಲ. ಆಗ ಅವರ ತಾಯಿ ಹುಣಸೆ ಗಿಡಗಳನ್ನು ನೆಟ್ಟಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಅಬ್ದುಲ್ ನಡಕಟ್ಟಿನ್ ಕೆಲವೇ ದಿನಗಳಲ್ಲಿ ಹುಣಸೇ ಹಣ್ಣಿನಲ್ಲಿರೋ ಬೀಜವನ್ನು ಪ್ರತ್ಯೇಕಿಸೋ ಯಂತ್ರವೊಂದನ್ನು ಆವಿಷ್ಕಾರ ಮಾಡಿಬಿಟ್ಟರು. ಇದರಿಂದ ತಾಯಿ ಸಾಕಷ್ಟು ಖುಷಿಯಾದರು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನೂರಾರು ಹುಣಸೆ ಗಿಡಗಳಿಂದ ಒಬ್ಬನೇ ವ್ಯಕ್ತಿ ಟ್ರ್ಯಾಕ್ಟರ್ ಮೂಲಕ ಹುಣಸೆ ಹಣ್ಣನ್ನು ಹರಿಯಬಲ್ಲ ಯಂತ್ರವನ್ನೂ ಸಂಶೋಧಿಸಿ, ಎಲ್ಲರಿಗೂ ಅಚ್ಚರಿ ಮೂಡಿಸಿದರು.
ಸುಮ್ಮನೇ ಒಂದು ಕಡೆ ಕೂರದ ವ್ಯಕ್ತಿ ಅಬ್ದುಲ್ ನಡಕಟ್ಟಿನ್
ಯಾವಾಗ ಹುಣಸೆ ಯಂತ್ರ ಯಶಸ್ವಿಯಾಯಿತೋ ಅಬ್ದುಲ್ ಖಾದರ್ ಸುಮ್ಮನೇ ಕೂರಲಿಲ್ಲ. ಅದಾಗಲೇ ಕೃಷಿಯಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ರೈತರನ್ನು ಕಾಡತೊಡಗಿತ್ತು. ಒಂದು ಕಡೆ ಕೂಲಿ ಅರಸಿ ನಗರಕ್ಕೆ ಹೋಗೋ ಕಾರ್ಮಿಕರು, ಕೃಷಿಯತ್ತ ಮುಖ ಮಾಡೋದನ್ನೇ ಬಿಟ್ಟಿದ್ದರು. ಹೀಗಾಗಿ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕೋದು ಹೆಚ್ಚಾಗತೊಡಗಿತ್ತು. ಕೂಲಿ ಕಾರ್ಮಿಕರಿಲ್ಲದೇ ಕೃಷಿ ಮಾಡೋದು ಕಷ್ಟವಾದ ಹಿನ್ನೆಲೆಯಲ್ಲಿ ರೈತರು ಕೃಷಿಯಿಂದ ವಿಮುಖರಾಗತೊಡಗಿದ್ದರು. ಇದು ಸ್ವತಃ ನಡಕಟ್ಟಿನ್ ಅನುಭವಕ್ಕೆ ಬರುತ್ತಿದ್ದಂತೆಯೇ ಯಂತ್ರಗಳ ಮೂಲಕವೇ ಕೃಷಿ ಮಾಡೋದೇ ಒಳ್ಳೆಯದು ಎಂದು ಭಾವಿಸಿದರು.
