
ಧಾರವಾಡ, ಆಗಸ್ಟ್ 28: ಶಾಸಕ ವಿನಯ್ ಕುಲಕರ್ಣಿ (Vinay Kulkarni) ಬರೋಬ್ಬರಿ 6 ವರ್ಷಗಳ ಬಳಿಕ ತಮ್ಮ ಸ್ವಕ್ಷೇತ್ರ ಹಾಗೂ ಸ್ವಜಿಲ್ಲೆಯಾದ ಧಾರವಾಡಕ್ಕೆ ಮಂಗಳವಾರ ಅಧಿಕೃತವಾಗಿ ಹೆಜ್ಜೆ ಇಟ್ಟಿದ್ದಾರೆ. ಕೋರ್ಟ್‌ನಿಂದ ಜಿಲ್ಲಾ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ, ತಮ್ಮ ಬೆಂಬಲಿಗರ ಸಾಲು ಸಾಲು ಕಾರುಗಳ ಅಬ್ಬರದ ನಡುವೆ ಧಾರವಾಡದ ಶಿವಗಿರಿ ಬಡಾವಣೆಯಲ್ಲಿರುವ ನಿವಾಸಕ್ಕೆ ಪತ್ನಿ ಹಾಗೂ ಮಕ್ಕಳೊಂದಿಗೆ ಆಗಮಿಸಿದ್ದಾರೆ.
ಮನೆಗೆ ಬಂದ ನಾಯಕನನ್ನು ಬೆಂಬಲಿಗರು ಆರತಿ ಬೆಳಗಿ, ಮನೆ ಬಾಗಿಲಿಗೆ ಕುಂಬಳಕಾಯಿ ಒಡೆದು ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿದ್ದಾರೆ. ಧಾರವಾಡಕ್ಕೆ ಆಗಮಿಸುವ ಮಾರ್ಗಮಧ್ಯೆ, ತಮ್ಮ ಮಕ್ಕಳಾದ ಹೇಮಂತ್ ಹಾಗೂ ವೈಶಾಲಿ ಜೊತೆ ಹಾರೋಬೆಳವಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವಿನಯ್ ಕುಲಕರ್ಣಿ, ಬಳಿಕ ಶ್ರೀ ಮುರುಘಾ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
2016ರಲ್ಲಿ ನಡೆದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಭೀಕರ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ, 2020ರ ನವೆಂಬರ್ 5 ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು. ಸುಮಾರು 9 ತಿಂಗಳು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಅವರಿಗೆ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಆದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತಿನ ಮೇಲೆ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿತ್ತು. ಇತ್ತೀಚೆಗೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನೀಡಿರುವ ಆದೇಶ ಹಾಗೂ 42ನೇ ಜೆಎಮ್‌ಎಫ್‌ಸಿ ಕೋರ್ಟ್ ನೀಡಿದ ಅನುಮತಿಯಿಂದಾಗಿ, ಕಳೆದ 6 ವರ್ಷಗಳಿಂದ ಸ್ವಂತ ಜಿಲ್ಲೆಯಿಂದ ದೂರವಿದ್ದ ವಿನಯ್ ಕುಲಕರ್ಣಿಗೆ ಕೊನೆಗೂ ತವರೂರಿಗೆ ಮರಳುವ ಹಾದಿ ಸುಗಮವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Fri, 28 August 26