ಪ್ರಲ್ಹಾದ್ ಜೋಶಿ ಕ್ಷೇತ್ರ ಬದಲಾವಣೆ ಮಾಡಿದ್ರೆ ನನಗೆ ಟಿಕೆಟ್ ಕೊಡಬೇಕು: ಎಂಎಲ್‌ಸಿ ಪ್ರದೀಪ್ ಶೆಟ್ಟರ್
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಶುಭಾಶಯ ಕೋರಲು ಆಗಮಿಸಿದ್ದ ಸಹೋದರ ಎಂಎಲ್‌ಸಿ ಪ್ರದೀಪ್ ಶೆಟ್ಟರ್ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೋಕಸಭಾಯಲ್ಲಿ ಕ್ಷೇತ್ರ ಬದಲಾವಣೆ ಮಾಡಿದರೆ ನನಗೆ ಟಿಕೆಟ್ ಕೊಡಬೇಕು ಎಂದು ಹೇಳಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎಂದಿದ್ದಾರೆ.
ಹುಬ್ಬಳ್ಳಿ, ಡಿಸೆಂಬರ್ 17: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೋಕಸಭಾಯಲ್ಲಿ ಕ್ಷೇತ್ರ ಬದಲಾವಣೆ ಮಾಡಿದರೆ ನನಗೆ ಟಿಕೆಟ್ ಕೊಡಬೇಕು ಎಂದು ಬಿಜೆಪಿ ಎಂಎಲ್‌ಸಿ ಪ್ರದೀಪ್ ಶೆಟ್ಟರ್ (Pradeep Shettar) ಅಚ್ಚರಿ ಹೇಳಿಕೆ ನೀಡಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎಂದು ಹೇಳಿದ್ದಾರೆ.
ವೀರಶೈವ ಲಿಂಗಾಯತರಿಗೆ ರಾಜ್ಯ ಬಿಜೆಪಿಯಲ್ಲಿ ಆದ್ಯತೆ ನೀಡಬೇಕು. ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರರನ್ನು ನೇಮಿಸಿದ್ದಾರೆ. ಸಮುದಾಯಕ್ಕೆ ಪಕ್ಷ ಪ್ರಾಮುಖ್ಯತೆ ಕೊಟ್ಟಿದೆ ನಮಗೆ ಸಂತೋಷವಿದೆ. ವೀರಶೈವ ಲಿಂಗಾಯತ ಸಮುದಾಯ ಪ್ರಬಲವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಹೊಸ ವಂಟಮುರಿ ಘಟನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಸಿದ್ದರಾಮಯ್ಯ
ಜೋಶಿರವರು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಟಿಕೆಟ್ ಕೇಳುತ್ತೇವೆ. ಜಾತಿ ಆಧಾರದ ಮೇಲೆ ವೀರಶೈವ ಲಿಂಗಾಯತರಿಗೆ ಟಿಕೆಟ್ ಕೇಳುತ್ತೇವೆ. ಹೆಚ್ಚು ಲಿಂಗಾಯತರಿರುವ ಕ್ಷೇತ್ರಗಳಿವೆ, ನಮಗೆ ಆದ್ಯತೆ ನೀಡಬೇಕು. ಹೈಕಮಾಂಡ್ ಏನ್ ಮಾಡುತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇವೆ, ಹೈಕಮಾಂಡ್‌ಗೆ ಬಿಟ್ಟದ್ದು. ಇನ್ನೂ ಸಮಯ ಇದೆ, ಕಾದು ನೋಡೋಣ. ಸೆಂಟ್ರಲ್ ಕ್ಷೇತ್ರದಲ್ಲಿ ಆದಂತೆ ಎಲ್ಲಿ ಏನು ಬೇಕಾದರೂ ಆಗಬಹುದು. ನಾನೇನೂ ಸನ್ಯಾಸಿ ಅಲ್ಲ, ನಮಗೂ ಆಸೆ ಇರುತ್ತೆ. ಟಿಕೆಟ್ ಕೊಡದಿದ್ದರೆ ನಾವೇನೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸಿಎಂ ಜೊತೆ ರಾಜಕೀಯ ವಿಚಾರ ಚರ್ಚೆ ನಡೆಸಲು ಅವಕಾಶ ಸಿಕ್ಕಿಲ್ಲ ಎಂದಿದ್ದಾರೆ.
ಜಗದೀಶ್ ಶೆಟ್ಟರ್ಗೆ ಜನ್ಮದಿನ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ
ಜಗದೀಶ್ ಶೆಟ್ಟರ್ 68 ನೇ ಜನ್ಮದಿನದ ನಿಮಿತ್ತ ಹುಬ್ಬಳ್ಳಿಯ ಮಧುರಾ ಎಸ್ಟೇಟ್‌ನಲ್ಲಿರುವ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಶುಭಕೋರಿದ್ದಾರೆ. ಬಳಿಕ ಶೆಟ್ಟರ್ ಕುಟುಂಬದೊಂದಿಗೆ ಉಪಹಾರ ಸೇವಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ಗೆ ಲೋಕಸಭಾ ಟಿಕೆಟ್ ನೀಡುವ ವಿಚಾರವಾಗಿ ಅಭಿಪ್ರಾಯ ಕೇಳುತ್ತಿದ್ದೇವೆ. ಅವರು ಆಕಾಂಕ್ಷಿ ಅಂತಾ ಅಂದುಕೊಂಡಿದ್ದೇವೆ ಎಂದರು. ಆದರೆ ಈ ವೇಳೆ ನಾನು ಆಕಾಂಕ್ಷಿ ಅಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಪಕ್ಷಾಂತರ ಎಫೆಕ್ಟ್ ಪಂಚರಾಜ್ಯಗಳ ಮೇಲೆ ಆಗುತ್ತೆ ಅಂದಿದ್ದರು, ನಿಜವಾಗಿದೆ ಎಂದ ಮಹೇಶ್ ಟೆಂಗಿನಕಾಯಿ
ಶಾಸಕರು, ಕಾರ್ಯಕರ್ತರು ಯಾರಿಗೆ ಹೇಳುತ್ತಾರೆ ಅವರಿಗೆ ಟಿಕೆಟ್ ಕೊಡುತ್ತೇವೆ. ಪ್ರತಿ ಜಿಲ್ಲೆಯಲ್ಲೂ ಸಚಿವರನ್ನು ವೀಕ್ಷಕರಾಗಿ ನೇಮಕ ಮಾಡಿದ್ದೇವೆ. ಸಚಿವರು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.