ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಎಲ್ಲ ಚಟುವಟಿಕೆಗಳಿಗೂ ಕಡಿವಾಣ ಹಾಕಬಹುದು; ಆರೋಗ್ಯ ಸಚಿವ ಡಾ.ಸುಧಾಕರ್ ಎಚ್ಚರಿಕೆ

ರಾಜ್ಯದಲ್ಲಿ ಕೊರೊನಾ ಲಸಿಕೆ ಖಾಲಿಯಾದ ಹಿನ್ನೆಲೆ ನಿನ್ನೆ ಕೇಂದ್ರ ಆರೋಗ್ಯ ಸಚಿವರು ತಕ್ಷಣವೇ 15 ಲಕ್ಷ ಡೋಸ್​ಗೂ ಅಧಿಕ ಲಸಿಕೆ ಕಳಿಸಿದ್ದಾರೆ. ತಕ್ಷಣವೇ ಸ್ಪಂದಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.

ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಎಲ್ಲ ಚಟುವಟಿಕೆಗಳಿಗೂ ಕಡಿವಾಣ ಹಾಕಬಹುದು; ಆರೋಗ್ಯ ಸಚಿವ ಡಾ.ಸುಧಾಕರ್ ಎಚ್ಚರಿಕೆ
ಆರೋಗ್ಯ ಸಚಿವ ಡಾ.ಸುಧಾಕರ್ ಕರ್ನಾಟಕದಲ್ಲಿ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
Updated By: Skanda

Updated on: Apr 05, 2021 | 10:53 AM

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದರೆ ಮಾತ್ರ ಮೂರು ದಿನದ ಸಲುವಾಗಿ ಸಡಿಲಿಸಿದ ನಿಯಮಗಳನ್ನು ಮುಂದುವರಿಸಬಹುದು. ನಿಯಂತ್ರಣ ಬರದೇ ಸೋಂಕು ಹೆಚ್ಚಳವಾದರೆ ಎಲ್ಲದಕ್ಕೂ ಕಡಿವಾಣ ಹಾಕಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಕೆಲವು ಒತ್ತಡಕ್ಕೆ ಮಣಿದು, ಕೆಲವು ವಲಯದವರು ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿಯಮ ಅನುಷ್ಠಾನಕ್ಕೆ ತರಲು ಆಯಾ ಇಲಾಖೆ ಮುಖ್ಯಸ್ಥರು ಗಮನಹರಿಸಬೇಕು. ಇಂದಿನಿಂದ ಎಲ್ಲ ನಿಯಮಗಳೂ ಅನುಷ್ಠಾನಕ್ಕೆ ಬರಲಿದೆ. ಇಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯಕ್ಕೆ ನಿನ್ನೆಯವರೆಗೂ 46 ಲಕ್ಷ ಡೋಸ್ ಲಸಿಕೆ ಬಂದಿದೆ. ಲಸಿಕೆ ಖಾಲಿಯಾದ ಹಿನ್ನೆಲೆ ನಿನ್ನೆ ಕೇಂದ್ರ ಆರೋಗ್ಯ ಸಚಿವರು ತಕ್ಷಣವೇ 15 ಲಕ್ಷ ಡೋಸ್​ಗೂ ಅಧಿಕ ಲಸಿಕೆ ಕಳಿಸಿದ್ದಾರೆ. ತಕ್ಷಣವೇ ಸ್ಪಂದಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಸೋಂಕಿತರ ಸಂಖ್ಯೆ ಕೊಂಚ ಕಡಿಮೆ ಆದರೂ ನಿಯಮ ಪಾಲನೆ ಮಾಡದೇ ಇರುವಂತಿಲ್ಲ. ಮಾಸ್ಕ್ ಹಾಕೋದು ಕಡ್ಡಾಯವಾಗಿರಬೇಕು. ಪ್ರಧಾನಮಂತ್ರಿಗಳು ಎಂಟು ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಕೊರೊನಾ ತಡೆಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅಂತ ಸೂಚಿಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಹೇಳಿದ್ದಾರೆ. ಅಂತಹ ಕಠಿಣ ವಾತಾವರಣ ರಾಜ್ಯದಲ್ಲಿ ಸೃಷ್ಟಿ ಆಗೋದು ಬೇಡ. ನಾವು ಬಹಳ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಸೋಂಕು ನಿಯಂತ್ರಣ ಮಾಡಬಹುದು. ಆರೋಗ್ಯ ಇಲಾಖೆ ಐಸಿಯು, ಬೆಡ್ ಸೇರಿದಂತೆ ಮತ್ತಿತರ ವ್ಯವಸ್ಥೆ ಮಾಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ20 ರಷ್ಟು ಬೆಡ್ ಮೀಸಲು ಇಡಲು ಮಾತನಾಡುತ್ತೇನೆ. ತಾಂತ್ರಿಕ ಸಲಹಾ ಸಮಿತಿ ಮೇ ತಿಂಗಳ ಅಂತ್ಯದವರೆಗೂ ಗಮನ ಹರಿಸಲು ಸೂಚನೆ ನೀಡಿದೆ. ಸೋಂಕು ನಿಯಂತ್ರಣಕ್ಕೆ ಎಲ್ಲರ ಸಹಕಾರ ಬೇಕು. ನಿಯಂತ್ರಣ ತಂದು ಸಾವಿನ ಸಂಖ್ಯೆ ಕಡಿಮೆ ಮಾಡಬೇಕಿದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಕೊರೊನಾ ವಿಚಾರದಲ್ಲಿ ವಿಪಕ್ಷದವರನ್ನು ಪರಿಗಣನೆಗೆ ತೆಗೆದುಕೊಳ್ಳದಿರುವ ಸಿದ್ದರಾಮಯ್ಯ ಅವರ ಆರೋಪದ ಕುರಿತು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೇನೆ. ಸೋಂಕು ನಿಯಂತ್ರಣ ಮಾಡಲು ನಾವು ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ. ವಿಪಕ್ಷ ನಾಯಕ ಸಿದ್ದರಾಮಯ್ಯರ ಸಲಹೆಯನ್ನೂ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜಿಮ್ ಬಂದ್ ನಿರ್ಧಾರ ವಾಪಸ್; ಆದರೆ ಷರತ್ತುಗಳು ಅನ್ವಯ

ಕೊವಿಡ್ ಹಾವಳಿ ಶಾಂತವಾದ ನಂತರ ಹುಟ್ಟಿಕೊಳ್ಳಲಿವೆಯೇ ಸೂಪರ್ ಬ್ಯಾಕ್ಟೀರಿಯಾಗಳು?