ಧಾರವಾಡದಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಆರಂಭಿಸಿ ಎಂದ ಪ್ರಹ್ಲಾದ್ ಜೋಶಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಶ್ವಿನಿ ವೈಷ್ಣವ್
ನಾನು ಬೇಡಿಕೆ ಇಡೋದಿಲ್ಲ, ಮನವಿ ಮಾಡಿಕೊಳ್ಳುತ್ತೇನೆ ಎಂದು ಜೋಶಿ ಹೇಳಿದಾಗ, ನೀವು ಮನವಿ ಮಾಡಬೇಡಿ, ಆದೇಶ ಮಾಡಿ ಎಂದು ಹೇಳಿ ರೈಲ್ವೆ ಸಚಿವ ನಕ್ಕಿದ್ದಾರೆ.
ಧಾರವಾಡ: ಅಶ್ವಿನಿ ವೈಷ್ಣವ್ (Ashwini Vaishnaw) ಅಪಾರವಾದ ಅನುಭವ ಹೊಂದಿದವರು. ರಾಜಕಾರಣ ಅಂದ್ರೆ ಮನೆಯಲ್ಲಿನ ಪತ್ನಿಯೇ ಮಾತು ಕೇಳದವರಾಗಿದ್ದಾರೆ ಅನ್ನೋ ಮಾತಿದೆ. ವೈಷ್ಣವ್ ಇಂಜಿನಿಯರಿಂಗ್ ಗೋಲ್ಡ್ ಮೆಡಲಿಸ್ಟ್. ಇವರು ವಾಜಪೇಯಿ ಅವರಿಗೆ ಪಿ.ಎಸ್. ಆಗಿದ್ದರು. ಅಂಥವರು ರಾಜಕಾರಣ ಕ್ಕೆ ಬಂದಿದ್ದಾರೆ. ಮೋದಿಯವರು ಇಂಜಿನಿಯರಿಂಗ್ ಆಗಿಲ್ಲ. ಆದರೆ ನೂರಕ್ಕೂ ಹೆಚ್ಚು ಇಂಜಿನೀಯರ್ ಗೆ ಮೋದಿ ಸಮ. ಅಂಥವರೊಂದಿಗೆ ಅಶ್ವಿನಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಕಾರ್ಖಾನೆ ಶುರು ಮಾಡಿದ್ದರು. ಎಲ್ಲ ಅನುಭವದ ಬಳಿಕ ಜನರೊಂದಿಗೆ ಸಂಪರ್ಕದ ಕೆಲಸ ಮಾಡುತ್ತಿದ್ದಾರೆ. ಇಂಥ ವ್ಯಕ್ತಿ ಧಾರವಾಡಕ್ಕೆ ಬಂದಿದ್ದಾರೆ. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. 20 ಕೋಟಿ ರೂ. ದಲ್ಲಿ ಧಾರವಾಡ ನಿಲ್ದಾಣ ಅಭಿವೃದ್ಧಿ ಮಾಡಿದ್ದೇವೆ. ಟೆಕ್ನಾಲಜಿಯನ್ನು ನಾವು ರೈಲ್ವೆಯಲ್ಲಿ ಬಳಸಿಕೊಳ್ಳುತ್ತಿದ್ದೇವೆ. ನಿಜಾಮುದ್ದೀನ್ ಟ್ರೈನಿಗೆ ಸವಾಯಿ ಗಂಧರ್ವ ಹೆಸರು ಇಡಲು ಮನವಿ ಮಾಡಿದ್ದೇವೆ. ಈ ರೈಲು ವಾರಕ್ಕೆ ಒಂದು ಬಾರಿ ಬರುತ್ತದೆ.ಅದನ್ನು ಎರಡು ಬಾರಿ ಬರುವಂತೆ ಮಾಡಿ. ವಂದೇ ಭಾರತ್ ಶುರುವಾದ ಮೇಲೆ ಧಾರವಾಡದಿಂದ ಬೆಂಗಳೂರಿಗೆ ರೈಲು ಆರಂಭಿಸಿ ಎಂದಿದ್ದಾರೆ.
