ಅಹಿಂದ ನಾಯಕರು ಪ್ರಶ್ನೆ ಮಾಡುತ್ತಿರುವುದು ನನ್ನನ್ನಲ್ಲ ಖರ್ಗೆಯನ್ನೇ: ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್​ನಲ್ಲಿ ಎದ್ದಿರುವ ಕೂಗು, ಸಿಎಂ ಸಿದ್ದರಾಮಯ್ಯ ಬಣದ ಸಚಿವರ ಒಳ ಏಟಿಗೆ ಡಿಸಿಎಂ ಡಿಕೆ ಶಿವಕುಮಾರ್ ಹೊಸ ದಾಳ ಉರುಳಿಸುವ ಮೂಲಕ ಪ್ರಬಲ ತಿರುಗೇಟು ನೀಡಿದ್ದಾರೆ. ಅಹಿಂದ ನಾಯಕರು ಪ್ರಶ್ನಿಸುತ್ತಿರುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಎಂದು ಅವರು ಹೇಳಿದ್ದಾರೆ.

ಅಹಿಂದ ನಾಯಕರು ಪ್ರಶ್ನೆ ಮಾಡುತ್ತಿರುವುದು ನನ್ನನ್ನಲ್ಲ ಖರ್ಗೆಯನ್ನೇ: ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on: Jan 16, 2025 | 12:16 PM

ಬೆಂಗಳೂರು, ಜನವರಿ 16: ಕರ್ನಾಟಕ ಕಾಂಗ್ರೆಸ್​ನಲ್ಲಿ ಮತ್ತೆ ಭುಗಿಲೆದ್ದಿರುವ ನಾಯಕತ್ವ ಬದಲಾವಣೆ ವಿಚಾರವಾಗಿ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷ ಸ್ಥಾನದ ವಿಚಾರ ಸ್ಪಷ್ಟಪಡಿಸಬೇಕಾಗಿರುವುದು ನಾನಲ್ಲ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಲಿ. ಇವರು (ಅಹಿಂದ ನಾಯಕರು) ಪ್ರಶ್ನೆ ಮಾಡುತ್ತಿರುವುದು ನನ್ನನ್ನಲ್ಲ, ಖರ್ಗೆ ಅವರನ್ನು ಎಂದಿದ್ದಾರೆ.

ಯಾವುದಾದರೂ ವಿಚಾರ ಇದ್ದರೆ ನಾನೇ ಮಾಧ್ಯಮವರಿಗೆ ತಿಳಿಸುತ್ತೇನೆ. ಯಾರೂ ಕೂಡ ಬಹಿರಂಗವಾಗಿ ಮಾತನಾಡಬಾರದು ಎಂದಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲ ಸಹ ಬೆಳಗಾವಿಗೆ ಬರುತ್ತಿದ್ದಾರೆ. ಏನಾದರೂ ಇದ್ದರೆ ರಾಹುಲ್ ಗಾಂಧಿ, ಖರ್ಗೆ ಜತೆ ಮಾತನಾಡಲಿ. ಅವರವರ ಶ್ರಮಕ್ಕೆ ತಕ್ಕ ಸ್ಥಾನವನ್ನು ನಾಯಕರು ಕೊಡುತ್ತಾರೆ. ಶ್ರಮಪಟ್ಟು ನಾನು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಲ್ಲ, ಕಾರ್ಯಕರ್ತರು ತಂದಿದ್ದು. ನಮ್ರತೆಯಿಂದ ಮನವಿ ಮಾಡ್ತೇನೆ, ಕಾಂಗ್ರೆಸ್ ಎಂಬುದು ಕಾರ್ಯಕರ್ತರ ಪಕ್ಷ ಎಂದು ಡಿಕೆ ಶಿವಕುಮಾರ್ ಹೇಳಿದರು.

ಮಹಾತ್ಮ ಗಾಂಧಿಯೇ ಎಲ್ಲವನ್ನೂ ತ್ಯಾಗ ಮಾಡಿದರು. ಅವರು ಮನಸ್ಸು ಮಾಡಿದ್ದರೆ ಪ್ರಧಾನಿ ಆಗುತ್ತಿರಲಿಲ್ಲವೇ ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದರು.

ಮಾಧ್ಯಮಗಳಿಂದ ಗೊಂದಲ ಸೃಷ್ಟಿ ಎಂದ ಖಂಡ್ರೆ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ವರಿಷ್ಠರು ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ನಮ್ಮ ಪಕ್ಷದಲ್ಲಿ ಆಂತರಿಕವಾಗಿ ಎಲ್ಲವೂ ಚರ್ಚೆ ಆಗುತ್ತದೆ. ಸಿಎಂ ಹಾಗೂ ಡಿಸಿಎಂ ವರಿಷ್ಠರ ಜೊತೆ ಚರ್ಚೆ ಮಾಡುತ್ತಾರೆ. ಮಾಧ್ಯಮದವರು ಹಾಗೂ ಕೆಲವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಪಕ್ಷದಲ್ಲಿ ಯಾವುದೇ ಮತಬೇಧ, ಭಿನ್ನಾಭಿಪ್ರಾಯ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅವರನ್ನು ಸರಿಪಡಿಸಿಕೊಂಡು ಉತ್ತಮ ಆಡಳಿತ ಕೊಡುತ್ತೇವೆ ಎಂದಿದ್ದಾರೆ.

ಬಹಿರಂಗ ಹೇಳಿಕೆ ನೀಡುವ ಸಚಿವರ ಪೂರ್ಣ ವರದಿ ಕೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಲಾಖಾವಾರು ಮಾಹಿತಿ ಕೇಳಿದ್ದಾರೆ. ವರಿಷ್ಠರು ಅಧ್ಯಯನ ಮಾಡಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿಯವರು ಯಾವ ಕಾರಣಕ್ಕಾಗಿ ಕೇಳಿದ್ದಾರೋ ನನಗೆ ಗೊತ್ತಿಲ್ಲ. ನಾವು ಇಲಾಖಾವಾರು ಕಾರ್ಯವೈಖರಿಯ ಬಗ್ಗೆ ವರದಿ ಕೊಟ್ಟಿದ್ದೇವೆ ಎಂದರು.

ಇದನ್ನೂ ಓದಿ: ಎಚ್ಚರಿಕೆ ನಡುವೆಯೂ ಬಹಿರಂಗ ಹೇಳಿಕೆ: ಕಾಂಗ್ರೆಸ್ ಹೈಕಮಾಂಡ್​ನಿಂದ ಬಂತು ಖಡಕ್ ಸಂದೇಶ, ಸಚಿವರ ವರದಿ ಸಲ್ಲಿಸಲು ಸೂಚನೆ

ಏತನ್ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆ ಶಿವಕುಮಾರ್ ಅವರನ್ನು ಬದಲಿಸಬೇಕೆಂದು ಒತ್ತಾಯಿಸಿಲ್ಲ ಎಂದು ಸ್ಪಷ್ಟನೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ, ಪಕ್ಷದ ಸಂಘಟನೆ ಸುಧಾರಣೆಗೆ ಸಲಹೆ ನೀಡಿದ್ದೇನಷ್ಟೆ. ಅದನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