ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟ: ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ರಾಜೀನಾಮೆ ನೀಡುವುದಾಗಿ ಐವರು ಶಾಸಕರು ಬೆದರಿಕೆ
ಸಚಿವ ಕೆ.ಹೆಚ್.ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೇ ಜಿಲ್ಲೆಯ ಐವರು ಶಾಸಕರು ರಾಜಿನಾಮೆ ನೀಡುತ್ತೇವೆ ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಕೋಲಾರ, ಮಾರ್ಚ್ 27: ಕೋಲಾರ ಲೋಕಸಭಾ (Kolar Lok sabha Constituency) ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಇನ್ನಷ್ಟು ಕಗ್ಗಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಂಧಾನ ಸಭೆ ನಡೆಸಿದರೂ, ನಾಯಕರ ನಡುವಿನ ಭಿನ್ನಮತ ಶಮನವಾಗಿಲ್ಲ. ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ಕುಟುಂಬಕ್ಕೆ ಟಿಕೆಟ್ ನೀಡಿದರೇ ಜಿಲ್ಲೆಯ ಐವರು ಶಾಸಕರು ರಾಜಿನಾಮೆ ನೀಡುತ್ತೇವೆ ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಬೆದರಿಕೆ ಹಾಕಿದ್ದಾರೆ. ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆ.ಹೆಚ್.ಮುನಿಯಪ್ಪ ಕುಟುಂಬ ಟಿಕೆಟ್ ನೀಡದಂತೆ ಮನವಿ ಮಾಡಿದ್ದೇವೆ. ಒಂದು ವೇಳೆ ಟಿಕೆಟ್ ನೀಡಿದರೇ ಮಾಲೂರು ಶಾಸಕ ನಂಜೇಗೌಡ, ಸಚಿವ ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್, ನಜೀರ್ ಅಹ್ಮದ್ ರಾಜೀನಾಮೆ ನೀಡುತ್ತೇವೆ ಎಂದರು.
12 ಗಂಟೆಗೆ ಸುಮಾರಿಗೆ ಸಭಾಪತಿಗೆ ಕಚೇರಿಗೆ ಭೇಟಿ ನೀಡಿ, ರಾಜಿನಾಮೆ ಪತ್ರ ನೀಡುತ್ತೇವೆ. ಮಧ್ಯಾಹ್ನ 3 ಗಂಟೆಗೆ ಮಂಗಳೂರಿಗೆ ಪ್ರಯಾಣ ಮಾಡುತ್ತೇವೆ. ಸಂಜೆ ನಾಲ್ಕು ಗಂಟೆಗೆ ಸಭಾಪತಿಗಳನ್ನು ಭೇಟಿ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ: ಸಂಧಾನ ಸಭೆಯಲ್ಲಿ ಸಿಎಂ, ಡಿಸಿಎಂ ಎದುರು ರಮೇಶ್ ಕುಮಾರ್, ಮುನಿಯಪ್ಪ ನಡುವೆ ಮಾತಿನ ಚಕಮಕಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ನಮ್ಮ ಬಣಕ್ಕೆ ಟಿಕೆಟ್ ನೀಡುವಂತೆ ಮಾಡಿದ್ದೇವೆ. ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಪಕ್ಷ ಗೆಲ್ಲಿಸುವ ಜವಾಬ್ದಾರಿ ನಮ್ದು. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧವಾಗಿದ್ದೇವೆ. ನಾನು, ರಮೇಶ್ಕುಮಾರ್ ಸೇರಿ ಒಟ್ಟಿಗೆ ಕೆಲಸ ಮಾಡುವುದಾಗಿ ಹೇಳಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:38 am, Wed, 27 March 24