ರೈಲ್ವೆ ಸಚಿವರಿಗೆ ಜೋಶಿ ಮನವಿ
ನಾನು ಬೇಡಿಕೆ ಇಡೋದಿಲ್ಲ, ಮನವಿ ಮಾಡಿಕೊಳ್ಳುತ್ತೇನೆ ಎಂದು ಜೋಶಿ ಹೇಳಿದಾಗ, ನೀವು ಮನವಿ ಮಾಡಬೇಡಿ, ಆದೇಶ ಮಾಡಿ ಎಂದು ಹೇಳಿ ರೈಲ್ವೆ ಸಚಿವ ನಕ್ಕಿದ್ದಾರೆ. ನಾವು ಕೇಳಿದ ಬಹುತೇಕ ಬೇಡಿಕೆ ಈಡೇರಿವೆ. ರೈಲ್ವೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಬೇಕಿದ್ದರೆ ಯಾರಾದರೂ ಟ್ವೀಟ್ ಮಾಡಿ ನೋಡಿ. ಇದೆಲ್ಲ ತಾಂತ್ರಿಕತೆಯಿಂದ ಆಗುತ್ತಿರೋದು. ಮೋದಿ ಏನು ಮಾಡಿದ್ದಾರೆ ಅಂತಾರೆ. ಇದೀಗ ನಾನು ಹೇಳಿದ್ದು ತಾಂತ್ರಿಕತೆ ಸಂಬಂಧಿಸಿದ್ದೇ ಆಗಿದೆ. ಮೋದಿ ತಾಂತ್ರಿಕತೆ ತಂದಿದ್ದು ಇದೇ ಕಾರಣಕ್ಕೆ. 2014 ರಿಂದ ಇದುವರೆಗೂ 30 ಸಾವಿರ ಕಿ.ಮೀ. ರೈಲ್ವೆ ಹಳಿ ವಿದ್ಯುದ್ದೀಕರಣ ಮಾಡಿದ್ದೇವೆ. 12 ಸಾವಿರ ಕಿ.ಮೀ. ಹಳಿಗಳ ಡಬ್ಲಿಂಗ್ ಮಾಡಿದ್ದೇವೆ. ರೈಲುಗಳ ಮುಖಾಮುಖಿ ಡಿಕ್ಕಿಯಾಗದ ತಾಂತ್ರಿಕತೆ ಜಾರಿಗೆ ತಂದಿದ್ದೇವೆ. ನೀವು ನನ್ನ ಮೇಲೆ ಪ್ರೀತಿ, ಗೆಳೆತನ ತೋರಿಸಿದ್ದೀರಿ. ನನ್ನ ಮೇಲೆ ಸಿಟ್ಟು ಬಂದರೆ ನಕ್ಕು ಬಿಡುತ್ತೀರಿ. ನಿಮ್ಮ ಮೇಲೆ ಮೋದಿ ವಿಶ್ವಾಸ ಇಟ್ಟಿದ್ದಾರೆ. ನಮ್ಮ ಬೇಡಿಕೆ ಬೇಗನೇ ಈಡೇರಿಸಿ ಎಂದು. ಅಶ್ವಿನಿ ವೈಷ್ಣವ್ ಅವರಿಗೆ ಜೋಶಿ ಧನ್ಯವಾದ ತಿಳಿಸಿದ್ದಾರೆ. ಅಶ್ವಿನಿ ವೈಷ್ಣವ್ ಅವರಿಗೆ ಮೈಸೂರು ಪೇಟ ಹಾಕಿ ಸನ್ಮಾನ ಮಾಡಿದ ಜೋಶಿ ಧಾರವಾಡ ಫೇಡಾ ನೀಡಿದ್ದಾರೆ.
Hon'ble Minister of Railways, Communications and Electronics & IT Shri @AshwiniVaishnaw & Hon'ble Union Minister Shri @JoshiPralhad dedicated redeveloped #Dharwad station to the nation. pic.twitter.com/Np2GeyWNe5
— South Western Railway (@SWRRLY) October 11, 2022
ಧಾರವಾಡ ಫೇಡಾ ತಿನ್ನಬೇಕು ಎಂದು ಕನ್ನಡದಲ್ಲಿ ಹೇಳಿದ ಅಶ್ವಿನಿ ವೈಷ್ಣವ್
ಧಾರವಾಡ ಜನರಿಗೆ ಧನ್ಯವಾದ. ಧಾರವಾಡ ಫೇಡಾ ತಿನ್ನಬೇಕು ಎಂದು ಕನ್ನಡದಲ್ಲಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದು ಪ್ರಹ್ಲಾದ ಜೋಶಿ ನನ್ನ ಗುರು ಎಂದಿದ್ದಾರೆ. ಪಾರ್ಲಿಮೆಂಟ್ ನಲ್ಲಿ ಹೇಗಿರಬೇಕು, ಯಾವ ರೀತಿ ಮಾತಾಡಬೇಕು ಅಂತಾ ಕಲಿಸುತ್ತಾರೆ.ಯಾರಿಗೆ ಹೇಗೆ ಉತ್ತರ ಕೊಡಬೇಕು ಅಂತಾ ಹೇಳುತ್ತಾರೆ. ನನ್ನನ್ನು ತಮ್ಮನಂತೆ ಕಾಣುತ್ತಾರೆ. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ.
