
ದೊಡ್ಡಬಳ್ಳಾಪುರ, ಜು.7: ತನಗೆ ಕೆಲಸ ಕೊಟ್ಟು ಸಾಕಿ ಸಲಹಿದ ಮಾಲೀಕನಿಗೆ ಇಬ್ಬರು ನಂಬಿಕಸ್ಥ ನೌಕರರು ಸೇರಿ ಕೋಟ್ಯಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ. ಮಾಲೀಕನ ಅನುಪಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಕೆಲಸಗಾರ ಮತ್ತು ಆತನ ಪ್ರೇಯಸಿಯಾಗಿದ್ದ ಅಕೌಂಟೆಂಟ್ ಮಹಿಳೆ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಕಚ್ಚಾ ವಸ್ತುಗಳನ್ನು ಕದ್ದು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದೊಡ್ಡಬಳ್ಳಾಪುರ ನಗರದಲ್ಲಿ ಉದ್ಯಮಿ ಮಹಮದ್ ಅಪನ್ ಎಂಬುವರು ಸೀರೆ ನೇಯುವ ಮಗ್ಗಗಳಿಗೆ ಬೇಕಾಗುವ ಜರಿ ದಾರ ಸೇರಿದಂತೆ ವಿವಿಧ ಕಚ್ಚಾ ವಸ್ತುಗಳನ್ನು ಮಾರಾಟ ಮಾಡುವ ದೊಡ್ಡ ಅಂಗಡಿಯನ್ನು ನಡೆಸುತ್ತಿದ್ದರು. ಈ ಅಂಗಡಿಯಲ್ಲಿ ಜಹಿದ್ ಖಾನ್ ಎಂಬಾತ ಕೆಲಸಗಾರನಾಗಿದ್ದ ಹಾಗೂ ಅಪ್ಶಿನ್ ಎಂಬ ಮಹಿಳೆ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಇವರಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮಾಲೀಕ ಮಹಮದ್ ಅಪನ್ ಅವರು ಅಂಗಡಿಯಲ್ಲಿ ಇಲ್ಲದ ಸಮಯವನ್ನು ನೋಡಿಕೊಂಡು, ಇವರಿಬ್ಬರು ಸೇರಿ ಬರೋಬ್ಬರಿ ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಜರಿ ದಾರ ಹಾಗೂ ಇತರ ಕಚ್ಚಾ ವಸ್ತುಗಳನ್ನು ಯಾರಿಗೂ ತಿಳಿಯದಂತೆ ಖದ್ದಾಗಿ ಅವರೇ ಬೇರೆಯವರಿಗೆ ಮಾರಾಟ ಮಾಡಿ ಹಣ ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತನ್ನ ಅಂಗಡಿಯಲ್ಲಿ ಕೋಟಿ ಕೋಟಿ ಮೌಲ್ಯದ ವಸ್ತುಗಳು ಕಳ್ಳತನವಾಗಿರುವುದನ್ನು ಪತ್ತೆಹಚ್ಚಿದ ಮಾಲೀಕ ಮಹಮದ್ ಅಪನ್, ಆರೋಪಿಗಳಾದ ಜಹಿದ್ ಖಾನ್ ಮತ್ತು ಅಪ್ಶಿನ್ ವಿರುದ್ಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ಹುಂಡಿ ಎಣಿಕೆ ಲೂಟಿ ಮಧ್ಯೆ ಅನುಮಾನಕ್ಕೆ ಎಡೆ ಮಾಡಿಕೊಟ್ಟ ಅಂಜನಾದ್ರಿ ಹುಂಡಿ ಎಣಿಕೆ
ಆದರೆ ದೂರು ದಾಖಲಾಗಿ ದಿನಗಳೇ ಕಳೆದರೂ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಲೀಕ ಮಹಮದ್ ಅಪನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ಕಳೆದುಕೊಂಡು ಕಂಗಾಲಾಗಿರುವ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಪೊಲೀಸ್ ಉನ್ನತಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