ಇದು ಅವರ ಮಾನಸಿಕತೆ ತೋರಿಸುತ್ತದೆ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಿರುದ್ಧ ಸಚಿವ ಪ್ರಲ್ಹಾದ್ ಜೋಶಿ ಕಿಡಿ
ನೂತನ ಸಂಸತ್ ಭವನವನ್ನು ಕಾಂಗ್ರೆಸ್ನ ಹಿರಿಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಮೋದಿ ಮಲ್ಪಿಪ್ಲೆಕ್ಸ್’ ಎಂದು ಕರೆದಿದ್ದಾರೆ. ಈ ವಿಚಾರವಾಗಿ ಧಾರವಾಡ ಜಿಲ್ಲೆಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಇದು ಅವರ ಮಾನಸಿಕತೆ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಧಾರವಾಡ, ಸೆಪ್ಟೆಂಬರ್ 24: ನೂತನ ಸಂಸತ್ ಭವನಕ್ಕೆ ಮೋದಿ ಮಲ್ಟಿಕಾಂಪ್ಲೆಕ್ಸ್ ಅಂತ ಕರೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh) ಕ್ಷುಲ್ಲಕ ಹೇಳಿಕೆ ಕೊಟ್ಟಿದ್ದಾರೆ. ಇದು ಅವರ ಮಾನಸಿಕತೆ ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಮಾತನಾಡಿದ ಅವರು, ಯಾವುದೇ ಒಳ್ಳೆಯ ಕೆಲಸವನ್ನು ಕಾಂಗ್ರೆಸ್ ನಾಯಕರು ಸಹಿಸಲ್ಲ. ಇದು ಕಾಂಗ್ರೆಸ್ನವರ ಕೀಳುಮಟ್ಟದ ರಾಜಕಾರಣ ಎಂದು ಕಿಡಿಕಾರಿದ್ದಾರೆ.
ಎಲ್ಲದರಲ್ಲೂ ಕಾಂಗ್ರೆಸ್ ಪಕ್ಷ ಚಿಲ್ಲರೆ ರಾಜಕಾರಣ ಮಾಡುತ್ತದೆ. ಅವರ ಡಿಎನ್ಎದಲ್ಲಿ ಚಿಲ್ಲರೆ ರಾಜಕಾರಣ ಹೊಕ್ಕು ಬಿಟ್ಟಿದೆ. ಆದಿವಾಸಿ ಮಹಿಳೆಯನ್ನು ಬಿಜೆಪಿ ರಾಷ್ಟ್ರಪತಿ ಮಾಡಿದೆ. ರಾಷ್ಟ್ರಪತಿಗಳ ಹೆಸರಿನಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತೆ ಎಂದು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ನವರಿಗೆ ಕನಸಲ್ಲೂ ಪ್ರಧಾನಿ ಮೋದಿ ಕಾಣಿಸುತ್ತಾರೆ
ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡದಿರುವುದು ಒಳ್ಳೆಯದು. ರಾಹುಲ್ ಗಾಂಧಿ ತಾವು ಮಾತಾಡಿದರೆ ಭೂಕಂಪ ಆಗುತ್ತೆ ಅಂತಾರೆ. ಇಂತಹ ಚಿಲ್ಲರೆ ಮಾತಿಗೆ ಉತ್ತರ ಕೊಡದಿರುವುದು ಒಳ್ಳೆಯದು. ಪ್ರಧಾನಿ ನರೇಂದ್ರ ಮೋದಿಯವರನ್ನು ಏನಾದ್ರೂ ಬೈಯ್ಯೋದೆ ಇವರ ಕೆಲಸ.
ಇದನ್ನೂ ಓದಿ: ಹೊಸ ಸಂಸತ್ತನ್ನು ‘ಮೋದಿ ಮಲ್ಪಿಪ್ಲೆಕ್ಸ್’ ಎಂದು ಕರೆದ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್
ಮೊನ್ನೆ ಕೆಲವು ಕಡೆ ಮಳೆಯಾಗದೆ ಇರೋದಕ್ಕೆ ಮೋದಿರನ್ನು ಬೈದಿದ್ದಾರೆ. ಪ್ರವಾಹ ಬಂದರೂ ಮೋದಿ ಕಾರಣ, ಬರ ಬಂದರೂ ಮೋದಿ ಕಾರಣ. ಕಾಂಗ್ರೆಸ್ನವರಿಗೆ ಕನಸಲ್ಲೂ ಮೋದಿ ಕಾಣಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಸೆ.26ರ ಬೆಂಗಳೂರು ಬಂದ್ ಹಿಂಪಡೆಯಲು ಕರವೇ ಮನವಿ, ಒಂದೇ ಬಾರಿ ರಾಜ್ಯ ಬಂದ್ಗೆ ಪ್ಲಾನ್
ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ. ಕಾಂಗ್ರೆಸ್ನವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಮಹಿಳಾ ಮೀಸಲಾತಿ ಜಾರಿ ಆಗೇ ಆಗುತ್ತೆ. ಕಾಂಗ್ರೆಸ್ನವರು ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಇಂತಹ ಬೆಳವಣಿಗೆ ಆದಾಗ ಚರ್ಚೆಗಳು ನಡೆಯುವುದು ಸಹಜ. ಅದರಿಂದ ಅಮೃತವೇ ಹೊರಬರುತ್ತದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.