ನನಗೆ ಖುಷಿಯಾಗಿದೆ. ಇದು ದೊಡ್ಡ ಸಾಂಸ್ಕೃತಿಕ ಪ್ರದೇಶ. ಒಂದೇ ಪ್ರದೇಶದಿಂದ ಐದು ಜ್ಞಾನಪೀಠ ಸಿಕ್ಕಿದ್ದು ನಿಜಕ್ಕೂ ಅಚ್ಚರಿಯ ಸಂಗತಿ.ಒಂದು ಕಡೆ ಸಾಹಿತ್ಯ, ಒಂದು ಕಡೆ ಸಂಗೀತ. ಮತ್ತೊಂದು ಕಡೆ ಜೋಶಿ, ಇನ್ನೊಂದು ಕಡೆ ಧಾರವಾಡ ಫೇಡಾ ಎಂದು ರೈಲ್ವೆ ಸಚಿವರು ನಗುತ್ತಾ ಹೇಳಿದ್ದಾರೆ. ಮೋದಿ ಅವರು ನಮಗೆ ವಿಶ್ವಮಟ್ಟದ ರೈಲು ಬೇಕು ಅಂದರು. ಕೆಲವರು ವಿಶ್ವದ ಎಲ್ಲ ಕಡೆಯಿಂದ ತನ್ನಿ ಅಂದರು.ಆದರೆ ಮೋದಿ ಅದು ಸಾಧ್ಯವಿಲ್ಲ. ನಮ್ಮ ಇಂಜಿನೀಯರ್ ವಿಶ್ವದ ಶ್ರೇಷ್ಠ ಇಂಜಿನೀಯರ್. 2017 ರಲ್ಲಿ ಕೆಲಸ ಶುರು ಮಾಡಿದರು. 2019 ವಂದೇ ಭಾರತ್ ಹೊರಗಡೆ ಬಂದವು. ಇವು ಇವು ಇದುವರೆಗೂ 18 ಲಕ್ಷ ಕಿ.ಮೀ. ಓಡಿವೆ. ಯಾವುದೇ ಸಮಸ್ಯೆ ಇಲ್ಲದೇ ಓಡಿದವು. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ ಅಂತಾ ಮೋದಿ ಹೇಳಿದರು. ಹೀಗಾಗಿ 75 ರೈಲು ನಿರ್ಮಾಣಕ್ಕೆ ಅನುಮತಿಸಿದರು. ಧಾರವಾಡದವರು ಫೇಡಾ ಕೊಟ್ಟರೆ ವಂದೇ ಭಾರತ್ ಕೊಡುತ್ತೇನೆ. ಇದೀಗ ಫೇಡಾ ಸಿಕ್ಕಿದೆ ನನಗೆ. ನಾನು ಫೇಡಾ ತೆಗೆದುಕೊಂಡು ಜೋಶಿ ಅವರೊಂದಿಗೆ ಮೋದಿ ಬಳಿ ಹೋಗುತ್ತೇನೆ. ಧಾರವಾಡಕ್ಕೆ ವಂದೇ ಭಾರತ್ ನೀಡುವಂತೆ ಕೇಳುತ್ತೇನೆ.