ಸ್ವತಃ ಕೃಷಿಕನೂ ಆಗಿರೋ ಹಿನ್ನೆಲೆಯಲ್ಲಿ ನಡಕಟ್ಟಿನ್ ಅವರಿಗೆ ಸಮಸ್ಯೆಯ ಮೂಲ ಗೊತ್ತಿತ್ತು. ವರ್ಷದಿಂದ ವರ್ಷಕ್ಕೆ ಇಳುವರಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗೋದನ್ನು ಅವರು ತಮ್ಮದೇ ಅನುಭವದಿಂದ ಕಂಡುಕೊಂಡಿದ್ದರು. ಹೀಗಾಗಿ ಮೊದಲಿಗೆ ಭೂಮಿಯ ಫಲವತ್ತತೆ ಬಗ್ಗೆ ಗಮನ ಹರಿಸಿ, ಫಲವತ್ತತೆ ಹೆಚ್ಚಿಸಲು ಏನು ಮಾಡಬೇಕೆಂದು ಯೋಚಿಸಿದರು. ಆಗ ಅವರ ತಲೆಯಲ್ಲಿ ಹೊಳೆದದ್ದೇ ರೋಟೋವೇಟರ್. ಬೆಳೆ ಬಂದ ಮೇಲೆ ಬೆಳೆಗಳ ಕಾಂಡವನ್ನು ಕಿತ್ತಿ, ರೈತರು ಸುಟ್ಟು ಹಾಕುತ್ತಾರೆ. ಆದರೆ ಅದನ್ನೇ ಗೊಬ್ಬರದಂತೆ ಬಳಸಿದರೆ ಹೇಗೆ ಅನ್ನೋ ವಿಚಾರ ತಲೆಯಲ್ಲಿ ಮೂಡುತ್ತಿದ್ದಂತೆಯೇ ಟ್ರ್ಯಾಕ್ಟರ್ ಅಳವಡಿಸಬಹುದಾದ ರೋಟೋವೇಟರ್ ಅನ್ನು ಸಂಶೋಧನೆ ಮಾಡಿದರು.
ಇದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಯಿತು. ಆದರೆ ಅದರ ಫಲಿತಾಂಶ ಮಾತ್ರ ಅದ್ಭುತವಾಗಿತ್ತು. ಮೆಣಸಿನ ಗಿಡ, ಹತ್ತಿ ಗಿಡ, ಜೋಳ, ಮೆಕ್ಕೆ ಜೋಳದ ಕಟ್ಟಿಗೆಯನ್ನು ಪುಡಿ ಪುಡಿ ಮಾಡುವುದರಿಂದ ಅದೇ ಗೊಬ್ಬರವಾಗಿ ಭೂಮಿಯಲ್ಲಿ ಬೆರೆತು ಹೋಗುತ್ತದೆ. ಇದರಿಂದಾಗಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಹೀಗೆ ನಡಕಟ್ಟಿನ್ ಅವರ ಕೃಷಿ ಯಂತ್ರ ಸಂಶೋಧನೆಯ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು.
ಒಂದು ಕಡೆ ಕೃಷಿ ಯಂತ್ರದ ಸಂಶೋಧನೆಯೇನೋ ಚೆನ್ನಾಗಿಯೇ ನಡೆದಿತ್ತು. ತಮ್ಮ ಮನೆಯ ಹೊರಭಾಗದಲ್ಲಿ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರ ಎಂದು ನಾಮ ಫಲಕವನ್ನೂ ಹಾಕಿದ ನಡಕಟ್ಟಿನ್, ಮತ್ತಷ್ಟು ಹೊಸ ಹೊಸ ಸಂಶೋಧನೆಗಳತ್ತ ಗಮನ ಹರಿಸಿದರು. ಆದರೆ ಆಗಲೇ ಅವರಿಗೆ ಸಮಸ್ಯೆ ಆಗಿದ್ದು. ಅದಾಗಲೇ ಹಲವಾರು ಯಂತ್ರಗಳನ್ನು ತಯಾರಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ನಡಕಟ್ಟಿನ್, ಸಾಲವನ್ನು ತೀರಿಸಲು ತಂದೆಯಿಂದ ಬಂದಿದ್ದ ಭೂಮಿಯನ್ನು ಮಾರತೊಡಗಿದ್ದರು. ಅವರ ಈ ಯಂತ್ರಗಳ ಸಂಶೋಧನೆಯ ಹುಚ್ಚು ಎಲ್ಲಿಯರವರೆಗೆ ಬಂತು ಅಂದರೆ ಸುಮಾರು 40 ಎಕರೆಯಷ್ಟು ಭೂಮಿಯನ್ನು ಅವರು ಮಾರಿದ್ದರು. ಅಷ್ಟೊತ್ತಿಗಾಗಲೇ ಸಾಕಷ್ಟು ಯಂತ್ರಗಳನ್ನು ತಯಾರಿಸಿದ್ದರೂ, ಅವುಗಳು ರೈತರನ್ನು ಮುಟ್ಟಲು ಸಾಧ್ಯವೇ ಆಗಿರಲಿಲ್ಲ.
