ಧಾರವಾಡ, ಮಾರ್ಚ್ 27: ಕೋಲಾರದಲ್ಲಿ (Kolar) ಸಚಿವ ಮುನಿಯಪ್ಪ ಅಳಿಯಗೆ ಟಿಕೆಟ್ ನೀಡಿದರೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಪಕ್ಷದ ಐವರು ಶಾಸಕರು ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಶಾಸಕರು ಈ ಹೇಳಿಕೆಯಿಂದ ತಿಳಿಯುತ್ತದೆ ಎಂದಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಇತರರ ನಡುವೆ ಜಗಳವಿದೆ. ಅವರಿಂದ ಸರ್ಕಾರ ಸರಿಯಾಗಿ ನಡೆಸಲು ಆಗುತ್ತಿಲ್ಲ. ಅನಗತ್ಯವಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಶೇ 75ರಷ್ಟು ಎಸ್ಡಿಆರ್ ಎಫ್ ಹಣವನ್ನು ಭಾರತ ಸರ್ಕಾರ ಕೊಡುತ್ತದೆ. ಆ ಹಣ ಹಂಚಿಕೆಯಾಗಿ ಬಿಡುಗಡೆ ಆಗಿಲ್ಲ. ಅದನ್ನು ಬಿಟ್ಟು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯುಪಿಎ ಸರ್ಕಾರಕ್ಕಿಂತ ಹೆಚ್ಚು ಅನುದಾನ ನಾವು ಕೊಡುತ್ತಿದ್ದೇವೆ. ಇಷ್ಟೆಲ್ಲ ಇದ್ದರು ಸುಳ್ಳು ಸುದ್ದಿ ಹೇಳಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಈ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಭಾವನೆ ಜನರಲ್ಲಿ ಬಂದಿದೆ ಎಂದು ಜೋಶಿ ಹೇಳಿದರು.
ಜನಸಾಮಾನ್ಯರಿಗೆ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಶಾಸಕರಿಗೇ ಸರ್ಕಾರದ ಬಗ್ಗೆ ರೋಸಿ ಹೋಗಿದೆ. ಸಿದ್ದರಾಮಯ್ಯ ಒಬ್ಬ ಅಶಕ್ತ ಮುಖ್ಯಮಂತ್ರಿ ಎಂದು ಅವರು ವಾಗ್ದಾಳಿ ನಡೆಸಿದರು.
ಎಲೆಕ್ಟ್ರೋರಲ್ ಬಾಂಡ್ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ಅಧಿಕಾರದಲ್ಲಿತ್ತು. ಆಗ ಎಲ್ಲ ನಗದು ರೂಪದಲ್ಲಿಯೇ ವ್ಯವಹಾರ ನಡೆಯುತ್ತಿತ್ತು. ಆಗ ಪ್ರಾಮಾಣಿಕವಾಗಿ ಚುನಾವಣೆ ನಡೆಸುತ್ತಿದ್ದರಾ? ನಾವು ಕಪ್ಪು ಹಣವನ್ನಾದರೂ ಚುನಾವಣೆಯಿಂದ ದೂರ ಇಟ್ಟಿದ್ದೇವೆ. ಬಾಂಡ್ ಕೊಡಲು ಚೆಕ್ ಮೂಲಕ ಹಣ ಕೊಡಬೇಕಾಗುತ್ತದೆ. ಇದು ನಮ್ಮ ಮೊದಲ ಹೆಜ್ಜೆಯಾಗಿತ್ತು. ಈಗ ಸುಪ್ರೀಂಕೋರ್ಟ್ ಹೇಳಿದ್ದನ್ನು ಮಾನ್ಯ ಮಾಡುತ್ತೇವೆ. ಕಾಂಗ್ರೆಸ್‌ಗೆ 1600 ಕೋಟಿ ರೂ. ಬಂದಿದೆಯಲ್ಲ, ಅದು ಎಲ್ಲಿಂದ ಬಂದಿದೆ? ಅವರು ತಗೊಂಡ್ರೆ ಸಾಚಾಗಳಾ? ನಾವು ಮಾದರಿಯಲ್ಲಿ ಸುಧಾರಣೆ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ಹೇಳಿದ್ದನ್ನು ಪಾಲನೆ ಮಾಡಿಕೊಂಡು ಹೋಗುತ್ತೇವೆ. ಕಾಂಗ್ರೆಸ್ ಕಾಲದಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ಆಗಿತ್ತಲ್ಲ? ಆಗ ನೀವು ಎಷ್ಟು ತಗೊಂಡಿದ್ದಿರಿ? ಯಂಗ್ ಇಂಡಿಯಾ ಕೇಸ್ನಲ್ಲಿ ರಾಹುಲ್, ಸೋನಿಯಾ ಗಾಂಧಿ ಜಾಮೀನಿನ ಮೇಲೆ ಇದಾರಲ್ಲ? ಇದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಜೋಶಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