ಅದರಲ್ಲಿ ಕುಳಿತರೆ ಅದ್ಭುತ ಅನುಭವ ಸಿಗುತ್ತೆ.180 ಕಿ.ಮೀ. ವೇಗವಾಗಿ ಓಡುವ ರೈಲು ಅದು.ಅದರಲ್ಲಿ ಕುಳಿತರೆ ನೀರು ಕೂಡ ಅಲುಗಾಡೋದಿಲ್ಲ.ಆದರೆ ಅದನ್ನು ನೋಡಿದ ವಿಶ್ವ ಅಲುಗಾಡಿ ಹೋಯಿತು. ಇದೆಲ್ಲ ಮೋದಿ ತಾಕತ್ತು. ನಾವು ಮೋದಿ ಟೀಮ್ ನಲ್ಲಿದ್ದೇವೆ. ಜೋಶಿ ಬೋಲ್ಡ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೈನಿಂಗ್ ರಿಫಾರ್ಮ್ ಬಿಲ್ ಪಾರ್ಲಿಮೆಂಟ್ ನಲ್ಲಿ ಇಟ್ಟಿರಿ. ಅದನ್ನು ಪಾಸು ಮಾಡಿದಿರಿ. ಗಣಿಗಾರಿಕೆ ಬಗ್ಗೆ ನೆಗೆಟಿವ್ ದೃಷ್ಟಿ ಇತ್ತು. ಇವತ್ತು ಅದೆಲ್ಲ ಪಾರದರ್ಶಕವಾಗಿದೆ. ಐಐಟಿ, ಐಐಐಟಿ, ವಿಮಾನ ನಿಲ್ದಾಣ, ಆರು ಪಥ ಹು-ಧಾ ಹೆದ್ದಾರಿ. ಜೋಶಿ ನಿಧಾನವಾಗಿ ಬರುತ್ತಾರೆ. ಎರಡು ಫೇಡಾ ತಿನ್ನಿಸುತ್ತಾರೆ. ಒಂದು ಯೋಜನೆ ಹೊಡೆದುಕೊಳ್ಳುತ್ತಾರೆ. ತುಂಬಾನೇ ಪಾವರ್ ಫುಲ್ ಮಿನಿಸ್ಟರ್ ಅವರು. ಜೋಶಿ ಅವರು ಕಚೇರಿಯಿಂದ ಹೊರಗೆ ಹೋದ ಕೂಡಲೇ ನಾನು ಒಳಗೆ ಹೋಗಿ ರೂಮಿನಲ್ಲಿದ್ದ ಫೇಡಾ ತಿನ್ನುತ್ತೇನೆ. ಅದು ಅದ್ಭುತವಾದ ಫೇಡಾ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಮೂರನೇ ದ್ವಾರ ಲೋಕಾರ್ಪಣೆ: ನಿಜಾಮುದ್ದೀನ್ ರೈಲಿಗೆ ಗ್ರೀನ್ ಸಿಗ್ನಲ್
ಭಾರತೀಯ ರೈಲ್ವೆಯು ಸಾಕಷ್ಟು ಜನಮನ್ನಣೆ ಪಡೆದ ಬೆನ್ನಲೇ ಈಗ ನೈಋತ್ಯ ರೈಲ್ವೆ ಹಲವಾರು ಯೋಜನೆ ಜಾರಿಗೊಳಿಸಿದ್ದು, ಈ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಲಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೂರನೇ ಮುಖ್ಯ ದ್ವಾರದ ಲೋಕಾರ್ಪಣೆ ಹಾಗೂ ರಾಷ್ಟ್ರಕ್ಕೆ ಸಮರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಚಾಲನೆ ನೀಡಿದ್ದಾರೆ. ಮುಖ್ಯ ರೈಲ್ವೆ ನಿಲ್ದಾಣದ ಜನದಟ್ಟಣೆಯನ್ನು ತಗ್ಗಿಸುವ ಸದುದ್ದೇಶದಿಂದ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ಮುಖ್ಯ ದ್ವಾರ ಲೋಕಾರ್ಪಣೆ ಮಾಡಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಅರವಿಂದ ಬೆಲ್ಲದ, ಪ್ರದೀಪ್ ಶೆಟ್ಟರ್ ಸೇರಿದಂತೆ ಇತರರು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸಚಿವರು, ಮುಖ್ಯ ದ್ವಾರ ಲೋಕಾರ್ಪಣೆ ಹಾಗೂ ಹುಬ್ಬಳ್ಳಿ ಹಜರತ್ ನಿಜಾಮುದ್ದೀನ್ ಸಾಪ್ತಾಹಿಕ ರೈಲು ಆರಂಭಕ್ಕೆ ಚಾಲನೆ ನೀಡಲಾಯಿತು.ಒಟ್ಟಿನಲ್ಲಿ ಬಹು ದಿನಗಳ ಕನಸು ನನಸಾಗಿದ್ದು, ಈಗ ಮೂರನೇ ದ್ವಾರ ವಿದ್ಯುಕ್ತವಾಗಿ ಆರಂಭಗೊಂಡಿತು.
Published On - 3:41 pm, Tue, 11 October 22