ಇನ್ನೊಂದು ಕಡೆ ಹಲವಾರು ಕೃಷಿ ಸಚಿವರು, ಶಾಸಕರು ಇವರ ಬಳಿ ಬಂದು ಯಂತ್ರವನ್ನು ನೋಡಿ ಹೋದರೂ ಅವರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟೊತ್ತಿಗಾಗಲೇ ನಡಕಟ್ಟಿನ್ ಸೋತು ಸುಣ್ಣವಾಗಿ ಹೋಗಿದ್ದರು. ಕೊನೆಗೆ ಒಂದು ದಿನ ತಮಗೆ ಸರಕಾರದ ಸಹಾಯ ಸಿಗೋದಿಲ್ಲ ಅನ್ನೋ ನೋವಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಹೋದರು. ಇದನ್ನು ಗಮನಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಗಿನ ಕುಲಪತಿ ಡಾ. ಎಸ್.ಎ. ಪಾಟೀಲ್, ತಮ್ಮ ಕಚೇರಿಗೆ ಇವರನ್ನು ಕರೆಯಿಸಿಕೊಂಡು, ಬುದ್ಧಿವಾದ ಹೇಳಿದ್ದರು. ಕೃಷಿ ಚಟುವಟಿಕೆಗೆ ಬೇಕಾದ ಮತ್ತಷ್ಟು ಯಂತ್ರಗಳನ್ನು ಸಂಶೋಧಿಸುವಂತೆಯೂ ಅವರು ಸಲಹೆ ನೀಡಿದರು. ಅವರ ಬುದ್ಧಿವಾದದಿಂದ ಎಚ್ಚೆತ್ತುಕೊಂಡ ನಡಕಟ್ಟಿನ್ ಕೈ ಹಾಕಿದ್ದು ಕೂರಿಗೆ ಯಂತ್ರಕ್ಕೆ.
ಕೂರಿಗೆ ಯಂತ್ರವೇ ಇವರ ದೊಡ್ಡ ಸಂಶೋಧನೆ
ಮಳೆಗಾಲ ಬರುತ್ತಿದ್ದಂತೆಯೇ ರೈತರು ಕೃಷಿ ಚಟುವಟಿಕೆ ಶುರು ಮಾಡುತ್ತಾರೆ. ಒಮ್ಮೆಲೇ ಎಲ್ಲರೂ ಕೃಷಿ ಚಟುವಟಿಕೆ ಶುರು ಮಾಡೋದ್ರಿಂದಾಗಿ ಎತ್ತುಗಳ ಹಾಗೂ ಕೂಲಿ ಕಾರ್ಮಿಕರಿಗೆ ಭಾರೀ ಬೇಡಿಕೆ ಬಂದು ಬಿಡುತ್ತದೆ. ಇನ್ನು ಹೆಚ್ಚು ಹೊಲ ಇದ್ದವರ ಪಾಡಂತೂ ಹೇಳತೀರದು. ಹೊಲ ಸಮತಟ್ಟು ಮಾಡಲು, ಊಳಲು ಯಂತ್ರಗಳನ್ನು ಬಳಸಿಕೊಳ್ಳಬಹುದು. ಆದಾದ ಬಳಿಕ ಬಿತ್ತನೆ ಮಾಡಲು ಎತ್ತುಗಳ ಅಥವಾ ಕೃಷಿ ಕೂಲಿ ಕಾರ್ಮಿಕರ ಅವಶ್ಯಕತೆ ಇದ್ದೇ ಇರುತ್ತೆ. ಇದನ್ನು ಗಮನಿಸಿದ ನಡಕಟ್ಟಿನ್, ರೈತರಿಗೆ ಅತ್ಯವಶ್ಯಕವಾದ ಕೂರಿಗೆ, ಅಂದರೆ ಬಿತ್ತನೆ ಮಾಡೋ ಯಂತ್ರವನ್ನು ಕಂಡು ಹಿಡಿಯಬೇಕೆಂದು ನಿರ್ಧರಿಸಿದರು. ಆದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಏಕೆಂದರೆ ಬೇರೆ ಬೇರೆ ಬೆಳೆಗಳಿಗೆ ಮಧ್ಯದಲ್ಲಿನ ಅಂತರವೂ ಬೇರೆ ಬೇರೆಯಾಗಿರುತ್ತದೆ.
