ಧಾರವಾಡ: ಪೇಡಕ್ಕೆ ಫೇಮಸ್ ಆಗಿರೋ ಧಾರವಾಡದಲ್ಲಿ 4 ದಿನಗಳಿಂದ ನಡೆದ ಕುಸ್ತಿ ಹಬ್ಬಕ್ಕೆ ವೈಭವದ ತೆರೆಬಿದ್ದಿದೆ. ಸಾವಿರಾರು ಪೈಲ್ವಾನರು ಪ್ರಶಸ್ತಿಗಾಗಿ ತೊಡೆ ತಟ್ಟಿ ಕುಸ್ತಿ ಆಡಿದ್ರು. ಸೋತವರು ಬೇಸರಿಸಿಕೊಳ್ಳದೆ ಕ್ರೀಡಾಸ್ಫೂರ್ತಿ ಮೆರೆದರೆ, ಇನ್ನು ಗೆದ್ದವರು ಗೆಲುವನ್ನು ತರಬೇತುದಾರರಿಗೆ ಅರ್ಪಿಸಿದರು. ಅಖಾಡದಲ್ಲಿ ಜಿದ್ದಿಗೆ ಬಿದ್ದು ಗೆಲುವಿಗಾಗಿ ಹೋರಾಡುತ್ತಿರುವ ಜಗಜಟ್ಟಿಗಳು. ಇನ್ನೊಂದ್ಕಡೆ ಎದುರಾಳಿಗೆ ಮಣ್ಣು ಮುಕ್ಕಿಸಿದ ಸಂಭ್ರಮದಲ್ಲಿ ಪದಕಕ್ಕೆ ಮುತ್ತಿಕ್ಕಿದ ಕುಸ್ತಿಪಟುಗಳು.
ನಾಲ್ಕು ದಿನದ ಕುಸ್ತಿ ಹಬ್ಬಕ್ಕೆ ತೆರೆ: ಧಾರವಾಡದ ಕರ್ನಾಟಕ ಕಾಲೇಜಿನ ಮೈದಾನದಲ್ಲಿ ಫೆ. 22 ರಿಂದ 4 ದಿನ ನಡೆದ ‘ಕುಸ್ತಿ ಹಬ್ಬ’ಕ್ಕೆ ತೆರೆ ಬಿದ್ದಿದೆ. 1,100 ಕುಸ್ತಿಪಟುಗಳು ಭಾಗವಹಿಸಿದ್ದ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಗೆದ್ದೇ ಗೆಲ್ಲಬೇಕು ಅನ್ನೋ ಹಟವಿದ್ದರೂ, ಕ್ರೀಡಾಸ್ಫೂರ್ತಿ ಮರೆಯದೆ ಆಟವಾಡಿದ ಕುಸ್ತಿಪಟುಗಳು ಎಲ್ಲರ ಮನಗೆದ್ದರು. ಅಖಾಡದಲ್ಲಿ ಕುಸ್ತಿಪಟುಗಳು ಹೀಗೆ ಬೆವರು ಹರಿಸುತ್ತಿದ್ರೆ, ಮತ್ತೊಂದ್ಕಡೆ ಅಭಿಮಾನಿಗಳು ಚಪ್ಪಾಳೆಯ ಮೂಲಕ ಕುಸ್ತಿಪಟುಗಳನ್ನ ಹುರಿದುಂಬಿಸುತ್ತಿದ್ದರು.
ತಾಕತ್ತು ಪ್ರದರ್ಶಿಸಿದ ಕುಸ್ತಿಪಟುಗಳು: ಕುಸ್ತಿ ಹಬ್ಬ ನೆರೆದವರಿಗೆ ಮನರಂಜನೆ ನೀಡಿದ್ರೆ, ತಮ್ಮ ತಾಕತ್ತು ಪ್ರದರ್ಶನಕ್ಕೆ ವೇದಿಕೆ ಸಿಕ್ಕಿದ್ದಕ್ಕೆ ಕುಸ್ತಿಪಟುಗಳು ಸಂತಸ ವ್ಯಕ್ತಪಡಿಸಿದ್ರು. ಭವಿಷ್ಯದ ಕ್ರೀಡಾಕೂಟಗಳಿಗೆ ಇದು ಸಹಕಾರಿಯಾಗಲಿದೆ ಅನ್ನೋ ಅಭಿಪ್ರಾಯ ಕೇಳಿ ಬಂತು. ಅಚ್ಚುಕಟ್ಟಾಗಿ ನಡೆದ ಕುಸ್ತಿ ಹಬ್ಬವನ್ನ ಅಭಿಮಾನಿಗಳು ಮಾತ್ರವಲ್ಲದೆ, ಕುಸ್ತಿಪಟುಗಳು ಕೂಡ ಎಂಜಾಯ್ ಮಾಡಿದ್ರು.
ಒಟ್ನಲ್ಲಿ ನಾಲ್ಕು ದಿನಗಳ ಕಾಲ ಕುಸ್ತಿ ಹಬ್ಬವನ್ನ ಧಾರವಾಡದ ಜನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು. ಇದು ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರಲು ವೇದಿಕೆಯೂ ಆಗಿತ್ತು. ದೇಸಿ ಕ್ರೀಡೆಯ ಗಮ್ಮತ್ತು ಸವಿಯಲು ಸಾವಿರಾರು ಜನ ಅಖಾಡದ ಸುತ್ತ ನೆರೆದು ಪ್ರೋತ್ಸಾಹ ನೀಡಿದ್ದು ಕುಸ್ತಿ ಹಬ್ಬದ ಯಶಸ್ಸಿಗೆ ಕಾರಣವಾಯ್ತು.