ಬೆಂಗಳೂರು, ಆಗಸ್ಟ್ 17: ಕೋಲ್ಕತ್ತದಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಘಟನೆ ಖಂಡಿಸಿ ಕರ್ನಾಟಕದಾದ್ಯಂತ ವೈದ್ಯರು ಮುಷ್ಕರ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ವೈದ್ಯರಿಗೆ ರಜೆ ಮಂಜೂರು ಮಾಡದಂತೆ ಕರ್ನಾಟಕ ಸರ್ಕಾರದ ಆದೇಶ ಹೊರಡಿಸಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿದ್ದು, ಒಪಿಡಿ ಸೇವೆ ಬಂದ್ ಆಗಿದೆ. ಎಮರ್ಜೆನ್ಸಿ ಸೇವೆ, ಮೆಡಿಕಲ್ ಶಾಪ್ಸ್, ಇನ್ ಪೇಷೆಂಟ್ ಸೇವೆ, ಹೆರಿಗೆ, ಎಮರ್ಜೆನ್ಸಿ ಸರ್ಜರಿ ಸೇವೆಗಳನ್ನು ಒದಗಿಸುವುದಾಗಿ ವೈದ್ಯರು ತಿಳಿಸಿದ್ದಾರೆ. ಆದಾಗ್ಯೂ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ವೈದ್ಯರು ಸಜ್ಜಾಗಿದ್ದಾರೆ. ಹಾಸನ ವೈದ್ಯಕೀಯ ಬೋದಕ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರಿಂದ ಪ್ರತಿಭಟನೆ ನಡೆಯುತ್ತಿದೆ. ಕೈಗೆ ಕಪ್ಪು ಪಟ್ಟಿ ಕಟ್ಟಿ ಹೋರಾಟಕ್ಕೆ ಸಜ್ಜಾಗಿರುವ ನೂರಾರು ಯುವ ವೈದ್ಯರು ಜಿಲ್ಲಾಸ್ಪತ್ರೆಯ ಮುಂಬಾಗ ಸೇರಿದ್ದಾರೆ.
ಇದನ್ನೂ ಓದಿ: ವೈದ್ಯರ ಪ್ರತಿಭಟನೆ: ಇಂದು ಯಾವೆಲ್ಲ ಸೇವೆಗಳು ಲಭ್ಯ, ಏನೆಲ್ಲ ಇರಲ್ಲ? ಇಲ್ಲಿದೆ ಮಾಹಿತಿ
ಕೋಲ್ಕತ್ತ ಘಟನೆ ಖಂಡಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಹಾಗು ವೈದ್ಯ ತರಬೇತಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಲಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ ಹೋರಾಟ ಬೆಳಗ್ಗೆ 10 ಗಂಟೆಗೆ ಆರಂಭ ಆಗಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:23 am, Sat, 17 August 24