ಇನ್ನು ಬೀಜವನ್ನು ಭೂಮಿಯಲ್ಲಿ ಬಿತ್ತುವಾಗ ತುಂಬಾನೇ ಹುಷಾರಾಗಿಯೇ ಕೆಲಸ ಮಾಡಬೇಕಾಗುತ್ತದೆ. ಇದೆಲ್ಲವನ್ನು ಕಾರ್ಮಿಕರ ಕೈಯಿಂದ ಮಾಡಿಸಿದರೆ ಉತ್ತಮ. ಆದರೆ ಅದನ್ನು ಯಂತ್ರವೊಂದು ಮಾಡುತ್ತದೆ ಅನ್ನೋ ಕಲ್ಪನೆಯೇ ಒಂದು ವಿಚಿತ್ರ. ಅಂಥ ಕಲ್ಪನೆಯನ್ನು ಸಾಕಾರಗೊಳಿಸಲು ಅಬ್ದುಲ್ ಖಾದರ್ ಸಿದ್ಧವಾಗಿದ್ದರು. ಅದು ಅವರ ಜೀವಮಾನದ ಶ್ರೇಷ್ಠ ಸಂಶೋಧನೆಯಷ್ಟೇ ಅಲ್ಲ, ತಮ್ಮ ಜೀವನದ ಕೊನೆಯ ಸಂಶೋಧನೆ ಅಂತಾನೂ ಅವರು ನಂಬಿದ್ದರು. ಆರು ತಿಂಗಳ ಕಾಲ ಹಗಲು-ರಾತ್ರಿ ಯೋಚಿಸಿ, ಅದಕ್ಕೊಂದು ರೂಪ ನೀಡಿದರು. ಅದೇ ಇವತ್ತು ದಕ್ಷಿಣ ಭಾರತಾದ್ಯಂತ ಪ್ರಸಿದ್ಧಿಯಾಗಿರೋ “ನಡಕಟ್ಟಿನ್ ಕೂರಿಗೆ”. ಆದರೆ ಆಗ ಮತ್ತೊಂದು ಸಮಸ್ಯೆ ಉದ್ಭವವಾಗಿತ್ತು.
ಬಿತ್ತನೆ ಬೀಜಗಳು ಯಂತ್ರದ ಮೇಲ್ಭಾಗದಲ್ಲಿರೋ ಸಂಗ್ರಹಗಾರದಿಂದ ಪೈಪ್ಗಳಿಗೆ ಇಳಿಯುವಾಗ ಅದಕ್ಕೆ ಸಹಾಯ ಮಾಡೋ ಡ್ರಮ್ಗಳಿಂದ ಕಾಳುಗಳಿಗೆ ಧಕ್ಕೆಯಾಗುತ್ತಿತ್ತು. ಕಾಳುಗಳ ಮೂಗು ಒಡೆದು ಹೋಗುತ್ತಿತ್ತು. ಇದರಿಂದಾಗಿ ಇಂಥ ಕಾಳುಗಳನ್ನು ಬಿತ್ತನೆ ಮಾಡಿದರೆ, ಮೊಳಕೆಯೊಡೆಯೋ ಪ್ರಮಾಣ ಕಡಿಮೆಯಾಗುತ್ತಿತ್ತು. ಇದನ್ನ ಗಮನಿಸಿದ ನಡಕಟ್ಟಿನ್, ಇನ್ನೇನು ತನ್ನ ಶ್ರಮವೆಲ್ಲಾ ವ್ಯರ್ಥವಾಯಿತು ಎಂದು ಚಿಂತೆಗೆ ಬಿದ್ದರು. ಆದರೆ ಅದೊಂದಿನ ಸ್ಪಂಜಿನ ತಲೆದಿಂಬಿನ ಮೇಲೆ ಮಲಗಿದ್ದ ಅವರಿಗೆ ಪ್ಲಾಸ್ಟಿಕ್ ಅಥವಾ ಲೋಹದ ಡ್ರಮ್ಗಳ ಬದಲು ಸ್ಪಂಜಿನಿಂದ ತಯಾರಿಸಿದ ಡ್ರಮ್ ಬಳಸೋದೇ ಸರಿಯಾದ ಕ್ರಮ ಎಂದು ತಿಳಿಯುತ್ತಿದ್ದಂತೆಯೇ ರಾತ್ರಿಯಿಡಿ ಕುಳಿತು ಅದನ್ನು ಕಾರ್ಯರೂಪಕ್ಕೆ ತಂದರು. ಬೆಳಗಿನ ಹೊತ್ತಿಗೆ ಅವರ ಕನಸಿನ ಕೂರಿಗೆ ಸಿದ್ಧವಾಗಿತ್ತು. ಅದು ಅವರ ಜೀವನವನ್ನೇ ಬದಲಿಸಿತು. ಅದೇ ಇಂದು ಹಲವಾರು ರಾಜ್ಯಗಳ ರೈತರ ಪಾಲಿನ ಸಂಜೀವಿನಿಯಾಗಿದೆ ಅಂದರೆ ತಪ್ಪಾಗಲಾರದು.
ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ಉಳಿಸಿದ ನಡಕಟ್ಟಿನ್
ಯಾವಾಗ ಕೂರಿಗೆ ಯಂತ್ರ ಯಶಸ್ಸು ಸಾಧಿಸಿತೋ ಕೂಡಲೇ ನಡಕಟ್ಟಿನ್ ಪೇಟೆಂಟ್ ಪಡೆದರು. ಅಷ್ಟೇ ಅಲ್ಲ, ಅವುಗಳನ್ನು ಸ್ವತಃ ತಾವೇ ಮಾರಾಟ ಮಾಡಲು ನಿರ್ಧರಿಸಿದರು. ಏಕೆಂದರೆ ರೈತರಿಗೆ ಮಧ್ಯವರ್ತಿಗಳಿಂದಾಗಿ ಹೆಚ್ಚಿನ ಹೊರೆಯಾಗೋ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ತಾವೇ ಅತ್ಯಂತ ಕಡಿಮೆ ಬೆಲೆಯಲ್ಲಿ ಅವುಗಳನ್ನು ಮಾರಲು ಶುರು ಮಾಡಿದರು. ಮುಂದೆ ಇದೇ ಯಂತ್ರವನ್ನು ಮತ್ತೆ ಅಭಿವೃದ್ಧಿಪಡಿಸಿದ ನಡಕಟ್ಟಿನ್, ಒಂದೇ ಯಂತ್ರದಲ್ಲಿ ಒಂದೇ ವೇಳೆಗೆ ಬೇರೆ ಬೇರೆ ಬೀಜಗಳನ್ನು ಬಿತ್ತಲು ಸಾಧ್ಯವಾಗುವಂತೆ ಮಾಡಿದರು. ಇದಂತೂ ರೈತರ ಪಾಲಿಗೆ ದೊಡ್ಡ ವರದಾನವೇ ಆಗಿ ಹೋಯಿತು. ಈ ಯಂತ್ರದಿಂದ ಮಿಶ್ರ ಬೆಳೆ ಪದ್ಧತಿಗೆ ಹಾಗೂ ಹತ್ತಾರು ಎಕರೆ ಜಮೀನನ್ನು ಟ್ರ್ಯಾಕ್ಟರ್ ಸಹಾಯದಿಂದ ಒಬ್ಬನೇ ಒಬ್ಬ ವ್ಯಕ್ತಿ ಬಿತ್ತನೆ ಮಾಡಲು ಸಾಧ್ಯವಾಯಿತು. ಇಂಥ ಯಂತ್ರಗಳನ್ನು ಪ್ರತಿವರ್ಷ ಸಾವಿರಾರು ರೈತರು ಖರೀದಿಸುತ್ತಿದ್ದಾರೆ. ಇನ್ನು ಕೂರಿಗೆಯಲ್ಲಿನ ಬ್ಲೇಡ್ಅನ್ನು ತಮ್ಮ ವರ್ಕ್ ಶಾಪ್ನಲ್ಲಿಯೇ ಚೂಪಾಗಿ ಮಾಡಿಕೊಡುತ್ತಾರೆ. ಮೊಂಡಾದ ಕೂರಿಗೆ ಬ್ಲೇಡ್ನಿಂದಾಗಿ ರೈತರಿಗೆ ಭಾರೀ ಸಮಸ್ಯೆಯಾಗುತ್ತದೆ. ಅವುಗಳನ್ನು ಸರಿಪಡಿಸಲು ಕೂಡ ತಾವೇ ಯಂತ್ರವೊಂದನ್ನು ಸಂಶೋಧಿಸಿದ್ದು, ಅತ್ಯಾಧುನಿಕ ತಾಂತ್ರಿಕತೆ ಮೂಲಕ ಇವರುಗಳನ್ನು ಸರಿ ಮಾಡಿಕೊಡುತ್ತಾರೆ. ಇದಕ್ಕೆ ಅವರು ತೆಗೆದುಕೊಳ್ಳೋ ದರ ತೀರಾನೇ ಕಡಿಮೆ. ದಿನಾಲೂ ನೂರಾರು ರೈತರು ಬಂದು ಬ್ಲೇಡ್ಗಳನ್ನು ಸರಿ ಮಾಡಿಸಿಕೊಂಡು ಹೋಗುತ್ತಾರೆ.
