
ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ ಶಂಕರ ದೇವಸ್ಥಾನದ ಆವರಣದ ಪುಷ್ಕರಣಿ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪುಷ್ಕರಣಿಯನ್ನು ಹಾಳುಗೆಡವಿ, ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಮುಖಂಡರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರ ವಿರುದ್ಧ ಧಾರವಾಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ದೇವಸ್ಥಾನವು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಅನುಮತಿ ಪಡೆಯದೇ ಪಾಲಿಕೆಯಿಂದ ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಸಲಾಗಿದೆ. ಅಲ್ಲಿನ ಪುರಾತನ ಪುಷ್ಕರಣಿಯನ್ನು ಮುಚ್ಚಿ ರಸ್ತೆ ನಿರ್ಮಿಸುತ್ತಿರುವುದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಪಾಲಿಕೆ ಆಯುಕ್ತರೇ ಪ್ರಮುಖ ಹೊಣೆಗಾರರಾಗಿದ್ದು, ಅವರ ವಿರುದ್ಧ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.
ಅಲ್ಲದೆ, ಇತ್ತೀಚೆಗೆ ನಡೆದ ಪ್ರತಿಭಟನೆಯ ವೇಳೆ ಸುಮಾರು 1,500 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಈ ಬಂದೋಬಸ್ತ್‌ಗಾಗಿ ಪೊಲೀಸ್ ಇಲಾಖೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದು, ಸಾರ್ವಜನಿಕರ ಈ ತೆರಿಗೆ ಹಣ ಪೋಲಾಗಲು ಪಾಲಿಕೆ ಆಯುಕ್ತರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಆ ಖರ್ಚಿನ ಹಣವನ್ನು ಆಯುಕ್ತರಿಂದಲೇ ವಸೂಲಿ ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿಯವರೆಗೆ ರಾಜಕೀಯ ನಾಯಕರ ವಿರುದ್ಧ ಹೋರಾಟ ನಡೆಸುತ್ತಿದ್ದ ಹಿಂದೂಪರ ಸಂಘಟನೆಗಳು, ಇದೀಗ ನೇರವಾಗಿ ಪಾಲಿಕೆ ಆಯುಕ್ತರ ವಿರುದ್ಧವೇ ತೊಡೆ ತಟ್ಟಿ ನಿಂತಿವೆ. ಈ ವಿಭಿನ್ನ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