ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಔಷಧಿ ಕೇಂದ್ರಗಳು ಏಕೆ ಬೇಕು? ತೇಜಸ್ವಿ ಸೂರ್ಯಗೆ ದಿನೇಶ್ ಗುಂಡೂರಾವ್ ಪ್ರಶ್ನೆ

ಕರ್ನಾಟಕ ಸರ್ಕಾರದಿಂದ ಜನ ಔಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಂಸದ ತೇಜಸ್ವಿ ಸೂರ್ಯ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ನಡುವೆ ಈ ವಿಷಯದಲ್ಲಿ ವಾಗ್ವಾದ ನಡೆದಿದೆ. ಸರ್ಕಾರ ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದು ಆಗ್ರಹಿಸಲಾಗಿದೆ.

ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಔಷಧಿ ಕೇಂದ್ರಗಳು ಏಕೆ ಬೇಕು? ತೇಜಸ್ವಿ ಸೂರ್ಯಗೆ ದಿನೇಶ್ ಗುಂಡೂರಾವ್ ಪ್ರಶ್ನೆ
ತೇಜಸ್ವಿ ಸೂರ್ಯ, ದಿನೇಶ್ ಗುಂಡೂರಾವ್
Updated By: ಗಂಗಾಧರ​ ಬ. ಸಾಬೋಜಿ

Updated on: May 21, 2025 | 1:00 PM

ಬೆಂಗಳೂರು, ಮೇ 21: ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಸರ್ಕಾರದ ಜನ ಔಷಧಿ ಕೇಂದ್ರಗಳನ್ನು (Jan Aushadhi) ಬಂದ್​ ಮಾಡಲು ರಾಜ್ಯ ಕಾಂಗ್ರೆಸ್​ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ. ಸದ್ಯ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ ಈ ವಿಚಾರ ಸಂಸದ ತೇಜಸ್ವಿ ಸೂರ್ಯ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​​ (Dinesh Gundu Rao) ನಡುವೆ ವಾಕ್​ ಸಮರಕ್ಕೂ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಔಷಧಿ ಕೇಂದ್ರಗಳು ಏಕೆ ಬೇಕು ಎಂದು ತೇಜಸ್ವಿ ಸೂರ್ಯಗೆ, ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

ಬಡ, ಮಧ್ಯಮ ವರ್ಗದ ಜನತೆಗೆ ಸಂಕಟ

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡುವಂತೆ ರಾಜ್ಯ
ಸರ್ಕಾರವು ಆದೇಶಿಸಿದ್ದು, ಇದರಿಂದ ಸಾಮಾನ್ಯ ಬಡಜನತೆಗೆ ಅತ್ಯಂತ ರಿಯಾಯಿತಿ ದರಗಳಲ್ಲಿ ದೊರಕುತ್ತಿದ್ದ ಔಷಧಿಗಳು, ಜನವಿರೋಧಿ ಸರ್ಕಾರದ ನೀತಿಯಿಂದಾಗಿ ಬಡ, ಮಧ್ಯಮ ವರ್ಗದ ಜನತೆಗೆ ಸಂಕಟ ತಂದೊಡ್ಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಇದನ್ನೂ ಓದಿ
ಮುನಿರತ್ನ ವಿರುದ್ಧ ಮತ್ತೊಂದು ಪ್ರಕರಣ: ಮುಖದ ಮೇಲೆ ಮೂತ್ರ ಮಾಡಿದ್ದ ಆರೋಪ
ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಬಾನು ಮುಷ್ತಾಕ್
ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ,ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್
ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಜನ ಔಷಧಿ ಕೇಂದ್ರ ಬಂದ್: ಕಾರಣ ಇಲ್ಲಿದೆ

ಸಂಸದ ತೇಜಸ್ವಿ ಸೂರ್ಯ ಟ್ವೀಟ್​

ರಾಜ್ಯದ 200ಕ್ಕೂ ಅಧಿಕ ಜನ ಔಷಧಿ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಘಟಕ, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ಆವರಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ವಾರ್ಷಿಕ 40 ಕೋಟಿ ರೂ, ಉಳಿತಾಯವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡಲು ನಿರ್ಧರಿಸಿದ ಸರ್ಕಾರ: ಕಾರಣ ಇಲ್ಲಿದೆ