ಟ್ರ್ಯಾಕ್ಟರ್ ಕ್ರೇನ್ ಆಗಿ ರೂಪಾಂತರವಾಯಿತು
ಬಹು ಮುಖ್ಯವಾಗಿ ರೈತರಿಗೆ ಬೇಕಾಗಿದ್ದು ದೊಡ್ಡ ದೊಡ್ಡ ಸಾಮಾನುಗಳನ್ನು ಎತ್ತಲು ಕ್ರೇನ್. ಆದರೆ ಅದನ್ನು ಖರೀದಿಸಿ ತರೋದು ಕಷ್ಟಕರ. ಆದರೆ ನಡಕಟ್ಟಿನ್ ಅದಕ್ಕೂ ಒಂದು ಉಪಾಯ ಮಾಡಿದರು. ರೈತರ ಬಳಿ ಇರೋ ಟ್ರ್ಯಾಕ್ಟರ್ಗೆ ಸಿಲೆಂಡರ್ ಜೋಡಿಸಿ, ಮನೆಯಲ್ಲಿರೋ ಟ್ರ್ಯಾಕ್ಟರ್ ಅನ್ನು ಕ್ರೇನ್ ಥರಾ ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ಈ ಜೋಡಣೆ ಮಾಡಿರೋದು ರೈತರಿಗೆ ವರದಾನವಾಗಿದೆ. ಯಾವಾಗಲೂ ರೈತರ ಬಗ್ಗೆಯೇ ಯೋಚಿಸೋ ನಡಕಟ್ಟಿನ್ ನೀರು ಕೊಯ್ಲು ನಿರ್ವಹಣೆ ಬಗ್ಗೆಯೂ ತಲೆ ಕೆಡಿಸಿಕೊಂಡರು. ಹಲವಾರು ಕಡೆಗಳಲ್ಲಿ ಈ ಪ್ರಾತ್ಯಕ್ಷಿಕೆ ನೋಡಿದರೂ ಅವರಿಗೆ ಯಾವುದೂ ಸರಿ ಬಾರದ ಹಿನ್ನೆಲೆಯಲ್ಲಿ ತಮ್ಮದೇ ಆಲೋಚನೆಯಿಂದ ಹೊಸ ಬಗೆಯ ನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಅದೂ ಕೂಡ ಭಾರೀ ಯಶಸ್ಸು ಕಂಡಿದೆ.
