ಸೌದಿ ಅರೇಬಿಯಾದಲ್ಲಿ ಟ್ಯಾಂಕರ್​, ಬಸ್ ಡಿಕ್ಕಿ: ಭೀಕರ​​ ಅಪಘಾತದಲ್ಲಿ ಹುಬ್ಬಳ್ಳಿಯ ವ್ಯಕ್ತಿ ಸಾವು

ಸೌದಿ ಅರೇಬಿಯಾದಲ್ಲಿ ಡೀಸೆಲ್ ಟ್ಯಾಂಕರ್ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 42 ಭಾರತೀಯರು ಸಜೀವ ದಹನವಾಗಿದ್ದಾರೆ. ಈ ದುರಂತದಲ್ಲಿ ರಾಜ್ಯದ ಹುಬ್ಬಳ್ಳಿಯ ಗಣೇಶ ಪೇಟ್ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ಇತ್ತ ಹುಬ್ಬಳ್ಳಿಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ಟ್ಯಾಂಕರ್​, ಬಸ್ ಡಿಕ್ಕಿ: ಭೀಕರ​​ ಅಪಘಾತದಲ್ಲಿ ಹುಬ್ಬಳ್ಳಿಯ ವ್ಯಕ್ತಿ ಸಾವು
ಮೃತ ವ್ಯಕ್ತಿ
Edited By:

Updated on: Nov 17, 2025 | 8:02 PM

ಹುಬ್ಬಳ್ಳಿ, ನವೆಂಬರ್​ 17: ಸೌದಿ ಅರೇಬಿಯಾದಲ್ಲಿ ಡೀಸೆಲ್​ ಟ್ಯಾಂಕರ್​ ಮತ್ತು ಬಸ್​​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) 42 ಭಾರತೀಯರು ಸಜೀವ ದಹನವಾಗಿದ್ದಾರೆ. ಇದೇ ದುರಂತದಲ್ಲಿ ಕರ್ನಾಟಕದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ (Hubballi) ನಗರದ ಗಣೇಶ ಪೇಟ್ ನಿವಾಸಿ ಅಬ್ದುಲ್ ಘಣಿ(55) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಅಬುಧಾಬಿ ಇಂಟರ್‌ನ್ಯಾಷನಲ್‌ ಹೋಟೆಲ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ದುಬೈಗೆ ಹೋಗಿದ್ದರು.

ಇತ್ತ ಹುಬ್ಬಳ್ಳಿಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಕುಟುಂಬದ ಓರ್ವರನ್ನು ಕಳುಹಿಸಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ವಕ್ಫ್​ ಸಚಿವರು ಮತ್ತು ಜಿಲ್ಲಾಡಳಿತಕ್ಕೆ ಕುಟುಂಬ ಮನವಿ ಮಾಡಿದೆ.

ನಡೆದದ್ದೇನು?

ಮೆಕ್ಕಾದಿಂದ ಮದೀನಾಗೆ ಹೋಗುತ್ತಿದ್ದ ಸಂದರ್ಭದಲ್ಲಿ ಡೀಸೆಲ್​ ಟ್ಯಾಂಕರ್​ಗೆ ಬಸ್​ ಡಿಕ್ಕಿಯಾಗಿ 42 ಜನ ಸಜೀವ ದಹನವಾಗಿದ್ದಾರೆ. ಸೌದಿ ಅರೇಬಿಯಾದ ಮುಫರಿಹತ್ ಬಳಿ ದುರಂತ ಸಂಭವಿಸಿದೆ. ಈ ದುರಂತದಲ್ಲಿ 20 ಮಹಿಳೆಯರು, 11 ಮಕ್ಕಳು ಸೇರಿದಂತೆ 42 ಮಂದಿ ಸಾವನ್ನಪ್ಪಿದ್ದು, ಬಸ್​​ನಲ್ಲಿದ್ದ ಮೊಹಮ್ಮದ್ ಶೋಯಬ್ ಎಂಬಾತ ಮಾತ್ರ ಬದುಕುಳಿದಿದ್ದಾರೆ.

ಕುಟುಂಬಸ್ಥರ ಬೇಡಿಕೆಗೆ ಸ್ಪಂದಿಸುವೆ: ಶಾಸಕ ಪ್ರಸಾದ್ ಅಬ್ಬಯ್ಯ

ಮೃತ ವ್ಯಕ್ತಿಯ ಮನೆಗೆ ಶಾಸಕ ಪ್ರಸಾದ್ ಅಬ್ಬಯ್ಯ ಭೀಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ದುರ್ಘಟನೆಯಲ್ಲಿ ನನ್ನ ಕ್ಷೇತ್ರದ ವ್ಯಕ್ತಿಯ ಸಾವಾಗಿದೆ. ಈ ಬಗ್ಗೆ ಡಿಸಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಕುಟುಂಬಸ್ಥರ ಬೇಡಿಕೆಗೆ ಸ್ಪಂದಿಸುವೆ. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತೇನೆ. ಸೌದಿಗೆ ಹೋದರೆ ಕುಟುಂಬದವರಿಗೆ ಹೋಗಲು ನಾನೇ ವ್ಯವಸ್ಥೆ ಮಾಡುತ್ತೇನೆ. ಕುಟುಂಬಕ್ಕೆ ಬೇಕಾದ ಎಲ್ಲಾ ನೆರವನ್ನು ಕಲ್ಪಿಸಲಾಗುವುದು ಎಂದಿದ್ದಾರೆ.

ಬೈಕ್​​​ಗೆ ಟಿಪ್ಪರ್ ಡಿಕ್ಕಿ: ಯುವತಿ ಸ್ಥಳದಲ್ಲೇ ಸಾವು

ಟಿಪ್ಪರ್ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ರಾಣಿಕ್ರಾಸ್​​ನಲ್ಲಿ ದುರ್ಘಟನೆ ಸಂಭವಿಸಿದೆ. ಆಂಧ್ರದ ಅನಂತಪುರ ಮೂಲದ ಅನಿತಾ(20) ಮೃತ ಯುವತಿ.

ಇದನ್ನೂ ಓದಿ: ಬೆಂಗಳೂರು: ಶಾಂತಿ ನಗರದಲ್ಲಿ ವ್ಯಕ್ತಿಯ ಅಡ್ಡಗಟ್ಟಿ ದರೋಡೆ, ಆಘಾತಕಾರಿ ವಿಡಿಯೋ ವೈರಲ್

ಬೈಕ್​ನ ಹಿಂಬದಿ ಕುಳಿತಿದ್ದ ಮತ್ತೋರ್ವ ಮಹಿಳೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್ ಜಪ್ತಿ ಮಾಡಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ ಲಾರಿ ಹರಿದು ಯುವಕ ಸ್ಥಳದಲ್ಲೇ ಸಾವು

ಲಾರಿ ಹರಿದು ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಶಿವಮೊಗ್ಗದ ವಿದ್ಯಾನಗರದ ಎಸ್‌ಬಿಐ ಬ್ಯಾಂಕ್‌ ಮುಂಭಾಗ ನಡೆದಿದೆ. ಮಣಿ (21) ಮೃತ ಯುವಕ. ಘಟನೆ ಬಳಿಕ ಲಾರಿ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಶಿವಮೊಗ್ಗ ಪೂರ್ವ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:40 pm, Mon, 17 November 25