ಸಾಮಾನ್ಯ ಜನತೆಯ ಜೀವನದೊಂದಿಗೆ ಚೆಲ್ಲಾಟ ಆಡುವುದರ ಜೊತೆ ಜೊತೆಗೆ, JAK ಗಳ ಮಾಲೀಕರ ಕುಟುಂಬಗಳಿಗೂ ಹೊಡೆತ ನೀಡಿದಂತಾಗಿದೆ. ಕೂಡಲೇ ಈ ನಿರ್ಧಾರವನ್ನು ಮರು ಪರಿಶೀಲಿಸಿ, ಈ ಆದೇಶವನ್ನು ಹಿಂಪಡೆದು ನಾಡಿನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸಚಿವ ದಿನೇಶ್ ಗುಂಡೂರಾವ್​​ ಅವರಿಗೆ ಒತ್ತಾಯಿಸಿದ್ದಾರೆ.

ಜನ ಔಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಏಕೆ ಬೇಕು? ಗುಂಡೂರಾವ್ ಪ್ರಶ್ನೆ

ಸಂಸದ ತೇಜಸ್ವಿ ಸೂರ್ಯ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಸಚಿವ ದಿನೇಶ್ ಗುಂಡೂರಾವ್, ತೇಜಸ್ವಿ ಸೂರ್ಯ ಅವರೇ.. ಜನ ಔಷಧಿ ಕೇಂದ್ರಗಳಲ್ಲಿ ಔಷಧಿಗಳು ರಿಯಾಯಿತಿ ದರದಲ್ಲಿ ಸಿಗುತ್ತದೆ ನಿಜ. ಆದರೆ, ಸರ್ಕಾರಿ ಆಸ್ಪತ್ರೆಗಳ ಔಷಧಿ ಕೇಂದ್ರಗಳಲ್ಲಿ ಉಚಿತವಾಗಿಯೇ ಔಷಧಿಗಳು ದೊರೆಯುತ್ತವೆ. ಉಚಿತವಾಗಿ ಸಿಗುವಾಗ ರಿಯಾಯಿತಿ ದರದ ಜನ ಔಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ ದಾಳಿ

ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಾತ್ರ ಜನ ಔಷಧಿ ಕೇಂದ್ರಗಳಿಗೆ ನಿರ್ಬಂಧಿಸಲಾಗಿದೆ. ಬೇರೆ ಸ್ಥಳಗಳಲ್ಲಿ ಇರುವ ಜ‌ನ ಔಷಧಿ ಕೇಂದ್ರಗಳಲ್ಲಿ ಸಾರ್ವಜನಿಕರು ಔಷಧಿಗಳನ್ನ ಪಡೆಯಬಹುದಾಗಿದೆ. ಬಡವರು, ಮಧ್ಯಮ ವರ್ಗದವರಿಗಾಗಿಯೇ ಸಾವಿರಾರು ಕೋಟಿ ರೂ ಖರ್ಚು ಮಾಡಿ ಸರ್ಕಾರ ಔಷಧಿಗಳನ್ನು ಖರೀದಿಸಿ ಉಚಿತವಾಗಿ ನೀಡುತ್ತಿರುವಾಗ, ಅದರ ಸದ್ಬಳಕೆಯಾಗಬೇಕು ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಷ್ಟಕ್ಕೂ ಜನ ಔಷಧಿ ಕೇಂದ್ರಗಳಿಗೆ ಹೊಲಿಸಿದರೆ ನಮ್ಮ ಸರ್ಕಾರಿ ಔಷಧಿ ಕೇಂದ್ರಗಳಲ್ಲಿಯೇ ಹೆಚ್ಚಿನ ಔಷಧಗಳ ಲಭ್ಯತೆ ಇದೆ. ಜನ ಔಷಧಿ ಕೇಂದ್ರಗಳಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದರ ಬಗ್ಗೆ ಮಾಧ್ಯಮಗಳ ವರದಿಗಳು ನಿಮ್ಮ ಕಣ್ಮುಂದೆಯೇ ಇದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.