ಒಂದೇ ಕೂರಿಗೆಯಲ್ಲಿ ಐದು ಕೆಲಸ
ನಿರಂತರವಾಗಿ ಅನ್ವೇಷಣೆ ಮಾಡುತ್ತಾ ಹೋದ ನಡಕಟ್ಟಿನ್ ಅವರು, ಮತ್ತೊಂದು ದೊಡ್ಡ ಸಾಹಸಕ್ಕೆ ಕೈಹಾಕಿ, ಅದರಲ್ಲಿ ಅದರಲ್ಲಿ ಯಶಸ್ವಿಯೂ ಆದರು. ಒಂದೇ ಯಂತ್ರದ ಮೂಲಕ ಐದು ಕೆಲಸಗಳನ್ನು ಒಬ್ಬನೇ ಮಾಡಬಹುದು ಅನ್ನೋ ಯೋಚನೆ ಬಂದು, ಅದರ ಸಂಶೋಧನೆಯನ್ನೂ ಮಾಡಿ ರೈತರ ಪ್ರೀತಿಗೆ ಪಾತ್ರರಾದರು. ಫೈವ್ ಇನ್ ಒನ್ ಕೂರಿಗೆ ಅನ್ನೋ ಹೆಸರಿನ ಈ ಯಂತ್ರದ ಮೂಲಕ ಒಂದೇ ಬಾರಿಗೆ ಊಳುತ್ತಾ, ಬಿತ್ತುತ್ತಾ, ಗೊಬ್ಬರವನ್ನೂ ಅದಕ್ಕೆ ಸೇರಿಸಿ, ಮೇಲೆ ಮಣ್ಣು ಮುಚ್ಚಿ, ನೀರು ಸಿಂಪರಣೆಯನ್ನು ಏಕಕಾಲಕ್ಕೆ ಮಾಡಬಹುದು. ಇದರಿಂದ ಎರಡು ದಿನಗಳಲ್ಲಿ ಹತ್ತಾರು ಆಳುಗಳು ಮಾಡೋ ಕೆಲಸವನ್ನು ಕೆಲವೇ ಗಂಟೆಗಳಲ್ಲಿ ಮಾಡಬಹುದಾಗಿದೆ. ಇದು ಕೂಡ ಅವರ ಕನಸಿನ ಕೂಸು.
ರೈತರು ಬಂದು ತಮ್ಮ ಸಮಸ್ಯೆ ಹೇಳಿಕೊಂಡರೆ ಅಲ್ಲೊಂದು ಯಂತ್ರ ರೆಡಿ
ಇನ್ನು ಕಬ್ಬು ನಾಟಿ ಮಾಡಲು ಕೂಲಿ ಕಾರ್ಮಿಕರ ಸಮಸ್ಯೆ ಎದುರಾದಾಗ ರಾಜ್ಯದ ಬೇರೆ ಬೇರೆ ಕಡೆಗಳಿಂದ ಬಂದಿದ್ದ ರೈತರು ಅದಕ್ಕೊಂದು ಯಂತ್ರವನ್ನು ತಯಾರಿಸುವಂತೆ ನಡಕಟ್ಟಿನ್ ಅವರ ಬಳಿ ಮನವಿ ಮಾಡಿಕೊಂಡರು. ತಮಗೆ ಕಬ್ಬು ಬೆಳೆಯೋದು ಗೊತ್ತಿಲ್ಲ. ಅದರ ಸಮಸ್ಯೆಯೂ ಗೊತ್ತಿಲ್ಲ ಅಂತಾ ಅವರು ಸುಮ್ಮನಾಗಿಬಿಟ್ಟರು. ಆದರೆ ಎಲ್ಲೇ ಹೋದರೂ ಕಬ್ಬು ಬೆಳೆಗಾರರು ತಮ್ಮ ಸಮಸ್ಯೆಯನ್ನು ಹೇಳಿ, ಅದನ್ನು ಸಂಶೋಧಿಸಿ ನೀಡುವಂತೆ ದುಂಬಾಲು ಬಿದ್ದರು. ಅದನ್ನು ಗಂಭೀರವಾಗಿ ತೆಗೆದುಕೊಂಡ ನಡಕಟ್ಟಿನ್, ನಾಲ್ಕೇ ತಿಂಗಳಲ್ಲಿ ಈ ಯಂತ್ರವನ್ನು ತಯಾರಿಸಿಬಿಟ್ಟರು. ಹತ್ತಾರು ಆಳುಗಳು ಇಡೀ ದಿನ ಮಾಡೋ ಕೆಲಸವನ್ನು ಟ್ರ್ಯಾಕ್ಟರ್ಗೆ ಅಳವಡಿಸಬಹುದಾದ ಈ ಯಂತ್ರ ಕೆಲವೇ ಗಂಟೆಗಳಲ್ಲಿ ಮಾಡಿ ಮುಗಿಸುತ್ತದೆ. ಅಷ್ಟೇ ಅಲ್ಲ, ಮನುಷ್ಯನಿಗಿಂತಲೂ ಅದ್ಭುತವಾಗಿ ನಾಟಿ ಮಾಡುತ್ತದೆ. ಇದೀಗ ಈ ಯಂತ್ರಕ್ಕೆ ನಮ್ಮ ರಾಜ್ಯ ಸೇರಿದಂತೆ ಮಹಾರಾಷ್ಟ್ರದಲ್ಲಿ ಭಾರೀ ಬೇಡಿಕೆ ಇದೆ.
ಯಂತ್ರಾಗಾರಕ್ಕೆ ನಿತ್ಯವೂ ನೂರಾರು ರೈತರ ಭೇಟಿ
ಅನೇಕ ಅಚ್ಚರಿಯ ಗೂಡಾಗಿರುವ ನಡಕಟ್ಟಿನ್ ಅವರ ಯಂತ್ರಾಗಾರಕ್ಕೆ ದಿನಾಲೂ ನೂರಾರು ರೈತರು ಭೇಟಿ ನೀಡುತ್ತಾರೆ. ಅವರು ಕೃಷಿ ಹಾಗೂ ಯಂತ್ರಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಹೀಗಾಗಿ ಈ ಯಂತ್ರಾಗಾರ ರೈತರ ಪಾಲಿನ ವಿಶ್ವವಿದ್ಯಾಲಯವಾಗಿದೆ ಅಂದರೆ ತಪ್ಪಾಗಲಾರದು. ಇನ್ನು ನಡಕಟ್ಟಿನ್ ಅವರ ಮತ್ತೊಂದು ವಿಷಯವನ್ನು ಹೇಳಲೇಬೇಕು. ತಮ್ಮ ಪ್ರತಿ ಯಂತ್ರದ ಮೇಲೆಯೂ ಅವರು ಆ ಯಂತ್ರದ ಆವಿಷ್ಕಾರದ ಹಿಂದಿನ ಉದ್ದೇಶ, ಅದರ ಲಾಭದ ಬಗ್ಗೆ ಫಲಕವನ್ನು ಅಳವಡಿಸುತ್ತಾರೆ. ಅಷ್ಟೇ ಅಲ್ಲ, ರೈತರಿಗೆ ದುಡಿಮೆಯ ಬಗ್ಗೆ ನೀತಿಯ ಪಾಠವನ್ನೂ ಬರೆದಿರುತ್ತಾರೆ.
ನಡಕಟ್ಟಿನ್ ಅವರಿಗೆ ಒಲಿದು ಬಂದಿರೋ ಪ್ರಶಸ್ತಿಗಳು
ಇಂಥ ನಡಕಟ್ಟಿನ್ ಅವರ ಸಾಧನೆಯನ್ನು ರಾಷ್ಟ್ರಪತಿ ಭವನ ಗುರುತಿಸಿದೆ. ಇದೇ ಕಾರಣಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇವರಿಗೆ ‘ಜೀವಮಾನ ಶ್ರೇಷ್ಠ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಿದ್ದಾರೆ. ಈ ಪ್ರಶಸ್ತಿ 7.5 ಲಕ್ಷ ರೂ. ನಗದು ಪುರಸ್ಕಾರವನ್ನು ಹೊಂದಿದೆ. ಇನ್ನು ಪ್ರಶಸ್ತಿಗಳ ಬಗ್ಗೆ ನಡಕಟ್ಟಿನ್ ಯಾವತ್ತೂ ಯೋಚಿಸಿದವರಲ್ಲ. ಏಕೆಂದರೆ ಇವರನ್ನು ಹುಡುಕಿಕೊಂಡು ಪ್ರತಿನಿತ್ಯ ನೂರಾರು ರೈತರು ಬರುತ್ತಾರೆ. ಇದನ್ನು ನೋಡಿ, ಅನ್ನದಾತನ ಪ್ರೀತಿಯ ಮುಂದೆ ಅದ್ಯಾವ ದೊಡ್ಡ ಸರಕಾರ, ದೊಡ್ಡ ಪ್ರಶಸ್ತಿ ಇದೆ ಅಂತಾನೂ ಕೇಳುತ್ತಾರೆ. ಇಂಥ ನಡಕಟ್ಟಿನ್ ಅವರ ಸಾಧನೆಯನ್ನು ಕಂಡು ಇದೀಗ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. ಆ ಮೂಲಕ ಅಬ್ದುಲ್ ನಡಕಟ್ಟಿನ್ ಅವರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ: Padma awards 2022: ನೀರಜ್ ಚೋಪ್ರಾ ಸೇರಿದಂತೆ 8 ಮಂದಿ ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ ಗೌರವ
Published On - 9:18 pm, Tue, 25 January 22